ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್, ಬಿಜೆಪಿ ಸಮಬಲದ ಹೋರಾಟ

Prasthutha|

➤ ಕಾಂಗ್ರೆಸ್ 11 ಬಿಜೆಪಿ 11, ಜೆಡಿಎಸ್ 2 ಸ್ಥಾನಗಳಲ್ಲಿ ಗೆಲುವು

- Advertisement -

ಬೆಂಗಳೂರು: ರಾಜ್ಯದ ಸ್ಥಳೀಯ ಸಂಸ್ಥೆಗಳಿಂದ ವಿಧಾನಪರಿಷತ್ತಿನ 25 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿ ಹಾಗೂ ಕಾಂಗ್ರೆಸ್ ತಲಾ 11 ಸ್ಥಾನಗಳಲ್ಲಿ ಜಯಭೇರಿ ಬಾರಿಸುವ ಮೂಲಕ ಸಮಬಲ ಸಾಧಿಸಿದೆ.
ಈ ಮೂಲಕ ಇದೇ ಮೊದಲ ಬಾರಿಗೆ ಪರಿಷತ್ತಿನಲ್ಲಿ ಬಿಜೆಪಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಪ್ರತಿಪಕ್ಷ ಕಾಂಗ್ರೆಸ್ ಅತ್ಯಂತ ವ್ಯವಸ್ಥಿತವಾಗಿ ಚುನಾವಣೆ ಎದುರಿಸಿದ್ದು, 11 ಸ್ಥಾನಗಳನ್ನು ತನ್ನದಾಗಿಸಿಕೊಂಡಿದೆ. ಜೆಡಿಎಸ್‌ 2, ಪಕ್ಷೇತರ ಅಭ್ಯರ್ಥಿ 1 ಕ್ಷೇತ್ರದಲ್ಲಿ ಜಯಗಳಿಸಿದ್ದಾರೆ.
ಹಾಸನದಲ್ಲಿ ಜೆಡಿಎಸ್ ನ ಡಾ. ಸೂರಜ್ ರೇವಣ್ಣ ನಿರಾಯಾಸವಾಗಿ ಗೆಲುವು ಸಾಧಿಸಿದ್ದು, ಮೈಸೂರಿನ ದ್ವಿ ಸದಸ್ಯ ಕ್ಷೇತ್ರದಲ್ಲಿ ಜೆಡಿಎಸ್ ನ ಸಿ.ಎನ್. ಮಂಜೇಗೌಡ ಎರಡನೇ ಪ್ರಾಶಸ್ತ್ಯದಲ್ಲಿ ಗೆಲುವು ಸಾಧಿಸಿದರು. ಮೊದಲ ಪ್ರಾಶಸ್ತ್ಯದಲ್ಲಿ ಗೆದ್ದಿದ್ದ ಬಿಜೆಪಿಯ ರಘು ಕೌಟಿಲ್ಯಗೆ ತೀವ್ರ ನಿರಾಸೆ ಉಂಟಾಗಿದೆ.
ವಿಧಾನಪರಿಷತ್ತಿನಲ್ಲಿ ಬಿಜೆಪಿ 25 ಸ್ಥಾನಗಳ ಜತೆ ಹೆಚ್ಚುವರಿಯಾಗಿ 11 ಸ್ಥಾನಗಳನ್ನು ಪಡೆದುಕೊಂಡಿದ್ದು, ತನ್ನ ಸಂಖ್ಯಾ ಬಲವನ್ನು 36 ಕ್ಕೆ ಏರಿಕೆ ಮಾಡಿಕೊಂಡಿದೆ.
ದಕ್ಷಿಣ ಕನ್ನಡ-ಉಡುಪಿ ದ್ವಿ ಸದಸ್ಯ ಕ್ಷೇತ್ರದಲ್ಲಿ ಹಾಲಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಬಿಜೆಪಿಯಿಂದ ಪುನರ್ ಆಯ್ಕೆಯಾಗಿದ್ದಾರೆ. ಕಾಂಗ್ರೆಸ್ಸಿನ ಮಂಜುನಾಥ ಭಂಡಾರಿ ಜಯಗಳಿಸಿದ್ದಾರೆ. ಚಿಕ್ಕಮಗಳೂರಿನಲ್ಲಿ ಹಾಲಿ ಮೇಲ್ಮನೆ ಉಪಸಭಾಪತಿ ಬಿಜೆಪಿಯ ಎಂ.ಕೆ. ಪ್ರಾಣೇಶ್, ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಗಾಯತ್ರಿ ಶಾಂತೇಗೌಡ ಅವರಿಂದ ೬ ಮತಗಳ ಅಂತರದಲ್ಲಿ ಕೂದಲೆಳೆಯ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಮೈಸೂರು-ಚಾಮರಾಜನಗರ ದ್ವಿಸದಸ್ಯ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಡಾಕ್ಟರ್ ಡಿ. ತಿಮ್ಮಯ್ಯ ವಿಜಯಶಾಲಿಯಾಗಿದ್ದಾರೆ.
ಚಿತ್ರದುರ್ಗ-ದಾವಣಗೆರೆ ಕ್ಷೇತ್ರದಲ್ಲಿ ಬಿಜೆಪಿಯ ಕೆ.ಎಸ್. ನವೀನ್ ಗೆಲುವು ಸಾಧಿಸಿದರೆ, ಕಾಂಗ್ರೆಸ್ಸಿನ ಬಿ. ಸೋಮಶೇಖರ್ ಸೋಲು ಅನುಭವಿಸಿದ್ದಾರೆ. ಶಿವಮೊಗ್ಗದಲ್ಲಿ ಬಿಜೆಪಿಯ ಡಿ.ಎಸ್. ಅರುಣ್ ಗೆಲುವು ಸಾಧಿಸಿದ್ದು, ಕಾಂಗ್ರೆಸ್ಸಿನ ಆರ್. ಪ್ರಸನ್ನಕುಮಾರ್ ಜಯಶೀಲರಾಗಿದ್ದಾರೆ.
ಬೆಳಗಾವಿ-ಚಿಕ್ಕೋಡಿಯ ದ್ವಿ ಸದಸ್ಯ ಕ್ಷೇತ್ರದಲ್ಲಿ ಕಾಂಗ್ರೆಸ್ಸಿನ ಚನ್ನರಾಜ್, ಪಕ್ಷೇತರ ಅಭ್ಯರ್ಥಿ ಲಖನ್ ಜಾರಕಿಹೊಳಿ ಗೆಲುವು ಸಾಧಿಸಿದ್ದಾರೆ. ಬಿಜೆಪಿಯ ಮಹಾಂತೇಶ್ ಕವಟಗಿಮಟ ಸೋಲು ಅನುಭವಿಸಿದ್ದಾರೆ.
ಬೆಂಗಳೂರು ನಗರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಗೋಪಿನಾಥ ರೆಡ್ಡಿ ಗೆಲುವು ಸಾಧಿಸಿದ್ದಾರೆ. ಕಾಂಗ್ರೆಸ್ಸಿನ ಯೂಸೂಫ್ ಶರೀಫ್ ಸೋಲಂಡಿದ್ದಾರೆ. ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಕಾಂಗ್ರೆಸ್ಸಿನ ಎಸ್. ರವಿ ತಮ್ಮ ಪ್ರತಿಸ್ಪರ್ಧಿ ಎಚ್.ಎಂ. ರಮೇಶಗೌಡ ಅವರನ್ನು ಪರಾಭವಗೊಳಿಸಿದ್ದಾರೆ. ಕೊಡಗು ಕ್ಷೇತ್ರದಲ್ಲಿ ಬಿಜೆಪಿಯ ಸುಜಾ ಕುಶಾಲಪ್ಪ ಗೆಲುವು ಸಾಧಿಸಿದ್ದು, ಕಾಂಗ್ರೆಸ್ಸಿನ ಮಂಥರ ಗೌಡ ಸೋಲು ಅನುಭವಿಸಿದ್ದಾರೆ. ಉತ್ತರಕನ್ನಡದಲ್ಲಿ ಬಿಜೆಪಿಯ ಗಣಪತಿ ಉಳ್ವೇಕರ್ ಗೆದ್ದಿದ್ದರೆ ಕಾಂಗ್ರೆಸ್ಸಿನ ಭೀಮಣ್ಣ ನಾಯಕ್ ಸೋಲು ಅನುಭವಿಸಿದ್ದಾರೆ. ಕಲಬುರಗಿಯಲ್ಲಿ ಬಿಜೆಪಿಯ ಅಭ್ಯರ್ಥಿ ಬಿ.ಜಿ.ಪಾಟೀಲ್ ಗೆಲುವು ಸಾಧಿಸಿದರೆ, ಅವರ ಪ್ರತಿಸ್ಪರ್ಧಿ ಕಾಂಗ್ರೆಸ್ಸಿನ ಶಿವಾನಂದ ಪಾಟೀಲ್ ವರ್ತೂರ್ ಸೋಲು ಅನುಭವಿಸಿದ್ದಾರೆ.
ಬಳ್ಳಾರಿ-ವಿಜಯನಗರ ಕ್ಷೇತ್ರದಲ್ಲಿ ಕಾಂಗ್ರೆಸ್ಸಿನ ಹಾಲಿ ವಿಧಾನಪರಿಷತ್ ಸದಸ್ಯ ಕೆ.ಸಿ. ಕೊಂಡಯ್ಯ ಅವರನ್ನು ಸೋಲಿಸಿ ವೈ. ಎಂ.ಸತೀಶ ವಿಧಾನಪರಿಷತ್ ಪ್ರವೇಶಿಸಲಿದ್ದಾರೆ. ಧಾರವಾಡ-ಹಾವೇರಿ-ಗದಗ ಜಿಲ್ಲೆಗಳ ದ್ವಿ ಸದಸ್ಯ ಕ್ಷೇತ್ರದಲ್ಲಿ ಬಿಜೆಪಿಯ ಪ್ರದೀಪ್ ಶೆಟ್ಟರ್, ಕಾಂಗ್ರೆಸ್ಸಿನಿಂದ ಸಲೀಂ ಅಹಮದ್ ಗೆಲುವು ಸಾಧಿಸಿದ್ದಾರೆ.ವಿಜಯಪುರ-ಬಾಗಲಕೋಟೆ ದ್ವಿ ಸದಸ್ಯ ಕ್ಷೇತ್ರದಲ್ಲಿ ಬಿಜೆಪಿಯ ಪಿ. ಎಚ್. ಪೂಜಾರ, ಕಾಂಗ್ರೆಸ್ಸಿನ ಸುನೀಲಗೌಡ ಪಾಟೀಲ ಜಯಗಳಿಸಿದ್ದಾರೆ. ಮಂಡ್ಯದಲ್ಲಿ ಕಾಂಗ್ರೆಸ್ಸಿನ ದಿನೇಶ್ ಗೂಳಿಗೌಡ ಗೆಲುವು ಸಾಧಿಸಿದ್ದಾರೆ.
ತುಮಕೂರಿನಲ್ಲಿ ಕಾಂಗ್ರೆಸ್ಸಿನ ಆರ್. ರಾಜೇಂದ್ರ ಜಯಶೀಲರಾಗಿದ್ದಾರೆ. ಮೈಸೂರು ಮತ್ತು ವಿಜಯಪುರ ದ್ವಿಸದಸ್ಯ ಕ್ಷೇತ್ರದಲ್ಲಿ ಎರಡನೇ ಪ್ರಾಶಸ್ತ್ಯ ಮತಗಳ ಎಣಿಕೆ ಪ್ರಗತಿಯಲ್ಲಿದ್ದು, ವಿಜಯಪುರದಲ್ಲಿ ಬಿಜೆಪಿ ಅಭ್ಯರ್ಥಿ ಪಿ.ಎಚ್.ಪೂಜಾರ ಜಯಗಳಿಸಿದ್ದಾರೆ.
2015ರ ಪರಿಷತ್ ಚುನಾವಣೆಯಲ್ಲಿ ಗೆದ್ದಿದ್ದ 14 ಸ್ಥಾನಗಳಲ್ಲಿ 11 ಸ್ಥಾನಗಳನ್ನು ಉಳಿಸಿಕೊಳ್ಳುವ ಮೂಲಕ ಪ್ರತಿಪಕ್ಷ ಕಾಂಗ್ರೆಸ್ ಕೂಡ ಪರಿಷತ್ ಚುನಾವಣೆಯಲ್ಲಿ ಉತ್ತಮ ಸಾಧನೆ ಮಾಡಿದೆ.

ಬಿಜೆಪಿ ಗೆದ್ದ ಕ್ಷೇತ್ರಗಳು ಮತ್ತು ಅಭ್ಯರ್ಥಿಗಳು

- Advertisement -

ಕೊಡಗು–ಸುಜಾ ಕುಶಾಲಪ್ಪ

ಬೆಂಗಳೂರು– ಗೋಪಿನಾಥ್ ರೆಡ್ಡಿ

ಚಿತ್ರದುರ್ಗ– ಕೆ.ಎಸ್. ನವೀನ್

ಉತ್ತರ ಕನ್ನಡ– ಗಣಪತಿ ಉಳ್ವೇಕರ್

ಬಳ್ಳಾರಿ– ವೈ.ಎಂ.ಸತೀಶ

ಚಿಕ್ಕಮಗಳೂರು – ಎಂ.ಕೆ.ಪ್ರಾಣೇಶ್

ಶಿವಮೊಗ್ಗ –ಡಿ.ಎಸ್.ಅರುಣ್

ಕಲಬುರ್ಗಿ –ಬಿ.ಜಿ.ಪಾಟೀಲ್

ದಕ್ಷಿಣ ಕನ್ನಡ (ದ್ವಿಸದಸ್ಯ) – ಕೋಟ ಶ್ರೀನಿವಾಸ್ ಪೂಜಾರಿ

ಧಾರವಾಡ (ದ್ವಿಸದಸ್ಯ) –ಪ್ರದೀಪ್ ಶೆಟ್ಟರ್

ವಿಜಯಪುರ (ದ್ವಿಸದಸ್ಯ) ಪಿ.ಎಚ್.ಪೂಜಾರ

ಜೆಡಿಎಸ್ ಗೆದ್ದ ಕ್ಷೇತ್ರ ಮತ್ತುಅಭ್ಯರ್ಥಿ

ಹಾಸನ– ಸೂರಜ್ ರೇವಣ್ಣ

ಮೈಸೂರು [ದ್ವಿಸದಸ್ಯ] ಸಿ.ಎನ್. ಮಂಜೇಗೌಡ

ಕಾಂಗ್ರೆಸ್ ಗೆದ್ದ ಕ್ಷೇತ್ರಗಳು ಮತ್ತು ಅಭ್ಯರ್ಥಿಗಳು

ಬೀದರ್ –ಭೀಮಾರಾಮ್ ಪಾಟೀಲ್

ಮಂಡ್ಯ –ಗೂಳೀಗೌಡ

ರಾಯಚೂರು – ಶರಣಗೌಡ ಬಯ್ಯಾಪುರ

ಬೆಂಗಳೂರು ಗ್ರಾಮಾಂತರ –ಎಂ.ಎಸ್.ರವಿ

ತುಮಕೂರು –ಆರ್.ರಾಜೇಂದ್ರ

ಕೋಲಾರ –ಅನಿಲ್ ಕುಮಾರ್

ಮೈಸೂರು (ದ್ವಿಸದಸ್ಯ) –ಡಿ.ತಿಮ್ಮಯ್ಯ

ಧಾರವಾಡ (ದ್ವಿಸದಸ್ಯ)–ಸಲ್ಲೀಂ ಅಹಮ್ಮದ್

ದಕ್ಷಿಣ ಕನ್ನಡ (ದ್ವಿಸದಸ್ಯ)- ಮಂಜುನಾಥ್ ಭಂಡಾರಿ

ಬೆಳಗಾವಿ (ದ್ವಿಸದಸ್ಯ) -ಚನ್ನರಾಜ ಹಟ್ಟಿಹೊಳಿ

ವಿಜಯಪುರ (ದ್ವಿಸದಸ್ಯ) –ಸುನೀಲ್‌ಗೌಡ ಪಾಟೀಲ

Join Whatsapp