ದಾಳಿಂಬೆ, ಇತರ ತೋಟಗಾರಿಕಾ ಬೆಳೆಗಳ ಬೆಳೆವಿಮೆ ಮಂಜೂರಾತಿಗೆ ತೀರ್ಮಾನ: ಮುಖ್ಯಮಂತ್ರಿ ಬೊಮ್ಮಾಯಿ

Prasthutha|

ಚಿತ್ರದುರ್ಗ: ದಾಳಿಂಬೆ ಸೇರಿದಂತೆ ಇತರ ತೋಟಗಾರಿಕೆ ಬೆಳೆಗಳ ಬೆಳೆವಿಮೆಗೆ ಶೀಘ್ರದಲ್ಲಿ ಮಂಜೂರಾತಿಯನ್ನು ನೀಡಲು ತೀರ್ಮಾನಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಅವರು ಇಂದು ಹಿರಿಯೂರು ತಾಲ್ಲೂಕಿನ ಧರ್ಮಪುರ ಕೆರೆ ಮತ್ತು ಇತರೆ 7 ಕೆರೆಗಳಿಗೆ ವೇದಾವತಿ ನದಿಯಿಂದ ಏತ ನೀರಾವರಿ ಮೂಲಕ ನೀರನ್ನು ಕೆರೆಗಳಿಗೆ ತುಂಬಿಸುವ ಕಾಮಗಾರಿಗೆ ಶಂಕುಸ್ಥಾಪನೆ ಮತ್ತು ವಿವಿಧ ಇಲಾಖೆಗಳ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ಕಾರ್ಯವನ್ನು ನೆರವೇರಿಸಿ ಮಾತನಾಡಿದರು.

- Advertisement -


ಚಿತ್ರದುರ್ಗ 171 ಹಳ್ಳಿಗಳಿಗೆ, ಹಿರಿಯೂರಿನ 131 ಹಳ್ಳಿಗಳಿಗೆ ಬಹುಗ್ರಾಮ ಕುಡಿಯು ನೀರಿನ ಯೋಜನೆಗೆ ಅನುಮೋದನೆ ನೀಡಲಾಗಿದ್ದು, ಟೆಂಡರ್ ಪ್ರಕ್ರಿಯೆಯೂ ಮುಗಿದಿರುತ್ತದೆ. ಧರ್ಮಪುರ ಕೆರೆ ಸೇರಿದಂತೆ 7 ಕೆರೆಗಳಿಗೆ ನೀರು ತುಂಬುವ ಕಾಮಗಾರಿಯನ್ನು 40 ಕೋಟಿ ರೂ.ಗಳಲ್ಲಿ ಹಮ್ಮಿಕೊಳ್ಳಲಾಗಿದ್ದು, ಇನ್ನಿತರ ಪೂರಕ ಕೆಲಸಗಳಿಗೆ 50 ಕೋಟಿ ರೂ.ಗಳನ್ನು ಮೀಸಲಿರಿಸಿದ್ದು, ಇದಕ್ಕೆ ಸಂಬಂಧಿಸಿದ ಟೆಂಡರ್ ಪ್ರಕ್ರಿಯೆಯನ್ನು ಒಂದು ತಿಂಗಳೊಳಗಾಗಿ ಪೂರ್ಣಗೊಳಿಸಲಾಗುವುದು. ಈ ಭಾಗದ ಜನರ ಆರೋಗ್ಯ ಸೌಕರ್ಯಕ್ಕಾಗಿ ಸರ್ಕಾರಿ ವೈದ್ಯಕೀಯ ಕಾಲೇಜು ನಿರ್ಮಾಣಕ್ಕೆ ಅನುಮೋದನೆ ನೀಡಲಾಗಿದೆ. ತುಮಕೂರು-ಚಿತ್ರದುರ್ಗ-ದಾವಣಗೆರೆ ರೈಲ್ವೆ ಯೋಜನೆ ಕಾಮಗಾರಿಯನ್ನು ಶೀಘ್ರದಲ್ಲಿ ಪ್ರಾರಂಭಿಸಲಾಗುವುದು. 1000 ಎಕರೆಯ ಕೈಗಾರಿಕಾ ಟೌನ್ಶಿಪ್ ನಿರ್ಮಾಣಕ್ಕೆ ಸರ್ಕಾರಿ ಆದೇಶವನ್ನು ನೀಡಲಾಗಿದೆ. ಟೌನ್ಶಿಪ್ಗಾಗಿ ಈಗಾಗಲೇ ಸ್ಥಳ ನಿಗದಿಪಡಿಸಲಾಗಿದೆ. ಬೆಳಗಾವಿ, ದಾವಣಗೆರೆ, ಚಿತ್ರದುರ್ಗ ಮತ್ತು ಧಾರವಾಡದಲ್ಲಿ ಕೈಗಾರಿಕಾ ಟೌನ್ಶಿಪ್ ನಿರ್ಮಾಣ ಮಾಡುವ ಉದ್ದೇಶವಿದೆ ಎಂದರು.


25 ಲಕ್ಷ ಮನೆಗಳಿಗೆ ನಳ ಸಂಪರ್ಕ:
ಈ ಪ್ರದೇಶದ ಎಲ್ಲ ವರ್ಗದ ಜನರಿಗೆ ಸಮಾನ ಅವಕಾಶಗಳನ್ನು ನೀಡುವ ಮೂಲಕ ಸಾಮಾಜಿಕ ನ್ಯಾಯವನ್ನು ಒದಗಿಸಲಾಗಿದೆ. ಮನೆ ಮನೆ ಗಂಗೆ – ನರೇಂದ್ರ ಮೋದಿಯವರ ದಿಟ್ಟತನದ ಕಾರ್ಯಕ್ರಮವಾಗಿದೆ. ಕರ್ನಾಟಕದಲ್ಲಿ ಕಳೆದ ವರ್ಷ 25 ಲಕ್ಷ ಮನೆಗಳಿಗೆ ನೀರಿನ ಸಂಪರ್ಕವನ್ನು ನೀಡಲಾಗಿದ್ದು, ಈ ವರ್ಷವೂ 25 ಲಕ್ಷ ಮನೆಗಳಿಗೆ ನಳ ಸಂಪರ್ಕವನ್ನು ಒದಗಿಸುವ ಗುರಿಯನ್ನು ತಲುಪಲಾಗುವುದು ಎಂದರು.

- Advertisement -


ಭದ್ರಾ ಮೇಲ್ದಂಡೆ ಯೋಜನೆ- ರಾಷ್ಟ್ರೀಯ ಯೋಜನೆಯಾಗಿ ಘೋಷಣೆ:

ಭದ್ರಾ ಮೇಲ್ದಂಡೆ ಯೋಜನೆ, ಎತ್ತಿನಹೊಳೆ ಯೋಜನೆ ಗಳು ಈ ಭಾಗದ ರೈತರ ಕನಸನ್ನು ನನಸು ಮಾಡುವ ದಿಕ್ಕನಲ್ಲಿ ಪ್ರಾರಂಭವಾಗಿದೆ. 2008 ರಲ್ಲಿ ನಾಯಕರಾದ ಯಡಿಯೂರಪ್ಪನವರ ಈ ಭಾಗದ ನೀರಿನ ಬವಣೆಯನ್ನು ತೀರಿಸಲು ತೀರ್ಮಾನಿಸಿ, ನಾನು ನೀರಾವರಿ ಸಚಿವನಾಗಿದ್ದಾಗ, ಈ ಬೃಹತ್ ಯೋಜನೆಗೆ ಅನುಮತಿ, ಪರಿಸರ ಅನುಮತಿ, ಅರಣ್ಯದ ಅನುಮತಿಯನ್ನು ಪಡೆದು ಯೋಜನೆ ಪ್ರಾರಂಭಿಸಲಾಯಿತು. ಹಿರಿಯೂರಿನ ರೈತರು 543 ದಿನಗಳ ಧರಣಿಯನ್ನು ನಡೆಸಿದ್ದರು. ಇದು ಗಂಭೀರವಾದ ಹೋರಾಟವಾಗಿತ್ತು. ಹೋರಾಟದಲ್ಲಿ ನಿರತರಾಗಿದ್ದ ರೈತರಿಗೆ, 15 ದಿನದೊಳಗೆ ವಾಣಿವಿಲಾಸ ಡ್ಯಾಂಗೆ ನೀರನ್ನು ಹರಿಸುವ ಭರವಸೆ ನೀಡಿ, ಆದೇಶವನ್ನೂ ನೀಡಿದ್ದೆ. ಭದ್ರಾ ಮೇಲ್ದಂಡೆ ಯೋಜನೆ ಕೇಂದ್ರ ಸಚಿವ ಸಂಪುಟದ ಅನುಮೋದನೆ ಪಡೆದು ಶೀಘ್ರದಲ್ಲಿ ರಾಷ್ಟ್ರೀಯ ಯೋಜನೆಯಂದು ಘೋಷಣೆಯಾಗಿ , ಯೋಜನೆಯ ಅನುಷ್ಠಾನಕ್ಕೆ ಕೇಂದ್ರದಿಂದ ಅನುದಾನ ಸೇರಿದಂತೆ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುವುದು ಎಂದರು.


ದುಡಿಯುವ ವರ್ಗಕ್ಕೆ ಶಕ್ತಿ ತುಂಬಲಾಗುತ್ತಿದೆ :
ಶಿಕ್ಷಣ ಕ್ಷೇತ್ರಕ್ಕೆ ಸರ್ಕಾರ ಒತ್ತು ನೀಡುತ್ತಿದೆ. ಒಂದೇ ವರ್ಷದಲ್ಲಿ 7000 ಕೊಠಡಿಗಳನ್ನು ನಿರ್ಮಿಸುವ ತೀರ್ಮಾನಿಸಲಾಗಿದೆ. 100 ಪ್ರಾಥಮಿಕ ಆರೋಗ್ಯಕೇಂದ್ರಗಳನ್ನು ಮೇಲ್ದರ್ಜೆಗೇರಿಸುವುದು ,ಪ್ರತಿ ತಾಲ್ಲೂಕಿನಲ್ಲಿಯೂ ಕಡುಬಡವರಿಗೆ, ಹಿರಿಯರಿಗೆ ಉಚಿತ ಆರೋಗ್ಯ ತಪಾಸಣೆ ವ್ಯವಸ್ಥೆ, ಕಣ್ಣಿನ ತಪಾಸಣೆ ನಡೆಸಿ ಚಿಕಿತ್ಸೆ ನೀಡುವ ವ್ಯವಸ್ಥೆ ಮಾಡಲಾಗುತ್ತಿದೆ. ಶ್ರವಣದೋಷವಿರುವ ಕಡುಬಡವರಿಗೆ ಶ್ರವಣ ಸಮಸ್ಯೆ ನಿವಾರಣೆಗೆ ಧ್ವನಿ ಪೆಟ್ಟಿಗೆಯನ್ನು ವಿತರಿಸುವ ಯೋಜನೆಗೆ 500 ಕೋಟಿ ರೂ.ಗಳನ್ನು ಮೀಸಲಿರಿಸಿದೆ. ಡಯಾಲಿಸಿಸ್ನ್ನು 30 ಸಾವಿರ ಸೈಕಲ್ನಿಂದ 60 ಸಾವಿರ ಸೈಕಲ್ಗೆ ಏರಿಸಲಾಗಿದೆ. ಕ್ಯಾನ್ಸರ್ ಚಿಕಿತ್ಸೆಗೆ 10 ಕೇಂದ್ರಗಳಲ್ಲಿ ಕಿಮೋಥೆರಪಿ ನೀಡಲಾಗುತ್ತಿದೆ. ಹೀಗೆ, ಶಿಕ್ಷಣ, ಉದ್ಯೋಗ ಪ್ರಾಶಸ್ತ್ಯ ನೀಡಿ ಎಸ್ ಸಿ ಎಸ್ಟಿ, ಹಿಂದುಳಿದ ವರ್ಗಗಳ ಅಭ್ಯುದಯ, ಸ್ತ್ರೀಶಕ್ತಿ ಸಂಘಗಳಿಗೆ 1.5 ಲಕ್ಷ ಸಾಲಸೌಲಭ್ಯ ನೀಡಿ, ಅವರು ಉತ್ಪಾದಿಸುವ ಉತ್ಪನ್ನಗಳಿಗೆ ಮಾರುಕಟ್ಟೆ ಸೌಲಭ್ಯವನ್ನು ಒದಗಿಸಲಾಗುವುದು. ದುಡಿಯುವ ವರ್ಗಕ್ಕೆ ಶಕ್ತಿ ತುಂಬುವ ಕೆಲಸವನ್ನು ಸರ್ಕಾರ ಮಾಡುತ್ತಿದೆ. ರೈತರ ಮಕ್ಕಳ ಶಿಕ್ಷಣಕ್ಕೆ ಪ್ರೋತ್ಸಾಹಿಸಲು ರೈತವಿದ್ಯಾನಿಧಿ ಯೋಜನೆ ಜಾರಿ ಮಾಡಿದ್ದು, 8 ಲಕ್ಷ ವಿದ್ಯಾರ್ಥಿಗಳಿಗೆ ಯೋಜನೆಯನ್ನು ತಲುಪಿಸಲಾಗಿದೆ. ಎಸ್ ಸಿ ಎಸ್ ಟಿ ಜನಾಂಗದ ಬಿಪಿಎಲ್ ಕುಟುಂಬಗಳಿಗೆ 75 ಯೂನಿಟ್ ಉಚಿತ ವಿದ್ಯುತ್ ಯೋಜನೆಯನ್ನು ಜಾರಿ ಮಾಡಲಾಗಿದೆ ಎಂದರು.

Join Whatsapp