‘ನಿಮ್ಮನ್ನು ನೀವೇ ಕಾಪಾಡಿಕೊಳ್ಳಿ’ ಎನ್ನುವ ಸರ್ಕಾರ ಇದ್ದರೇನು? ಇಲ್ಲದಿದ್ದರೇನು? : ಕುಮಾರಸ್ವಾಮಿ ಆಕ್ರೋಶ

Prasthutha|

ಬೆಂಗಳೂರು : ಆತುರಗಾರನಿಗೆ ಬುದ್ಧಿ ಕಡಿಮೆ ಎಂಬಂತೆ ಕೇವಲ ಮಾತಿನಲ್ಲಿ ಜನರನ್ನು ಓಲೈಸುವ ಇಂತಹ ಬೂಟಾಟಿಕೆಯನ್ನು ಸರ್ಕಾರ ಬಿಡಬೇಕು. ‘ನಿಮ್ಮನ್ನು ನೀವೇ ಕಾಪಾಡಿಕೊಳ್ಳಿ’ ಎನ್ನುವ ಸರ್ಕಾರ ಇದ್ದರೇನು? ಇಲ್ಲದಿದ್ದರೇನು? ಎಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

- Advertisement -

ಈ ಕುರಿತು ಸರಣಿ ಟ್ವಿಟ್ ಮಾಡಿರುವ ಅವರು, ಮೇ ಒಂದರಿಂದ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತ ಲಸಿಕೆ ಎಂದು ಬೊಬ್ಬೆ ಹೊಡೆದ ಕೇಂದ್ರ ಮತ್ತು ರಾಜ್ಯ ಸರ್ಕಾರ ಪುಕ್ಕಟೆ ಪುಂಗಿ ಊದಿದ್ದೇ ಬಂತು. ಲಸಿಕೆಯ ದಾಸ್ತಾನಿಲ್ಲದೆ, ಸೂಕ್ತ ಮುನ್ನೆಚ್ಚರಿಕೆ, ವ್ಯವಸ್ಥೆ ಮಾಡಿಕೊಳ್ಳದೆ ಬರೀ ಪ್ರಚಾರ ತೆಗೆದುಕೊಂಡ ಕೇಂದ್ರ, ರಾಜ್ಯ ಸರ್ಕಾರಗಳ ನಿಲುವು ಅಕ್ಷಮ್ಯ ಮತ್ತು ಖಂಡನೀಯ ಎಂದು ಕಿಡಿಕಾರಿದ್ದಾರೆ.

ಲಭ್ಯವಿರುವ ಮಾಹಿತಿ ಪ್ರಕಾರ ಮೇ ಒಂದರಿಂದ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡಲು ಸರ್ಕಾರ ಏದುಸಿರು ಬಿಡುತ್ತಿದೆ. 45 ವರ್ಷ ಮೇಲ್ಪಟ್ಟವರಿಗೆ ಎರಡನೇ ಡೋಸ್ ಕೊಡಲು ಹೆಣಗಾಡುತ್ತಿದೆ ಎಂದಿದ್ದಾರೆ.

- Advertisement -

18 ವರ್ಷ ಮೇಲ್ಪಟ್ಟ ದೇಶದ ಕೋಟ್ಯಾಂತರ ಮಂದಿಗೆ ಲಸಿಕೆ ನೀಡುವುದಾಗಿ ಬಾಯಿಮಾತಿನ ಉಪಚಾರ ಮಾಡಿದ ಕೇಂದ್ರ ಮತ್ತು ರಾಜ್ಯ ಸರ್ಕಾರದ ಹೊಣೆಗೇಡಿತನ ಮತ್ತು ತಿಕ್ಕಲುತನವನ್ನು ದೇಶದ ಜನತೆ ಎಂದಿಗೂ ಕ್ಷಮಿಸರು ಸರಕಾರಕ್ಕೆ ತಿರುಗೇಟು ನೀಡಿದ್ದಾರೆ.

ಮೊದಲ ಹಂತದಲ್ಲಿ 45 ವರ್ಷ ಮೇಲ್ಪಟ್ಟವರಿಗೆ ಎಷ್ಟು ಮಂದಿಗೆ ಲಸಿಕೆ ಹಾಕಲಾಗಿದೆ? ಅವರಲ್ಲಿ ಎಷ್ಟು ಮಂದಿಗೆ ಎರಡನೇ ಹಂತದಲ್ಲಿ ಲಸಿಕೆ ಕೊಡಲಾಗಿದೆ ಎಂಬ ಅಂಕಿಅಂಶಗಳನ್ನು ಸಾರ್ವಜನಿಕವಾಗಿ ಬಹಿರಂಗಗೊಳಿಸಿ ಎಂದು ಮನವಿ ಮಾಡಿದ್ದಾರೆ.

18 ವರ್ಷ ಮೇಲ್ಪಟ್ಟವರಿಗೆ ಎಷ್ಟು ಮಂದಿಗೆ ಯಾವತ್ತಿನಿಂದ ಲಸಿಕೆ ಹಾಕುವ ಅಭಿಯಾನ ಶುರು ಮಾಡುವಿರಿ? ಎಂಬುದನ್ನು ಸ್ಪಷ್ಟವಾಗಿ ದೇಶದ ಜನತೆಗೆ ಮಾಹಿತಿ ಕೊಡಿ. ಬಾಯಿ ಬಿಟ್ಟರೆ ಬಣ್ಣಗೇಡು ಎಂಬಂತೆ ವರ್ತಿಸುತ್ತಿರುವ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಿರ್ಲಕ್ಷ್ಯತನ ದೇಶದ ಜನತೆ ಮೂರ್ಖರು ಎಂದು ಭಾವಿಸಿದಂತಿದೆ ಎಂದು ಅವರು ಕುಟುಕಿದ್ದಾರೆ.

ದೇಶದಾದ್ಯಂತ ಕೊರೋನಾ ಸೋಂಕಿತರು ಬೆಡ್, ಆಕ್ಸಿಜನ್, ಅಂಬುಲೆನ್ಸ್, ಔಷಧಿಗಳಿಲ್ಲದೆ ಪರದಾಡುತ್ತಿದ್ದಾರೆ. ಸತ್ತವರ ಅಂತ್ಯಸಂಸ್ಕಾರಕ್ಕೂ ಪಾಳಿಯಲ್ಲಿ ನಿಲ್ಲಬೇಕಾದ ವ್ಯವಸ್ಥೆ ಸೃಷ್ಟಿಸಿದ ಕೇಂದ್ರ- ರಾಜ್ಯ ಸರ್ಕಾರಗಳ ದಯನೀಯ ವೈಫಲ್ಯದ ಬಗ್ಗೆ ದೇಶದ ಜನತೆ ಹಿಡಿಶಾಪ ಹಾಕುತ್ತಿದ್ದಾರೆ ಎಂದಿದ್ದಾರೆ.

ಅರಿವುಗೇಡಿಗಳಂತೆ ಪುಕ್ಕಟೆ ಪ್ರವಚನ ನೀಡುತ್ತಿರುವ ಪ್ರಧಾನಿ, ಮುಖ್ಯಮಂತ್ರಿ ಮತ್ತು ಸಚಿವರುಗಳು ಕನಿಷ್ಠ ಸಾಮಾನ್ಯ ರೀತಿ ಪ್ರತಿಕ್ರಿಯಿಸುವುದನ್ನು, ಇಂತಹ ದುರಿತ ಕಾಲದಲ್ಲಿ ತೆಗೆದುಕೊಳ್ಳಬೇಕಾದ ಎಚ್ಚರಿಕೆಯನ್ನು ಜವಾಬ್ದಾರಿಯಿಂದ ನಿಭಾಯಿಸುವುದು ಒಳಿತು ಎಂದು ಹೇಳಿದ್ದಾರೆ.

ಮಾತಿನಲ್ಲಿ ಬ್ರಹ್ಮ ನೀತಿಯಲ್ಲಿ ಕ್ರೋಧಿ, ಈ ಲೋಕದ ಭುಂಜಕರು, ನಾ ಹೆಚ್ಚು ತಾ ಹೆಚ್ಚು ಎಂದು ನಡೆದಾಡುವರಯ್ಯ, ನಾನು ನೀನೆಂಬ ಉಭಯವಳಿದು
ತಾನು ತಾನಾದುದ ನಾನಾರನೂ ಕಾಣೆನಯ್ಯ ಝೇಂಕಾರ ನಿಜಲಿಂಗಪ್ರಭುವೆ – ಜಕ್ಕಣಯ್ಯ ಎಂಬುದಾಗಿ ಜಕ್ಕಣ್ಣನವರ ವಚನವನ್ನು ಜಪಿಸಿದ್ದಾರೆ.

Join Whatsapp