ಮಧ್ಯಪ್ರದೇಶ ಪೊಲೀಸ್ ಠಾಣೆಯಲ್ಲಿ ಮೃತಪಟ್ಟ ಸೊಹೈಲ್ ಖಾನ್ ರದ್ದು ಯೋಜಿತ ಕೊಲೆ | ಸತ್ಯ ಶೋಧನಾ ತಂಡದಿಂದ ಅಂತಿಮ ವರದಿ !

Prasthutha|

► ಕೃಪೆ : ‘ಕ್ಲಾರಿಯಾನ್ ಇಂಡಿಯಾ’

- Advertisement -

ಭೋಪಾಲ್ : ಕಳೆದ ವಾರ ಭೋಪಾಲದ ನಾರ್ಕೋಟಿಕ್ಸ್ ಪೊಲೀಸರ ವಶದಲ್ಲಿ ಸೊಹೈಲ್ ಖಾನ್ ಎಂಬ 20 ವರ್ಷದ ಯುವಕನ ಸಾವು ಪೂರ್ವನಿಯೋಜಿತ ಕೊಲೆ ಎಂದು ಮಾನವ ಹಕ್ಕುಗಳ ಕಾರ್ಯಕರ್ತರ ಸತ್ಯಶೋಧನಾ ತಂಡ ಅಂತಿಮ ನಿರ್ಧಾರಕ್ಕೆ ಬಂದಿದೆ. ಸೂಕ್ತ ತನಿಖೆಯ ನಂತರ ತಂಡವು ಈ ತೀರ್ಮಾನಕ್ಕೆ ಬಂದಿದೆ ಎಂದು ‘ಕ್ಲಾರಿಯಾನ್ ಇಂಡಿಯಾ’ ವರದಿ ಮಾಡಿದೆ.

ರಾಜಸ್ಥಾನದ ಪ್ರತಾಪ್ ಗಢದ ಹಮೀದ್ ಖಾನ್ ಅವರ ಮಗ ಸೊಹೈಲ್ ಖಾನ್ ಏಪ್ರಿಲ್ 2 ರಂದು ಮಂದ್ ಸೌರ್ ನ ನಾರ್ಕೋಟಿಕ್ಸ್ ಪೊಲೀಸರ ವಶದಲ್ಲಿದ್ದಾಗ ಮೃತಪಟ್ಟಿದ್ದರು. ಸಾವಿಗೆ ಸ್ಪಷ್ಟ ಕಾರಣವೆಂದರೆ ಪೊಲೀಸರಿಂದ ಬಿದ್ದ ಕ್ರೂರ ಹೊಡೆತಗಳಾಗಿದೆ. ಪತ್ರಿಕೆಗಳು ಮತ್ತು ಇತರ ಮೂಲಗಳಿಂದ ಪಡೆದ ಮಾಹಿತಿಯ ಆಧಾರದ ಮೇಲೆ, ಭೋಪಾಲ್ ನ ವಿವಿಧ ಮಾನವ ಹಕ್ಕುಗಳ ಸಂಘಟನೆಗಳು ಮೂವರು ಸದಸ್ಯರ ಸ್ವತಂತ್ರ ಸತ್ಯಶೋಧನಾ ತಂಡವನ್ನು ರಚಿಸಿ ಮಂದ್ ಸಾರ್ ಗೆ ಭೇಟಿ ನೀಡಿದ್ದವು. ಈ ತಂಡದಲ್ಲಿ ಮಧ್ಯಪ್ರದೇಶದ ರಾಷ್ಟ್ರೀಯ ಮಾನವ ಹಕ್ಕುಗಳ ಸಂಘಟನೆಗಳ ಒಕ್ಕೂಟದ (ಎನ್ ಸಿಆರ್ ಒ) ಪ್ರಧಾನ ಕಾರ್ಯದರ್ಶಿ ವಸಿದ್ ಖಾನ್, ಮಧ್ಯಪ್ರದೇಶ ಪ್ರಜಾಸತ್ತಾತ್ಮಕ ಹಕ್ಕುಗಳ ವೇದಿಕೆಯ (ಎಂಪಿಡಿಆರ್ ಎಫ್) ವಿಜಯ್ ಕುಮಾರ್ ಮತ್ತು ಸಾಮಾಜಿಕ ಕಾರ್ಯಕರ್ತ ಯೂಸುಫ್ ಖಾನ್ ಅವರು ಈ ತಂಡದಲ್ಲಿ ಒಳಗೊಂಡಿದ್ದರು.

- Advertisement -

ತಂಡದ ಸದಸ್ಯರು ಏಪ್ರಿಲ್ 5 ರಂದು ಮೃತರ ಕುಟುಂಬವನ್ನು ಭೇಟಿಯಾದರು. ಅವರು ಮೃತನ ಚಿಕ್ಕಪ್ಪ ಇರಾದ್ ಖಾನ್, ಸಹೋದರ ಮುರಾದ್ ಖಾನ್ ಮತ್ತು ಭಾವ ಆಸಿಫ್ ಖಾನ್ ಸೇರಿದಂತೆ ಸ್ನೇಹಿತರು ಮತ್ತು ನೆರೆಹೊರೆಯವರನ್ನು ಭೇಟಿಯಾಗಿ ಮಾತುಕತೆ ನಡೆಸಿ ಘಟನೆಯ ಕುರಿತಂತೆ ಮಾಹಿತಿ ಪಡೆದಿದ್ದರು. ಮರಣೋತ್ತರ ಪರೀಕ್ಷೆಯ ಸಮಯದಲ್ಲಿ, ಸೊಹೈಲ್ ಅವರ ಜನನಾಂಗಗಳು ಸೇರಿದಂತೆ ಇಡೀ ದೇಹದ ಮೇಲೆ ಗಂಭೀರ ಗಾಯಗಳು ಕಂಡುಬಂದಿವೆ ಎಂದು ಕುಟುಂಬ ಸದಸ್ಯರು ಮಾನವ ಹಕ್ಕುಗಳ ತಂಡಕ್ಕೆ ತಿಳಿಸಿದ್ದಾರೆ. ನಾರ್ಕೋಟಿಕ್ಸ್ ಪೊಲೀಸ್ ಠಾಣೆಯಲ್ಲಿ ಅವನನ್ನು ಕ್ರೂರವಾಗಿ ಥಳಿಸಲಾಗಿತ್ತು ಎಂದು ಕುಟುಂಬಿಕರು ಹೇಳುತ್ತಾರೆ.

ಇದನ್ನು ಗ್ರಹಿಸಿಕೊಳ್ಳಲು ಸತ್ಯಶೋಧನಾ ತಂಡವು ಸ್ಥಳೀಯ ಪತ್ರಕರ್ತರು ಮತ್ತು ಹಿರಿಯ ಸಾಮಾಜಿಕ ಕಾರ್ಯಕರ್ತರನ್ನು ಭೇಟಿಮಾಡಿತು. ಇದಲ್ಲದೆ, ತಂಡದ ಸದಸ್ಯರು ಮಂದ್ ಸಾರ್ ನಾರ್ಕೋಟಿಕ್ಸ್ ಸೂಪರಿಂಟೆಂಡೆಂಟ್ ಆಫ್ ಪೊಲೀಸ್ ಅವರೊಂದಿಗೆ ಮಾತನಾಡಲು ಅನುಮತಿ ಕೇಳಿದ್ದರು. ಆದರೆ ಅವರು ಫೋನ್ ಮೂಲಕ ಮಾತನಾಡಲು ಒಪ್ಪಿದರು. ಘಟನೆಯ ಬಗ್ಗೆ ವಿವರವಾಗಿ ಕೇಳಿದಾಗ, “ನ್ಯಾಯಾಂಗ ತನಿಖೆ ನಡೆಯುತ್ತಿದೆ, ಆದ್ದರಿಂದ, ಈ ಸಮಯದಲ್ಲಿ ನಾನು ಏನನ್ನೂ ಹೇಳಲು ಸಾಧ್ಯವಿಲ್ಲ” ಎಂದು ಹೇಳಿದ್ದರು ಎನ್ನಲಾಗಿದೆ.

ಎಲ್ಲಾ ಮೂಲಗಳಿಂದ ಘಟನೆಯ ಸತ್ಯಾಸತ್ಯಗಳನ್ನು ಪರಿಶೀಲಿಸಿದ ನಂತರ ಸತ್ಯಶೋಧನಾ ತಂಡವು ಪೊಲೀಸ್ ವಶದಲ್ಲಿ ಸೊಹೈಲ್ ಖಾನ್ ಅವರ ಸಾವು ಯೋಜಿತ ಕೊಲೆ ಎಂದು ತೀರ್ಮಾನಿಸಿದೆ ಮತ್ತು ಕೆಲವು ಶಿಫಾರಸುಗಳನ್ನು ಮಾಡಿದೆ. ಅದೇನೆಂದರೆ ಇಡೀ ಪ್ರಕರಣದಲ್ಲಿ ಮಾನವ ಹಕ್ಕುಗಳ ಮತ್ತು  ಸುಪ್ರೀಂ ಕೋರ್ಟ್ ಮಾರ್ಗಸೂಚಿಗಳನ್ನು ಉಲ್ಲಂಘಿಸಲಾಗಿದೆ. ಆದ್ದರಿಂದ, ಒಂದು ನಿರ್ದಿಷ್ಟ ಕಾಲಮಿತಿಯೊಳಗೆ ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಘಟನೆಯ ಬಗ್ಗೆ ಉನ್ನತ ಮಟ್ಟದ ನ್ಯಾಯಾಂಗ ತನಿಖೆ ನಡೆಯಬೇಕು. ಅದೇ ರೀತಿ ಸಂಬಂಧಪಟ್ಟ ಅಧಿಕಾರಿಗಳನ್ನು ಕೂಡಲೇ ವಜಾ ಮಾಡಬೇಕು ಮತ್ತು ಕೊಲೆಗಾಗಿ ಕಾನೂನು ಕ್ರಮ ಜರುಗಿಸಬೇಕು. ಕುಟುಂಬದ ಆರ್ಥಿಕ ಸ್ಥಿತಿಯ ದೃಷ್ಟಿಯಿಂದ, ಬಲಿಪಶುವಿನ ಕುಟುಂಬಕ್ಕೆ 50 ಲಕ್ಷ ರೂ.ಗಳ ಪರಿಹಾರವನ್ನು ನೀಡಬೇಕು. ಮತ್ತು ಕುಟುಂಬದ ಸದಸ್ಯರು ಮತ್ತು ಪ್ರತ್ಯಕ್ಷದರ್ಶಿಗಳ ಜೀವಕ್ಕೆ ಅಪಾಯವಿದೆ, ಆದ್ದರಿಂದ ಅವರಿಗೆ ನ್ಯಾಯಾಂಗ ರಕ್ಷಣೆ ನೀಡಬೇಕು ಎಂದು ಸತ್ಯಶೋಧನಾ ತಂಡವು ಒತ್ತಾಯಿಸಿದೆ.



Join Whatsapp