ಚುನಾವಣೆ, ಜನ ಗನ ಮನ ಸಿನಿಮಾ, ಭಾರತ್ ಜೋಡೋ ಯಾತ್ರೆ, ಎನ್.ಐ.ಎ. ಮತ್ತು ನ್ಯಾಷನಲ್ ಹೆಡ್ ಲೈನ್

✍️ಇಮ್ತಿಯಾಝ್ ಶಾ ತುಂಬೆ

ಜಾವೀದ್ ಅಲಿ ಮತ್ತು ಮುಹಮ್ಮದ್ ಅಲಿ ಒಟ್ಟು ಸೇರಿ ಬಾಂಬ್ ತಯಾರಿ ಮಾಡುತ್ತಿದ್ದರು. ಯಾಸೀನ್ ಭಟ್ಕಳ, ಸಿಮಿ, ಲಷ್ಕರೆ ತಯ್ಯಿಬ, ಇಂಡಿಯನ್ ಮುಜಾಹಿದ್, ಅಲ್ ಖೈದಾ, ತಾಲಿಬಾನ್ ಸಹಿತ ಮೊದಲಾದ ಸಂಘಟನೆಗಳ ಜೊತೆಗೆ ಇವರು ಸಂಪರ್ಕ ಹೊಂದಿದ್ದರು. ಪಾಕಿಸ್ತಾನ, ಅಫ್ಘಾನಿಸ್ತಾನಕ್ಕೆ ಭೇಟಿ ನೀಡಿದ್ದರು. ಹಿಂದೂಗಳನ್ನೆಲ್ಲಾ ಕೊಂದು ಇಂಡಿಯಾವನ್ನು ಮುಸ್ಲಿಮ್ ರಾಷ್ಟ್ರವನ್ನಾಗಿ ಮಾಡಲು ಕೆಲಸ ಮಾಡುತ್ತಿದ್ದರು. ಹಿಂದೂ ಉತ್ಸವ, ದೇವಸ್ಥಾನಗಳನ್ನು ಟಾರ್ಗೆಟ್ ಮಾಡಿ ಬಾಂಬ್ ದಾಳಿಯ ಮೂಲಕ ಕರಾವಳಿಯಲ್ಲಿ ಭಾರೀ ದೊಡ್ಡ ರಕ್ತಪಾತ ಎಸಗಲು ಮುಂದಾಗಿದ್ದರು. ಅದಕ್ಕಾಗಿ ಇವರಿಗೆ ವಿದೇಶದಿಂದ ಕೋಟ್ಯಂತರ ರೂಪಾಯಿ ಹಣ ಕೂಡಾ ಬರುತ್ತಿತ್ತು.

- Advertisement -


ಇವು… ನಾನು ಕಾಲೇಜು ಒಂದರಲ್ಲಿ ಕಲಿಯುತ್ತಿದ್ದ ಸಂದರ್ಭ ನಮ್ಮ ಸೀನಿಯರ್ ಜಾವೀದ್ ಅಲಿ ಮತ್ತು ಆತನ ತಂದೆ ಮುಹಮ್ಮದ್ ಅಲಿಯನ್ನು ಭಯೋತ್ಪಾದನಾ ಪ್ರಕರಣದ ಆರೋಪದಲ್ಲಿ ಪೊಲೀಸರು ಬಂಧಿಸಿದ್ದ ಬಳಿಕ ಪತ್ರಿಕೆ, ಟಿವಿಯಲ್ಲಿ ಬರುತ್ತಿದ್ದ ಸುದ್ದಿಗಳು. ಈ ಸುದ್ದಿಗಳನ್ನು ಓದುವಾಗ, ಕೇಳುವಾಗ ಮೈ ಜುಂ ಎನಿಸುತ್ತಿತ್ತು. ಒಂದು ಇರುವೆ ಕಚ್ಚಿದಷ್ಟು ಕೂಡಾ ಯಾರಿಗೂ ನೋವು ಮಾಡದ ಸೌಮ್ಯ ಸ್ವಭಾವದ ಜಾವೀದ್ ಭಯೋತ್ಪಾದಕನಾ? ಬಾಂಬ್ ತಯಾರಿಸುತ್ತಿದ್ದನಾ. ಕೈಯಲ್ಲಿ ಹಣವಿಲ್ಲದೆ ಮಧ್ಯಾಹ್ನ ಕೇವಲ ಒಂದು ಪರೋಟ ತಿನ್ನುತ್ತಿದ್ದ, ಸರಿಯಾದ ಪ್ಯಾಂಟ್ ಶರ್ಟ್ ಧರಿಸದ ಈತ ವಿದೇಶದಿಂದ ಬರುತ್ತಿದ್ದ ಕೋಟ್ಯಂತರ ರೂಪಾಯಿ ಏನು ಮಾಡುತ್ತಾನೆ ಎಂದೆಲ್ಲಾ ಆಶ್ಚರ್ಯಪಡುತ್ತಿದೆ.

ಹಲವು ವರ್ಷಗಳ ಕಾಲ ಜೈಲಿನಲ್ಲಿ ಬಂಧಿಯಾಗಿದ್ದ ಜಾವೀದ್ ಮೇಲಿನ ಆರೋಪಕ್ಕೆ ಯಾವುದೇ ಸಾಕ್ಷ್ಯಾಧಾರ ಇಲ್ಲ ಎಂದು ಹೇಳಿ ನ್ಯಾಯಾಲಯ ಬಂಧಮುಕ್ತ ಗೊಳಿಸಿತು. ಬಂಧನವಾದಾಗ ಪುಟಗಟ್ಟಲೆ, ತಿಂಗಳುಗಟ್ಟಲೆ ಹಸಿ ಹಸಿ ಸುಳ್ಳು ಸುದ್ದಿಗಳನ್ನು ಪ್ರಕಟಿಸಿದ ಮಾಧ್ಯಮಗಳಿಗೆ ಅವರು ಆರೋಪ ಮುಕ್ತರಾಗಿ ಹೊರಗೆ ಬಂದ ಸುದ್ದಿ ಪ್ರಕಟಿಸಲು ಒಂದು ಕಾಲಂ ಕೂಡಾ ಜಾಗ ಇರಲಿಲ್ಲ. ಇದು ಕೇವಲ ಒಬ್ಬ ಜಾವೀದ್ ಅಲಿಯ ಕಥೆ ಅಲ್ಲ. ಇಂಡಿಯಾದಲ್ಲಿ ಇಂತಹ ನೂರಾರು ಮುಸ್ಲಿಮ್ ಯುವಕರ ಕಥೆ ಇದೆ. ಜೀವನದ ಅತ್ಯಮೂಲ್ಯವಾದ ವರ್ಷಗಳನ್ನು ಜೈಲಿನಲ್ಲಿ ಕಳೆದ ಅಮಾಯಕ ಯುವಕರ ಕಥೆ.
2008ರ ಮೇ 22ಕ್ಕೆ ವಿಧಾನಸಭಾ ಚುನಾವಣೆ ನಡೆಯುತ್ತದೆ. ಅದಕ್ಕೂ ಮೊದಲು ಅಂದರೆ 2008 ಮೇ 10ರಂದು ಹುಬ್ಬಳ್ಳಿ ಜಿಲ್ಲಾ ನ್ಯಾಯಾಲಯದಲ್ಲಿ ಬಾಂಬ್ ಸ್ಫೋಟ ನಡೆಯುತ್ತದೆ. ಪ್ರಕರಣಕ್ಕೆ ಸಂಬಂಧಿಸಿ ಹಲವು ಮುಸ್ಲಿಮ್ ಯುವಕರ ಬಂಧನ ನಡೆಯುತ್ತದೆ. ಇವರಿಗೆ ಹಲವು ನಿಷೇಧಿತ ಸಂಘಟನೆಗಳು, ವಿವಿಧ ದೇಶಗಳ ಸಂಪರ್ಕಗಳನ್ನು ಮಾಧ್ಯಮಗಳು ಕಲ್ಪಿಸುತ್ತದೆ. ಹಗಲು ರಾತ್ರಿ ಎನ್ನದೆ ಟಿವಿ ಚಾನೆಲ್ ಗಳಲ್ಲಿ ಭಯಾನಕ ಟೈಟಲ್ ಗಳಲ್ಲಿ ಈ ಭಯೋತ್ಪಾದಕರ ಸುದ್ದಿಗಳು ಪ್ರಸಾರವಾಗುತ್ತದೆ. ಇದನ್ನೇ ತಮ್ಮ ಚುನಾವಣಾ ಪ್ರಚಾರಕ್ಕೆ ಬಳಸಿದ ರಾಜಕೀಯ ಪಕ್ಷವೊಂದು ನಿರೀಕ್ಷಿಸಿದಂತೆ ಇಡೀ ರಾಜ್ಯದಲ್ಲಿ ತನ್ನ ಪರ ಅಲೆಯನ್ನು ಹುಟ್ಟಿಸುತ್ತದೆ.

ಈ ಪ್ರಕರಣದ ಏಳು ತಿಂಗಳ ನಂತರ, ಅಂದರೆ 2009 ಜನವರಿಯಲ್ಲಿ ಹುಬ್ಬಳ್ಳಿ ನ್ಯಾಯಾಲಯ ಸ್ಫೋಟ ಪ್ರಕರಣವನ್ನು ಭೇದಿಸಿರುವುದಾಗಿ ಪೊಲೀಸರು ಘೋಷಿಸಿದರು. ಶ್ರೀ ರಾಮ ಸೇನೆಯ ಪ್ರಮೋದ್ ಮುತಾಲಿಕ್ ಆಪ್ತ ನಾಗರಾಜ ಜಂಬಗಿ ಈ ಸ್ಫೋಟದ ಮಾಸ್ಟರ್ ಮೈಂಡ್ ಎಂದು ಪೊಲೀಸರು ತಿಳಿಸಿದರು. ನಾಗರಾಜ ಜಂಬಗಿ ಬಂಧನವಾಗಿ ಕೆಲವೇ ದಿನಗಳಲ್ಲಿ ಜೈಲಿನಲ್ಲಿ ನಿಗೂಢವಾಗಿ ಕೊಲೆಯಾದ. ಈ ಮೂಲಕ ಸ್ಫೋಟಕ್ಕೆ ಸಂಬಂಧಿಸಿ ಹಲವು ಪ್ರಶ್ನೆಗಳಿಗೆ ಉತ್ತರ ದೊರಕದೆ ವಾಸ್ತವಾಂಶಗಳು ಅಡಗಿಸಲ್ಪಟ್ಟವು. ಈ ಪ್ರಕರಣದಲ್ಲಿ ಬಂಧಿತರಾದ ಮುಸ್ಲಿಮ್ ಯುವಕರು ಬಳಿಕ ಬಿಡುಗಡೆಯಾದರು. ಆದರೆ ಅವರ ಬಂಧನವಾದಾಗ ಹಗಲು ರಾತ್ರಿ, ತಿಂಗಳುಗಟ್ಟಳೆ ಸುದ್ದಿ ಮಾಡಿದ ಮಾಧ್ಯಮಗಳಿಗೆ ಬಿಡುಗಡೆಯ ಸುದ್ದಿಗೆ ಜಾಗನೂ, ಸಮಯನೂ ಸಿಗಲಿಲ್ಲ.

2013ರ ವಿಧಾನಸಭಾ ಚುನಾವಣೆಗೆ ಮೊದಲು ರಾಜ್ಯದಲ್ಲಿ ಮತ್ತೊಂದು ಆಘಾತಕಾರಿ ಸುದ್ದಿಯನ್ನು ಮಾಧ್ಯಮಗಳು ಪ್ರಕಟಿಸಿದವು. ಹಲವು ಶಾಸಕರು, ಸಂಸದರು, ಸಚಿವರು, ಉದ್ಯಮಿಗಳು, ಪ್ರಮುಖ ಪತ್ರಿಕೆಗಳ ಸಂಪಾದಕರನ್ನು ಹತ್ಯೆ ಮಾಡಲು, ಗಣೇಶೋತ್ಸವ ಮೆರವಣಿಗೆಯಲ್ಲಿ ಬಾಂಬ್ ಸ್ಫೋಟಿಸಿ ರಕ್ತಪಾತ ನಡೆಸಲು ಸಂಚು ರೂಪಿಸಿದ್ದ 11 ಮಂದಿ ಭಯೋತ್ಪಾದಕರನ್ನು ಕರ್ನಾಟಕ ಪೊಲೀಸರು ಬಂಧಿಸಿದ್ದಾರೆ ಎಂಬುದಾಗಿತ್ತು ಸುದ್ದಿ. ಬಂಧಿತ ಎಲ್ಲಾ 11 ಮಂದಿ ಮುಸ್ಲಿಮ್ ಯುವಕರಲ್ಲಿ ವೈದ್ಯರು, ಪತ್ರಕರ್ತರು, ವಿಜ್ಞಾನಿಗಳು ಮತ್ತು ಐಟಿ ವೃತ್ತಿ ನಿರತ ಉನ್ನತ ಶಿಕ್ಷಣ ಪಡೆದವರೇ ಇದ್ದರು.

11 ಮಂದಿಯ ಬಂಧನದ ಬಳಿಕ ಟಿ.ವಿ. ಮಾಧ್ಯಮಗಳು, ಪತ್ರಿಕೆಗಳು ಇಸ್ಲಾಮಿಕ್ ಬಟ್ಟೆ ಧರಿಸಿದ, ಕೋವಿ ಹಿಡಿದು ನಿಂತ ಉಗ್ರರ ಕಾಲ್ಪನಿಕ ಚಿತ್ರಗಳೊಂದಿಗೆ ಭಾರೀ ಸುದ್ದಿ ಮಾಡಿತು. ಬಂಧಿತರಿಗೆ ಕೆಲವು ದೇಶಗಳ ಸಂಪರ್ಕ, ನಿಷೇಧಿತ ಸಂಘಟನೆಗಳ ಸಂಪರ್ಕವನ್ನೂ ಮಾಧ್ಯಮಗಳು ಕಲ್ಪಿಸಿತು. ಕರ್ನಾಟಕ ಜನತೆಗೆ ರಾತ್ರಿ ಬೆಳಗಾಗುವಷ್ಟರಲ್ಲಿ ಬಂದ 11 ಮಂದಿ ಭಯೋತ್ಪಾದಕರ ಸುದ್ದಿ, 2008ರಿಂದ 2013ರ ವರೆಗೆ ಮೂರು ಮುಖ್ಯಮಂತ್ರಿಗಳು, ಹಲವು ಹಗರಣಗಳು, ಮುಖ್ಯಮಂತ್ರಿ ಸಹಿತ ಹಲವು ಸಚಿವರು ಜೈಲು ಪಾಲು. ಕೋಮು ಹಿಂಸೆಗಳು. ಶಾಸಕ, ಸಚಿವರ ಸೆಕ್ಸ್ ವೀಡಿಯೋ, ಲೈಂಗಿಕ ದೌರ್ಜನ್ಯ, ರೆಸಾರ್ಟ್ ರಾಜಕೀಯ, ಕಾದಾಟ ಗುದ್ದಾಟ ಮೊದಲಾದ ಸುದ್ದಿಯನ್ನೆಲ್ಲಾ ಮರೆಯುವಂತೆ ಮಾಡಿತು.

ಕರ್ನಾಟಕ ಪೊಲೀಸರಿಂದ ತನಿಖೆ ಕೈಗೆ ತೆಗೆದುಕೊಂಡ ಎನ್.ಐ.ಎ. ಆರು ತಿಂಗಳಲ್ಲಿ ಆ ಬಂಧಿತ 11 ಮಂದಿಗೂ, ಅವರ ಮೇಲೆ ಮಾಡಿರುವ ಆರೋಪಕ್ಕೂ ಯಾವುದೇ ಆಧಾರ ಇಲ್ಲ ಎಂದು ಬಿಡುಗಡೆ ಮಾಡತೊಡಗಿತು. ಕೆಲವರು ಜಾಮೀನಿನ ಮೇಲೆ ಹೊರ ಬಂದರೆ, ಕೆಲವರನ್ನು ಎನ್.ಐ.ಎ. ನೇರವಾಗಿ ಬಿಡುಗಡೆ ಮಾಡಿತು. 1992ರಿಂದ ಇಲ್ಲಿಯ ವರೆಗೆ ಈ ರೀತಿ ಬಂಧಿಸಲ್ಪಟ್ಟ ಮುಸ್ಲಿಮ್ ಯುವಕರಲ್ಲಿ ಬಹುತೇಕರು ತಮ್ಮ ಮೇಲಿನ ಎಲ್ಲಾ ಆರೋಪಗಳಿಂದ ಮುಕ್ತರಾಗಿ ನ್ಯಾಯಾಲಯದಿಂದ ಬಿಡುಗಡೆಯಾಗಿದ್ದಾರೆ. ಆದರೆ ಬಂಧನದ ಬಳಿಕ ಅವರು, ಅವರ ಕುಟುಂಬ ಅನುಭವಿಸಿದ ಮಾನಸಿಕ ಯಾತನೆ, ಪೊಲೀಸ್ ಕಸ್ಟಡಿಯಲ್ಲಿ ಅನುಭವಿಸಿದ ಹಿಂಸೆ, ಕಾನೂನು ಹೋರಾಟಕ್ಕೆ ಮಾಡಿದ ಲಕ್ಷಾಂತರ ರೂಪಾಯಿ ಖರ್ಚು, ಎಲ್ಲದಕ್ಕೂ ಮಿಗಿಲಾಗಿ ಜೈಲಿನಲ್ಲಿ ಕಳೆದ ತಮ್ಮ ಜೀವನದ ಅತ್ಯಮೂಲ್ಯವಾದ ಸಮಯಕ್ಕೆ ಪರಿಹಾರ ಕೊಡುವವರು ಯಾರು?
2018ರ ವಿಧಾನಸಭಾ ಚುನಾವಣೆಯ ಪ್ರಚಾರಕ್ಕೆ ಇಂತಹ ಭಯೋತ್ಪಾದಕರ ಅಗತ್ಯ ಇರಲಿಲ್ಲ. ರಾಜ್ಯದಲ್ಲಿ ನಡೆದ ಹಿಂದೂಗಳ ಕೊಲೆಗಳೇ ಸಾಕಾಗಿತ್ತು. ಆದರೆ 2023ರ ವಿಧಾನಸಭಾ ಮತ್ತು 2014ರ ಸಂಸತ್ತು ಚುನಾವಣೆಯ ಪ್ರಚಾರಕ್ಕೆ ದೊಡ್ಡದಾದ ಸಬ್ಜೆಕ್ಟ್ ಒಂದು ಬೇಕು. 2023ರಲ್ಲಿ ದೇಶದ ವಿವಿಧ ರಾಜ್ಯಗಳ ಚುನಾವಣೆಯೂ ನಡೆಯಲಿದೆ. ಮೊದಲು ಪಾಕಿಸ್ತಾನದ ಹೆಸರು ಹೇಳಿದರೆ ಸಾಕಾಗಿತ್ತು. ಅಥವಾ ಅಯೋಧ್ಯೆಯ ಹೆಸರಿನಲ್ಲಿ ಕಾರ್ಯಕರ್ತರನ್ನೂ ಜನರನ್ನೂ ಕೆರಳಿಸಬಹುದಿತ್ತು. ಪ್ರಸಕ್ತ ಅದಕ್ಕೆ ಕಾರ್ಯಕರ್ತರು, ಜನರೂ ಕೆರಳುತ್ತಿಲ್ಲ. ಅಭಿವೃದ್ಧಿಗಳು ಶೂನ್ಯವಾದಾಗ, ನಿರುದ್ಯೋಗ ತಾಂಡವವಾಡುತ್ತಿದ್ದಾಗ, ಬಡತನ ಹೆಚ್ಚುತ್ತಿರುವಾಗ, ಅತ್ಯಾಚಾರ, ಕೊಲೆಗಳು ಹೆಚ್ಚುತ್ತಿರುವಾಗ, ದಿನಬಳಕೆ, ಪೆಟ್ರೋಲ್, ಗ್ಯಾಸ್ ಬೆಲೆ ಗಗನಕ್ಕೆ ಏರಿದಾಗ, ಚುನಾವಣಾ ಸಂದರ್ಭದಲ್ಲಿ ನೀಡಿದ ಭರವಸೆಗಳೆಲ್ಲಾ ಪೊಳ್ಳು ಆದಾಗ ಅಸಮಾಧಾನ, ಆಕ್ರೋಶಗೊಂಡ ಕಾರ್ಯಕರ್ತರ, ಜನರ ಮನಸ್ಸನ್ನು ಭಾವನಾತ್ಮಕವಾಗಿ ತಿರುಗಿಸಲು ಇರುವ ಏಕೈಯ ದಾರಿ ಅದೇ ಭಯೋತ್ಪಾದನೆ ಆರೋಪ ಮತ್ತು ಬಂಧನ ಹಾಗೂ ಅದನ್ನು ನ್ಯಾಷನಲ್ ಹೆಡ್ ಲೈನ್ ಮಾಡಿಸುವುದು.

‘ಮುಂದೆ ನಡೆಯುವ ಚುನಾವಣೆಯಲ್ಲಿ ಪಕ್ಷಕ್ಕೆ ಅಧಿಕಾರ ತಪ್ಪಲಿದೆ’ ಎಂದು ಗುಪ್ತಚರ ಇಲಾಖೆ ನೀಡುವ ವರದಿ. ಅದೇ ಸಂದರ್ಭದಲ್ಲಿ ಹಿಟ್ ಆ್ಯಂಡ್ ರನ್ ನಲ್ಲಿ ಸಾವನ್ನಪ್ಪುವ ಯುವತಿ. ಆ ಯುವತಿಯ ಶವವನ್ನು ಸುಟ್ಟು ಹಾಕಿಸುವ ಮೂಲಕ ಯುವತಿಯ ಸಾವನ್ನು ರೇಪ್ ಆ್ಯಂಡ್ ಮರ್ಡರ್ ಆಗಿ ಬದಲಾಯಿಸುವ ಪೊಲೀಸರು. ಇಡೀ ದೇಶದಲ್ಲಿ ಜನರ ಭಾವನೆಯನ್ನು ಕೆರಳಿಸಲು ಪೊಲೀಸರು ಮತ್ತು ಆಡಳಿತ ಪಕ್ಷದ ಸೂಚನೆಯಂತೆ ಯುವತಿಯ ಸಾವನ್ನು ನ್ಯಾಷನಲ್ ಹೆಡ್ ಲೈನ್ ಮಾಡುವ ಮಾಧ್ಯಮಗಳು. ಕೊನೆಗೆ ನಾಲ್ವರು ಅಮಾಯಕರನ್ನು ಎನ್ ಕೌಂಟರ್ ನಲ್ಲಿ ಮುಗಿಸಿ ಯುವತಿಯ ರೇಪ್ ಆ್ಯಂಡ್ ಮರ್ಡರ್ ಮಾಡಿದವರನ್ನು ಮುಗಿಸಿ ಬಿಡಲಾಯಿತು ಎಂದು ಜನರನ್ನು ಭಾವನಾತ್ಮಕವಾಗಿ ತಮ್ಮ ಭಕ್ತರನ್ನಾಗಿ ಮಾಡಿ ಮತ್ತೆ ಅಧಿಕಾರಕ್ಕೆ ಬರುವ ಪಕ್ಷ. ಈ ದೃಶ್ಯಗಳು ಇರುವುದು ‘ಜನ ಗನ ಮನ’ ಸಿನಿಮಾದಲ್ಲಿ ಆದರೂ ಅದನ್ನೆಲ್ಲಾ ನಾವು ದೇಶದ ರಿಯಲ್ ರಾಜಕೀಯದಲ್ಲಿ ಪ್ರಸಕ್ತ ಕಾಣುತ್ತಿದ್ದೇವೆ. ಮತ್ತು ಕಂಡಿದ್ದೇವೆ.

ದೇಶದಲ್ಲಿ ಪ್ರತಿಯೊಂದು ಬಾಂಬ್ ಸ್ಫೋಟ, ಭಯೋತ್ಪಾದನಾ ಪ್ರಕರಣ ನಡೆದ ಸಮಯವನ್ನು ಸೂಕ್ಷ್ಮವಾಗಿ ಅವಲೋಕನ ಮಾಡೋಣ. ಬಹುತೇಕ ಪ್ರಕರಣ ನಡೆದಿರುವುದು ಚುನಾವಣೆಗಳು ಹತ್ತಿರ ಬಂದಾಗ ಅಥವಾ ಯಾವುದಾದರೂ ದೊಡ್ಡ ಹಗರಣ ಬಯಲಾದಾಗ ಅಥವಾ ಸರಕಾರಗಳು ವೈಫಲ್ಯಗೊಂಡು ಜನರು ಸರಕಾರದ ವಿರುದ್ಧ ತಿರುಗಿಬಿದ್ದಾಗ ಆಗಿದೆ. ಇದರ ಹೆಚ್ಚಿನ ಬಲಿಪಶುಗಳು ವಿದ್ಯಾವಂತ ಮುಸ್ಲಿಮ್ ಯುವಕರೇ ಆಗಿದ್ದಾರೆ. 1992ರಿಂದ ಇಲ್ಲಿಯವರೆಗೆ ದೇಶದಲ್ಲಿ ಇಸ್ಲಾಮಿಕ್ ಭಯೋತ್ಪಾದನೆಯ ಹೆಸರಿನಲ್ಲಿ ಏನು ನಡೆಯಿತೋ, ಪ್ರಸಕ್ತ ಚುನಾವಣೆಗಳು ಹತ್ತಿರ ಬರುತ್ತಿದ್ದಂತೆ ದೇಶದಲ್ಲಿ ಮತ್ತೆ ಅದೇ ನಡೆಯುತ್ತಿದೆ. ಜನರ ಬವಣೆಯನ್ನು ಕೆರಳಿಸಿ ಮತವಾಗಿ ಬದಲಾಯಿಸಲು ಉಳಿದಿರುವ ಒಂದೇ ದಾರಿ ಭಯೋತ್ಪಾದನೆಯ ಪ್ರಕರಣಗಳಲ್ಲಿ ಬಂಧನ. ಇದಕ್ಕಾಗಿ ಪೊಲೀಸರನ್ನೂ, ತನಿಖಾ ಸಂಸ್ಥೆಗಳನ್ನೂ, ಮಾಧ್ಯಮಗಳನ್ನೂ ಸರಿಯಾಗಿ ಬಳಸಿಕೊಳ್ಳಲಾಗುತ್ತಿದೆ.

ಪ್ರಸಕ್ತ ಇಂಡಿಯಾದಲ್ಲಿ ನ್ಯಾಷನಲ್ ಹೆಡ್ ಲೈನ್ ಆಗಬೇಕಾದ ರಾಹುಲ್ ಗಾಂಧಿ ಅವರ ‘ಭಾರತ್ ಜೋಡೋ ಯಾತ್ರೆ’ಯ ಸುದ್ದಿ ಸರಕಾರಿ ಪ್ರೇರಿಯ ಭಯೋತ್ಪಾದನೆಯ ಹೆಡ್ ಲೈನ್ ಗಳಿಂದ ಮಾಸಿ ಹೋಗಿದೆ. ಯಾವಾಗ ಭಾರತ್ ಜೋಡೋ ಯಾತ್ರೆಯಲ್ಲಿ ಲಕ್ಷಾಂತರ ಜನರು ಸೇರಿ ರಾಹುಲ್ ಗಾಂಧಿಗೆ ಭಾರೀ ಜನ ಬೆಂಬಲ ದೊರೆಯಲು ಆರಂಭವಾದವೋ ಆ ದಿನದಿಂದಲೇ ದೇಶಾದ್ಯಂತ ಎನ್.ಐ.ಎ., ಇಡಿ ದಾಳಿಗಳು ವ್ಯಾಪಕವಾಗಿ ನಡೆಯಲು ಆರಂಭಗೊಂಡಿವೆ. ಅದಕ್ಕೆ ಪೂರಕವಾಗಿ ದಿನವಿಡೀ ಹಲವು ಕಟ್ಟುಕಥೆಗಳೊಂದಿಗೆ ಮಾಧ್ಯಮಗಳ ನ್ಯಾಷನಲ್ ಹೆಡ್ ಲೈನ್ ಗಳು ಬಿತ್ತರಗೊಳ್ಳುತ್ತಿದೆ. ಎನ್.ಐ.ಎ., ಇಡಿ ದಾಳಿಯ ಸುದ್ದಿಯ ಭರಾಟೆಯಲ್ಲಿ ಭಾರತ್ ಜೋಡೋ ಯಾತ್ರೆಯನ್ನು ಸುಂಖ್ಯಾತಗೊಳಿಸುವ ಎಲ್ಲವನ್ನೂ ತನಿಖಾ ಸಂಸ್ಥೆಗಳು ಮತ್ತು ಮಾಧ್ಯಮಗಳಿಂದ ನಡೆಸಲಾಗುತ್ತಿದೆ.
(ಲೇಖಕರ ಫೇಸ್ ಬುಕ್ ವಾಲ್ ನಿಂದ)