ಎಲ್ಗಾರ್ ಪರಿಷತ್ ಪ್ರಕರಣ: ಗೌತಮ್ ನವ್ಲಾಖಾ ಗೃಹಬಂಧನಕ್ಕೆ ಸುಪ್ರೀಂ ಒಪ್ಪಿಗೆ

Prasthutha|

ನವದೆಹಲಿ: ಎಲ್ಗಾರ್ ಪರಿಷತ್ – ಮಾವೋವಾದಿ ನಂಟಿನ ಪ್ರಕರಣದಲ್ಲಿ ಬಂಧನಕ್ಕೊಳಗಾದ ಸಾಮಾಜಿಕ ಕಾರ್ಯಕರ್ತ ಗೌತಮ್ ನವ್ಲಾಖಾ ಅವರನ್ನು ಗೃಹ ಬಂಧನದಲ್ಲಿರಿಸಲು ಸುಪ್ರೀಂ ಕೋರ್ಟ್ ಗುರುವಾರ ಒಪ್ಪಿಗೆ ನೀಡಿದೆ.

- Advertisement -

ಗೌತಮ್ ಅವರ ಗೃಹ ಬಂಧನದ ಆದೇಶವನ್ನು ಮುಂದಿನ 48 ಗಂಟೆಗಳಲ್ಲಿ ಜಾರಿಗೊಳಿಸಬೇಕೆಂದು ನ್ಯಾಯಾಮೂರ್ತಿಗಳಾದ ಕೆ.ಎಂ. ಜೋಸೆಫ್ ಮತ್ತು ಹೃಷಿಕೇಶ್ ರಾಯ್ ಅವರನ್ನೊಳಗೊಂಡ ಪೀಠ ಆದೇಶ ನೀಡಿದೆ.

ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಯು ತನ್ನ ಭದ್ರತೆಗಾಗಿ ಪೊಲೀಸ್ ಸಿಬ್ಬಂದಿಯ ಖರ್ಚುವೆಚ್ಚ ಎಂದು ಹೇಳುವ ಅಂದಾಜು ಮೊತ್ತವಾದ 2.4 ಲಕ್ಷ ರೂಪಾಯಿಯನ್ನು ಠೇವಣಿ ಇಡುವಂತೆಯೂ ಸುಪ್ರೀಂ ಕೋರ್ಟ್ ಪೀಠ ಗೌತಮ್ ನವ್ಲಾಖಾ ಅವರಿಗೆ ಸೂಚಿಸಿದೆ.

- Advertisement -

ಗೃಹ ಬಂಧನದ ವೇಳೆ ಗೌತಮ್ ನವ್ಲಾಖಾ ಅವರು ಕಂಪ್ಯೂಟರ್ ಮತ್ತು ಇಂಟರ್ನೆಟ್ ಬಳಸಲು ಅನುಮತಿಸಲಾಗುವುದಿಲ್ಲ ಎಂದು ಪೀಠ ಸ್ಪಷ್ಟಪಡಿಸಿದೆ.

ವಿಚಾರಣಾ ಕೈದಿಯಾಗಿರುವ ನವ್ಲಾಖಾ ಅವರು ಗೃಹಬಂಧನದಲ್ಲಿರುವಾಗ ಕಂಪೂಟರ್, ಇಂಟರ್ನೆಟ್ ಅಥವಾ ಇತರ ಸಂಭಾಷಣೆ ನಡೆಸುವ ಸಾಧನವನ್ನು ಬಳಸುವಂತಿಲ್ಲ. ಅದರ ಹೊರತಾಗಿ, ಪೊಲೀಸರ ಸಮ್ಮುಖದಲ್ಲಿ ದಿನಕ್ಕೆ ಒಮ್ಮೆ ಮಾತ್ರ 10 ನಿಮಿಷಗಳ ಕಾಲ ಕರ್ತವ್ಯದಲ್ಲಿರುವ ಪೊಲೀಸ್ ಸಿಬ್ಬಂದಿ ಒದಗಿಸಿದ ಇಂಟರ್ನೆಟ್ ಇಲ್ಲದ ಮೊಬೈಲ್ ಫೋನ್ ಬಳಸಲು ಅವರಿಗೆ ಅನುಮತಿ ನೀಡಲಾಗುತ್ತದೆ ಎಂದು ಪೀಠ ತನ್ನ ಆದೇಶದಲ್ಲಿ ತಿಳಿಸಿದೆ.

ಈ ಮಧ್ಯೆ ನವ್ಲಾಖಾ ಅವರನ್ನು ಮುಂಬೈನಿಂದ ಹೊರಹೋಗಲು ಅನುಮತಿಸಲಾಗುವುದಿಲ್ಲ ಮತ್ತು ಅವರು ಗೃಹಬಂಧನದ ವೇಳೇ ಸಾಕ್ಷಿಗಳ ಮೇಲೆ ಯಾವುದೇ ರೀತಿಯಲ್ಲಿ ಪ್ರಭಾವ ಬೀರಲು ಪ್ರಯತ್ನಿಸಬಾರದು ಎಂದು ಗೌತಮ್ ಅವರಿಗೆ ಕಟ್ಟುನಿಟ್ಟಾಗಿ ಸುಪ್ರೀಂ ಕೋರ್ಟ್ ಆದೇಶ ನೀಡಿದೆ.

ದೂರದರ್ಶನ ವೀಕ್ಷಣೆ ಮತ್ತು ಪತ್ರಿಕೆ ಓದಲು ಅನುಮತಿಸಲಾಗುವುದು. ಆದರೆ ಇವು ಇಂಟರ್ನೆಟ್ ಒಳಗೊಂಡಿರಬಾರದು ಎಂದು ತನ್ನ ಆದೇಶದಲ್ಲಿ ಸುಪ್ರೀಂ ಪೀಠ ಉಲ್ಲೇಖಿಸಿದೆ.
ವಿಚಾರಣಾ ಕೈದಿಯಾಗಿರುವ ನವ್ಲಾಖಾ ಈ ಎಲ್ಲಾ ಷರತ್ತುಗಳಿಗೆ ಬದ್ಧರಾಗುತ್ತಾರೆ ಎಂಬುದನ್ನು ನಾವು ಗಮನಿಸುತ್ತೇವೆ. ಯಾವುದೇ ವ್ಯತ್ಯಾಸ ಕಂಡು ಬಂದಲ್ಲಿ ಗಂಭೀರವಾಗಿ ಸ್ವೀಕರಿಸಲಾಗುವುದು ಮತ್ತು ಆದೇಶವನ್ನು ತಕ್ಷಣವೇ ರದ್ದುಗೊಳಿಸಲಾಗುವುದು ಎಂದು ಪೀಠ ಹೇಳಿದೆ.

Join Whatsapp