ಬೆಂಗಳೂರು: ಮುಂಗಾರು ವೈಫಲ್ಯದಿಂದ ರಾಜ್ಯದಲ್ಲಿ ವಿದ್ಯುತ್ ಕೊರತೆ ಎದುರಾಗಿದ್ದು, ಬೇಡಿಕೆಯ ಪ್ರಮಾಣ ಬಹಳ ಹೆಚ್ಚಾಗಿದೆ. ಈ ಕಾರಣದಿಂದಾಗಿ ವಿದ್ಯುತ್ ಪಡಿತರ ವ್ಯವಸ್ಥೆಗೆ ಹೋಗಲು ಇಂಧನ ಇಲಾಖೆ ನಿರ್ಧರಿಸಿದೆ.
ಈ ಉದ್ದೇಶಕ್ಕಾಗಿ ಇಂಧನ ಇಲಾಖೆಯು ಶೀಘ್ರದಲ್ಲೇ ಆದ್ಯತೆ ಮತ್ತು ಆದ್ಯತೆಯೇತರ ಗ್ರಾಹಕರನ್ನು ಪಟ್ಟಿ ಮಾಡಲಿದೆ. ಕೊರತೆ ನೀಗಿಸಲು ರಾಜ್ಯ ಸರ್ಕಾರ ಇತರ ರಾಜ್ಯಗಳಿಂದ ವಿದ್ಯುತ್ ಖರೀದಿಸಲು ಕ್ರಮ ಕೈಗೊಂಡಿದೆ.
ಕಳೆದ ವರ್ಷ ಇದೇ ಅವಧಿಗೆ 12,000 ಮೆಗಾವ್ಯಾಟ್ ಬೇಡಿಕೆಯಿತ್ತು, ಆದರೆ ಈಗ ಅಕ್ಟೋಬರ್ನಲ್ಲಿ ಗರಿಷ್ಠ ಬೇಡಿಕೆ 15000 ಮೆಗಾವ್ಯಾಟ್ ಆಗಿದೆ. ರಾಜ್ಯವು 1500-2000 ಮೆಗಾವ್ಯಾಟ್ ಉತ್ಪಾದನೆಯಲ್ಲಿ ಕೊರತೆ ಎದುರಿಸುತ್ತಿದೆ. ಹೀಗಾಗಿ ರೈತರ ನೀರಾವರಿ ಪಂಪ್ಸೆಟ್ಗಳಿಗೆ ವಿದ್ಯುತ್ ಪೂರೈಕೆ ಕಡಿಮೆ ಮಾಡಲು ನಿರ್ಧರಿಸಿದೆ.
ಕ
ಸಿಇಇ (ಮುಖ್ಯ ಕಾರ್ಯನಿರ್ವಾಹಕ ಎಂಜಿನಿಯರ್) ಶ್ರೇಣಿಯ ನೋಡಲ್ ಅಧಿಕಾರಿಗಳು ಪ್ರತಿ ಜಿಲ್ಲೆಯಲ್ಲಿ ವಿದ್ಯುತ್ ಪೂರೈಕೆಯ ಮೇಲ್ವಿಚಾರಣೆ ಮಾಡುತ್ತಾರೆ. ಈ ನೋಡಲ್ ಅಧಿಕಾರಿಗಳು 220ಕೆವಿ ಕೇಂದ್ರಗಳಿಗೆ ಮಂಜೂರಾದ ವಿದ್ಯುತ್ ಪೂರೈಕೆ ಮೇಲ್ವಿಚಾರಣೆ ಮಾಡುತ್ತಾರೆ ಎಂದು ಹೆಚ್ಚುವರಿ ಕಾರ್ಯದರ್ಶಿ (ಇಂಧನ ಇಲಾಖೆ) ಗೌರವ್ ಗುಪ್ತಾ ತಿಳಿಸಿದ್ದಾರೆ.
ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ಲಿಮಿಟೆಡ್ (ಬೆಸ್ಕಾಂ) ಪ್ರಕಾರ, ಅಕ್ಟೋಬರ್ 6 ರಂದು ಬೆಸ್ಕಾಂ ಮಿತಿಯಲ್ಲಿ 7,386ಮೆಗಾ ವ್ಯಾಟ್ ಮತ್ತು ಬೆಂಗಳೂರು ನಗರದಲ್ಲಿ 3,645ಮೆಗಾವ್ಯಾಟ್ ಬೇಡಿಕೆ ಇತ್ತು. ಈಗ ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸಲು ರಾಜ್ಯವು ವಿದ್ಯುತ್ ಖರೀದಿಸಲು ಯೋಜಿಸುತ್ತಿದೆ. ಅಕ್ಟೋಬರ್ನಿಂದ ಮೇ 2024 ರವರೆಗೆ ಪ್ರೀ ಸೋಲಾರ್ ಮತ್ತು ಪೋಸ್ಟ್ ಸೋಲಾರ್ ಸಮಯದಲ್ಲಿ ಉತ್ತರ ಪ್ರದೇಶದೊಂದಿಗೆ 300 ರಿಂದ 600ಮೆಗಾ ವ್ಯಾಟ್ ವಿದ್ಯುತ್ ಖರೀದಿಸಲುಗೆ ಮಾತುಕತೆ ನಡೆಸಿದೆ.
ಪಾವಗಡದಲ್ಲಿ ವಿದ್ಯುತ್ ಉತ್ಪಾದನೆ 800 ಮೆಗಾವ್ಯಾಟ್ಗೆ ಇಳಿಕೆ
ನವೆಂಬರ್ ನಿಂದ 2024ರ ಮುಂಗಾರು ಹಂಗಾಮಿನ ವರೆಗೂ ಇದೇ ಪರಿಸ್ಥಿತಿ ಮುಂದುವರೆಯುವ ಸಾಧ್ಯತೆ ಇದ್ದು, ಈ ಹಿನ್ನೆಲೆಯಲ್ಲಿ ಪರಿಸ್ಥಿತಿ ನಿಭಾಯಿಸಲು ಇಂಧನ ಇಲಾಖೆಯು ಪಂಜಾಬ್ನಿಂದ ವಿನಿಮಯ ಯೋಜನೆಯಡಿ ವಿದ್ಯುತ್ ಪಡೆಯಲು ಮುಂದಾಗಿದೆ ಎಂದು ತಿಳಿದುಬಂದಿದೆ.
ಈ ವರ್ಷ ಆಗಸ್ಟ್ ತಿಂಗಳಲ್ಲಿ 17.000 ಮೆಗಾ ವ್ಯಾಟ್ನಷ್ಟು ವಿದ್ಯುತ್ಗೆ ಬೇಡಿಕೆ ಇತ್ತು.ಸೆಪ್ಟಂಬರ್ ನಲ್ಲಿ ಆಗಾಗ್ಗೆ ಮಳೆಯಾದ ಪರಿಣಾಮ ಬೇಡಿಕೆಯಲ್ಲಿ ಸ್ವಲ್ಪ ವ್ಯತ್ಯಾಸವಾಗಿತ್ತು, ಸದ್ಯ ವಿವಿಧ ವಲಯಗಳಿಂದ, ವಿಶೇಷವಾಗಿ ರೈತರಿಂದ ಬೇಡಿಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಈಗ ಉಷ್ಣ ವಿದ್ಯುತ್ ಉತ್ಪಾದನೆಯತ್ತ ಗಮನ ಹರಿಸಲಾಗಿದೆ.
ಮೋಡ ಕವಿದ ವಾತಾವರಣದಿಂದಾಗಿ ಪಾವಗಡ ಸೋಲಾರ್ ಪಾರ್ಕ್ನಲ್ಲಿ 800 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಕುಸಿದಿದೆ. ಪವನ ಯೋಜನೆಗಳಿಂದ ವಿದ್ಯುತ್ ಉತ್ಪಾದನೆಯು 2000 ಮೆಗಾ ವ್ಯಾಟ್ ನಿಂದ 400 ಮೆಗಾ ವ್ಯಾಟ್ ಗೆ ಇಳಿದಿದೆ. ನವೀಕರಿಸಬಹುದಾದ ಮೂಲಗಳಿಂದ 2000 ಮೆಗಾವ್ಯಾಟ್ ಕೊರತೆಯಿದೆ. ಹೀಗಾಗಿ ಉಷ್ಣ ವಿದ್ಯುತ್ ಉತ್ಪಾದನೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುತ್ತಿದೆ.