ವ್ಯಾಪಾರಸ್ಥರಿಗೆ ತಲೆನೋವಾದ ನಕಲಿ PAYTM Spoof ಆ್ಯಪ್ !

Prasthutha|

ನವದೆಹಲಿ: ದೆಹಲಿಯ ಪಾಲಮ್ ಎಂಬಲ್ಲಿರುವ ರಮೇಶ್ ಕುಮಾರ್ ಮಾಲೀಕತ್ವದ ಜನರಲ್ ಸ್ಟೋರ್’ಗೆ ಬಂದ ಕುನಾಲ್ ಶರ್ಮಾ ಎಂಬಾತ ತನಗೆ ಬೇಕಾದ ವಸ್ತುಗಳನ್ನು ಖರೀದಿಸಿದ ಬಳಿಕ ಬಿಲ್ ಮೊತ್ತ 2500 ರುಪಾಯಿಯನ್ನು ಆನ್ಲೈನ್ ಮೂಲಕ ಪಾವತಿಸಿ ಅದರ ರಶೀದಿಯನ್ನು ಮೊಬೈಲ್’ನಲ್ಲಿ ತೋರಿಸಿ ಅಲ್ಲಿಂದ ತೆರಳುತ್ತಾನೆ. ಆದರೆ ಸ್ವಲ್ಪ ಹೊತ್ತಿನ ಬಳಿಕ ತನ್ನ ಮೊಬೈಲ್ ಪರಿಶೀಲಿಸಿದ ಅಂಗಡಿ ಮಾಲೀಕ ರಮೇಶ್ ಕುಮಾರ್’ಗೆ ಯಾವುದೇ ಮೊತ್ತ ಪಾವತಿಯಾಗದೇ ಇರುವುದು ಗೊತ್ತಾಗಿದೆ. ತಕ್ಷಣವೇ ಪೊಲೀಸರಿಗೆ ದೂರು ಕೊಟ್ಟಿದ್ದಾನೆ.

- Advertisement -


ಕಷ್ಟಪಟ್ಟು ಕುನಾಲ್ ಶರ್ಮಾನನ್ನು ಪತ್ತೆ ಹಚ್ಚಿ, ವಿಚಾರಣೆಯ ವೇಳೆ ಆತ ನೀಡಿದ ಹೇಳಿಕೆಯಿಂದ ಪೊಲೀಸರು ದಂಗಾಗಿದ್ದರು. ಕುನಾಲ್ ಶರ್ಮಾ ಕಳೆದ ಕೆಲ ಸಮಯಗಳಿಂದ 200 ಕ್ಕೂ ಹೆಚ್ಚು ಅಂಗಡಿಗಳಲ್ಲಿ ಲಕ್ಷಕ್ಕೂ ಅಧಿಕ ಮೊತ್ತವನ್ನು ಆನ್ಲೈನ್ ಮೂಲಕ ಪಾವತಿಸಿದ್ದಾನೆ. ಆದರೆ ಒಂದು ನಯಾ ಪೈಸೆಯೂ ಅಂಗಡಿ ಮಾಲೀಕರ ಬ್ಯಾಂಕ್ ಖಾತೆಗೆ ವರ್ಗಾವಣೆಯಾಗಿಲ್ಲ. ಅಷ್ಟಕ್ಕೂ ಕುನಾಲ್ ಶರ್ಮಾ ಬಳಸುತ್ತಿದ್ದುದ್ದು ನಕಲಿ payatm Spoof ಆ್ಯಪ್ !


ಈ ನಕಲಿ payatm Spoof ಆ್ಯಪ್ ಮೂಲ payTM ಆ್ಯಪ್ ನಂತೆಯೇ ವಿನ್ಯಾಸ ಹೊಂದಿದೆ. ಅಂಗಡಿಯ ಹೆಸರು ಮತ್ತು ಮೊಬೈಲ್ ನಂಬರ್ ಹಾಕಿದರೆ ಎಷ್ಟು ಮೊತ್ತ ಬೇಕಾದರೂ ಪಾವತಿಯಾದ ರಶೀದಿಯು ಕ್ಷಣಮಾತ್ರದಲ್ಲಿ ಸ್ಕ್ರೀನ್’ನಲ್ಲಿ ಪ್ರತ್ಯಕ್ಷವಾಗುತ್ತದೆ. ಈ ರಶೀದಿಯನ್ನು ತೋರಿಸಿ ಅಂಗಡಿಯಿಂದ ತೆರಳಬಹುದು. ಆದರೆ ಮಾಲೀಕನಿಗೆ ಯಾವುದೇ ಮೊತ್ತ ಪಾವತಿಯಾಗುವುದಿಲ್ಲ…!

- Advertisement -


ಇತ್ತೀಚೆಗೆ ಈ ನಕಲಿ payatm Spoof ಆ್ಯಪ್ ಬಳಕೆಯು ಕರ್ನಾಟಕದಲ್ಲಿಯೂ ಹೆಚ್ಚಾಗಿದೆ. ಮೇಲ್ನೋಟಕ್ಕೆ ಯಾರಿಗೂ ಸಂಶಯ ಬಾರದ ರೀತಿಯಲ್ಲಿ ಮೂಲ payTM ಆ್ಯಪ್ ನಂತೆಯೇ ಈ ನಕಲಿ ಆ್ಯಪ್ ವಿನ್ಯಾಸ ಹೊಂದಿದೆ. ಈ ನಕಲಿ payatm Spoof ಆ್ಯಪ್ ಗೂಗಲ್ ಪ್ಲೇ ಸ್ಟೋರಿನಲ್ಲಿ ಲಭ್ಯವಿಲ್ಲ. ಆದರೆ ಗೂಗಲ್’ನಿಂದ ನೇರವಾಗಿ ಯಾರು ಬೇಕಾದರೂ ಡೌನ್’ಲೋಡ್ ಮಾಡಿಕೊಳ್ಳಬಹುದು.

ಇತ್ತೀಚೆಗೆ ನಕಲಿ payatm Spoof ಬಳಸಿ ಹಣ ವರ್ಗಾವಣೆ ಮಾಡಲು ಯತ್ನಿಸಿದ ವೇಳೆ ಬೆಂಗಳೂರಿನಲ್ಲಿ ಯುವಕನೋರ್ವನನ್ನು ಅಂಗಡಿ ಮಾಲೀಕ ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ. ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.


ವ್ಯಾಪಾರಸ್ಥರು ಮೋಸ ಹೋಗದಿರಲು ಏನು ಮಾಡಬೇಕು ?

ಆನ್ಲೈನ್ ಮೂಲಕ ಹಣ ವರ್ಗಾವಣೆ ಮಾಡುವವರಿಗಾಗಿ ಹೆಚ್ಚಿನ ಅಂಗಡಿಗಳಲ್ಲಿ ಬಾರ್ ಕೋಡ್ ಸ್ಕ್ಯಾನ್ ಮಾಡುವ ಬೋರ್ಡ್ ಅಳವಡಿಸಲಾಗಿರುತ್ತದೆ. ಆದರೆ ಈ ನಕಲಿ payatm Spoof ಆ್ಯಪ್ ನಲ್ಲಿ ಬಾರ್’ಕೋಡ್ ಸ್ಕ್ಯಾನ್ ವ್ಯವಸ್ಥೆ ಇರುವುದಿಲ್ಲ. ಹೀಗಾಗಿ ಮೋಸ ಮಾಡುವವರು ಸ್ಕ್ಯಾನ್ ವರ್ಕ್ ಆಗ್ತಾ ಇಲ್ಲ, ನಿಮ್ಮ ನಂಬರ್ ಕೊಡಿ ಎಂದು ಕೇಳುತ್ತಾರೆ. ಆದರೆ ಯಾವುದೇ ಕಾರಣಕ್ಕೂ ಅಪರಿಚತರಿಗೆ ನಿಮ್ಮ ನಂಬರ್ ಕೊಡಬೇಡಿ. ಸ್ಕ್ಯಾನ್ ಮೂಲಕವೇ ಪಾವತಿಸಲು ಹೇಳಿ. ಇಲ್ಲದಿದ್ದರೆ ನಗದು ವರ್ಗಾವಣೆಯ ಆಯ್ಕೆ ಯನ್ನಷ್ಟೇ ನೀಡಿ.

ಹೆಚ್ಚಿನ ನಗದು ಆನ್ಲೈನ್ ಮೂಲಕವೇ ವರ್ಗಾವಣೆಯಾಗುತ್ತಿದ್ದರೆ ನಿಗದಿತ ಶುಲ್ಕ ಪಾವತಿಸಿ payTM ಕಡೆಯಿಂದ ಸಿಗುವ ಸ್ಪೀಕರ್ ವ್ಯವಸ್ಥೆ ಬಳಸಿಕೊಳ್ಳಿ. ಇದರಿಂದಾಗಿ ನಗದು ವರ್ಗಾವಣೆಯ ಆದ ತಕ್ಷಣವೇ ಸ್ಪೀಕರ್’ನಲ್ಲಿ ಮಾಹಿತಿ ದೊರೆಯುತ್ತದೆ. ನಿಮ್ಮ ಮೊಬೈಲ್’ಅನ್ನು ಪರಿಶೀಲಿಸುವ ಅಗತ್ಯವೂ ಇರುವುದಿಲ್ಲ. ಆಧುನಿಕ ತಂತ್ರಜ್ಞಾನಗಳು ನಮ್ಮ ದೈನಂದಿನ ಜೀವನದ ಕೆಲಸ ಕಾರ್ಯಗಳನ್ನು ಬಹಳಷ್ಟು ಸರಳಗೊಳಿಸಿದೆ. ಆದರೆ ಅದರ ನಡುವೆಯೇ ಕಿಡಿಗೇಡಿಗಳು ತಂತ್ರಜ್ಞಾನಗಳಲ್ಲಿ ಇರುವ ಲೋಪದೋಷಗಳನ್ನೇ ಬಳಸಿಕೊಂಡು ಸುಲಭವಾಗಿ ಜನರನ್ನು ವಂಚಿಸುವ ಕೆಲಸವೂ ಹೆಚ್ಚಾಗಿಯೇ ನಡೆಯುತ್ತಿದೆ.

Join Whatsapp