ಸಹ್ಯಾದ್ರಿ ಇಂಜಿನಿಯರಿಂಗ್ ಕಾಲೇಜು, ಇತರ ಖಾಸಗಿ ಕಾಲೇಜುಗಳ ಅಡ್ಮಿಷನ್ ಫೀಸ್ ದಂಧೆ ಬಹಿರಂಗಗೊಳಿಸಿದ ಕ್ಯಾಂಪಸ್ ಫ್ರಂಟ್

Prasthutha|

ಮಂಗಳೂರು : ನಗರದ ಸಹ್ಯಾದ್ರಿ ಇಂಜಿನಿಯರಿಂಗ್ ಕಾಲೇಜು ಸೇರಿದಂತೆ ಹಲವು ಕಾಲೇಜುಗಳಲ್ಲಿ ಅಡ್ಮಿಶನ್ ಫೀಸ್ ದಂಧೆ ನಡೆಯುತ್ತಿದೆ ಎಂದು ಕ್ಯಾಂಪಸ್ ಫ್ರಂಟ್ ಆರೋಪಿಸಿದೆ.

ಶಿಕ್ಷಣದಲ್ಲಿ ಮುಂದುವರಿದ ದಕ್ಷಿಣ ಕನ್ನಡ ಜಿಲ್ಲೆಗೆ ಬುದ್ದಿವಂತರ ಜಿಲ್ಲೆ ಎಂದು ಕರೆಯಲಾಗುತ್ತದೆ. ಆದರೆ ಶಿಕ್ಷಣದ ಹೆಸರಿನಲ್ಲಿ ಜಿಲ್ಲೆಯಲ್ಲಿ ನಡೆಯುತ್ತಿರುವ ದಂಧೆಯು ನಮ್ಮನ್ನು ತಲೆ ತಗ್ಗಿಸುವಂತೆ ಮಾಡಿದೆ. ಅಡ್ಮಿಷನ್ ನೆಪದಲ್ಲಿ ಮತ್ತು ಸೀಟು ಹಂಚಿಕೆಯ ವಿಚಾರದಲ್ಲಿ ನಗರದ ಸಹ್ಯಾದ್ರಿ ಇಂಜಿನಿಯರಿಂಗ್ ಕಾಲೇಜು, ಶ್ರೀನಿವಾಸ್ ಮತ್ತು ಯನೆಪೋಯಾ ಮೆಡಿಕಲ್ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಕೋಟಿ ಕೋಟಿ ವಂಚಿಸುತ್ತಿದ್ದಾರೆ. ಇದು ಶಿಕ್ಷಣದಲ್ಲಿ ಖಾಸಗಿ ವ್ಯಕ್ತಿಗಳ ದರ್ಬಾರು ಮತ್ತು ಶಿಕ್ಷಣದ ವ್ಯಾಪಾರೀಕರಣ ಎಂದು ಕ್ಯಾಂಪಸ್ ಫ್ರಂಟ್ ರಾಜ್ಯ ಸಮಿತಿ ಸದಸ್ಯ ಇಮ್ರಾನ್ ಪಿಜೆ  ಆರೋಪಿಸಿದ್ದಾರೆ. ಅವರು ನಗರದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಈ ವಿಚಾರ ಬಹಿರಂಗ ಪಡಿಸಿದ್ದಾರೆ.

- Advertisement -

ಈ ಸಂಬಂಧ ಸರಕಾರ ಉನ್ನತ ಮಟ್ಟದ ತನಿಖೆ ನಡೆಸಬೇಕು ಎಂದು ಅವರು ಆಗ್ರಹಿಸಿದರು.

ಜಿಲ್ಲೆಯ ಪ್ರತಿಷ್ಟಿತ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಕೆ.ಇ.ಎ ಅಧೀನದಲ್ಲಿ ನಡೆದ  ಪ್ರವೇಶ ಪರೀಕ್ಷೆಗಳಾದ ಸಿ.ಇ.ಟಿ ರ‍್ಯಾಂಕ್ ಮೂಲಕ ಪ್ರವೇಶಾತಿ ಪಡೆದ ಮತ್ತು ಕಾಮೆಡ್ ಕೆ. ಮೂಲಕ ಅರ್ಹತೆ ಪಡೆದ ಇಂಜಿನಿಯರಿಂಗ್ ವಿಧ್ಯಾರ್ಥಿಗಳಿಗೆ ವಿ.ವಿ. ಯ ಪ್ರಕಾರ ಕಾಲೇಜುಗಳು ಕೇವಲ ರೂ. 56,000 ಮಾತ್ರ ಶುಲ್ಕ ಪಡೆಯಬೇಕು. ಆದರೆ ಸಂಸ್ಥೆಗಳು  ಕಾಲೇಜು ಫೀಸ್ ಎಂದು 19750  ಮತ್ತು 4 ವರ್ಷದಲ್ಲಿ  ಆಪ್ಟಿಟ್ಯೂಡ್ ಬೇಸಿಕ್ ಕೋರ್ಸ್ ಎಂಬ ನೆಪದಲ್ಲಿ 10000, ಇಂಡಸ್ಟ್ರಿಯಲ್ ಕನೆಕ್ಟ್ ಟ್ರೈನಿಂಗ್  ಹೆಸರಲ್ಲಿ 13000, ಪ್ಲೇಸ್‌ಮೆಂಟ್ ಮತ್ತು ಟ್ರೈನಿಂಗ್ ಹೆಸರಲ್ಲಿ 10000 ಹಾಗೂ ಇತರ ಹಲವು ಕಾರಣಗಳನ್ನು ಹೇಳಿ ಸುಮಾರು 55000 ದಷ್ಟು ಹೆಚ್ಚುವರಿ ಶುಲ್ಕ ಪಡೆಯುತ್ತಿರುವುದು ಕಂಡುಬಂದಿದೆ ಎಂದು ಅವರು ತಿಳಿಸಿದ್ದಾರೆ.

ಇದು ಶಿಕ್ಷಣದ ಹೆಸರಿನಲ್ಲಿ ನಡೆಯುತ್ತಿರುವ ವ್ಯಾಪಾರೀಕರಣವಾಗಿದೆ ಅಲ್ಲದೆ ಖಾಸಗಿ ಕಾಲೇಜುಗಳು ತಮ್ಮ ಪ್ರತಿಷ್ಟೆಗಳನ್ನು ಉಳಿಸಿಕೊಳ್ಳಲು ಮತ್ತು ಪರಸ್ಪರ ಕಾಲೇಜುಗಳ ನಡುವೆ ಪೈಪೋಟಿ ನಡೆಸಿ ವಿದ್ಯಾರ್ಥಿಗಳನ್ನು ಬಲಿಪಶು ಮಾಡುತ್ತಿದೆ. ಅಲ್ಲದೆ ಸಂಸ್ಥೆಯ ದಂದೆಯ ವಿರುದ್ಧ ಮಾತನಾಡಿದ ವಿದ್ಯಾರ್ಥಿಗಳನ್ನು ಕಾಲೇಜು ಆಡಳಿತ ಮಂಡಳಿಯು ವಿದ್ಯಾರ್ಥಿಗಳ ಅಂಕಗಳನ್ನು ತೋರಿಸಿ ಬ್ಲಾಕ್ ಮೇಲ್ ಮಾಡುತ್ತಿದೆ ಎಂದು ಕ್ಯಾಂಪಸ್ ಫ್ರಂಟ್ ಆರೋಪಿಸಿದೆ.

ಇನ್ನೊಂದು ಕಡೆ ಜಿಲ್ಲೆಯ ಖಾಸಗಿ ಮೆಡಿಕಲ್  ಕಾಲೇಜುಗಳಲ್ಲಿಯೂ  ಕೂಡಾ ಈ ದಂಧೆ ನಡೆಯುತ್ತಿದೆ. ಮ್ಯಾನೇಜ್‌ಮೆಂಟ್ ಕೋಟಾದಲ್ಲಿ ಪ್ರವೇಶ ಪಡೆಯುವ ವಿದ್ಯಾರ್ಥಿಗಳಿಗೆ ನೇರವಾಗಿ ಕಾಲೇಜುಗಳು ಸೀಟು ನೀಡುತ್ತಿಲ್ಲ ಬದಲಾಗಿ ಶೈಕ್ಷಣಿಕ ವರ್ಷದ ಆರಂಭದಲ್ಲೇ ತಮ್ಮ ಎಲ್ಲಾ ಸೀಟುಗಳನ್ನು ಅಡ್ಮಿಶನ್ ಕನ್ಸಲ್ಟೆನ್ಸಿ ವ್ಯಾಪಾರ ನಡೆಸುತ್ತಿರುವ ಏಜೆಂಟುಗಳಿಗೆ ಸೀಟನ್ನು ಮಾರುತ್ತಾರೆ ಎಂದು ಅವರು ದೂರಿದ್ದಾರೆ.

ವಿಧ್ಯಾರ್ಥಿಗಳು ಅಡ್ಮಿಶನ್ ಬೇಕಾದಲ್ಲಿ ಏಜೆಂಟ್‌ಗಳ ಮೂಲಕ ಹೆಚ್ಚುವರಿ ಶುಲ್ಕವನ್ನು ನೀಡಿ ದಾಖಲಾಗಬೇಕು. ಸಾಮಾನ್ಯವಾಗಿ ಮ್ಯಾನೆಜ್‌ಮೆಂಟ್ ಕೋಟಾದಲ್ಲಿ ಮೆಡಿಕಲ್ ಸೀಟು  ಬೇಕಾದಲ್ಲಿ ಕಾಲೇಜುಗಳು ನೀಡುತ್ತಿಲ್ಲ ವಿದ್ಯಾರ್ಥಿಗಳು ಏಜೆಂಟ್ ಬಳಿಯೇ ಅಡ್ಮಿಶನ್ ಮಾಡಿಕೊಳ್ಳಬೇಕು. ಅಲ್ಲದೆ ನೀಟ್ ಪ್ರವೇಶಾತಿ ಬರೆದು ಅರ್ಹತೆಗೊಂಡ ವಿದ್ಯಾರ್ಥಿಗಳಲ್ಲಿಯೂ  ಕೂಡಾ ಸರಕಾರ ನಿಗದಿ ಪಡಿಸಿದಕ್ಕಿಂತ ಪ್ರತಿವರ್ಷ 75000 ದಷ್ಟು ಹೆಚ್ಚುವರಿ ಶುಲ್ಕ ವಸೂಲಿ ಮಾಡುತ್ತಿದ್ದಾರೆ ಎಂದು ಅವರು ಹೇಳಿದರು.

ಒಟ್ಟಾರೆಯಾಗಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಿಕ್ಷಣದ ಹೆಸರಿನಲ್ಲಿ ಬಹು ಕೋಟಿ ವಂಚನೆ ನಡೆಯುತ್ತಿದ್ದು  ಸರಕಾರ ಕಣ್ಣಿದ್ದು ಕುರುಡರಂತೆ ವರ್ತಿಸುತ್ತಿದೆ. ಈ ಎಲ್ಲಾ ವಂಚನೆಗಳಿಗೆ ಸರಕಾರವು ಕೂಡ ನೇರ ಹೊಣೆಯಾಗಿದೆ.  ಯಾಕೆಂದರೆ ಜಿಲ್ಲೆಯಲ್ಲಿ ಇದುವರೆಗೆ ಒಂದೇ ಒಂದು ಸರಕಾರಿ ಮೆಡಿಕಲ್ ಮತ್ತು ಇಂಜಿನಿಯರಿಂಗ್ ಕಾಲೇಜುಗಳಿಲ್ಲ. ಖಾಸಗಿ ಕಾಲೇಜುಗಳ ಈ ದಂಧೆಗೆ ಕಡಿವಾನ ಹಾಕಲು ಸರಕಾರ ಸಂಪೂರ್ಣ ವಿಫಲವಾಗಿದೆ ಎಂದು ಆರೋಪಿಸಿದರು.

ಆದುದರಿಂದ ಖಾಸಗಿ ಶಿಕ್ಷಣ ಸಂಸ್ಥೆಗಳ ಈ ಅಡ್ಮಿಶನ್ ದಂಧೆಯನ್ನು ಲೋಕಾಯುಕ್ತ ಇಲಾಖೆಯು ಮಧ್ಯಪ್ರವೇಶಿಸಿ ಬಹಿರಂಗಗೊಳಿಸಬೇಕು. ಇದರ ಹಿಂದೆ ಇರುವ ವ್ಯಕ್ತಿಗಳಿಗೆ ಕಾನೂನಿನಡಿಯಲ್ಲಿ ಶಿಕ್ಷಿಸಿ ವಂಚನೆಗೊಳಗಾದ ವಿಧ್ಯಾರ್ಥಿಗಳಿಗೆ ನ್ಯಾಯ ಒದಗಿಸಬೇಕೆಂದು ಇಮ್ರಾನ್ ಪಿ ಜೆ  ಆಗ್ರಹಿಸಿದರು.

ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಸಮಿತಿ ಸದಸ್ಯ ಮುಹಮ್ಮದ್ ಸಾದಿಕ್, ಜಿಲ್ಲಾಧ್ಯಕ್ಷ ಹಸನ್ ಸಿರಾಜ್, ಜಿಲ್ಲಾ ಮುಖಂಡರಾದ ಸವಾದ್ ಕಲ್ಲರ್ಪೆ ಮತ್ತು ತಾಜುದ್ದೀನ್ ಉಪಸ್ಥಿತರಿದ್ದರು.

- Advertisement -