ಚಿಕ್ಕಮಗಳೂರು: ಸಾವಿನಲ್ಲೂ ಸಾರ್ಥಕತೆ ಮೆರೆದ ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಸೋಮನಹಳ್ಳಿ ತಾಂಡ್ಯಾದ ಪ್ರಥಮ ಪಿಯುಸಿ ವಿದ್ಯಾರ್ಥಿನಿ ರಕ್ಷಿತಾ ಕುಟುಂಬಕ್ಕೆ ರಾಜ್ಯ ಸರ್ಕಾರ ಎಂಟು ಲಕ್ಷ ಪರಿಹಾರ ಘೋಷಣೆ ಮಾಡಿದೆ.
ಚಿಕ್ಕಮಗಳೂರು ನಗರದ ಸರ್ಕಾರಿ ಬಾಲಿಕಾ ಪದವಿ ಪೂರ್ವ ಕಾಲೇಜಿನಲ್ಲಿ 1st ಪಿಯುಸಿ ಓದುತ್ತಿದ್ದ 18 ವರ್ಷದ ಯುವತಿ, ಐದು ದಿನಗಳ ಹಿಂದೆ ಸರ್ಕಾರಿ ಬಸ್ಸಿನಿಂದ ಇಳಿಯುವಾಗ ಆಯ ತಪ್ಪಿ ಬಿದ್ದು ಮೆದುಳು ಸಂಪೂರ್ಣ ನಿಷ್ಕ್ರಿಯವಾಗಿತ್ತು. ಕೂಡಲೇ ಆಸ್ಪತ್ರೆಗೆ ಸೇರಿಸಿದ್ದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಹಾಗಾಗಿ, 18 ವರ್ಷದ ರಕ್ಷಿತಾ ಪೋಷಕರು ಆಕೆಯ ಸಾವಿನ ನೋವಿನಲ್ಲೂ ಆಕೆಯ ಎಲ್ಲಾ ಅಂಗಾಂಗಗಳನ್ನ ದಾನ ಮಾಡಿದ್ದರು. ಆಕೆಯ ಒಂಬತ್ತು ಅಂಗಾಂಗಳಿಂದ 9 ಜನರ ಜೀವ ಉಳಿದಿದೆ. ಹಾಗಾಗಿ, ಸರ್ಕಾರ ಆಕೆಯ ಕುಟುಂಬಕ್ಕೆ ಪರಿಹಾರ ಎನ್ನುವುದಕ್ಕಿಂತ ಗೌರವಯುತವಾಗಿ ಎಂಟು ಲಕ್ಷ ಹಣವನ್ನ ನೀಡಿದೆ.
ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಐದು ಲಕ್ಷ. ತಾಂಡಾ ಅಭಿವೃದ್ಧಿ ನಿಗಮದಿಂದ 1 ಲಕ್ಷ ಹಾಗೂ ಉದ್ಯಮಶೀಲತೆ ಯೋಜನೆಯಡಿ 2 ಲಕ್ಷ ಹಣವನ್ನ ಸರ್ಕಾರ ಮಂಜೂರು ಮಾಡಿದೆ. ತಾಂಡಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಹಾಗೂ ಕುಡುಚಿ ಶಾಸಕ ಪಿ.ರಾಜೀವ್ ಕಡೂರಿನ ಸೋಮನಹಳ್ಳಿ ತಾಂಡ್ಯಾದ ರಕ್ಷಿತಾ ಮನೆಗೆ ಭೇಟಿ ನೀಡಿ ತಾಂಡ ಅಭಿವೃದ್ಧಿ ನಿಗಮದ ಒಂದು ಲಕ್ಷ ಹಾಗೂ ಉದ್ಯಮಶೀಲತೆ ಯೋಜನೆಯಡಿಯ 2 ಲಕ್ಷ ಒಟ್ಟು ಮೂರು ಲಕ್ಷ ಹಣದ ಚೆಕ್ ನೀಡಲಿದ್ದಾರೆ. ಸರ್ಕಾರದ ಪ್ರತಿನಿಧಿಯಾಗಿ ಕಡೂರು ಶಾಸಕ ಬೆಳ್ಳಿ ಪ್ರಕಾಶ್ ಮುಖ್ಯಮಂತ್ರಿ ಪರಿಹಾರ ನಿಧಿಯ 5 ಲಕ್ಷದ ಚೆಕ್ ನೀಡಲಿದ್ದಾರೆ ಎಂದು ತಿಳಿದು ಬಂದಿದೆ.