ನಾರಾಯಣರಾವ್ ದಾಭಾಡ್ಕರ್ ಎಂಬ RSS ಕಾರ್ಯಕರ್ತರಾದ 85 ವರ್ಷದ ವೃದ್ದರೊಬ್ಬರು ತಾನು ಕೊರೋನಾದಿಂದ ಬಳಲುತ್ತಿದ್ದರೂ ಕೂಡ ಮಹಾರಾಷ್ಟ್ರದ ನಾಗ್ಪುರದ ಮುನಿಸಿಪಲ್ ಕಾರ್ಪೋರೇಷನ್ ಅಧೀನದಲ್ಲಿರುವ ಇಂದಿರಾಗಾಂಧಿ ರುಗ್ನಾಲಯ ಆಸ್ಪತ್ರೆಯಲ್ಲಿ ಮತ್ತೊಬ್ಬ ಕೊರೋನ ಪೀಡಿತ ಯುವಕನಿಗೆ ತನ್ನ ಬೆಡ್ ಬಿಟ್ಟು ಕೊಟ್ಟು ಮನೆಗೆ ತೆರಳಿದ್ದು, ಮೂರು ದಿನದ ನಂತರ ಮರಣ ಹೊಂದಿದ್ದರು. ಅವರ ಮಾನವೀಯತೆಯನ್ನು ಮರೆಯದಿರೋಣ ಎಂಬ ಸಂದೇಶವು ಕಳೆದ ನಾಲ್ಕೈದು ದಿನಗಳಿಂದ ವೈರಲ್ ಆಗುತ್ತಿದೆ.
ಬಿಜೆಪಿ ಪರ ವೆಬ್‌ಸೈಟ್ Opindia ಸೇರಿದಂತೆ ಹಲವು ಪತ್ರಿಕೆಗಳಲ್ಲಿ ಈ ಸುದ್ದಿ ಬಿತ್ತರವಾಗಿತ್ತು. ನಂತರ ಮಧ್ಯಪ್ರದೇಶದ ಮುಖ್ಯಮಂತ್ರಿಯಾಗಿರುವ ಶಿವರಾಜ್ ಸಿಂಗ್ ಚೌಹಾಣ್ ಕೂಡ ಈ ಬಗ್ಗೆ ಟ್ವೀಟ್ ಮಾಡಿದ್ದರು.
ಶಿವರಾಜ್ ಸಿಂಗ್ ಚೌಹಾಣ್ ರವರು ನಾರಾಯಣರಾವ್ ದಾಭಾಡ್ಕರ್ ರವರ ಫೋಟೊದೊಂದಿಗೆ “ನಾನೀಗ 85 ವರ್ಷದವನಾಗಿದ್ದೇನೆ. ಆದರೆ ಆ ಮಹಿಳೆಯ ಪತಿ ಸಾವನಪ್ಪಿದರೆ, ಅವನ ಮಕ್ಕಳು ಅನಾಥರಾಗುವರು. ಹಾಗಾಗಿ ಆ ವ್ಯಕ್ತಿಯ ಪ್ರಾಣ ಉಳಿಸುವುದು ನನ್ನ ಕರ್ತವ್ಯವಾಗಿದೆ ಎಂದು ಹೇಳಿ ಸ್ವತಃ ಕೊರೊನಾ ಪೀಡಿತರಾಗಿದ್ದ ಆರೆಸ್ಸೆಸ್ ಕಾರ್ಯಕರ್ತರಾದ ಶ್ರೀ ನಾರಾಯಣ್ ಜೀಯವರು ತನ್ನ ಬೆಡ್ ಅನ್ನು ಆ ರೋಗಿಗೆ ಕೊಟ್ಟಿದ್ದರು.. ಇನ್ನೊಬ್ಬರ ಜೀವ ಉಳಿಸುತ್ತಾ ಮೂರು ದಿನದ ನಂತರ ನಾರಾಯಣ್ ಜಿ ಯವರು ಇಹಲೋಕ ತ್ಯಜಿಸಿದರು. ಸಮಾಜದ ಮತ್ತು ರಾಷ್ಟ್ರದ ನೈಜ ಸೇವಕರಿಗೇ ಇಂತಹ ತ್ಯಾಗ ಮಾಡಲು ಸಾಧ್ಯ. ನಿಮ್ಮ ಪವಿತ್ರ ಸೇವಾಭಾವಕ್ಕೆ ಪ್ರಣಾಮಗಳು. ತಾವು ಈ ಸಮಾಜಕ್ಕೆ ಪ್ರೇರಣೆಯಾಗಿದ್ದೀರಿ. ದಿವ್ಯಾತ್ಮಕ್ಕೆ ವಿನಮ್ರ ಶೃದ್ಧಾಂಜಲಿ. ಓಂ ಶಾಂತಿ” ಎಂದು ಟ್ವೀಟ್ ಮಾಡಿದ್ದರು.
ಆದರೆ ಈ ಕುರಿತು ಪ್ರತಿಕ್ರಿಯಿಸಿದ ಆಸ್ಪತ್ರೆಯ ವೈದ್ಯರು 85 ವರ್ಷದ ನಾರಾಯಣರಾವ್ ದಾಭಡ್ಕರ್ ಅವರು ವೈದ್ಯಕೀಯ ಸಲಹೆಯ ವಿರುದ್ಧವಾಗಿ ಡಿಸ್ಚಾರ್ಜ್ ಮಾಡಿಸಿಕೊಂಡಿದ್ದು, ಆದರೆ ಅವರು ಬೇರೊಬ್ಬರಿಗಾಗಿ ತನ್ನ ಹಾಸಿಗೆಯನ್ನು ಬಿಟ್ಟುಕೊಟ್ಟಿಲ್ಲ ಎಂದು ಹೇಳಿರುವುದಾಗಿ ದಿ ಇಂಡಿಯನ್ ಎಕ್ಸ್’ಪ್ರೆಸ್ ವರದಿ ಮಾಡಿದೆ.
ಈ ವಿಷಯಕ್ಕೆ ಸಂಬಂಧಿಸಿದಂತೆ ನಾಗ್ಪುರದ ಇಂದಿರಾ ಗಾಂಧಿ ಜಿಲ್ಲಾಸ್ಪತ್ರೆಯ ಅಧೀಕ್ಷಕರಾಗಿರುವ ಅಜಯ್ ಪ್ರಸಾದ್ ಎಂಬುವವರಿಗೆ ಸಾಮಾಜಿಕ ಕಾರ್ಯಕರ್ತನೊಬ್ಬ ಫೋನ್ ಮಾಡಿದಾಗ, ಇನ್ನೊಬ್ಬರಿಗಾಗಿ ಬೆಡ್ ಬಿಟ್ಟುಕೊಡುವ ಪದ್ದತಿ ನಮ್ಮಲ್ಲಿ ಇಲ್ಲ ಮತ್ತು ಆ ಅಧಿಕಾರವೂ ರೋಗಿಗಳಿಗೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.