ಇಂಗ್ಲಿಷ್ ಪ್ರೀಮಿಯರ್ ಲೀಗ್ ಟೂರ್ನಿಯ ದೈತ್ಯ ಫುಟ್ಬಾಲ್ ಕ್ಲಬ್ ಮ್ಯಾಂಚೆಸ್ಟರ್ ಯುನೈಟೆಡ್ ತಂಡವನ್ನು ಖರೀದಿಸುವುದಾಗಿ ತಾನು ತಮಾಷೆಯಾಗಿ ಟ್ವೀಟ್ ಮಾಡಿದ್ದೆ ಎಂದು ಟೆಲ್ಸಾ ಸಂಸ್ಥೆಯ ಮುಖ್ಯಸ್ಥ ಎಲಾನ್ ಮಸ್ಕ್ ಹೇಳಿದ್ದಾರೆ.
ʻನಾನು ಮ್ಯಾಂಚೆಸ್ಟರ್ ಯುನೈಟೆಡ್ ಕ್ಲಬ್ ಅನ್ನು ಖರೀದಿಸುತ್ತಿದ್ದೇನೆ, ನಿಮಗಿದೋ ಸ್ವಾಗತʼ ಎಂದು ಮಂಗಳವಾರ ಬೆಳಗ್ಗೆ ಎಲಾನ್ ಮಸ್ಕ್ ಟ್ವೀಟ್ ಮಾಡಿದ್ದರು. ಈ ಟ್ವೀಟ್ ಸಾಕಷ್ಟು ವೈರಲ್ ಆಗಿತ್ತು. ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಸತತ ವೈಫಲ್ಯ ಅನುಭವಿಸುತ್ತಿರುವ ಯುನೈಟೆಡ್ ತಂಡವನ್ನು ಮಸ್ಕ್ ಖರೀದಿಸಿದರೆ, ತಂಡಕ್ಕೆ ಒಳಿತಾಗಲಿದೆ ಎಂದು ಅಭಿಮಾನಿಗಳು ಸಂತಸ ಹಂಚಿಕೊಂಡಿದ್ದರು.
ಆದರೆ ಮಸ್ಕ್ ಟ್ವೀಟ್‌ಗೆ ಮರುಪ್ರಶ್ನೆ ಹಾಕಿದ್ದ ವ್ಯಕ್ತಿಯೊಬ್ಬರು ʻನೀವು ಗಂಭೀರವಾಗಿ ಈ ವಿಷಯ ಹೇಳುತ್ತೀದ್ದೀರಾ ?ʼ ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಸ್ಪಷ್ಟನೆ ನೀಡಿದ ಮಸ್ಕ್, ʻಇಲ್ಲ, ಇದು ಬಹಳ ಕಾಲದಿಂದ ಟ್ವಿಟರ್‌ನಲ್ಲಿರುವ ಹಾಸ್ಯವಾಗಿದೆ. ನಾನು ಯಾವುದೇ ಕ್ರೀಡಾ ತಂಡಗಳನ್ನು ಖರೀದಿಸುವುದಿಲ್ಲʼ ಎಂದು ಟ್ವೀಟ್ ಮಾಡಿದ್ದಾರೆ. ʻಒಂದು ವೇಳೆ ಖರೀದಿಸುವ ಆಸಕ್ತಿ ಬಂದದ್ದೇ ಆದರೆ ಅದು ಮ್ಯಾಂಚೆಸ್ಟರ್ ಯುನೈಟೆಡ್ ತಂಡ ಆಗಿರಲಿದೆ. ಏಕೆಂದರೆ ಬಾಲ್ಯದಲ್ಲಿ ಅದು ನನ್ನ ನೆಚ್ಚಿನ ತಂಡವಾಗಿತ್ತು,” ಎಂದು ಟ್ವೀಟ್ ಮಾಡಿದ್ದಾರೆ.