ಪಾಕ್ ವಿರುದ್ಧ ಆಸೀಸ್‌ಗೆ ರೋಚಕ ಗೆಲುವು: ಫೈನಲ್‌ನಲ್ಲಿ ಭಾರತ vs ಆಸ್ಟ್ರೇಲಿಯಾ

Prasthutha|

ಬೆನೋನಿ (ದಕ್ಷಿಣ ಆಫ್ರಿಕಾ): U19 ಎರಡನೇ ಸೆಮಿಫೈನಲ್‌ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಆಸ್ಟ್ರೇಲಿಯಾ ಗೆಲುವು ಸಾಧಿಸಿ ಐಸಿಸಿ 19 ವರ್ಷದೊಳಗಿನವರ ಏಕದಿನ ಕ್ರಿಕೆಟ್‌ ವಿಶ್ವಕಪ್ ಟೂರ್ನಿಯ ಫೈನಲ್‌ ಪ್ರವೇಶಿಸಿದೆ. ಈ ಮೂಲಕ ಈಗಾಗಲೇ ಫೈನಲ್‌ ತಲುಪಿರುವ ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಫೆಬ್ರುವರಿ 11ರಂದು ಫೈನಲ್ ಪಂದ್ಯ ನಡೆಯಲಿದೆ.

- Advertisement -

ಪಾಕ್‌ ನೀಡಿದ 180 ರನ್‌ ಗುರಿ ಎದುರು ಕೊನೇ ಓವರ್‌ವರೆಗೂ ಹೋರಾಟ ನಡೆಸಿದ್ದರೂ ಆಸ್ಟ್ರೇಲಿಯಾ, 5 ಎಸೆತಗಳು ಬಾಕಿ ಇರುವಾಗ 9 ವಿಕೆಟ್‌ಗಳನ್ನು ಕಳೆದುಕೊಂಡು ಗುರಿ ತಲುಪಿ ವಿಜಯಯಿಯಾಯಿತು.

ಆಸಿಸ್‌ 10 ಓವರ್‌ಗಳಲ್ಲಿ ಒಂದೂ ವಿಕೆಟ್‌ ನಷ್ಟವಿಲ್ಲದೆ 33 ರನ್‌ ಗಳಿಸಿತ್ತು. ಆದರೆ 59 ರನ್‌ ಗಳಿಸುವಷ್ಟರಲ್ಲಿ 4 ವಿಕೆಟ್‌ ಕಳೆದುಕೊಂಡಿತು. ಈ ಹಂತದಲ್ಲಿ ಹ್ಯಾರಿ ಡಿಕ್ಸನ್‌ಗೆ ಜೊತೆಯಾದ ಒಲಿವರ್‌ ಪೀಕೆ ಶಾಂತ ಚಿತ್ತವಾಗಿ ಬ್ಯಾಟ್‌ ಬೀಸಿದರು. ಎಚ್ಚರಿಕೆಯ ಆಟವಾಡಿದ ಇವರು 5ನೇ ವಿಕೆಟ್‌ ಪಾಲುದಾರಿಕೆಯಲ್ಲಿ 43 ರನ್‌ ಕಲೆಹಾಕಿ ಅಲ್ಪ ಚೇತರಿಕೆ ನೀಡಿದರು.

- Advertisement -

ಒಂದು ಹಂತದಲ್ಲಿ ಕೇವಲ 4 ವಿಕೆಟ್‌ ನಷ್ಟಕ್ಕೆ 145 ರನ್‌ ಗಳಿಸಿದ್ದ ಆಸಿಸ್‌ ಬಳಿಕ, 164 ರನ್‌ ಆಗುವಷ್ಟರಲ್ಲಿ 9 ವಿಕೆಟ್‌ಗಳನ್ನು ಕಳೆದುಕೊಂಡಿತು. ಕೊನೆಯಲ್ಲಿ ಒತ್ತಡ ಮೆಟ್ಟಿನಿಂತ ರಾಫ್‌ ಮೆಕ್‌ಮಿಲನ್‌ (19) ಹಾಗೂ ಕಲ್ಲಮ್‌ ವಿಡ್ಲೆರ್‌ (2) ಮುರಿಯದ 10ನೇ ವಿಕೆಟ್‌ ಜೊತೆಯಾಟದಲ್ಲಿ 17 ರನ್‌ ಸೇರಿಸಿ ಪಾಕ್‌ ಪಡೆಯನ್ನು ಸೋಲಿಸುವಲ್ಲಿ ಯಶಸ್ವಿಯಾದರು. ಇದರೊಂದಿಗೆ ಆಸ್ಟ್ರೇಲಿಯಾ 6ನೇ ಬಾರಿ ಫೈನಲ್‌ಗೆ ಲಗ್ಗೆ ಇಟ್ಟಿತು.

75 ಎಸೆತಗಳಲ್ಲಿ 50 ರನ್‌ ಗಳಿಸಿ ಭರವಸೆ ಮೂಡಿಸಿದ್ದ ಡಿಕ್ಸನ್‌, ಇನ್ನೂ 78 ರನ್‌ ಬೇಕಿದ್ದಾಗ ವಿಕೆಟ್‌ ಒಪ್ಪಿಸಿದರು. ಬಳಿಕ, ಆರನೇ ವಿಕೆಟ್‌ ಜೊತೆಯಾಟದಲ್ಲಿ 44 ರನ್‌ ಕೂಡಿಸಿದ ಒಲಿವರ್‌ (49) ಮತ್ತು ಟಾಮ್‌ ಕ್ಯಾಂಪ್‌ಬೆಲ್‌ (25), ಕೇವಲ 9 ರನ್ ಅಂತರದಲ್ಲಿ ನಿರ್ಣಾಯಕ ಹಂತದಲ್ಲಿ ವಿಕೆಟ್‌ ಒಪ್ಪಿಸಿದರು. ಇದರಿಂದಾಗಿ ಪಾಕ್‌ ಪಡೆಯ ಗೆಲುವಿನ ಆಸೆ ಮತ್ತೆ ಚಿಗುರಿತು.

ಪಾಕ್‌ ಪರ ಅಲಿ ರಾಜಾ 10 ಓವರ್‌ಗಳಲ್ಲಿ 34 ರನ್‌ ನೀಡಿ 4 ವಿಕೆಟ್‌ಗಳನ್ನು ಕಬಳಿಸಿದರು. ಅರಾಫತ್‌ ಮಿನ್ಹಾಸ್‌ 2 ವಿಕೆಟ್‌ ಕಿತ್ತರೆ, ಉಬೇದ್‌ ಶಾ ಮತ್ತು ನವೀದ್‌ ಅಹ್ಮದ್‌ ಖಾನ್‌ ಒಂದೊಂದು ವಿಕೆಟ್ ಪಡೆದರು.

ಪಂದ್ಯದಲ್ಲಿ ಟಾಸ್‌ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಪಾಕಿಸ್ತಾನ ಬ್ಯಾಟರ್‌ಗಳು, ಆಸಿಸ್‌ ವೇಗಿಗಳ ಬಿರುಗಾಳಿಯಂಥ ದಾಳಿ ಎದುರು ದಿಕ್ಕೆಟ್ಟರು. ವೇಗಿ ಟಾಮ್‌ ಸ್ಟ್ರಾಕರ್‌, 9.5 ಓವರ್‌ಗಳಲ್ಲಿ ಒಂದು ಮೇಡನ್‌ ಸಹಿತ ಕೇವಲ 24 ರನ್‌ ಬಿಟ್ಟುಕೊಟ್ಟು ಪ್ರಮುಖ 6 ವಿಕೆಟ್‌ಗಳನ್ನು ಕಬಳಿಸಿದರು. ಅವರಿಗೆ ಉತ್ತಮ ಸಹಕಾರ ನೀಡಿದ ಮಹ್ಲಿ ಬಿಯರ್ಡ್‌ಮನ್‌, ಕಲ್ಲಮ್ ವಿಡ್ಲೆರ್‌, ರಾಫ್‌ ಮೆಕ್‌ಮಿಲನ್‌ ಮತ್ತು ಟಾಮ್‌ ಕಾಂಪ್‌ಬೆಲ್‌ ತಲಾ ಒಂದೊಂದು ವಿಕೆಟ್‌ ಕಿತ್ತರು.

ಸಾದ್‌ ಬೇಗ್‌ ನೇತೃತ್ವದ ಪಾಕ್‌ ಯುವ ಪಡೆಯ ಶಮೈಲ್‌ ಹುಸೇನ್‌ (17), ಅಜಾನ್‌ ಅವೈಸ್‌ (52) ಮತ್ತು ಅರಾಫತ್‌ ಮಿನ್ಹಾಸ್‌ (52) ಹೊರತುಪಡಿಸಿದರೆ, ಉಳಿದ ಯಾವ ಬ್ಯಾಟರ್‌ ಎರಡಂಕಿ ಮೊತ್ತ ಗಳಿಸಲಿಲ್ಲ. ಹೀಗಾಗಿ, ಪಾಕ್‌ ಪಡೆ ಸಾಧಾರಣ ಮೊತ್ತಕ್ಕೆ ಕುಸಿಯಬೇಕಾಯಿತು.

Join Whatsapp