December 8, 2020

ಈ ಹೋರಾಟ ಚಾರಿತ್ರಿಕ ಮತ್ತು ನಿರ್ಣಾಯಕ

ನಾ ದಿವಾಕರ

ಭಟ್ಟಂಗಿ ಮಾಧ್ಯಮಗಳು, ವಂದಿಮಾಗಧ ಪತ್ರಿಕೋದ್ಯಮಿಗಳು, ನಿಷ್ಕ್ರಿಯ ಮತ್ತು ನಿರ್ವೀರ್ಯ ಸುದ್ದಿಮನೆಗಳು, ಗೋಸುಂಬೆ ರಾಜಕೀಯ ನಾಯಕರು, ಸಮಯಸಾಧಕ ಪ್ರಾದೇಶಿಕ ಪಕ್ಷಗಳು ಮತ್ತು ನಿರ್ಲಜ್ಜ ಆಡಳಿತ ವ್ಯವಸ್ಥೆ – ಇವಿಷ್ಟೂ ಅಧ್ವಾನಗಳ ನಡುವೆ ಡಿಸೆಂಬರ್ 8, 2020 ಸ್ವತಂತ್ರ ಭಾರತದ ಇತಿಹಾಸದಲ್ಲಿ ಒಂದು ಅವಿಸ್ಮರಣೀಯ ದಿನವಾಗಿ ಹೊರಹೊಮ್ಮಲು ಸಜ್ಜಾಗಿದೆ. ಕಳೆದ ಹಲವು ತಿಂಗಳುಗಳಿಂದ ದೇಶದ ರೈತ ಸಮುದಾಯದಲ್ಲಿ ಮಡುಗಟ್ಟಿದ್ದ ಆಕ್ರೋಶ ಮತ್ತು ನೋವು ಒಮ್ಮೆಲೆ ಹೊರಚೆಲ್ಲುತ್ತಿರುವುದನ್ನು ದೆಹಲಿಯಲ್ಲಿ ಮತ್ತು ದೇಶದ ಎಲ್ಲ ರಾಜ್ಯಗಳಲ್ಲೂ ಕಾಣುತ್ತಿದ್ದೇವೆ. ತನ್ನ ತೋಳ್ಬಲದಿಂದ ಮತ್ತು ಸಮೂಹ ಸನ್ನಿಯ ಉನ್ಮಾದದ ಮೂಲಕ ರೈತ ಹೋರಾಟವನ್ನು ನಿಷ್ಕ್ರಿಯಗೊಳಿಸಬಹುದು ಎಂಬ ಭ್ರಮೆಗೊಳಗಾಗಿದ್ದ ನರೇಂದ್ರ ಮೋದಿ ಸರ್ಕಾರಕ್ಕೆ ದಿಕ್ಕುತೋಚದಂತಾಗಿದೆ.

ರೈತರ ಮುಷ್ಕರ ಏಕೆ ಇಷ್ಟು ಯಶಸ್ವಿಯಾಗಿದೆ, ಹೇಗೆ ಇಷ್ಟು ದಿಟ್ಟತನದಿಂದ ಮುಂದುವರೆದಿದೆ ಎನ್ನುವ ಜಿಜ್ಞಾಸೆ ಎಲ್ಲರನ್ನೂ ಕಾಡುತ್ತಿರಬಹುದು. ಏಕೆಂದರೆ ಭಾರತದಲ್ಲಿ ಮುಷ್ಕರಗಳು, ಪ್ರತಿಭಟನೆಗಳು ಇತಿಹಾಸವನ್ನೇ ಸೃಷ್ಟಿಸಿರುವ ಸಂದರ್ಭಗಳನ್ನು ನೋಡಿದ್ದೇವೆ. ಬ್ಯಾಂಕ್ ನೌಕರರೂ ಒಂದು ಕಾಲಘಟ್ಟದಲ್ಲಿ ಮೂರು ದಿನಗಳ ಮುಷ್ಕರ ನಡೆಸಿದ್ದರು. 1970ರ ದಶಕದ ರೈಲ್ವೆ ನೌಕರರ ಮುಷ್ಕರ ಚಾರಿತ್ರಿಕವಾಗಿತ್ತು. ಕೋಲಾರ ಚಿನ್ನದ ಗಣಿ ಕಾರ್ಮಿಕರು ದಿನಗಟ್ಟಲೆ ಮುಷ್ಕರ ನಡೆಸಿದ ದೃಷ್ಟಾಂತವಿದೆ.  ಆದರೆ ಕಳೆದ ಮೂರು ದಶಕಗಳಲ್ಲಿ, ಎಲ್ಲ ರೀತಿಯ ಹೋರಾಟ, ಚಳುವಳಿ, ಪ್ರತಿಭಟನೆಗಳು ತಾತ್ವಿಕ ಅಂತ್ಯ ಕಾಣುವಲ್ಲಿ ವಿಫಲವಾಗಿರುವ ನಿದರ್ಶನಗಳೇ ಹೆಚ್ಚು.

ಆದರೆ ಈ ಬಾರಿಯ ಮುಷ್ಕರ ನಿರ್ಣಾಯಕ ಹಂತ ತಲುಪುತ್ತಿರುವಂತೆ ತೋರುತ್ತಿದೆ. ನವಂಬರ್ 26ರ ಕಾರ್ಮಿಕ ಮುಷ್ಕರವೂ ಅಭೂತಪೂರ್ವ ಯಶಸ್ಸು ಕಂಡಿದ್ದನ್ನು ಗಮನಿಸಬಹುದು. ದೆಹಲಿಯಲ್ಲಿ ನೆರೆದಿರುವ ಲಕ್ಷಾಂತರ ರೈತರ ಪ್ರತಿರೋಧದ ಧ್ವನಿ ಒಂಟಿದನಿಯಾಗಬಹುದು ಎನ್ನುವ ಆಳುವ ವರ್ಗಗಳ ನಿರೀಕ್ಷೆ ಹುಸಿಯಾಗಿದೆ. ರೈತಾಪಿಯ ನೋವಿನ ದನಿಗೆ ಇಡೀ ದೇಶವೇ ಮಿಡಿಯುತ್ತಿದೆ. ಎಲ್ಲ ವರ್ಗಗಳ ಜನರೂ ಸ್ಪಂದಿಸುತ್ತಿದ್ದಾರೆ. ಮೊಟ್ಟಮೊದಲ ಬಾರಿಗೆ ಬ್ಯಾಂಕ್ ಅಧಿಕಾರಿಗಳ ಸಂಘಗಳು ಈ ರೀತಿಯ ಒಂದು ಸಾರ್ವಜನಿಕ ಮುಷ್ಕರಕ್ಕೆ ಬೆಂಬಲಿಸಿ ಜಂಟಿ ಹೇಳಿಕೆ ನೀಡಿವೆ. ಸಾರ್ವಜನಿಕ ಉದ್ದಿಮೆಗಳ ಕಾರ್ಮಿಕರು ರೈತಾಪಿಯೊಡನೆ ಐಕಮತ್ಯ ಪ್ರದರ್ಶಿಸಿದ್ದಾರೆ. ಬಿಎಸ್‍ಎನ್‍ಎಲ್ ನೌಕರರು ತಮ್ಮ ಬೆಂಬಲ ವ್ಯಕ್ತಪಡಿಸಿದ್ದಾರೆ. ಪಕ್ಷ ರಾಜಕಾರಣದ ದಾಸ್ಯದ ಸಂಕೋಲೆಗಳಲ್ಲಿ ಬಂಧಿಸಲ್ಪಟ್ಟಿರುವವರನ್ನು ಹೊರತುಪಡಿಸಿ ಎಲ್ಲ ಪ್ರಜ್ಞಾವಂತ ಪ್ರಜೆಗಳೂ ಭಾರತದ ರೈತಾಪಿಯೊಡನೆ ಕೈಜೋಡಿಸುತ್ತಿರುವುದೇ ಇಂದಿನ ಮುಷ್ಕರಕ್ಕೆ ತಾತ್ವಿಕ ಸ್ಪರ್ಶ ನೀಡಿದೆ.

ಈ ಮುಷ್ಕರಕ್ಕೆ ಬೆಂಬಲ ಹೆಚ್ಚಾಗಿರುವುದಕ್ಕಿಂತಲೂ ಇದನ್ನು ವಿಫಲಗೊಳಿಸಲು ಕೇಂದ್ರ ಸರ್ಕಾರ ಮತ್ತು ಅದರ ಮಾಧ್ಯಮ ಮಿತ್ರರು ನಡೆಸಿರುವ ಅಪಪ್ರಚಾರವೇ ಮುಷ್ಕರದ ಸಾರ್ಥಕತೆಯನ್ನು ಬಿಂಬಿಸುತ್ತದೆ. ನಿಜ, ಪ್ರಸ್ತುತ ಮುಷ್ಕರದಲ್ಲಿ ಎಲ್ಲ ರಾಜ್ಯಗಳ ರೈತ ಸಮುದಾಯ ಸಂಪೂರ್ಣವಾಗಿ ಪಾಲ್ಗೊಂಡಿಲ್ಲ. ಇದು ಕೇವಲ ಶ್ರೀಮಂತ ರೈತರ, ಭೂಮಾಲಿಕರ ಪರ ಇರುವ ಮುಷ್ಕರ ಎಂಬ ಆರೋಪವೂ ಇದೆ. ಸಣ್ಣ ಮತ್ತು ಅತಿ ಸಣ್ಣ ರೈತರ ಹಿತಾಸಕ್ತಿಯನ್ನು ಪ್ರತಿನಿಧಿಸಲಾಗುತ್ತಿಲ್ಲ ಎನ್ನುವ ಆರೋಪವೂ ಇದೆ. ಈ ಸೂಕ್ಷ್ಮ ದರ್ಶಕ ಮಸೂರಗಳನ್ನು ಬಳಸುವವರಿಗೆ ಭಾರತದ ಕೃಷಿ ವ್ಯವಸ್ಥೆಯ ಸ್ವರೂಪವೇ ಅರ್ಥವಾಗಿಲ್ಲ ಎಂದು ಹೇಳಬೇಕಾದೀತು.

ಭಾರತದಲ್ಲಿ ಶೇ 86 ರಷ್ಟು  ರೈತರು ಸಣ್ಣ ಹಿಡುವಳಿದಾರರು, ಐದು ಎಕರೆಗಿಂತಲೂ ಕಡಿಮೆ ಭೂಮಿ ಹೊಂದಿರುವವರು. ಈ ರೈತಾಪಿಯ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡೇ ಸ್ವಾಮಿನಾಥನ್ ಆಯೋಗ ಕೇಂದ್ರ ಸರ್ಕಾರ ಹಲವಾರು ಶಿಫಾರಸುಗಳನ್ನು ಮಾಡಿದೆ. ಮಾರುಕಟ್ಟೆ ಆರ್ಥಿಕ ವ್ಯವಸ್ಥೆಯಲ್ಲಿ ನಗರೀಕರಣ ಪ್ರಕ್ರಿಯೆಯಿಂದಲೇ ಈ ಸಣ್ಣ ಮತ್ತು ಅತಿ ಸಣ್ಣ ರೈತರು ತಮ್ಮ ಅಲ್ಪ ಪ್ರಮಾಣ ಭೂಮಿಯನ್ನೂ ಕಳೆದುಕೊಳ್ಳುತ್ತಿದ್ದಾರೆ. ಇಂದು ನಡೆಯುತ್ತಿರುವ ಮುಷ್ಕರದಲ್ಲಿ ಈ ರೈತರ ದನಿ ಕೇಳಿಸುತ್ತಿದ್ದೆಯೇ ಎಂಬ  ಪ್ರಶ್ನೆಯೇ ಅಸಂಬದ್ಧವಾದದ್ದು. ಏಕೆಂದರೆ ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಮೂರು ಕೃಷಿ ಮಸೂದೆಗಳು ರೈತರ ಅಸ್ತಿತ್ವಕ್ಕೇ ಸಂಚಕಾರ ತರುವಂತಹ ಕಾಯ್ದೆಗಳು.

ಭಾರತದಲ್ಲಿ ಜಾರಿಗೆ ತಂದಿರುವ ಭೂ ಸುಧಾರಣಾ ಕ್ರಮಗಳು ಮತ್ತು ಹಸಿರು ಕ್ರಾಂತಿ ಮೂಲತಃ ದೊಡ್ಡ ರೈತರಿಗೆ ನೆರವಾಗಿರುವುದೇ ಹೆಚ್ಚು ಎನ್ನುವುದು ಸತ್ಯ. ಭಾರತದ ಆಳುವ ವರ್ಗಗಳಿಗೆ ಇಲ್ಲಿನ ಊಳಿಗಮಾನ್ಯ ವ್ಯವಸ್ಥೆಯನ್ನು ಸಂಪೂರ್ಣ ಹೋಗಲಾಡಿಸುವ ಇರಾದೆ ಅಂದಿಗೂ ಇರಲಿಲ್ಲ, ಇಂದಿಗೂ ಇಲ್ಲ. ಇಂದು ದೇಶವನ್ನು ಕಾಡುತ್ತಿರುವ ಅರೆ ಊಳಿಗಮಾನ್ಯ ವ್ಯವಸ್ಥೆ ಕೃಷಿಕ ಸಮುದಾಯದಲ್ಲೇ ಸಮಾಜೋ ಆರ್ಥಿಕ ತಾರತಮ್ಯ ಮತ್ತು ಅಂತರಗಳನ್ನು ಹಿಗ್ಗಿಸುತ್ತಿರುವುದನ್ನೂ ಗಮನಿಸಬಹುದು. ಸಣ್ಣ ರೈತರು ಮತ್ತು ಭೂಮಾಲಿಕರ ನಡುವಿನ ಸಂಘರ್ಷವೂ ಹಲವು ಸಂದರ್ಭಗಳಲ್ಲಿ ತಾರಕಕ್ಕೇರಿರುವುದನ್ನೂ ಕಂಡಿದ್ದೇವೆ. ಈ ಸಂಘರ್ಷದ ನೆಲೆಯಲ್ಲೇ ಸೂಕ್ಷ್ಮವಾಗಿ ಗಮನಿಸಿದಾಗ ಭೂಹೀನ ಕೃಷಿಕರು ಮತ್ತು ಕೃಷಿ ಕಾರ್ಮಿಕರು ಸಂಪೂರ್ಣವಾಗಿ ಅವಕಾಶವಂಚಿತರಾಗಿರುವುದನ್ನೂ ಗಮನಿಸಬಹುದು.

ಜಾಗತೀಕರಣದ ನಂತರ, 1991 ರಿಂದ 2004ರ ಅವಧಿಯಲ್ಲಿ ದೇಶದಲ್ಲಿ ಭೂ ಹೀನ ಕುಟುಂಬಗಳ ಸಂಖ್ಯೆ ಶೇ 12ರಷ್ಟು ಹೆಚ್ಚಾಗಿರುವುದನ್ನು ಗಮನಿಸಿದರೆ, ನವ ಉದಾರವಾದಿ ಯುಗದಲ್ಲಿ ನಗರೀಕರಣ, ಮೂಲ ಸೌಕರ್ಯಗಳ ಅಭಿವೃದ್ಧಿ ಮತ್ತು ಗ್ರಾಮೀಣ ವಲಸೆಯ ಪ್ರಕ್ರಿಯೆಗಳು ಹೇಗೆ ಕೃಷಿ ಸಮುದಾಯವನ್ನು ಅಂಚಿಗೆ ತಳ್ಳುವುದಕ್ಕೆ ಕಾರಣವಾಗಿದೆ ಎನ್ನುವುದನ್ನು ಗ್ರಹಿಸಬಹುದು.  ಭಾರತದಲ್ಲಿ ಒಟ್ಟು ಶೇ 38ರಷ್ಟು ಕೃಷಿ ಕುಟುಂಬಗಳು ಭೂಹೀನರಾಗಿವೆ. ದೊಡ್ಡ ಹಿಡುವಳಿದಾರರೇ ಹೆಚ್ಚಿನ ಸಂಖ್ಯೆಯಲ್ಲಿರುವ ಪಂಜಾಬ್ ನಲ್ಲಿ ಶೇ 45ರಷ್ಟು ಭೂಹೀನ ಕುಟುಂಬಗಳಿವೆ. ದಕ್ಷಿಣದ ರಾಜ್ಯಗಳಲ್ಲಿ ಇದರ ಪ್ರಮಾಣ ಶೇ 50ಕ್ಕಿಂತಲೂ ಹೆಚ್ಚಾಗಿದೆ.

ಎಪಿಎಂಸಿ ಕಾರ್ಯನಿರ್ವಹಣೆಯಲ್ಲಿದ್ದ ದೋಷಗಳನ್ನು ಸರಿಪಡಿಸುವುದು ಸರ್ಕಾರದ ಆದ್ಯತೆಯಾಗಬೇಕಿತ್ತು. ಆದರೆ ಗುತ್ತಿಗೆ ಕೃಷಿಗೆ ಅವಕಾಶ ನೀಡುವ ಮೂಲಕ ಕಾರ್ಪೋರೇಟ್ ದಲ್ಲಾಳಿಗಳಿಗೆ ರೈತರ ಭೂಮಿ ಮತ್ತು ಬೆಳೆ ಎರಡರ ಮೇಲೂ ಅಧಿಪತ್ಯ ಸಾಧಿಸಲು ಮುಕ್ತ ಅವಕಾಶ ನೀಡಲಾಗುತ್ತಿದೆ. ರೈತರು ಬೆಳೆಯುವ ಬೆಳೆ, ಬೆಳೆಯ ಪ್ರಮಾಣ ಮತ್ತು ಕೊಳ್ಳುವ ಬೆಲೆ ಇವೆಲ್ಲವನ್ನೂ ಪೂರ್ವನಿರ್ಧರಿತ ಒಪ್ಪಂದದ ಮೂಲಕ ಕಾರ್ಪೋರೇಟ್ ಉದ್ಯಮಿಗಳು ನಿರ್ಧರಿಸುತ್ತಾರೆ. ಭಾರತದಲ್ಲಿ ಎಷ್ಟು ರೈತರಿಗೆ ಈ ಮಾರುಕಟ್ಟೆ ಪೈಪೋಟಿಯನ್ನು ಸಮರ್ಥವಾಗಿ ಎದುರಿಸಲು ಸಾಧ್ಯ ? ಎಪಿಎಂಸಿ ವ್ಯವಸ್ಥೆಯಲ್ಲಿ ದಲ್ಲಾಳಿಗಳ ಉಪಟಳ ಹೆಚ್ಚಾಗಿತ್ತು ಎನ್ನುವುದು ವಾಸ್ತವ. ಆದರೆ ನೂತನ ಕೃಷಿ ಕಾಯ್ದೆಗಳು ಗುತ್ತಿಗೆ ಕೃಷಿ ಪದ್ಧತಿಯ ಮೂಲಕ ಕಾರ್ಪೋರೇಟ್ ದಲ್ಲಾಳಿಗಳಿಗೆ ಮುಕ್ತ ಅವಕಾಶ ಒದಗಿಸುತ್ತಿದೆ.

ಮತ್ತೊಂದೆಡೆ ಜನಸಾಮಾನ್ಯರ ದೈನಂದಿನ ಜೀವನದಲ್ಲಿ ಬಳಕೆಯಾಗುವ ಕೃಷಿ ಉತ್ಪನ್ನಗಳನ್ನು ಅವಶ್ಯ ವಸ್ತುಗಳ (ತಿದ್ದುಪಡಿ) ಕಾಯ್ದೆಯ ಮೂಲಕ ಮುಕ್ತಗೊಳಿಸಲಾಗುತ್ತಿದೆ. ಆಹಾರ ಧಾನ್ಯಗಳು, ಬೇಳೆ ಕಾಳುಗಳು, ಈರುಳ್ಳಿ, ಆಲೂಗಡ್ಡೆ, ಅಡುಗೆ ಎಣ್ಣೆ ಮತ್ತು ಎಣ್ಣೆ ಬೀಜ ಇವೆಲ್ಲವೂ ಅವಶ್ಯ ವಸ್ತುಗಳ ಪರಿಧಿಯಿಂದ ಹೊರತಾಗುತ್ತವೆ. ಈ ಪದಾರ್ಥಗಳನ್ನು ಸಗಟು ಮಾರುಕಟ್ಟೆಯಲ್ಲಿ ಖರೀದಿಸಿ ದಾಸ್ತಾನು ಮಾಡುವ ಸಾಮರ್ಥ್ಯ ಇರುವ ಕಾರ್ಪೋರೇಟ್ ಉದ್ಯಮಿಗಳು, ಮಾರುಕಟ್ಟೆಯಲ್ಲಿ ಈ ಪದಾರ್ಥಗಳ ಬೆಲೆಗಳನ್ನೂ ನಿಯಂತ್ರಿಸಲು ಸುಲಭವಾಗುತ್ತದೆ. ಒಂದೆಡೆ ಬೆಳೆಯನ್ನು ನಿಯಂತ್ರಿಸುವ ಕಾರ್ಪೋರೇಟ್ ಉದ್ಯಮಗಳು ಮತ್ತೊಂದೆಡೆ ಮಾರುಕಟ್ಟೆ ಬೆಲೆಯನ್ನೂ ನಿರ್ಧರಿಸುತ್ತವೆ. ಶ್ರೀಮಂತ ರೈತರು ಕೊಂಚಮಟ್ಟಿಗೆ ಈ ಪ್ರಹಾರವನ್ನು ಸಹಿಸಿಕೊಳ್ಳಬಹುದಾದರೂ, ಸಣ್ಣ ಮತ್ತು ಅತಿಸಣ್ಣ ರೈತರು ನಶಿಸಿ ಹೋಗುತ್ತಾರೆ. ತಮ್ಮ ಭೂಮಿಯನ್ನೂ ಕಳೆದುಕೊಳ್ಳುತ್ತಾರೆ.

ಈಗಿರುವ ಅರೆ ಊಳಿಗಮಾನ್ಯ ವ್ಯವಸ್ಥೆಯಲ್ಲೇ ಸಣ್ಣ ಹಿಡುವಳಿದಾರರು, ಭೂ ಹೀನರು ಮತ್ತು ಕೃಷಿ ಕಾರ್ಮಿಕರು ಸುಸ್ಥಿರ ಬದುಕು ರೂಪಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಕಳೆದ ಮೂರು ದಶಕಗಳಲ್ಲಿ ಗ್ರಾಮೀಣ ಪ್ರದೇಶಗಳಿಂದ ನಗರಗಳಿಗೆ ವಲಸೆ ಹೆಚ್ಚಾಗಿರುವುದಕ್ಕೂ ಇದೇ ಕಾರಣ ಎನ್ನುವುದೂ ಸ್ಪಷ್ಟ. ಲಾಕ್ ಡೌನ್ ಸಂದರ್ಭದಲ್ಲಿ ಇದರ ಪ್ರಾತ್ಯಕ್ಷಿಕೆಯನ್ನೇ ನೋಡಿದ್ದೇವೆ. ಈ ಹಿನ್ನೆಲೆಯಲ್ಲಿ ಪ್ರಸ್ತುತ ಮುಷ್ಕರವನ್ನು ಗಮನಿಸಿದಾಗ ಇದು ಸಮಸ್ತ ಭಾರತೀಯರನ್ನು ಪ್ರತಿನಿಧಿಸುವ ಮುಷ್ಕರ ಎನಿಸುವುದಿಲ್ಲವೇ? ನಗರಗಳ ಸುತ್ತಮುತ್ತಲಿನ ಗ್ರಾಮಸ್ಥರು ಕಾರ್ಪೋರೇಟ್ ಉದ್ಯಮಿಗಳು ತೋರುವ ಆಮಿಷಗಳಿಗೆ ಬಲಿಯಾಗಿ ತಮ್ಮ ಅಲ್ಪ ಭೂಮಿಯನ್ನೂ ಕಳೆದುಕೊಂಡಿರುವ ನಿದರ್ಶನಗಳು ನಮ್ಮ ಮುಂದೆ ಹೇರಳವಾಗಿವೆ. ಹೊಸ ಮಸೂದೆಗಳು ಈ ಸಮಸ್ಯೆಯನ್ನು ಮತ್ತಷ್ಟು ಜಟಿಲಗೊಳಿಸುತ್ತವೆ.

ಕನಿಷ್ಟ ಬೆಂಬಲ ಬೆಲೆಯನ್ನು ರದ್ದುಪಡಿಸುವುದಿಲ್ಲ ಎಂದು ಕೇಂದ್ರ ಸರ್ಕಾರ ಹೇಳುತ್ತಿದ್ದರೂ, ನೂತನ ಕಾಯ್ದೆಯಲ್ಲಿ ಈ ಭರವಸೆಯ ಅಂಶವನ್ನು ಕಾಣಲಾಗುತ್ತಿಲ್ಲ. ಎಪಿಎಂಸಿ ಮತ್ತು ಮಂಡಿ ಪದ್ಧತಿಯೂ ಕ್ರಮೇಣ ಇಲ್ಲವಾಗುತ್ತದೆ. ರೈತರು ತಮ್ಮ ಫಸಲನ್ನು ಮಾರಾಟ ಮಾಡಲು ಕಾರ್ಪೋರೇಟ್ ಉದ್ಯಮಿಗಳನ್ನೇ ಅವಲಂಬಿಸಬೇಕಾಗುತ್ತದೆ. ಕೃಷಿ ಭೂಮಿಯ ಮೇಲೆ ತಮ್ಮ ಹಿಡಿತ ಸಾಧಿಸುವ ಕಾರ್ಪೋರೇಟ್ ವಲಯ ಮಾರುಕಟ್ಟೆಗೆ ಅವಶ್ಯವಾದ ಪದಾರ್ಥಗಳನ್ನು ಬೆಳೆಯಲು ಮುಂದಾಗುತ್ತವೆ. ಜನಸಾಮಾನ್ಯರ ನಿತ್ಯ ಬದುಕಿಗೆ ಅವಶ್ಯವಾದ ವಸ್ತುಗಳನ್ನು ಉತ್ಪಾದಿಸುವುದಿಲ್ಲ. ಇದು ಜನಸಾಮಾನ್ಯರನ್ನು ಬಾಧಿಸುವುದಿಲ್ಲವೇ? ಈ ಬೆಳವಣಿಗೆಗಳು ನೇರವಾಗಿ ಕೃಷಿಗೆ ಸಂಬಂಧವಿಲ್ಲದ ನಗರ ಮತ್ತು ಪಟ್ಟಣ ಕೇಂದ್ರಿತ ಜನತೆಯನ್ನು ಬಾಧಿಸುವುದಿಲ್ಲವೇ ?

ಭೂ ಹೀನರ, ಕೃಷಿ ಕಾರ್ಮಿಕರ ಮತ್ತು ಗ್ರಾಮೀಣ ಬಡಜನತೆಯ ಸಮಸ್ಯೆಗಳು ಈ ಮಸೂದೆಗಳಿಂದ ಪರಿಹಾರವಾಗುವುದೇ ? ಇನ್ನೂ ಬಿಗಡಾಯಿಸುತ್ತವೆ. ಏಕೆಂದರೆ ಕೃಷಿಕರಿಗೇ ತಮ್ಮ ಅಹವಾಲು ಸಲ್ಲಿಸುವ ಸಾಂಸ್ಥಿಕ ನೆಲೆಗಳು ಇಲ್ಲವಾಗುತ್ತವೆ. ಗುತ್ತಿಗೆ ಕೃಷಿ ವ್ಯವಸ್ಥೆಯಲ್ಲಿ ಫಸಲನ್ನು ಕೊಳ್ಳುವವನೇ ನ್ಯಾಯ ನಿರ್ಣಯ ಮಾಡುವ ಅಧಿಕಾರವನ್ನೂ ಹೊಂದಿರುತ್ತಾನೆ. ಸರ್ಕಾರಗಳು, ಆಡಳಿತ ವ್ಯವಸ್ಥೆ ತನ್ನ ಹೊಣೆಗಾರಿಕೆಯಿಂದ ನುಣುಚಿಕೊಂಡು ದೇಶದ ಸಮಸ್ತ ರೈತ ಸಮುದಾಯವನ್ನು ಕಾರ್ಪೋರೇಟ್ ಮರ್ಜಿಗೆ ಒಳಪಡಿಸುತ್ತದೆ. ಈ ಸಂದರ್ಭದಲ್ಲಿ ಕೃಷಿ ಉತ್ಪನ್ನಗಳ ಬೆಲೆ ಹೆಚ್ಚಾದರೆ ಭರಿಸುವವರು ಯಾರು ? ಈ ಮಸೂದೆಗೆ ಅವಕಾಶ ನೀಡಿದರೆ ಕ್ರಮೇಣ ಸಾರ್ವಜನಿಕ ಪಡಿತರ ವ್ಯವಸ್ಥೆಯೂ ಇಲ್ಲವಾಗುತ್ತದೆ. ಏಕೆಂದರೆ ಸರ್ಕಾರ ಕೃಷಿ ಫಸಲನ್ನು ಖರೀದಿಸಿ, ದಾಸ್ತಾನು ಮಾಡಿ, ಬಡ ಜನತೆಗೆ ವಿತರಿಸುವ ಹೊಣೆಯಿಂದ ಮುಕ್ತವಾಗುತ್ತದೆ. ಇದು ಜನಸಾಮಾನ್ಯರನ್ನು ಬಾಧಿಸುವುದಿಲ್ಲವೇ ?

ದೆಹಲಿಯಲ್ಲಿ ನೆರೆದಿರುವ ಲಕ್ಷಾಂತರ ರೈತರ ನಡುವೆ ಖಲಿಸ್ತಾನಿಗಳು, ದಲ್ಲಾಳಿಗಳು, ದೇಶದ್ರೋಹಿಗಳು, ನಗರ ನಕ್ಸಲರು ಮತ್ತು ರಾಜಕೀಯ ವಿರೋಧಿಗಳನ್ನು ಗುರುತಿಸುವ ಮುನ್ನ, ಪ್ರಜ್ಞಾವಂತ ಜನತೆ ತಮ್ಮನ್ನು ಮುಷ್ಕರದ ಒಂದು ಭಾಗವಾಗಿ ಗುರುತಿಸಿಕೊಂಡರೆ ಉಜ್ವಲ ಭವಿಷ್ಯವನ್ನು ಕಾಣಲು ಸಾಧ್ಯ. ಏಕೆಂದರೆ ನವ ಉದಾರವಾದಿ ಆರ್ಥಿಕ ನೀತಿಗಳು ಬೆಟ್ಟದಿಂದ ಉರುಳುವ ಹೆಬ್ಬಂಡೆಯಂತೆ ಎಲ್ಲವನ್ನೂ ಇಲ್ಲವಾಗಿಸುತ್ತದೆ. 1991ರಲ್ಲಿ ಕೈಗಾರಿಕೆಗಳಿಂದ ಆರಂಭವಾದ ಮಾರಾಟ ಪ್ರಕ್ರಿಯೆ ಈಗ ಕೃಷಿ ಭೂಮಿಯವರೆಗೂ ತಲುಪಿದೆ. ಸಾರ್ವಜನಿಕ ಉದ್ದಿಮೆಗಳನ್ನು ಖಾಸಗೀಕರಣಗೊಳಿಸಿದಾಗ ನಿರ್ಲಿಪ್ತರಾಗಿದ್ದ ಬ್ಯಾಂಕ್, ವಿಮೆ, ಸಾರಿಗೆ ಮತ್ತು ದೂರ ಸಂಪರ್ಕ ಕ್ಷೇತ್ರದ ನೌಕರರು ಈಗ ತಮ್ಮ ಅಡಿಪಾಯವೇ ಕುಸಿಯುತ್ತಿರುವುದನ್ನು ಮನಗಾಣುತ್ತಿದ್ದಾರೆ.

ಕೃಷಿ ಮಸೂದೆಯೂ ಹೀಗೆಯೇ ಬಾಧಿಸುತ್ತದೆ.  ಇಂದು ನೀರಾವರಿ ಸೌಲಭ್ಯ ಇರುವ, ಬಲಾಢ್ಯ ರೈತರನ್ನು ಬಾಧಿಸುವ ಕೃಷಿ ನೀತಿ ಮುಂದಿನ ದಿನಗಳಲ್ಲಿ ಸಣ್ಣ ರೈತರನ್ನು ನಿರ್ನಾಮ ಮಾಡುತ್ತದೆ. ಕೃಷಿ ಕಾರ್ಮಿಕರನ್ನು ನಿರ್ಗತಿಕರನ್ನಾಗಿ ಮಾಡುತ್ತದೆ. ನಗರೀಕರಣ ಪ್ರಕ್ರಿಯೆ ಚುರುಕುಗೊಂಡ ಸಂದರ್ಭದಲ್ಲೇ ತಮ್ಮ ಭೂಮಿಯನ್ನು ರಕ್ಷಿಸಿಕೊಳ್ಳುವ ನಿಟ್ಟಿನಲ್ಲಿ ಜಾಗೃತರಾಗದ ಬೃಹತ್ ರೈತ ಸಮುದಾಯ ಇಂದು ಕಂಗಾಲಾಗಿರುವುದನ್ನು ಗಮನಿಸುತ್ತಲೇ ಇದ್ದೇವೆ. ಹೊಸ ಕೃಷಿ ಮಸೂದೆಗಳು ಈ ರೈತ ಸಮುದಾಯವನ್ನು ಮತ್ತಷ್ಟು ಅಂಚಿಗೆ ತಳ್ಳುತ್ತವೆ. ಈ ಕಾರಣಕ್ಕಾಗಿಯೇ ಸಮಸ್ತ ರೈತ ಸಮುದಾಯ ಇಂದಿನ ಮುಷ್ಕರಕ್ಕೆ ದನಿಗೂಡಿಸುತ್ತಿದೆ.

ಇದು ಕೇವಲ ರೈತರ ಪ್ರಶ್ನೆ ಎನ್ನುವ ನಿರ್ಲಕ್ಷ್ಯ ಭಾರತದ ಹಿತವಲಯದ ಮಧ್ಯಮ ವರ್ಗಗಳಿಗೆ ಅಪಾಯಕಾರಿಯಾಗುತ್ತದೆ. ದೇಶದ ಆರ್ಥಿಕತೆಯ ಬೆನ್ನೆಲುಬು ಕಾರ್ಪೋರೇಟ್ ವಶವಾಗುತ್ತಿದೆ. ಔದ್ಯಮಿಕ ವಲಯ ಈಗಾಗಲೇ ಕಾರ್ಪೋರೇಟ್ ವಶದಲ್ಲಿದೆ. ಹಣಕಾಸು ಕ್ಷೇತ್ರ ಕ್ರಮೇಣ ಜಾರಿ ಹೋಗುತ್ತಿದೆ. ನಾವು ಚುನಾಯಿಸುವ ಸರ್ಕಾರಗಳು ಈ ಎಲ್ಲ ಕಾರ್ಪೋರೇಟ್ ವ್ಯವಹಾರಗಳನ್ನು ನಿರ್ವಹಿಸುವ ಒಂದು ಪ್ರಬಂಧಕ ಸಂಸ್ಥೆಯಾಗಿಬಿಡುತ್ತದೆ. ಇಡೀ ಅರ್ಥವ್ಯವಸ್ಥೆ ಮಾರುಕಟ್ಟೆ ವಶವಾಗುತ್ತದೆ. ಈ ಅವ್ಯವಸ್ಥೆಯ ನಡುವೆಯೇ ನಾವು ಭಾರತವೆಂಬೋ ದೇಶದಲ್ಲಿ ದೇಶಪ್ರೇಮ, ದೇಶಭಕ್ತಿಯ ಭಜನೆ ಮಾಡುತ್ತಾ ಮತ್ತೊಮ್ಮೆ ಔದ್ಯಮಿಕ ಜಗತ್ತಿನ ದಾಸ್ಯಕ್ಕೊಳಗಾಗಬೇಕಾಗುತ್ತದೆ. ಸ್ವಾತಂತ್ರ್ಯ ಪೂರ್ವದ ಪರಿಸ್ಥಿತಿಗೆ ಮರಳುತ್ತೇವೆ. ಹಾಗಾಗಿಯೇ ಈ ಮುಷ್ಕರ ನಿರ್ಣಾಯಕವಾಗುತ್ತದೆ. ಚಾರಿತ್ರಿಕ ಎನಿಸಿಕೊಳ್ಳುತ್ತದೆ.

ಟಾಪ್ ಸುದ್ದಿಗಳು

ವಿಶೇಷ ವರದಿ