ಭೋಪಾಲ್: ಈದ್ ಮಿಲಾದ್ ಆಚರಣೆಯ ಭಾಗವಾಗಿ ನಡೆದ ಮೆರವಣಿಗೆ ವೇಳೆ ನಿರ್ಬಂಧಿತ ಪ್ರದೇಶಕ್ಕೆ ಜನರ ಗುಂಪೊಂದು ಪ್ರವೇಶಿಸಲು ಪ್ರಯತ್ನಿಸಿದ ಸಂದರ್ಭದಲ್ಲಿ ಘರ್ಷಣೆ ನಡೆದು, ಸ್ಥಳದಲ್ಲಿ ಉದ್ವಿಗ್ನತೆ ಉಂಟಾಗಿದೆ. ಆಕ್ರೋಶಿತ ಗುಂಪನ್ನು ಚದುರಿಸಿ ಪರಿಸ್ಥಿತಿಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಪೊಲೀಸರು ಲಾಠಿ ಚಾರ್ಚ್ ನಡೆಸಿದ್ದಾರೆ.
ಪಿಂಜರವಾಡಿ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಲಾಠಿಚಾರ್ಚ್ ನಿಂದಾಗಿ ಹಲವು ಮಂದಿಗೆ ಗಾಯಗೊಂಡಿದ್ದಾರೆ.
ಯುವಕರು ಈದ್ ಮಿಲಾದ್ ಸಂದರ್ಭದಲ್ಲಿ ಮೆರವಣಿಗೆ ಆಯೋಜಿಸಿದ್ದರು. ಮೆರವಣಿಗೆ ಪಿಂಜರವಾಡಿ ಚೌಕದ ಬಳಿ ತಲುಪಿದಾಗ ಸ್ಥಳದಲ್ಲಿದ್ದ ಯುವಕರ ಗುಂಪೊಂದು ನಿರ್ಬಂಧಿತ ಪ್ರದೇಶಕ್ಕೆ ಪ್ರವೇಶಿಸಲು ಪ್ರಯತ್ನಿಸಿದೆ. ಪ್ರಸಕ್ತ ಆ ಸ್ಥಳಕ್ಕೆ ಪ್ರವೇಶಿಸದಂತೆ ಪೊಲೀಸರು ಹಾಕಿದ್ದ ಬ್ಯಾರಿಕೇಡ್ ಗಳನ್ನು ಬದಿಗೆ ಸರಿಸಿ ಮೆರವಣಿಗೆ ನಡೆಸಲು ಮುಂದಾದಾಗ ಅವರನ್ನು ಚದುರಿಸಲು ಪೊಲೀಸರು ಲಾಠಿಚಾರ್ಚ್ ನಡೆಸಿದರು.
ಪ್ರಸಕ್ತ ಪರಿಸ್ಥಿತಿ ಹತೋಟಿಯಲ್ಲಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.