ನವದೆಹಲಿ: ವಿಧಾನಸಭೆ ಚುನಾವಣೆ ನಡೆಯಲಿರುವ ಪಂಚರಾಜ್ಯಗಳಲ್ಲಿ ಬಹಿರಂಗ ಸಮಾವೇಶ, ಪಾದಯಾತ್ರೆ ಹಾಗೂ ರೋಡ್ ಶೋಗಳ ಮೇಲಿನ ನಿರ್ಬಂಧವನ್ನು ಚುನಾವಣಾ ಆಯೋಗ ಜನವರಿ 22ರವರೆಗೆ ವಿಸ್ತರಿಸಿದೆ. ದೇಶದಲ್ಲಿ ಕೊವಿಡ್-19 ಸೋಂಕಿತ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಇದಕ್ಕೂ ಮುನ್ನ ಜನವರಿ 15ರವರೆಗೂ ಯಾವುದೇ ಬಹಿರಂಗ ಸಭೆ ನಡೆಸದಂತೆ ಚುನಾವಣಾ ಆಯೋಗ ನಿರ್ಬಂಧ ವಿಧಿಸಿತ್ತು.
ಚುನಾವಣಾ ಪ್ರಚಾರಗಳನ್ನು ಒಳಾಂಗಣ ಸಭೆಗಳಲ್ಲಿ ನಡೆಸಲು ಅನುಮತಿ ನೀಡಲಾಗಿದ್ದು, ಗರಿಷ್ಠ 300 ಮಂದಿಯನ್ನು ಸೇರಿಸಿ ರಾಜಕೀಯ ಪಕ್ಷಗಳು ಸಭೆಗಳನ್ನು ನಡೆಸಬಹುದಾಗಿದೆ ಅಥವಾ ಒಳಾಂಗಣ ಸಭೆಯ ನಡೆಯುವ ಹಾಲ್ ನಲ್ಲಿ ಶೇ. 50ರಷ್ಟು ಜನರನ್ನು ಸೇರಿಸಿ ಸಭೆಗಳನ್ನು ನಡೆಸಲು ಅನುಮತಿ ನೀಡಿದೆ. ಕೋವಿಡ್-19 ಹಾಗೂ ಚುನಾವಣಾ ಆಯೋಗದ ಮಾರ್ಗಸೂಚಿಗಳನ್ನು ಪ್ರತಿ ರಾಜಕೀಯ ಪಕ್ಷಗಳು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಚುನಾವಣಾ ಆಯೋಗ ತಿಳಿಸಿದೆ.
ಪಂಜಾಬ್, ಉತ್ತರಾಖಂಡ ಮತ್ತು ಗೋವಾದಲ್ಲಿ ಫೆಬ್ರವರಿ 14 ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದ್ದು, ಮಣಿಪುರದಲ್ಲಿ ಫೆಬ್ರವರಿ 27 ಮತ್ತು ಮಾರ್ಚ್ 3ರಂದು ಎರಡು ಹಂತಗಳಲ್ಲಿ ಮತದಾನ ನಡೆಯಲಿದೆ. ಉತ್ತರ ಪ್ರದೇಶದಲ್ಲಿ ಫೆಬ್ರವರಿ 10, ಫೆಬ್ರವರಿ 14, ಫೆಬ್ರವರಿ 20, ಫೆಬ್ರವರಿ 23, ಫೆಬ್ರವರಿ 27, ಮಾರ್ಚ್ 3 ಮತ್ತು ಮಾರ್ಚ್ 7ರಂದು ಒಟ್ಟು ಏಳು ಹಂತಗಳಲ್ಲಿ ಮತದಾನ ನಡೆಯಲಿದೆ. ಮಾರ್ಚ್ 10ರಂದು ಪಂಚರಾಜ್ಯಗಳ ಚುನಾವಣಾ ಫಲಿತಾಂಶ ಹೊರ ಬೀಳಲಿದೆ.