ಮತದಾನದ ಬಳಿಕ ಬಿಜೆಪಿ ಅಭ್ಯರ್ಥಿ ಕಾರಿನಲ್ಲಿ ಇವಿಎಂ ಪತ್ತೆ

Prasthutha|


ಅಸ್ಸಾಂನಲ್ಲಿ ಎರಡನೇ ಹಂತದ ವಿಧಾನಸಭಾ ಚುನಾವಣೆ ಗುರುವಾರ ಮುಕ್ತಾಯಗೊಂಡ ಬೆನ್ನಲ್ಲೇ ಬಿಜೆಪಿ ಅಭ್ಯರ್ಥಿಯೊಬ್ಬರ ಕಾರಿನಲ್ಲಿ ವಿದ್ಯುನ್ಮಾನ ಮತ ಯಂತ್ರ –ಇವಿಎಂ ಪತ್ತೆಯಾದ ಪ್ರಕರಣವನ್ನು ಚುನಾವಣಾ ಆಯೋಗ ಗಂಭೀರವಾಗಿ ಪರಿಗಣಿಸಿ ಆ ಕ್ಷೇತ್ರದಲ್ಲಿ ಮರು ಮತದಾನಕ್ಕೆ ಆದೇಶ ನೀಡಿದೆ. ಈ ಸಂಬಂಧದ ವಿಡಿಯೋ ವೈರಲ್ ಆಗಿದೆ.
ಅಸ್ಸಾಂನ ಪಥಾರ್ ಕಂಡಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೃಷ್ಣೇಂದು ಪೌಲ್ ಎಂಬವರ ಕಾರಿನಲ್ಲಿ ಇವಿಎಂ ಯಂತ್ರ ಇರುವುದು ವಿಡಿಯೋದಲ್ಲಿ ಬಹಿರಂಗವಾಗಿದೆ.

- Advertisement -

ವಿಡಿಯೋವನ್ನು ಅಸ್ಸಾಂ ಮೂಲದ ಪತ್ರಕರ್ತ ಅತನು ಭುಯಾನ್ ಎಂಬವರು ಟ್ವಿಟ್ಟರ್ ಗೆ ಅಪ್ ಲೋಡ್ ಮಾಡಿದ್ದು, ಘಟನೆಯ ಹಿನ್ನೆಲೆಯಲ್ಲಿ ಪಥಾರ್ ಕಂಡಿಯಲ್ಲಿ ಪರಿಸ್ಥಿತಿ ಉಲ್ಬಣಗೊಂಡಿದೆ ಎಂದು ತಿಳಿಸಿದ್ದಾರೆ.
ಈ ಘಟನೆಯ ಬಗ್ಗೆ ಬಿಜೆಪಿಯನ್ನು ಗುರಿಯಾಗಿಸಿಕೊಂಡು ಟೀಕಾಪ್ರಹಾರ ನಡೆಸಿರುವ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ, ಇಂತಹ ದೂರುಗಳ ಬಗ್ಗೆ ಚುನಾವಣಾ ಆಯೋಗವು ತಕ್ಷಣ ಕಾರ್ಯಪ್ರವೃತ್ತರಾಗಬೇಕು. ಇವಿಎಂ ಬಳಕೆಯ ಬಗ್ಗೆ ಎಲ್ಲಾ ರಾಷ್ಟ್ರೀಯ ಪಕ್ಷಗಳು ಗಂಭೀರವಾಗಿ ಚಿಂತನೆ ನಡೆಸಬೇಕು ಎಂದು ಮನವಿ ಮಾಡಿದ್ದಾರೆ.




ಇದೀಗ  ಈ ಘಟನೆಗೆ ಸಂಬಂಧಿಸಿ ಚುನಾವಣಾ ಆಯೋಗವು ನಾಲ್ವರು ಅಧಿಕಾರಿಗಳನ್ನು ಅಮಾನತು ಮಾಡಿದೆ ಎಂದು ತಿಳಿದುಬಂದಿದೆ. ಇವಿಎಂ ಸಾಗಾಟ ಪ್ರಕ್ರಿಯೆಯನ್ನು ಉಲ್ಲಂಘಿಸಿದ್ದಕ್ಕಾಗಿ ಅಲ್ಲಿನ ಪ್ರಮುಖ ಅಧಿಕಾರಿಗಳಿಗೆ ಶೋಕಾಸ್ ನೋಟೀಸ್ ಹೊರಡಿಸಲಾಗಿದೆ. ಅಲ್ಲದೇ ರಥಾಬರಿಯ ಇಂದಿರಾ ಎಂವಿ ಸ್ಕೂಲ್ ನಲ್ಲಿ ಮರು ಚುನಾವಣೆ ನಡೆಸಲಾಗುವುದು ಎಂದು ಚುನಾವಣಾ ಆಯೋಗ ಆದೇಶಿಸಿದೆ ಎಂದು ANI ಸುದ್ದಿ ಸಂಸ್ಥೆ ವರದಿ ಮಾಡಿದೆ.  


Join Whatsapp