ಪಾವತಿ ಸುದ್ದಿ, ಹಣ ವರ್ಗಾವಣೆ ಮೇಲೆ ಚುನಾವಣಾ ಆಯೋಗದ ಹದ್ದಿನ ಕಣ್ಣು: ಜಿಲ್ಲಾಧಿಕಾರಿ ರವಿಕುಮಾರ್

Prasthutha|

ಮಂಗಳೂರು: ಪಾವತಿ ಸುದ್ದಿಯ ಮೇಲೆ ಚುನಾವಣಾ ಆಯೋಗ ಹದ್ದಿನ ಕಣ್ಣಿಟ್ಟಿದ್ದು, ಒಂದು ವೇಳೆ ಯಾವುದೇ ಪತ್ರಿಕೆ, ಟಿವಿ ವಾಹಿನಿ ಅಭ್ಯರ್ಥಿಯ ಪಾವತಿ ಸುದ್ದಿಯನ್ನು ಪ್ರಕಟಿಸಿದರೆ ಅದರ ವೆಚ್ಚವನ್ನು ಅಭ್ಯರ್ಥಿಯ ಚುನಾವಣಾ ವೆಚ್ಚಕ್ಕೆ ಸೇರಿಸಲಾಗುವುದು ಎಂದು ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ರವಿಕುಮಾರ್ ಎಂ.ಆರ್. ತಿಳಿಸಿದ್ದಾರೆ.
ಕೇಬಲ್ ಟಿವಿ ಮಾಲೀಕರು, ಸ್ಥಳೀಯ ಸುದ್ದಿ ವಾಹಿನಿ, ಟಿವಿ ಮಾಧ್ಯಮದವರು, ಪತ್ರಿಕೆ ವರದಿಗಾರರು, ಜಾಹೀರಾತು ಕಂಪನಿ ಮಾಲೀಕರು, ಜೆರಾಕ್ಸ್ ಅಂಗಡಿ ಮಾಲೀಕರು, ಮುದ್ರಣ ಮಾಧ್ಯಮದ ಮಾಲೀಕರೊಂದಿಗೆ ಶನಿವಾರ ನಡೆಸಿದ ಸಭೆಯಲ್ಲಿ ಅವರು ಈ ವಿಷಯ ತಿಳಿಸಿದರು.


ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಯು ನೀಡಲು ಉದ್ದೇಶಿಸಿರುವ ಜಾಹೀರಾತಿನ ಪ್ರಮಾಣೀಕರಣಕ್ಕಾಗಿ ಅರ್ಜಿಗಳನ್ನು ನೀಡಲಾದ ನಮೂನೆಯಲ್ಲಿ ನಿಯೋಜಿತ ಅಧಿಕಾರಿಗೆ ಅರ್ಜಿ ಸಲ್ಲಿಸಬೇಕು. ಅಧಿಕಾರಿ ಅನುಮತಿ ನೀಡಿದ ಬಳಿಕವೇ ಜಾಹೀರಾತು ಪ್ರಕಟಿಸಬೇಕು. ಅನುಮತಿ ರಹಿತವಾಗಿ ಜಾಹೀರಾತು ಪ್ರಕಟಿಸಿದರೆ ಅದರ ವಿರುದ್ಧ ಅಧಿಕಾರಿಗಳು ಕಾನೂನು ಕ್ರಮಕೈಗೊಳ್ಳಲಿದ್ದಾರೆ. ದಿನದ 24 ಗಂಟೆಯೂ ಅಧಿಕಾರಿಗಳ ತಂಡ ಎಲ್ಲಾ ಮುದ್ರಣ, ವಾಹಿನಿಗಳಲ್ಲಿ ಪ್ರಸಾರವಾಗುವ ಸುದ್ದಿ, ಜಾಹೀರಾತುಗಳ ಮೇಲೆ ನಿಗಾ ಇಡಲಿದೆ. ಸುದ್ದಿಯಲ್ಲಿ ಪ್ರಚಾರದ ಅಂಶಗಳು ಇದ್ದರೆ ಅದನ್ನು ಪಾವತಿ ಸುದ್ದಿ ಎಂದು ಪರಿಗಣಿಸಿ ಅದನ್ನು ಅಭ್ಯರ್ಥಿ ಅಥವಾ ಪಕ್ಷದ ಖರ್ಚಿಗೆ ಸೇರಿಸಲಾಗುವುದು ಎಂದು ತಿಳಿಸಿದರು.

- Advertisement -


ಅಭ್ಯರ್ಥಿ ಪತ್ರಿಕಾಗೋಷ್ಠಿ ನಡೆಸಿದ್ದನ್ನು ಪ್ರಸಾರ ಮಾಡುವುದರ ಮೇಲೆ ಯಾವುದೇ ನಿರ್ಬಂಧವಿಲ್ಲ. ಆದರೆ ವೈಯಕ್ತಿಕ ನಿಂದನೆ, ಮಾನಹಾನಿ, ಧರ್ಮದ ನಡುವೆ ದ್ವೇಷ ಹಬ್ಬಿಸುವ ಹೇಳಿಕೆ, ಸಮುದಾಯಗಳ ನಡುವೆ ದ್ವೇಷ ಹುಟ್ಟು ಹಾಕುವುದು ಮುಂತಾದ ಕೃತ್ಯಗಳು ನಡೆದರೆ ನಿರ್ದಾಕ್ಷಿಣ್ಯವಾಗಿ ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದ ಜಿಲ್ಲಾಧಿಕಾರಿ, ಧಾರ್ಮಿಕ ಕಾರ್ಯಕ್ರಮಗಳಾದ ಭಜನೆ, ಪೂಜೆ, ಇಫ್ತಾರ್, ನಮಾಝ್ ನಿರ್ವಹಿಸುವುದಕ್ಕೆ ಯಾವುದೇ ಅಡೆತಡೆ ಇಲ್ಲ.ಆದರೆ ಅಭ್ಯರ್ಥಿಗಳು ಈ ಸ್ಥಳಗಳಿಗೆ ಬಂದು ಮತಯಾಚನೆ ಮಾಡಬಾರದು. ಇಂತಹ ಕಾರ್ಯಕ್ರಮಗಳ ಸುದ್ದಿಗಳನ್ನು ಪ್ರಸಾರ ಮಾಡುವುದರ ಮೇಲೆ ಯಾವುದೇ ನಿರ್ಬಂಧವಿಲ್ಲ. ಮಾಧ್ಯಮದವರು ಇಂತಹ ಕಾರ್ಯಕ್ರಮಗಳನ್ನು ಪ್ರಸಾರ ಮಾಡಿದರೆ ನಮಗೂ ಅನುಕೂಲವಾಗುತ್ತದೆ. ಅಭ್ಯರ್ಥಿಗಳು ಎಲ್ಲಿ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಮಾಡಿದ್ದಾರೆ ಎಂಬುದು ನಮಗೂ ತಿಳಿಯುತ್ತದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.


ಯಕ್ಷಗಾನ ಸೇರಿದಂತೆ ಯಾವುದೇ ಕಾರ್ಯಕ್ರಮಗಳಲ್ಲಿ ಅದರ ನೈಜ ಉದ್ದೇಶವನ್ನು ಬಿಟ್ಟು ರಾಜಕೀಯ ಉದ್ದೇಶಕ್ಕೆ ಬಳಸುವಂತಿಲ್ಲ. ಯಕ್ಷಗಾನ ಸೇರಿದಂತೆ ಯಾವುದೇ ಕಲಾವಿದರು ನೇರವಾಗಿ ಮತ್ತು ಪರೋಕ್ಷವಾಗಿ ರಾಜಕೀಯ ಪಕ್ಷಗಳ ಪ್ರಚಾರ ನಡೆಸಿದರೆ ಅಂತಹ ಕಲಾವಿದರು, ಕಾರ್ಯಕ್ರಮ ಆಯೋಜಕರ ವಿರುದ್ಧ ಪ್ರಕರಣ ದಾಖಲಿಸಲಾಗುವುದು ಎಂದು ರವಿಕುಮಾರ್ ಹೇಳಿದರು.
ಮಾಧ್ಯಮಗಳಲ್ಲಿ ಪ್ರಸಾರವಾಗುವ ವಿಶೇಷ ಸಂದರ್ಶನಗಳ ಮೇಲೂ ಆಯೋಗ ನಿಗಾ ಇಡಲಿದೆ. ಸಂದರ್ಶನದಲ್ಲಿ ಅಭ್ಯರ್ಥಿ ನೇರವಾಗಿ ಮತಯಾಚನೆ ಮಾಡಿದರೆ ಅದನ್ನು ಕೂಡ ಅಭ್ಯರ್ಥಿಯ ಚುನಾವಣಾ ವೆಚ್ಚಕ್ಕೆ ಸೇರಿಸಲಾಗುವುದು. ಸಂದರ್ಶಕನಿಗೆ ಯಾವುದೇ ಪ್ರಶ್ನೆ ಕೇಳುವುದರ ಮೇಲೆ ನಿರ್ಬಂಧ ಇಲ್ಲ ಎಂದು ಪ್ರಶ್ನೆಯೊಂದಕ್ಕೆ ಜಿಲ್ಲಾಧಿಕಾರಿ ಸ್ಪಷ್ಟನೆ ನೀಡಿದರು.


ಫೇಸ್ ಬುಕ್, ಟ್ವಿಟ್ಟರ್, ವಾಟ್ಸಪ್, ಯೂಟ್ಯೂಬ್ ಮೇಲೂ ಆಯೋಗ ನಿಗಾ ವಹಿಸಲಿದೆ. ಈ ವೇದಿಕೆಗಳಲ್ಲೂ ಅಭ್ಯರ್ಥಿ ಅಥವಾ ಪಕ್ಷದ ಪರ ಪ್ರಚಾರ ಮಾಡುವವರ ಮೇಲೆ ಅಧಿಕಾರಿಗಳು ನಿಗಾ ಇಡಲಿದ್ದಾರೆ. ಅಭ್ಯರ್ಥಿ ಪರವಾಗಿ ಹರಿದಾಡುವ ಇಮೇಜ್, ಬರಹವನ್ನು ಮೊದಲು ಯಾರು ಹಂಚಿಕೊಂಡಿದ್ದಾರೆ ಎಂಬುದನ್ನು ಪರಿಶೀಲಿಸಿ, ಆ ವ್ಯಕ್ತಿಯನ್ನು ವಿಚಾರಣೆ ನಡೆಸಲಾಗುವುದು. ಆ ವ್ಯಕ್ತಿ ನಿರ್ದಿಷ್ಟ ಅಭ್ಯರ್ಥಿ ಅಥವಾ ಪಕ್ಷದ ಕಾರ್ಯಕರ್ತನಾಗಿದ್ದರೆ ಸಾಮಾಜಿಕ ಮಾಧ್ಯಮಗಳಲ್ಲಿ ಕಳಿಸಿದ ಇಮೇಜ್ ಅಥವಾ ಬರಹವನ್ನು ಚುನಾವಣಾ ಪ್ರಚಾರ ಎಂದು ಪರಿಗಣಿಸಿ ಅದನ್ನು ಅಭ್ಯರ್ಥಿಯ ಖರ್ಚು ವೆಚ್ಚಗಳ ಬಾಬ್ತಿಗೆ ಸೇರಿಸಲಾಗುವುದು ಎಂದು ಹೇಳಿದರು.


ಓರ್ವ ಅಭ್ಯರ್ಥಿ ಒಂದು ಕ್ಷೇತ್ರದಲ್ಲಿ ಒಟ್ಟು 40 ಲಕ್ಷ ರೂ.ವರೆಗೆ ಖರ್ಚು ಮಾಡಲು ಅನುಮತಿಸಲಾಗಿದೆ. ಪ್ರತಿದಿನ 50 ಸಾವಿರ ರೂ.ಗಿಂತ ಹೆಚ್ಚಿನ ಬ್ಯಾಂಕ್ ವ್ಯವಹಾರಗಳನ್ನು ನಡೆಸುವವರ ಮೇಲೆ ನಿಗಾ ಇಡಲಾಗುವುದು. ಎಲ್ಲಾ ಬ್ಯಾಂಕುಗಳು ಪ್ರತಿದಿನ ಸಂಜೆ 50 ಸಾವಿರಕ್ಕಿಂತ ಮೇಲ್ಪಟ್ಟು ಹಣ ವರ್ಗಾವಣೆ ಮಾಡಿದವರ ವಿವರ ಹಾಗೂ ಸಂಶಯಾಸ್ಪದ ಹಣ ವರ್ಗಾವಣೆ ಮಾಡಿದವರ ವಿವರಗಳನ್ನು ಚುನಾವಣಾಧಿಕಾರಿಗಳಿಗೆ ಸಲ್ಲಿಸಬೇಕಾಗುತ್ತದೆ. ಇಂತಹವರಿಗೆ ನೋಟಿಸ್ ನೀಡಿ ಕರೆಸಿ ವಿಚಾರಣೆ ನಡೆಸಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಜಿಲ್ಲಾಧಿಕಾರಿ ಉತ್ತರಿಸಿದರು.


ಓರ್ವ ವ್ಯಕ್ತಿ ಹಲವು ಜನರಿಗೆ ಆನ್ ಲೈನ್ ಮೂಲಕ ಹಣ ವರ್ಗಾವಣೆ ಮಾಡಿದರೂ ಅದನ್ನು ಸಂಶಯಾಸ್ಪದ ವರ್ಗಾವಣೆ ಎಂದು ಪರಿಗಣಿಸಿ ಆತನಿಗೂ ನೋಟಿಸ್ ಕಳುಹಿಸಲಾಗುವುದು. 3 ಸಾವಿರಕ್ಕಿಂತ ಹೆಚ್ಚಿನ ಡ್ರಾ ಮಾಡುವವರ ಮೇಲೆಯೂ ನಿಗಾ ಇಡಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.


ನಗರ ಪೊಲೀಸ್ ಆಯುಕ್ತ ಕುಲದೀಪ್ ಕುಮಾರ್ ಜೈನ್ ಮಾತನಾಡಿ, ಗಡಿ ಪ್ರದೇಶಗಳಲ್ಲಿ ತಪಾಸಣೆ ಬಿಗಿಗೊಳಿಸಲಾಗಿದ್ದು, ಒಟ್ಟು ನಾಲ್ಕು ಚೆಕ್ ಪೋಸ್ಟ್ ಗಳಲ್ಲಿ ಮದ್ಯ ಸಾಗಾಟದ ಪ್ರಕರಣಗಳು ವರದಿಯಾಗಿವೆ. ಶನಿವಾರ ಮಾತ್ರ ಒಂದು ಚೆಕ್ ಪೋಸ್ಟ್ ನಲ್ಲಿ 7.9 ಲಕ್ಷ ರೂ. ನಗದು ದಾಖಲೆ ರಹಿತ ಹಣ ದೊರೆತಿದೆ. ಹಣ ಸಾಗಿಸುವಾಗ ದಾಖಲೆಗಳನ್ನು ಕಡ್ಡಾಯವಾಗಿ ಹೊಂದಿರಬೇಕು.

ದಾಖಲೆರಹಿತವಾಗಿ ಹಣ ಸಾಗಿಸಿದರೆ ಅದನ್ನು ವಶಪಡಿಸಿಕೊಂಡು 24 ಗಂಟೆಗಳೊಳಗೆ ಖಜಾನೆಗೆ ಜಮಾ ಮಾಡಲಾಗುವುದು. ದಾಖಲೆಗಳನ್ನು ತಂದು ಸಂಬಂಧಪಟ್ಟ ಅಧಿಕಾರಿಗಳಿಗೆ ನೀಡಿದರೆ ಅದನ್ನು ಪರಿಶೀಲಿಸಿ ತಕ್ಷಣವೇ ಅವರ ಹಣವನ್ನು ಹಿಂದಿರುಗಿಸಲಾಗುವುದು, ಇಲ್ಲದಿದ್ದರೆ ಅದನ್ನು ಜಪ್ತಿ ಮಾಡಲಾಗುವುದು ಎಂದು ತಿಳಿಸಿದರು.
ಸಹಾಯವಾಣಿ ಸಂಖ್ಯೆ 1950ಕ್ಕೆ ಸಾರ್ವಜನಿಕರು ಚುನಾವಣಾ ಅಕ್ರಮದ ಬಗ್ಗೆ ಮಾಹಿತಿ ನೀಡುವಂತೆ ಜಿಲ್ಲಾ ಪಂಚಾಯತ್ ಸಿಇಒ ಡಾ.ಕುಮಾರ್ ಇದೇ ವೇಳೆ ಮನವಿ ಮಾಡಿದರು.

- Advertisement -