ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗದ ವತಿಯಿಂದ ಲೋಕೋಪಯೋಗಿ ಇಲಾಖೆಯ ಸಹಾಯಕ ಅಭಿಯಂತರರ ನೇಮಕಾತಿಗಾಗಿ ಮಂಗಳವಾರ ನಡೆದ ಪರೀಕ್ಷೆಗೆ ರೈಲು ವಿಳಂಬದಿಂದಾಗಿ ಅಭ್ಯರ್ಥಿಗಳು ಸಮಯಕ್ಕೆ ಸರಿಯಾಗಿ ಹಾಜರಾಗಲು ಸಾಧ್ಯವಾಗದೆ ಇಕ್ಕಿಟ್ಟಿನಲ್ಲಿ ಸಿಲುಕಿಕೊಂಡಿದ್ದಾರೆ. ಅವರಿಗೆ ಪ್ರತ್ಯೇಕ ಪರೀಕ್ಷೆ ನಡೆಸಬೇಕು ಎಂದು ಎಸ್.ಐ.ಓ ಕರ್ನಾಟಕದ ರಾಜ್ಯ ಕಾರ್ಯದರ್ಶಿ ಮುಹಮ್ಮದ್ ಪೀರ್ ಲಟಗೇರಿ ಒತ್ತಾಯಿಸಿದ್ದಾರೆ.
ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಸಹಾಯಕ ಅಭಿಯಂತರರ ನೇಮಕಾತಿಗೆ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳಿಗೆ 14-12-2021 ರಂದು ಪರೀಕ್ಷಾ ದಿನಾಂಕ ನಿಗದಿಯಾಗಿತ್ತು, ಅದರಂತೆ ಮಂಗಳವಾರ ನಡೆದ ಸಹಾಯಕ ಅಭಿಯಂತರರ ಪರೀಕ್ಷೆಗೆ ಬೆಂಗಳೂರು, ಮೈಸೂರು, ಹಾಸನ ಒಳಗೊಂಡತೆ ಒಟ್ಟು 6 ಜಿಲ್ಲೆಗಳಿಂದ ಪರೀಕ್ಷೆ ಬರೆಯಲು ಅಭ್ಯರ್ಥಿಗಳು ಕಲಬುರ್ಗಿಗೆ ರೈಲು ಸಂಖ್ಯೆ 11312 ರ ಹಾಸನ-ಸೊಲ್ಲಾಪುರ ಎಕ್ಸಪ್ರೆಸ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದರು, ಈ ರೈಲು ಕಲಬುರ್ಗಿಗೆ ಮಧ್ಯಾಹ್ನ 1.30 ಗಂಟೆಗೆ ತಡವಾಗಿ ತಲುಪಿದ ಕಾರಣ ಅಭ್ಯರ್ಥಿಗಳು ಪರೀಕ್ಷಾ ಕೇಂದ್ರಕ್ಕೆ ಸರಿಯಾದ ಸಮಯಕ್ಕೆ ತಲುಪಲಿಲ್ಲ, ಇದರಿಂದ ಅಭ್ಯರ್ಥಿಗಳು ಮುಂಜಾನೆಯ ಪೇಪರ್-1 ಪರೀಕ್ಷೆಗೆ ಹಾಜರಾಗಲು ಸಾಧ್ಯವಾಗಲಿಲ್ಲ ಎಂದು ಅವರು ತಿಳಿಸಿದರು.
ಸುಮಾರು 7 ಗಂಟೆ ವಿಳಂಬವಾಗಿರುವ ರೈಲು ಕಲಬುರ್ಗಿಗೆ ಬೆಳಿಗ್ಗೆ 6 ಗಂಟೆಗೆ ತಲುಪಬೇಕಾಗಿತ್ತು, ಈ ರೈಲಿನಲ್ಲಿ ಪ್ರಯಾಣ ಮಾಡುತ್ತಿದ್ದ ಅಂದಾಜು ಎರಡು ಸಾವಿರದಷ್ಟು ಅಭ್ಯರ್ಥಿಗಳು ಬೆಳಗಿನ ಪೇಪರ್-1 ಪರೀಕ್ಷೆಯನ್ನು ಬರೆಯಲಿಲ್ಲ, ಇದರಿಂದ ಅನೇಕ ಅಭ್ಯರ್ಥಿಗಳು ಹುದ್ದೆಯ ಅವಕಾಶದಿಂದ ವಂಚಿತರಾಗುವ ಆತಂಕದಲ್ಲಿದ್ದಾರೆ.
ಈ ಬಗ್ಗೆ ಕರ್ನಾಟಕ ಲೋಕಸೇವಾ ಆಯೋಗವು ರೈಲು ವಿಳಂಬದಿಂದಾಗಿ ತಡವಾಗಿ ತಲುಪಿದ ವಿದ್ಯಾರ್ಥಿಗಳಿಗೆ ಪೇಪರ್-1 ಪತ್ರಿಕೆಯ ಪ್ರತ್ಯೇಕ ಪರೀಕ್ಷೆಯನ್ನು ನಡೆಸುವ ಮೂಲಕ ಅಭ್ಯರ್ಥಿಗಳಿಗೆ ನ್ಯಾಯ ಒದಗಿಸಬೇಕು ಹಾಗೂ ಈ ರೀತಿಯ ಸಮಸ್ಯೆಗಳು ಎದುರಾಗದಂತೆ ಕರ್ನಾಟಕ ಲೋಕಸೇವಾ ಆಯೋಗವು ಇನ್ನಿತರ ವಿವಿಧ ಇಲಾಖೆಯ ನೇಮಕಾತಿಗಾಗಿ ನಡೆಸುವ ಪರೀಕ್ಷೆಗೆ ದೂರದ ಪ್ರಯಾಣವನ್ನು ಆದಷ್ಟು ಕಡಿಮೆ ಮಾಡಿ ಅಭ್ಯರ್ಥಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಹೆಚ್ಚಿನ ಪರೀಕ್ಷಾ ಕೇಂದ್ರಗಳನ್ನು ತೆರೆಯುವ ಮೂಲಕ ಪರೀಕ್ಷಾರ್ಥಿಗಳಿಗೆ ನೇರವಾಗಬೇಕೆಂದು ಎಸ್.ಐ.ಓ ಕರ್ನಾಟಕದ ರಾಜ್ಯ ಕಾರ್ಯದರ್ಶಿ ಮಹಮ್ಮದ್ ಪೀರ್ ಲಟಗೇರಿ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ರೈಲು ವಿಳಂಬದಿಂದಾಗಿ ಪರೀಕ್ಷೆ ಗೈರು: ಪ್ರತ್ಯೇಕ ಪರೀಕ್ಷೆ ನಡೆಸಲು ಎಸ್ ಐಒ ಒತ್ತಾಯ
Prasthutha|