ಐಸಿಸಿ T-20 ವಿಶ್ವಕಪ್: ಇಂಗ್ಲೆಂಡ್ ಸವಾಲನ್ನು ಮೆಟ್ಟಿನಿಂತ ನ್ಯೂಜಿಲೆಂಡ್ ಫೈನಲ್ ಪ್ರವೇಶ

Prasthutha|

ಅಬುಧಾಬಿ: T-20 ಕ್ರಿಕೆಟ್’ನ ಎಲ್ಲಾ ರೋಚಕ ಕ್ಷಣಗಳಿಗೆ ಸಾಕ್ಷಿಯಾದ ಐಸಿಸಿ ಟಿ-20 ವಿಶ್ವಕಪ್ ಟೂರ್ನಿಯ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ಅಮೋಘ ಗೆಲುವು ಸಾಧಿಸಿದೆ. ಇಂಗ್ಲೆಂಡ್ ನೀಡಿದ್ದ 166 ರನ್’ಗಳ ಗುರಿಯನ್ನು 6 ಎಸೆತಗಳು ಬಾಕಿ ಇರುವಂತೆಯೇ ದಾಟಿದ ನ್ಯೂಜಿಲೆಂಡ್ ಇದೇ ಮೊದಲ ಬಾರಿಗೆ ಐಸಿಸಿ ಟಿ-20 ವಿಶ್ವಕಪ್ ಟೂರ್ನಿಯ ಪೈನಲ್ ಪ್ರವೇಶಿಸಿತು. ಆ ಮೂಲಕ 2019ರ ಏಕದಿನ ವಿಶ್ವಕಪ್ ಫೈನಲ್’ನ ಸೋಲಿಗೆ ಟಿ-20 ವಿಶ್ವಕಪ್ ಟೂರ್ನಿಯ ಸೆಮಿಫೈನಲ್’ನಲ್ಲಿ ಸೇಡು ತೀರಿಸಿಕೊಂಡಿದೆ.

- Advertisement -

ಆರಂಭಿಕನಾಗಿ ಬಂದು ತಂಡವನ್ನು ಗೆಲುವಿನ ದಡ ಸೇರಿಸಿದ ಡೆರಿಲ್ ಮಿಚೆಲ್ ನ್ಯೂಜಿಲೆಂಡ್ ಅಭಿಮಾನಿಗಳ ಪಾಲಿಗೆ ಹೀರೋ ಆದರು. 47 ಎಸೆತಗಳನ್ನು ಎದುರಿಸಿ 4 ಸಿಕ್ಸರ್ ಹಾಗೂ 4 ಬೌಂಡರಿಗಳ ಮೂಲಕ ಅಬ್ಬರಿಸಿದ ಮಿಚೆಲ್ 68 ರನ್’ಗಳಿಸಿ ಅಜೇಯರಾಗುಳಿದರು.

ಜೇಮ್ಸ್ ನೀಶಮ್

ನ್ಯೂಜಿಲೆಂಡ್ ಗೆಲುವಿಗೆ 4 ಓವರ್’ಗಳಲ್ಲಿ 57 ರನ್’ಗಳ ಅಗತ್ಯವಿತ್ತು. ಗೆಲುವಿನ ದಿಕ್ಕಿನಲ್ಲಿ ಸಾಗುತ್ತಿದ್ದಾಗ ಕ್ರಿಸ್ ಜೋರ್ಡಾನ್ ಎಸೆದ 18ನೇ ಓವರ್ ಇಂಗ್ಲೆಂಡ್’ನ ಎಲ್ಲಾ ಲೆಕ್ಕಾಚಾರಗಳನ್ನು ತಲೆಕೆಳಗಾಗಿಸಿತು. ಜೇಮ್ಸ್ ನೀಶಮ್ ಬ್ಯಾಟ್’ನಿಂದ ಸಿಡಿದ 2 ಸಿಕ್ಸರ್ ಹಾಗೂ 1 ಬೌಂಡರಿ ಮೂಲಕ ಆ ಓವರ್’ನಲ್ಲಿ ಜೋರ್ಡಾನ್  ಒಟ್ಟು 23 ರನ್ ಬಿಟ್ಟುಕೊಟ್ಟು ದುಬಾರಿಯಾದರು.

- Advertisement -

 11 ಎಸೆತಗಳಲ್ಲಿ 3 ಸಿಕ್ಸರ್ ಹಾಗೂ 1 ಬೌಂಡರಿ ನೆರವಿನಿಂದ ಅಮೂಲ್ಯ 27 ರನ್’ಗಳಿಸಿದ ಜೇಮ್ಸ್ ನೀಶಮ್ ನ್ಯೂಜಿಲೆಂಡ್ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಡೆವೊನ್ ಕೋನ್ವೆ 46 ರನ್’ಗಳಿಸಿದರು. ಇಂಗ್ಲೆಂಡ್ ಪರ ಕ್ರಿಸ್ ವೋಕ್ಸ್ ಹಾಗೂ ಲಿವಿಂಗ್’ಸ್ಟನ್ ತಲಾ 2 ವಿಕೆಟ್ ಪಡೆದರು.

ಇದಕ್ಕೂ ಮೊದಲು ಬ್ಯಾಟ್ ಮಾಡಿದ್ದ ಇಂಗ್ಲೆಂಡ್ ಮೊಯಿನ್ ಅಲಿಯ ಭರ್ಜರಿ ಅರ್ಧ ಶತಕ ಹಾಗೂ ಡೇವಿಡ್ ಮಲಾನ್ ಗಳಿಸಿದ 41 ರನ್’ಗಳ ನೆರವಿನಿಂದ 166 ರನ್’ಗಳ ಸ್ಪರ್ಧಾತ್ಮಕ ಮೊತ್ತ ಕಲೆ ಹಾಕಿತ್ತು. ಜಾನಿ ಬೇರ್ಸ್ಟೊ 13 ಹಾಗೂ ಜಾಸ್ ಬಟ್ಲರ್ 29 ರನ್’ಗಳಿಸಿದರೆ, ಲಿವಿಂಗ್’ಸ್ಟನ್ 17 ರನ್’ಗಳಿಸುವಷ್ಟರಲ್ಲೇ ವಿಕೆಟ್ ಒಪ್ಪಿಸಿದರು.

ಗುರುವಾರ ನಡೆಯುವ ಆಸ್ಟ್ರೇಲಿಯಾ ಹಾಗೂ ಪಾಕಿಸ್ತಾನ ನಡುವಿನ ಪಂದ್ಯದ ವಿಜೇತರನ್ನು ನ್ಯೂಜಿಲೆಂಡ್ ಫೈನಲ್’ನಲ್ಲಿ ಎದುರಿಸಲಿದೆ.

Join Whatsapp