ಕೋಲಾಹಲ ಸೃಷ್ಟಿಸಿದ ನಕಲಿ ಡಿಕ್ರಿ ಪ್ರಕರಣ; ಸಿಐಡಿ ಆರೋಪ ಪಟ್ಟಿ ಸಲ್ಲಿಕೆ

Prasthutha|

ಮಂಗಳೂರು: ಮಂಗಳೂರಿನ ನ್ಯಾಯಾಲಯದಲ್ಲಿ ವಿವಾಹ ವಿಚ್ಛೇದನ ನಕಲಿ ಡಿಕ್ರಿ ದಾಖಲೆ ಸೃಷ್ಟಿಸಿದ ಬಗ್ಗೆ ಎಂಟು ವರ್ಷದ ಹಿಂದೆ ಮಂಗಳೂರಿನ ಬಂದರು ಪೊಲೀಸ್ ಠಾಣೆಯಲ್ಲಿ ದಾಖಲಾದ ಪ್ರಕರಣದಲ್ಲಿ ಹೈಕೋರ್ಟ್ ಆದೇಶದ ಪ್ರಕಾರ ಸಿಐಡಿಯವರು ತನಿಖೆ ನಡೆಸಿ ಈ ಪ್ರಕರಣದಲ್ಲಿ ಭಾಗಿಯಾದ ಮಂಗಳೂರಿನ ಮಹಿಳಾ ವಕೀಲೆ ಹಾಗೂ ಅವರ ಗುಮಾಸ್ತರನ್ನು ಆರೋಪಿಗಳೆಂದು ಘೋಷಿಸಲಾಗಿದೆ.

- Advertisement -


ಇಡೀ ರಾಜ್ಯದಲ್ಲಿ ಬಹಳ ಕುತೂಹಲ ಸೃಷ್ಟಿಸಿದ ನ್ಯಾಯಾಲಯದ ನಕಲಿ ಡಿಕ್ರಿ ಪ್ರಕರಣವನ್ನು ಬೇಧಿಸುವಲ್ಲಿ ಸಿಐಡಿ ಪೊಲೀಸರು ಸಫಲರಾಗಿದ್ದು, ಇದು ಮಾತ್ರವಲ್ಲದೆ ಮಂಗಳೂರಿನ ಖ್ಯಾತ ಹಿರಿಯ ವಕೀಲ ಎಂ. ಪಿ ನೊರೊನ್ಹಾ ಅವರ ಮೇಲೆ ಹೊರಿಸಿದ ಸುಳ್ಳು ಆರೋಪಕ್ಕೆ ಯಾವುದೇ ಹುರುಳಿಲ್ಲ ಎಂಬುದು ಸ್ಪಷ್ಟವಾಗಿದೆ.


ಮಂಗಳೂರಿನ ನಿವಾಸಿಯೊಬ್ಬರು ತಾನು ಪ್ರೀತಿಸುತ್ತಿದ್ದ ಯುವತಿಯ ಜೊತೆ ಮದುವೆಯಾಗುವ ಸಲುವಾಗಿ ತನ್ನ ಮೊದಲ ಪತ್ನಿಗೆ ವಿಚ್ಛೇದನ ನೀಡಲು ಮಂಗಳೂರಿನ ವಕೀಲೆಯೊಬ್ಬರನ್ನು ಸಂಪರ್ಕಿಸಿ ನ್ಯಾಯಾಲಯದ ಮುಖಾಂತರ ಆದೇಶ ದೊರಕಿಸಿಕೊಡಲು ಕೇಳಿಕೊಂಡಿದ್ದರು. ನ್ಯಾಯಾಲಯದಿಂದ 2005 ಜುಲೈ ತಿಂಗಳಲ್ಲಿ ವಿವಾಹ ವಿಚ್ಛೇದನ ಆದೇಶ ಆಗಿದೆ ಎಂದು ನ್ಯಾಯಾಲಯದ ಡಿಕ್ರಿ ಪಡೆದುಕೊಂಡಿದ್ದರು. ಆ ವಿಚ್ಛೇದನ ಆದೇಶ (ಡಿಕ್ರಿ) ಪಡೆದ ಬಳಿಕ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ ವ್ಯಕ್ತಿ ಸಾವನ್ನಪ್ಪಿದ್ದರು. ಬಳಿಕ ಮೃತರ ಹೆಸರಿನಲ್ಲಿದ್ದ ಬಾಂಡ್, ಎಫ್.ಡಿಗಳ ಹಂಚಿಕೆ ವಿಚಾರದಲ್ಲಿ ಮೊದಲ ಪತ್ನಿ ಮತ್ತು ಎರಡನೆಯ ಪತ್ನಿ ನಡುವೆ ತಕರಾರು ಎದ್ದು, ನ್ಯಾಯಾಲಯದಲ್ಲಿ ವ್ಯಾಜ್ಯ ದಾಖಲಾಗಿತ್ತು. ಆ ವ್ಯಾಜ್ಯದಲ್ಲಿ ಎರಡನೇ ಪತ್ನಿ ಮೊದಲ ಪತ್ನಿಯ ವಿವಾಹ ವಿಚ್ಛೇದನ ಡಿಕ್ರಿ ನೈಜವಾದ ದಾಖಲೆಯೆಂದು ನಂಬಿ, ವಕೀಲರಾದ ಎಂ. ಪಿ ನೊರೊನ್ಹಾ ಮುಖಾಂತರ 2009ರಲ್ಲಿ ನ್ಯಾಯಾಲಯದಲ್ಲಿ ಹಾಜರುಪಡಿಸಿದ್ದರು.

- Advertisement -


ಇನ್ನು ಆ ಡಿಕ್ರಿಯನ್ನು ನ್ಯಾಯಾಲಯದಲ್ಲಿ ಪರಿಶೀಲಿಸಿದಾಗ ಅದು ವಿವಾಹ ವಿಚ್ಛೇದನದ ನಕಲಿ ಡಿಕ್ರಿ ದಾಖಲೆ ಎಂಬುದು ತಿಳಿದುಬಂದಿದೆ. ಕೂಡಲೇ 2009ರಲ್ಲಿ ವಕೀಲ ಎಂ. ಪಿ ನೊರೊನ್ಹಾ ಅವರು ನ್ಯಾಯಾಲಯದ ಮತ್ತು ವ್ರತ್ತಿ ಗೌರವ ಕಾಪಾಡಲು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿ ಆ ಪ್ರಕರಣದಿಂದ ತತ್ ಕ್ಷಣವೇ ನಿವೃತ್ತಿಯಾಗಿದ್ದರು. ಆದರೆ ಕೆಲ ವ್ಯಕ್ತಿಗಳು ಈ ಪ್ರಕರಣ ನಡೆದು ಐದು ವರ್ಷಗಳ ನಂತರ ಅಂದರೆ 2014ರಲ್ಲಿ ದುರುದ್ದೇಶಪೂರ್ವಕವಾಗಿ ಈ ಪ್ರಕರಣದಲ್ಲಿ ವಕೀಲ ನೊರೊನ್ಹಾ ನ್ಯಾಯಲಯಕ್ಕೆ ಡಿಕ್ರಿ ಸೃಷ್ಟಿಸಿ ಹಾಜರುಪಡಿಸಿದ್ದಾರೆ ಎಂದು ದಿನಪತ್ರಿಕೆಗಳಲ್ಲಿ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಸಂದೇಶಗಳನ್ನು ರವಾನಿಸಿದ್ದರು.


ಈ ಪ್ರಕರಣದ ಕುರಿತು ಬಂದರು ಠಾಣೆ ಪೊಲೀಸರು ಓರ್ವ ಮಹಿಳೆಯ ಮೇಲೆ ದೋಷಾರೋಪಣಾ ಪಟ್ಟಿಯನ್ನು ಸಲ್ಲಿಸಿದ್ದರು. ತದನಂತರ ಮುಂದಿನ ತನಿಖೆಯನ್ನು ಸಿಸಿಬಿ ಪೋಲೀಸರು ನಡೆಸಿದ್ದರು. ಬಳಿಕ ಕರ್ನಾಟಕ ಉಚ್ಚ ನ್ಯಾಯಾಲಯದ ಆದೇಶದಂತೆ ಮುಂದಿನ ತನಿಖೆಯನ್ನು ಸಿಬಿಐ ಪೊಲೀಸರು ನಡೆಸಿದ್ದು, ಬಳಿಕ ಕರ್ನಾಟಕದ ಉಚ್ಚ ನ್ಯಾಯಾಲಯದ ಆದೇಶದಂತೆ ಪ್ರಕರಣವನ್ನು ಸಿಐಡಿ ತನಿಖೆ ಒಪ್ಪಿಸಲಾಗಿದ್ದು, ಸಿಐಡಿ ಪೊಲೀಸರು ಪ್ರಕರಣದ ಸಂಪೂರ್ಣ ತನಿಖೆಯನ್ನು ನಡೆಸಿ ಪ್ರಕರಣವನ್ನು ಭೇದಿಸಿ ನಕಲಿ ಡಿಕ್ರಿಯನ್ನು ಸೃಷ್ಟಿಸಿದ ಪ್ರಕರಣದಲ್ಲಿ ಮಂಗಳೂರಿನ ಹಿರಿಯ ಮಹಿಳಾ ವಕೀಲೆ ಹಾಗೂ ಆಕೆಯ ಗುಮಾಸ್ತನ ವಿರುದ್ಧ ಹೆಚ್ಚುವರಿ ದೋಷಾರೋಪಣ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ.


ವಕೀಲರಾದ ಎಂ. ಪಿ ನೊರೊನ್ಹಾ ವಿರುದ್ಧ ಮಾಡಿದ ಆರೋಪ ಸುಳ್ಳೆಂದು ದೃಢವಾಗಿದ್ದು, ಈ ಪ್ರಕರಣದಲ್ಲಿ ಎಂ. ಪಿ ನೊರೊನ್ಹಾ ಅವರು ಸಂಪೂರ್ಣ ನಿರ್ದೋಷಿಯೆಂದು ಸಿಐಡಿ ತನಿಖೆಯಿಂದ ದೃಢಪಟ್ಟಿದೆ. ಯಾವುದೇ ವಕೀಲರು ಕಕ್ಷಿಗಾರರು ತಮ್ಮ ನಿಲುವನ್ನು ಸಮರ್ಥಿಸಿಕೊಳ್ಳಲು ಕಕ್ಷಿಗಾರರು ನೀಡುವಂತಹ ದಾಖಲೆಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದರೆ ಅಂತಹ ವಕೀಲರು ಬಾಧ್ಯರಾಗಿರುವುದಿಲ್ಲ ಎಂಬ ಕಾನೂನು ಇದ್ದರೂ ವಕೀಲ ಎಂ. ಪಿ ನೊರೊನ್ಹಾ ಅವರ ಸ್ಥಾನಮಾನ, ಘನತೆ, ಅವರ ವ್ಯಕ್ತಿತ್ವ ಪಾರದರ್ಶಕತೆ ಕೋರ್ಟಿನಲ್ಲಿ ಅವರ ಯಶಸ್ಸು ಸಹಿಸದ ಕೆಲವು ವ್ಯಕ್ತಿಗಳು ಅವರನ್ನು ಈ ಪ್ರಕರಣದಲ್ಲಿ ಸಿಲುಕಿಸಿ ಹಾಕಬೇಕೆಂದು ದುರುದ್ದೇಶದಿಂದ ಕೆಲವೊಂದು ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ಕರಾವಳಿ ಅಲೆ ಪತ್ರಿಕೆಯಲ್ಲಿ ಅವರ ವಿರುದ್ಧ ನಕಲಿ ದಾಖಲೆ ಸೃಷ್ಟಿಸಿದ್ದಾರೆ ಎಂದು ಬಿಂಬಿಸಲು ಆಧಾರರಹಿತವಾದ ವರದಿಯನ್ನು ಕೂಡ ಪ್ರಕಟಿಸಿದ್ದರು.


ಇತ್ತೀಚೆಗೆ ಮಂಗಳೂರಿನ ಪ್ರಿನ್ಸಿಪಾಲ್ ಹಿರಿಯ ಸಿವಿಲ್ ನ್ಯಾಯಾಲಯ ಕರಾವಳಿ ಅಲೆ ಪತ್ರಿಕೆಯ ಬಿ.ವಿ ಸೀತಾರಾಂ, ಸಂಪಾದಕ ಸತೀಶ್ ಎನ್, ಆಡಳಿತ ನಿರ್ದೇಶಕ ರೋಹಿಣಿ ಸೀತಾರಾಂ,ಆರಾಧನ ಪ್ರಿಂಟರ್ಸ್ ಅವರು ಎಂ. ಪಿ ನೊರೊನ್ಹಾ ವಿರುದ್ದ ಪ್ರಕಟಿಸಿದ ವರದಿ ತಪ್ಪು ಹಾಗೂ ಮಾನಹಾನಿಕರ ಎಂದು ತೀರ್ಪಿತ್ತು 30 ದಿನದೊಳಗೆ ತಮ್ಮ ಪತ್ರಿಕೆಯಲ್ಲಿ ಕ್ಷಮೆ ಕೇಳಬೇಕೆಂದು ಇಲ್ಲದಿದ್ದರೆ 15 ದಿನಗಳ ಕಾರಾಗೃಹ ಶಿಕ್ಷೆಯನ್ನು ಅನುಭವಿಸಬೇಕೆಂದು ಆದೇಶಿಸಿದನ್ನು ಇಲ್ಲಿ ಸ್ಮರಿಸಬಹುದು.



Join Whatsapp