ಮಲಪ್ಪುರಂ: ಮೇಲ್ಜಾತಿಯವರಿಗೆ ನೀಡಲಾಗುವ ಮೀಸಲಾತಿಯನ್ನು ಎತ್ತಿಹಿಡಿಯುವ ಸುಪ್ರೀಂ ಕೋರ್ಟ್ ಆದೇಶವು ತೀವ್ರ ನಿರಾಶಾದಾಯಕ ಮತ್ತು ಅಲ್ಪಸಂಖ್ಯಾತರ ಹಕ್ಕುಗಳಿಗೆ ದೊಡ್ಡ ಬೆದರಿಕೆಯಾಗಿದೆ ಎಂದು ಎಂದು ಮುಸ್ಲಿಮ್ ಲೀಗ್ ಪ್ರಧಾನ ಕಾರ್ಯದರ್ಶಿ, ಸಂಸದ ಇ.ಟಿ. ಮುಹಮ್ಮದ್ ಬಶೀರ್ ತಿಳಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ಮೇಲ್ಜಾತಿ ವಿಭಾಗಗಳಿಗೆ ಕಾಯ್ದಿರಿಸಿದ ಮೀಸಲಾತಿ ಕೋಟಾವನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿದ ಆದೇಶವು ತೀವ್ರ ನಿರಾಶಾದಾಯಕ ನಿರ್ಧಾರವಾಗಿದೆ. ಸುಪ್ರೀಂ ಕೋರ್ಟ್’ನ ಪಂಚ ನ್ಯಾಯಾಧೀಶರ ವಿಭಾಗೀಯ ಪೀಠದ ಮೂವರು ನ್ಯಾಯಾಧೀಶರು ಅಲ್ಪಸಂಖ್ಯಾತ ಹಕ್ಕುಗಳಿಗೆ ದೊಡ್ಡ ಅಪಾಯನ್ನುಂಟು ಮಾಡುವ ತಿದ್ದುಪಡಿಯನ್ನು ಖಚಿತಪಡಿಸಿರುವುದು ದುರದೃಷ್ಟಕರ. ಮುಸ್ಲಿಮ್ ಲೀಗ್ ರಾಜ್ಯ ಮತ್ತು ಕೇಂದ್ರ ನಾಯಕತ್ವವು ಈ ಮಸೂದೆಯನ್ನು ತೀವ್ರವಾಗಿ ವಿರೋಧಿಸಿತ್ತು ಎಂದು ತಿಳಿಸಿದ್ದಾರೆ.
ಶಿಕ್ಷಣ ಮತ್ತು ಸರ್ಕಾರಿ ಉದ್ಯೋಗಗಳಲ್ಲಿ ಆರ್ಥಿಕವಾಗಿ ದುರ್ಬಲ ವರ್ಗಗಳಿಗೆ (EWS) 10% ಮೀಸಲಾತಿಯನ್ನು ಪರಿಚಯಿಸಿದ 103ನೇ ಸಾಂವಿಧಾನಿಕ ತಿದ್ದುಪಡಿಯ ಸಿಂಧುತ್ವವನ್ನು ಸುಪ್ರೀಂ ಕೋರ್ಟ್ ಪೀಠವು 3:2 ಬಹುಮತದಿಂದ ಎತ್ತಿಹಿಡಿದಿತ್ತು.
ಭಾರತದ ಸುಪ್ರೀಂ ಕೋರ್ಟ್ನ ಐದು ನ್ಯಾಯಾಧೀಶರ ಪೀಠದ ಪೈಕಿ ಮೂವರು ನ್ಯಾಯಾಧೀಶರು ಆರ್ಥಿಕವಾಗಿ ದುರ್ಬಲ ವರ್ಗಗಳಿಗೆ (EWS)) ಮೀಸಲಾತಿಯನ್ನು ಎತ್ತಿಹಿಡಿದರೆ, ಸಿಜೆಐ ಸೇರಿದಂತೆ ಇಬ್ಬರು ನ್ಯಾಯಾಧೀಶರು ಎಸ್ಸಿ/ಎಸ್ಟಿಗಳನ್ನು 10% ಇಡಬ್ಲ್ಯೂಎಸ್ ಕೋಟಾದಿಂದ ಹೊರಗಿಡುವ ಬಗ್ಗೆ ಅಸಮ್ಮತಿ ವ್ಯಕ್ತಪಡಿಸಿದ್ದಾರೆ.