ದಿನ ನಿತ್ಯ ಪರಿಸರ ದಿನ

Prasthutha: June 4, 2022
✍️ದಿನೇಶ್ ಹೊಳ್ಳ

ವಿಶ್ವ ಪರಿಸರ ದಿನಾಚರಣೆ ಕೇವಲ ಜೂನ್ 5ಕ್ಕೆ ಮಾತ್ರ ಸೀಮಿತವಲ್ಲ. ಪ್ರತಿದಿನವೂ ಪರಿಸರ ದಿನಾಚರಣೆ ಮಾಡುವಂತಹ ಸಂದಿಗ್ಧತೆ ಮತ್ತು ಅನಿವಾರ್ಯತೆ ಇಂದು ನಮ್ಮ ಎದುರು ಇದೆ. ಆದರೆ ಇಂದಿನ ಪರಿಸ್ಥಿತಿ ಏನಾಗಿದೆ ಎಂದರೆ ಕೇವಲ ಪ್ರಚಾರಕ್ಕಾಗಿ ಜೂನ್ 5 ರಂದು ಒಂದಷ್ಟು ಸಂಘ, ಸಂಸ್ಥೆಗಳು ಒಂದಷ್ಟು ಶೋಕಿ ಜನರು ಅಲ್ಲಲ್ಲಿ ಗಿಡ ನೀಡುತ್ತಾರೆ. ಜೂನ್ 6 ರಂದು ತಾವು ನೆಟ್ಟ ಗಿಡಗಳನ್ನು ಮರೆಯುತ್ತಾರೆ, ಅಲ್ಲಿಗೆ ಅವರ ಪರಿಸರ ದಿನಾಚರಣೆ ಮುಕ್ತಾಯವಾಗುತ್ತದೆ. ಅವರು ನೆಟ್ಟ ಗಿಡಗಳು ಒಣಗಿ ಸಾಯುತ್ತವೆ. ಆದರೆ ಅವರು ನೆಟ್ಟ ಗಿಡಗಳ ಫೋಟೋಗಳು ಅವರ ಜೊತೆ ಶಾಶ್ವತ ಜೀವಂತ ಆಗಿ ಇರುವೆ. ಇಂತಹ ಪರಿಸರ ದಿನಾಚರಣೆ ತುಂಬಾ ಅಪಾಯಕಾರಿ ಮತ್ತು ಅಪರಾಧಿಗಳ ಬಿಂಬ ಅದು. ಯಾಕೆಂದರೆ ಅವರು ನೆಟ್ಟು ಸಾಯಲು ಬಿಟ್ಟ ಆ ಗಿಡಗಳು ಎಲ್ಲೋ ನರ್ಸರಿಯಲ್ಲಿ ಅಥವಾ ಅರಣ್ಯ ಇಲಾಖೆಯ ತೋಟದಲ್ಲಿ ಜೀವಂತ ಆಗಿ ಇರುತ್ತಿದ್ದವು. ಅಂತಹ ಬೆಳೆಯುವ ಗಿಡಗಳನ್ನು ತಂದು ನೆಟ್ಟು ಕೊಂದ ಅಪರಾಧ ಮತ್ತು ಅಪವಾದವನ್ನು ಮೈ ಮೇಲೆ ಎಳೆಯುವುದಕ್ಕಿಂತ ಸುಮ್ಮನಿದ್ದರೆ ಒಳಿತು. ಪರಿಸರ ದಿನಾಚರಣೆಯಂದು ಗಿಡ ನೆಟ್ಟ ಕೂಡಲೇ ಅವರು ಪರಿಸರ ಪ್ರೇಮಿಗಳಾಗುವುದಿಲ್ಲ. ನೆಟ್ಟ ಗಿಡಗಳನ್ನು ಸಾಕಿ, ಸಲಹಿ ಪೋಷಿಸಿದರೆ ಮಾತ್ರ ಅದು ಪರಿಸರ ಪ್ರೇಮ ಆಗುತ್ತದೆ. ನೆಡುವುದಕ್ಕಿಂತ ತಮ್ಮ ಸುತ್ತ ಮುತ್ತ ಈಗಾಗಲೇ ಬೆಳೆಯುತ್ತಿರುವ ಮರ, ಗಿಡಗಳನ್ನು ಕಡಿಯದಂತೆ ಉಳಿಸಿ ಬೆಳೆಸುವುದು ಎಲ್ಲಕಿಂತ ದೊಡ್ಡ ಪರಿಸರ ಪ್ರೇಮವಾಗಿ ಸಾರ್ಥಕ ಆಗುತ್ತದೆ.


‘ಇರುವುದೊಂದೇ ಭೂಮಿ ಇದನ್ನು ಸುಸ್ಥಿತಿಯಲ್ಲಿ ಇಟ್ಟುಕೊಳ್ಳೋಣ’ ಎಂಬ ಧ್ಯೇಯ ವಾಕ್ಯದೊಂದಿಗೆ 1974ರಲ್ಲಿ ಜಾಗತಿಕ ಪರಿಸರ ದಿನವನ್ನು ಆಚರಿಸಲಾಯಿತು. ಅಂದಿನಿಂದ ಇಂದಿನವರೆಗೆ ಜೂನ್ 5 ರಂದು ಭೂಮಿ ಪೂಜೆಯನ್ನು ಮಾಡುತ್ತಾ ಬರಲಾಯಿತು. ಆದರೆ ನಮ್ಮ ಸುತ್ತ ಮುತ್ತಲಿನ ಪರಿಸರವನ್ನು ನಾವೇ ಎಷ್ಟು ಸಂರಕ್ಷಣೆ ಮಾಡಿದ್ದೇವೆ ಎಂಬ ಪ್ರಶ್ನೆಗೆ ಮೊದಲಾಗಿ ಉತ್ತರ ಕಂಡು ಕೊಳ್ಳಬೇಕು. ನಮ್ಮನ್ನಾಳುವ ಸರಕಾರಗಳು ಅಭಿವೃದ್ಧಿ ಎಂಬ ನೆಪದಲ್ಲಿ ಎಷ್ಟು ಕಾಡನ್ನು, ಬೆಟ್ಟವನ್ನು, ನದಿಗಳನ್ನು ನಾಶ ಮಾಡುತ್ತಾ ಬಂದಿರುವರು? ಗಣಿಗಾರಿಕೆ ಗುತ್ತಿಗೆಯಲ್ಲಿ ಎಷ್ಟೊಂದು ಪರ್ವತಗಳನ್ನು ಛಿದ್ರಗೊಳಿಸಿರುವರು. ನೀರಾವರಿ ಎಂಬ ಯೋಜನೆಯಲ್ಲಿ ಎಷ್ಟೊಂದು ನದಿಗಳನ್ನು ಬಂಧಿಸಿದರು. ಎಷ್ಟೊಂದು ಅರಣ್ಯವನ್ನು ಒತ್ತುವರಿ ಮಾಡಿಕೊಂಡಿರುವರು. ಇಂತವರೇ ಜೂನ್ 5ರಂದು ಪರಿಸರ ಉಳಿಸಿ ಎಂದು ಕಾರ್ಯಕ್ರಮ ಮಾಡಿದಾಗ ಅದು ಎಷ್ಟೊಂದು ಹಾಸ್ಯಾಸ್ಪದ. ಆರ್ಥಿಕ ಅಭಿವೃದ್ಧಿ ಒಂದೇ ಸುಖಮಯ ಬದುಕಿನ ರನ್ ವೇ ಎಂಬ ಪರಿಕಲ್ಪನೆಯಿಂದ ಇಂದು ಪರಿಸರದ ಒಡಲಿಗೆ ಮಾರಣಾಂತಿಕ ಏಟು ಬೀಳುತ್ತಾ ಇದೆ. ಏಟು ತಿಂದ ಪ್ರಕೃತಿ ವಾಪಸ್ ನಮಗೆ ಜಲ ಪ್ರವಾಹ, ಭೂ ಕುಸಿತ, ಚಂಡಮಾರುತ, ಸುನಾಮಿ ಎಂಬ ಪ್ರಾಕೃತಿಕ ದುರಂತಗಳ ಮೂಲಕ ಪ್ರತೀಕಾರದ ಏಟು ನೀಡುತ್ತಿದ್ದರೂ ಎಚ್ಚರ ಆಗದ ನಾವು ಪರಿಸರ ದಿನಾಚರಣೆ ಆಚರಿಸುವುದು ಯಾವ ನೈತಿಕತೆಯಿಂದ? ಕಾಂಕ್ರೀಟು ಕಟ್ಟಡಗಳು, ಅಣೆಕಟ್ಟುಗಳು, ಸುರಂಗಗಳು, ಸೇತುವೆಗಳು, ಹೆದ್ದಾರಿ ನಿರ್ಮಾಣವೇ ನಮ್ಮ ಮೂಲಭೂತ ಸೌಕರ್ಯಗಳು ಎಂದು ಅರ್ಥೈಸಿಕೊಂಡ ಮಾನವ ಇದರ ಆಚೆ ನಮ್ಮ ನಿಸರ್ಗಕ್ಕೆ ಯಾವ ರೀತಿಯ ಸಹಿಸಲಾಗದ ಏಟು ಬೀಳುತ್ತದೆ ಎಂದು ಅರ್ಥ ಮಾಡಿಕೊಳ್ಳದ ವ್ಯವಸ್ಥೆಯೇ ನಮ್ಮ ದೊಡ್ಡ ದುರಂತ. ಹಾಗಂತ ಅಭಿವೃದ್ಧಿ, ಸೌಕರ್ಯ ಬೇಡವೆಂದಲ್ಲ. ನಗರ ಬೆಳೆಯುತ್ತಿದ್ದಂತೆ ಬೇಡಿಕೆಗಳು, ಪೂರೈಕೆಗಳು ಹೆಚ್ಚಾಗುತ್ತಾ ಇರುತ್ತವೆ. ಆದರೆ ನಮ್ಮ ಪ್ರಕೃತಿಯನ್ನು ಕೆಡವದೇ ಅದರ ನೆಮ್ಮದಿಗೆ ಭಂಗ ತರದಂತೆ ಅಭಿವೃದ್ಧಿ ಮಾಡಲು ಸಾಧ್ಯ. ಆದರೆ ಇದನ್ನು ಮಾಡಲು ಇಚ್ಛಾಶಕ್ತಿ, ಕ್ರಿಯಾಶಕ್ತಿ ಮುಖ್ಯ. ಪ್ರಕೃತಿಯನ್ನು ಮುಕ್ಕಿ ತಿನ್ನುವ ಜೀರ್ಣ ಶಕ್ತಿ ಮಾತ್ರವಿದ್ದಲ್ಲಿ ಏನನ್ನೂ ನಿರೀಕ್ಷಿಸಲು ಅಸಾಧ್ಯ. ಹಾಗಾದರೆ ನಿಸರ್ಗ ರಕ್ಷಣೆಗೆಂದು ಕಾನೂನುಗಳಿಲ್ಲವೇ..ಇದೆ ಎಲ್ಲವೂ ಇದೆ ಆದರೆ ಇದು ಕ್ರಿಯಾಶೀಲ ಆಗದೇ ಕೇವಲ ಇಲಾಖೆಗಳ ಕಡತಗಳಲ್ಲಿ ಬೆಚ್ಚನೆ ಮಲಗಿವೆ. ರಾಜಕೀಯ ವ್ಯವಸ್ಥೆಯೇ ಎಲ್ಲವನ್ನೂ ಅಹಂ ಎಂಬ ಅಧಿಕಾರದ ಮೂಲಕ ಕಾನೂನನ್ನೇ ಮುರಿದು ಪರಿಸರ ಭಕ್ಷಕರು ಆದಾಗ ಪ್ರಶ್ನೆಗಳಿಗೆ ಉತ್ತರಗಳು ಎಲ್ಲಿ ಲಭಿಸುತ್ತವೆ.


ಸರಿ. ಯಾರನ್ನೂ ದೋಷಾರೋಪಣೆ ಮಾಡುವುದಕ್ಕಿಂತ ನಾವೇ ಜಾಗೃತರಾಗಿ ನಮ್ಮ ಸುತ್ತ ಮುತ್ತಲಿನ ಪರಿಸರವನ್ನು ಉಳಿಸಲು ಧನಾತ್ಮಕವಾಗಿ ಯೋಚಿಸಿ ಕ್ರಿಯಾಶೀಲರಾಗಿ ತೊಡಗಿಸಿ ಕೊಳ್ಳುವುದೇ ನಮ್ಮ ಪ್ರಕೃತಿಗೆ ನಾವು ನೀಡುವ ಪ್ರೀತಿಯ ಕೊಡುಗೆ. ವಿಶ್ವ ಪರಿಸರ ದಿನದಂದು ನಾವು ನೆಟ್ಟ ಗಿಡಗಳು ನಾವು ಬೆಳೆದಂತೆ ನಮ್ಮ ಜೊತೆ ಅವುಗಳು ಕೂಡಾ ಬೆಳೆಯುವಂತೆ ನೋಡಿಕೊಳ್ಳುವುದೇ ಪರಿಸರ ದಿನಾಚರಣೆ ಆಚರಿಸಿದ್ದಕ್ಕೆ ಸಾರ್ಥಕವಾಗುವುದು.
ಪಶ್ಚಿಮ ಘಟ್ಟದಲ್ಲಿ ದಟ್ಟ ಅರಣ್ಯ ಬೆಳೆದಿರುವುದು ಈ ನಾಡಿನ ಜನರ ವನ ವಿನಾಶಕ ಆಶೋತ್ತರಗಳನ್ನು ಪೂರೈಸಲು ಅಲ್ಲ, ಯಾವುದೋ ಅಸಂಬದ್ಧ ಯೋಜನೆಗಳಿಗೆ ದಟ್ಟ ಅರಣ್ಯವನ್ನು ಕಡಿದು ಬರಗಾಲದ ಆಹ್ವಾನಕ್ಕೂ ಅಲ್ಲ. ಪಶ್ಚಿಮ ಘಟ್ಟದ ಒಂದೊಂದು ಮರವೂ ನಾಶವಾದರೆ ಅದರ ಫಲಾನುಭವಿಗಳ ಭವಿಷ್ಯದ ಒಂದೊಂದು ಸಮಸ್ಯೆಗಳ ಪುಟ ತೆರೆದಂತೆ. ನಗರದಲ್ಲಿ ನೀರಿನ ಸಮಸ್ಯೆ ಆದರೆ ಅದಕ್ಕೆ ಪಶ್ಚಿಮ ಘಟ್ಟ ಕಾರಣವಲ್ಲ , ನಿಸರ್ಗ ಕಾಲ, ಕಾಲಕ್ಕೆ ಮಳೆ, ಗಾಳಿ, ಬೆಳಕು, ನೀರು ಎಲ್ಲವನ್ನೂ ಪೂರೈಸುತ್ತದೆ. ಆದರೆ ಈ ನಿಸರ್ಗ ನಿಯಮವನ್ನು ತನ್ನ ಸ್ವಾರ್ಥಕ್ಕಾಗಿ ಮನುಜ ಸಾಮ್ರಾಜ್ಯ ಬಳಸಿಕೊಂಡದ್ದು ಎಲ್ಲಾ ಪ್ರಾಕೃತಿಕ ದುರಂತಗಳ ಮೂಲ ಕಾರಣ. ಪಶ್ಚಿಮ ಘಟ್ಟದಿಂದ ನಾವೆಷ್ಟು ನಮ್ಮ ಬದುಕಿನ ಚೇತನಾ ಶಕ್ತಿಯನ್ನು ಪಡೆದು ಕೊಂಡಿದ್ದೇವೆ, ಅದೇ ಪಶ್ಚಿಮ ಘಟ್ಟ ನಾಶವಾಗುತ್ತಾ ಬಂದರೆ ನಾವೆಷ್ಟು ತೊಂದರೆಗೆ ಒಳಗಾಗಬಹುದು ಎಂಬುದನ್ನು ಸರಿಯಾಗಿ ಅರ್ಥ ಮಾಡಿಕೊಂಡು ನಿಸರ್ಗ ಸಂರಕ್ಷಣೆಗೆ ಸ್ವರ ಮತ್ತು ಕರ ಸೇರಿಸಿಕೊಂಡು ಜಾಗೃತರಾದ ಮನಸುಗಳಿಗೆ ಪ್ರಕೃತಿಯ ಬಗ್ಗೆ ಅಭಿಮಾನ, ಕಾಳಜಿ, ಗೌರವ, ಪ್ರೀತಿ ಬೆಳೆದಾಗ ಇಲ್ಲಿ ಇನ್ನು ಮುಂದೆ ಆಗಲಿ ರುವ ಪ್ರಾಕೃತಿಕ ದುರಂತಗಳನ್ನು ತಪ್ಪಿಸಬಹುದು. ನಗರ ಎಷ್ಟೇ ಬೆಳೆದರೂ ಮನುಜನ ಮನರಂಜನೆ, ಮೋಜು, ಗೌಜಿಗಳಿಗೆ ಪೂರಕವಾದುದು, ಅದೇ ನಗರದ ಸರ್ವ ಬೇಡಿಕೆ,ಆಸೆ ಪೂರೈಕೆಗಾಗಿ ನೆಮ್ಮದಿಯಾಗಿ ಯಾವುದೇ ಸಮಸ್ಯೆಗಳು ಇರದೇ ಶಾಂತವಾಗಿ ಇರಬೇಕಾದದ್ದು ಪಶ್ಚಿಮ ಘಟ್ಟ ಮತ್ತು ನಮ್ಮ ಸುತ್ತ ಮುತ್ತಲಿನ ಪರಿಸರ. ಆದರೆ ಇಂದು ಜನತೆ ಮತ್ತು ಜನ ಪ್ರತಿನಿಧಿಗಳು ಪ್ರತೀ ದಿನ ಯೋಚಿಸುವುದೇ ಕಾಂಕ್ರೀಟು ಕಾಡಿನ ಬಗ್ಗೆ, ನೈಜವಾದ ಕಾಡನ್ನು ಅಳಿಸಿ, ಕಾಂಕ್ರೀಟು ಕಾಡನ್ನು ಬೆಳೆಸುವುದೇ ಎಲ್ಲರ ಏಕೈಕ ಗುರಿ ಆದಾಗ ನಿಸರ್ಗ ಸಂರಕ್ಷಣೆ ಮಾಡುವರಾರು ? ತಮ್ಮ ಸ್ವಾರ್ಥ ಧನದಾಸೆಗಳಿಗೆ ಅರಣ್ಯ ಕಾಯಿದೆ, ಪರಿಸರ ಸಂರಕ್ಷಣಾ ಕಾಯಿದೆ, ವನ್ಯ ಜೀವೀ ಕಾಯಿದೆಗಳನ್ನು ತಮಗೆ ಬೇಕಾದ ಹಾಗೆ ಬದಲಿಸಿಕೊಳ್ಳುವ ರಾಜಕಾರಣಿಗಳಿಂದ ಈ ಪರಿಸರ, ಪಶ್ಚಿಮ ಘಟ್ಟ ಎಷ್ಟು ಉಳಿದೀತು ? ಜನತೆಯೂ ಅಷ್ಟೆ ಕಣ್ಣಿನ ಎದುರೇ ನಿಸರ್ಗ ಪ್ರತೀಕಾರದ ಏಟು ನೀಡುತ್ತಿರುವಾಗಲೂ, ಬರಗಾಲ ಸೃಷ್ಟಿಯಾಗಿ ಊರಿಗೆ ಊರೇ ಹಾಹಾಕಾರ ಇದ್ದಾಗಲೂ ಪ್ರಕೃತಿಗೆ ವಿರುದ್ಧವಾದ ಜನ ಪ್ರತಿನಿಧಿಯನ್ನು ಧರ್ಮ, ಜಾತಿ, ಪಕ್ಷ ಎಂದು ಅಂಧ ಅಭಿಮಾನದಿಂದ ಅಂತವರನ್ನು ಮತ್ತೆ ಮತ್ತೆ ಆಯ್ಕೆ ಮಾಡಿದಾಗ ಇಲ್ಲಿನ ಪರಿಸರ ಎಷ್ಟು ಉಳಿದೀತು..? ಕೆಲವು ಪ್ರಶ್ನೆಗಳಿಗೆ ಉತ್ತರಗಳೇ ಇರುವುದಿಲ್ಲ. ಕೆಲವು ಉತ್ತರಗಳಿಗೆ ಪ್ರಶ್ನೆಗಳೇ ಸರಿ ಹೊಂದುವುದಿಲ್ಲ. ಅಂತಹ ಪರಿಸ್ಥಿತಿ ಇಂದು ನಿರ್ಮಾಣ ಆಗಿದೆ. ಈ ದೇಶದ ನೆಲ, ಜಲ, ಮಣ್ಣು, ಅಡವಿ, ಗಿರಿ ಶಿಖರಗಳನ್ನು ನಾಶ ಮಾಡುತ್ತಲೇ ಬಂದಿರುವ ಧನ ದೊರೆಗಳಿಗೆ ಈ ದೇಶದ ಎಲ್ಲಾ ಕಾನೂನನ್ನು ಗಾಳಿಗೆ ತೂರಿ ಸ್ವಾಹಾ ಮಾಡಲು ಹಾತೊರೆಯುವ ನಮ್ಮ ಜನಪ್ರತಿನಿಧಿಗಳನ್ನು ಪ್ರಶ್ನಿಸುವ ನೈತಿಕ ಹಕ್ಕು ಇಲ್ಲಿನ ಮತದಾರರದ್ದು.


ಯಾವಾಗ ಇಂತಹ ಹಕ್ಕುಗಳನ್ನು ಚಲಾಯಿಸುವ ಮತ್ತು ಅದಕ್ಕೆ ಸೂಕ್ತ ಉತ್ತರ ಸಿಗುವ ವ್ಯವಸ್ಥೆ ಇಲ್ಲಿ ನಿರ್ಮಾಣ ಆಗುವುದೋ ಆಗ ನಾವು ಸುಸ್ಥಿರ ಸಮಾಜ ಮತ್ತು ಭದ್ರ ಕ್ಷೇಮ ನಿಸರ್ಗವನ್ನು ಕಾಣಬಹುದು. ಆದರೆ ಪ್ರಶ್ನಿಸಬೇಕಾದವರು ಸುಮ್ಮನಾದರೆ ಉತ್ತರ ಸಿಗದೇ ತತ್ತರ ಆಗುವ ದುಸ್ಥಿತಿ ಅನುಭವಿಸಬೇಕಾದೀತು. ನಮ್ಮ ಮಕ್ಕಳ ಭವಿಷ್ಯದ ಭದ್ರತೆಗಾಗಿಯಾದರೂ ನಾವು ಮುಂದಿನ ಉತ್ತಮ ದಿನಗಳನ್ನು ಪಡೆಯಲೇ ಬೇಕು. ಯೋಚಿಸಬೇಕಾದವರು ನಾವು…ನೀವು…ಎಲ್ಲರೂ.

ನಿಮ್ಮ ಚಂದಾ ಹಣ ಪಾವತಿಸಲು ಈ ಕೆಳಗಿನ ಬಟನ್ ಮೇಲೆ ಕ್ಲಿಕ್ ಮಾಡಿ.

ಜನಪರ ಪತ್ರಿಕೋದ್ಯಮವನ್ನು ಬೆಂಬಲಿಸಿ
ಪ್ರಸ್ತುತದ ಬೆಳವಣಿಗೆಯಲ್ಲಿ ಪಾಲುದಾರರಾಗಿ
ಜನಸಾಮಾನ್ಯರ ಜ್ವಲಂತ ಸಮಸ್ಯೆಗಳಿಗೆ ಸದಾ ಮಿಡಿಯುತ್ತಾ, ಧ್ವನಿ ಇಲ್ಲದ ಸಮುದಾಯಗಳ ಧ್ವನಿಯಾಗುತ್ತಾ ಮಾಧ್ಯಮ ಲೋಕದಲ್ಲಿ ಸ್ವತಂತ್ರವಾಗಿ ಕಾರ್ಯಾಚರಿಸುತ್ತಿರುವ ಪ್ರಸ್ತುತಕ್ಕೆ ನಿಮ್ಮ ಪ್ರೋತ್ಸಾಹ, ಬೆಂಬಲ ಯಾವತ್ತೂ ಇರಲಿ. ಪ್ರಸ್ತುತಕ್ಕೆ ದೇಣಿಗೆ ನೀಡಲು ಬಯಸುವವರು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಹಣವನ್ನು ಪಾವತಿಸಬಹುದು.

ಧನ್ಯವಾದಗಳು

ಟಾಪ್ ಸುದ್ದಿಗಳು

ವಿಶೇಷ ವರದಿ

error: Content is protected !!