ಐಪಿಎಲ್‌| ಕೆಕೆಆರ್‌ ಮುಖ್ಯ ಕೋಚ್‌ ಆಗಿ ಚಂದ್ರಕಾಂತ್​ ಪಂಡಿತ್ ನೇಮಕ

Prasthutha|

ಐಪಿಎಲ್‌ನ ಎರಡು ಬಾರಿಯ ಚಾಂಪಿಯನ್‌ ತಂಡ ಕೋಲ್ಕತ್ತ ನೈಟ್‌ ರೈಡರ್ಸ್‌ ತಂಡದ ನೂತನ ಕೋಚ್‌ ಆಗಿ ಚಂದ್ರಕಾಂತ್​ ಪಂಡಿತ್​ ಅವರನ್ನು ನೇಮಕ ಮಾಡಲಾಗಿದೆ. ಈ ಕುರಿತು ಕೆಕೆಆರ್‌ ಫ್ರಾಂಚೈಸಿ ತನ್ನ ಅಧಿಕೃತ ಟ್ವಿಟರ್​​ನಲ್ಲಿ ಮಾಹಿತಿ ಹಂಚಿಕೊಂಡಿದೆ. ಬ್ರೆಂಡನ್‌ ಮೆಕಲಂ ಇಂಗ್ಲೆಂಡ್‌ ತಂಡದ ಮುಖ್ಯ ಕೋಚ್‌ ಆಗಿ ನೇಮಕವಾದ ಬಳಿಕ ತೆರವಾಗಿದ್ದ ಸ್ಥಾನಕ್ಕೆ ಚಂದ್ರಕಾಂತ್​ ಪಂಡಿತ್ ಅವರನ್ನು ನೇಮಿಸಲಾಗಿದೆ.

- Advertisement -

ದೇಶಿ ಕ್ರಿಕೆಟ್‌ನಲ್ಲಿ ʻಚಾಣಕ್ಯʼ ಖ್ಯಾತಿಯ ಕೋಚ್‌ ಆಗಿ ಚಂದ್ರಕಾಂತ್​ ಪಂಡಿತ್ ಅಮೋಘ ಯಶಸ್ಸು ಕಂಡಿದ್ದಾರೆ. ಪಂಡಿತ್‌ ನೇತೃತ್ವದಲ್ಲಿ ಈ ಬಾರಿ ಮಧ್ಯಪ್ರದೇಶ ತಂಡ, ಮೊತ್ತಮೊದಲ ಬಾರಿಗೆ ರಣಜಿ ಟ್ರೋಫಿ ಗೆದ್ದು ಬೀಗಿತ್ತು. ಚಂದ್ರಕಾಂತ್ ಪಂಡಿತ್, 1986ರಿಂದ 1992ರ ಅವಧಿಯಲ್ಲಿ ಭಾರತದ ಪರ 5 ಟೆಸ್ಟ್​​, 36 ಏಕದಿನ ಪಂದ್ಯ ಆಡಿದ ಅನುಭವ ಹೊಂದಿದ್ದಾರೆ.

`ಕೆಕೆಆರ್‌ ಕೋಚ್‌ ಜವಾಬ್ದಾರಿ ದೊಡ್ಡ ಗೌರವ ಮತ್ತು ಸವಾಲುʼ ಎಂದು ಪ್ರತಿಕ್ರಿಯಿಸಿರುವ ಪಂಡಿತ್, ʻಪ್ರತಿಭಾನ್ವಿತ ಆಟಗಾರರು, ಸಿಬ್ಬಂದಿ ಜೊತೆ ಕಾರ್ಯನಿರ್ವಹಿಸಲು ಉತ್ಸುಕನಾಗಿದ್ದೇನೆʼ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

- Advertisement -

ಚಂದ್ರಕಾಂತ್​ ಪಂಡಿತ್ ನೇಮಕದ ಕುರಿತು ಪ್ರತಿಕ್ರಿಯಿಸಿರುವ ಕೆಕೆಆರ್​​ ಸಿಇಒ ವೆಂಕಿ ಮೈಸೂರು, ʻನಮ್ಮ ಪ್ರಯಾಣದ ಮುಂದಿನ ಹಂತದಲ್ಲಿ ಚಂದ್ರಕಾಂತ್,​​ ನೈಟ್​​ ರೈಡರ್ಸ್​​ ಕುಟುಂಬ ಸೇರುತ್ತಿದ್ದಾರೆ. ಅವರು ಏನು ಮಾಡಿದ್ದಾರೆ ಎಂಬುವುದಕ್ಕೆ ದೇಶೀಯ ಕ್ರಿಕೆಟ್ ದಾಖಲೆಗಳೇ ಸಾಕ್ಷಿ. ಇದೀಗ ನಾಯಕ ಶ್ರೇಯಸ್​ ಅಯ್ಯರ್​ ಅವರ ಜೊತೆಗಿನ ಪಾಲುದಾರಿಕೆಗೆ ಎದುರು ನೋಡುತ್ತಿದ್ದೇವೆʼ ಎಂದಿದ್ದಾರೆ.

Join Whatsapp