ಹಿಜಾಬ್ ನಿಷೇಧದ ದುಷ್ಪರಿಣಾಮ: ವರದಿ ಬಿಡುಗಡೆ ಮಾಡಿದ ಪಿಯುಸಿಎಲ್

Prasthutha|

ಬೆಂಗಳೂರು: ಹಿಜಾಬ್ ನಿಷೇಧದ ದುಷ್ಪರಿಣಾಮದ ಬಗ್ಗೆ ಪೀಪಲ್ಸ್ ಯೂನಿಯನ್ ಫಾರ್ ಸಿವಿಲ್ ಲಿಬರ್ಟೀಸ್ (ಪಿಯುಸಿಎಲ್) ಕರ್ನಾಟಕ ವರದಿಯೊಂದನ್ನು ಬಿಡುಗಡೆ ಮಾಡಿದೆ.

- Advertisement -


ಸಾವಿತ್ರಿಬಾಯಿ ಫುಲೆಯವರ ನಿಕಟವರ್ತಿಯಾಗಿದ್ದ ಸಮಾಜ ಸುಧಾರಕಿ ಮತ್ತು ಶಿಕ್ಷಣತಜ್ಞೆ ಫಾತಿಮಾ ಶೇಖ್ ಅವರ ಜನ್ಮದಿನದ ಸಂದರ್ಭದಲ್ಲಿ ವರದಿಯೊಂದನ್ನು ಬಿಡುಗಡೆ ಮಾಡಿದ ಪಿಯುಸಿಎಲ್ , “ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ನ ವಾಸ್ತವಿಕ ನಿಷೇಧದಿಂದಾಗಿ ಮುಸ್ಲಿಂ ಹೆಣ್ಣುಮಕ್ಕಳ ಶಿಕ್ಷಣ, ಘನತೆ ಮತ್ತು ಖಾಸಗಿತನದ ಹಕ್ಕುಗಳ ಮೇಲೆ ಉಂಟಾಗಿರುವ ಪರಿಣಾಮವನ್ನು ಸರಿಪಡಿಸಬೇಕು” ಎಂದು ರಾಜ್ಯ ಸರ್ಕಾರವನ್ನು ಆಗ್ರಹಿಸಿದೆ.

- Advertisement -

“ಕ್ಲೋಸಿಂಗ್ ದಿ ಗೇಟ್ಸ್ ಟು ಎಜುಕೇಷನ್: ವಯೊಲೇಶನ್ಸ್ ಆಫ್ ರೈಟ್ಸ್ ಆಫ್ ಮುಸ್ಲಿಂ ವುಮೆನ್ ಸ್ಟೂಡೆಂಟ್ಸ್” ಎಂಬ ವರದಿಯಲ್ಲಿ “ಹಿಜಾಬ್ ಪ್ರಕರಣದಲ್ಲಿ ನ್ಯಾಯಾಲಯದ ತೀರ್ಪುಗಳು ಶಿಕ್ಷಣ ಸಂಸ್ಥೆಗಳಿಗೆ ಹಿಜಾಬನ್ನು ನಿಷೇಧಿಸುವುದಂತೆ ಆದೇಶಿಸುವುದಿಲ್ಲವಾದರೂ, ವಾಸ್ತವವಾಗಿ ರಾಜ್ಯದ ಹಲವಾರು ಶಿಕ್ಷಣ ಸಂಸ್ಥೆಗಳು ಹಿಜಾಬನ್ನು ನಿಷೇಧಿಸಿದವು. ಈ ವರದಿಯು ಹಿಜಾಬ್ನ ಮೇಲೆ ಹೇರಿದ ಈ ನಿಷೇಧದ ಪರಿಣಾಮವನ್ನು ದಾಖಲಿಸುತ್ತದೆ ಮತ್ತು ಹಠಾತ್ ನಿಷೇಧವನ್ನು ರಾಜ್ಯಾದ್ಯಂತ ಹೇರಿದಾಗ ಕಿರುಕುಳ, ಅವಮಾನ ಮತ್ತು ಪ್ರತ್ಯೇಕತೆಯನ್ನು ಅನುಭವಿಸಿದ ಮುಸ್ಲಿಂ ಮಹಿಳಾ ವಿದ್ಯಾರ್ಥಿನಿಯರ ಹೇಳಿಕೆ ಮತ್ತು ಸಾಕ್ಷ್ಯಗಳನ್ನು ಮುನ್ನೆಲೆಗೆ ತರುತ್ತದೆ” ಎಂದು ಪಿಯುಸಿಎಲ್ ಹೇಳಿದೆ.

“ಕರ್ನಾಟಕ ಸರ್ಕಾರವು ಮುಸ್ಲಿಂ ಯುವತಿಯರ ಮೂಲಭೂತ ಹಕ್ಕುಗಳ ನಿರಂತರ ಉಲ್ಲಂಘನೆಗಳಿಗೆ ಪ್ರತಿಕ್ರಿಯಿಸಲು ಸಾಂವಿಧಾನಿಕ ಜವಾಬ್ದಾರಿಯನ್ನು ಹೊಂದಿದೆ. ಉಡುಪಿಯ ಪದವಿಪೂರ್ವ ಕಾಲೇಜಿನಲ್ಲಿ ಒಂದು ವರ್ಷಕ್ಕೂ ಹಿಂದೆ ಹಿಜಾಬ್ ಅನ್ನು ಹಠಾತ್ತನೆ ನಿಷೇಧಿಸಿದ ನಂತರ, ಕರ್ನಾಟಕದಾದ್ಯಂತ ಮುಸ್ಲಿಂ ಮಹಿಳಾ ವಿದ್ಯಾರ್ಥಿಗಳು ತಮ್ಮ ಶಿಕ್ಷಣವನ್ನು ಮುಂದುವರಿಸಲು ಹೆಣಗಾಡುತ್ತಿದ್ದಾರೆ ಮತ್ತು ಮಾನಸಿಕ ತೊಂದರೆ ಮತ್ತು ಪ್ರತ್ಯೇಕತೆಯಂತಹ ಗಂಭೀರ ಪರಿಣಾಮಗಳನ್ನು ಎದುರಿಸುತ್ತಿದ್ದಾರೆ” ಎಂದು ಕಳವಳ ವ್ಯಕ್ತಪಡಿಸಿದೆ.

“ಅಕ್ಟೋಬರ್ 13, 2022 ರಂದು ನೀಡಲಾದ ಸುಪ್ರೀಂ ಕೋರ್ಟಿನ ವಿಭಜಿತ ತೀರ್ಪು, ವಿದ್ಯಾರ್ಥಿಗಳ ನ್ಯಾಯಕ್ಕಾಗಿ ಕಾಯುವಿಕೆಯನ್ನು ದೀರ್ಘಗೊಳಿಸಿದೆ. ಆ ದಿನಾಂಕದಂದು ಸೂಕ್ತ ಪೀಠವನ್ನು ರಚಿಸುವಂತೆ ಗೌರವಾನ್ವಿತ ಮುಖ್ಯ ನ್ಯಾಯಾಧೀಶರ ಮುಂದೆ ವಿಷಯವನ್ನು ಇರಿಸಲಾಯಿತು. ಮುಸ್ಲಿಂ ಮಹಿಳಾ ವಿದ್ಯಾರ್ಥಿಗಳಿಗೆ ಶಿಕ್ಷಣ, ಘನತೆ ಮತ್ತು ಖಾಸಗಿತನದ ಸಾಂವಿಧಾನಿಕ ಹಕ್ಕನ್ನು ನಿರಾಕರಿಸಲಾಗುತ್ತಿರುವುದರಿಂದ ಈ ವಿಷಯವನ್ನು ಸರ್ವೋಚ್ಚ ನ್ಯಾಯಾಲಯ ತ್ವರಿತವಾಗಿ ತೆಗೆದುಕೊಳ್ಳಬೇಕಾದ ತುರ್ತು ಅಗತ್ಯವಿದೆ” ಎಂದು ಹೇಳಿದೆ.

“ಕರ್ನಾಟಕದಾದ್ಯಂತ ಹಾಸನ, ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ ಮತ್ತು ರಾಯಚೂರು ಜಿಲ್ಲೆಗಳಿಗೆ ತಂಡ ಭೇಟಿ ನೀಡಿ ತೀರ್ಪಿನಿಂದ ಪ್ರಭಾವಿತವಾದ ಮಹಿಳಾ ವಿದ್ಯಾರ್ಥಿಗಳಿಂದ ಸಾಕ್ಷ್ಯಗಳನ್ನು ಸಂಗ್ರಹಿಸಲಾಗಿದೆ ಎಂದಿರುವ ಪಿಯುಸಿಎಲ್, ಈ ವಿದ್ಯಾರ್ಥಿಗಳಿಗೆ ತಮ್ಮ ಶಿಕ್ಷಣದ ಹಕ್ಕನ್ನು ನಿರಾಕಾರಣೆ ಹೇಗಾಯಿತು ಹಾಗೂ ಹೇಗೆ ದ್ವೇಷ, ಹಗೆತನ ಮತ್ತು ತಪ್ಪು ಮಾಹಿತಿಯ ವಾತಾವರಣದಲ್ಲಿ ಅವರನ್ನು ಹೇಗೆ ಘಾಸಿ ಗೊಳಿಸಲಾಯಿತು ಎಂಬುದನ್ನು ವರದಿಯು ಬಹಿರಂಗಪಡಿಸುತ್ತದೆ” ಎಂದು ತಿಳಿಸಿದೆ.

“ತಮ್ಮ ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ಧರಿಸುವುದರ ಮೇಲೆ ನಿರ್ಬಂಧವನ್ನು ಹೇರಿದ ನಂತರ ಮುಸ್ಲಿಂ ಮಹಿಳಾ ವಿದ್ಯಾರ್ಥಿಗಳ ಮೇಲೆ ಪರಿಣಾಮ, ಮುಸ್ಲಿಂ ವಿದ್ಯಾರ್ಥಿಗಳ ಸುರಕ್ಷತೆಯನ್ನು ಖಾತ್ರಿಪಡಿಸುವಲ್ಲಿ ಕಾರ್ಯನಿರ್ವಹಿಸಬೇಕಿದ್ದ ವಿವಿಧ ವ್ಯಕ್ತಿ ಮತ್ತು ಸಂಸ್ಥೆಗಳ ವೈಫಲ್ಯ ಮತ್ತು ಮುಸ್ಲಿಂ ಸಮುದಾಯದ ವಿರುದ್ಧ ವಿಶೇಷವಾಗಿ ಮಹಿಳೆಯರ ವಿರುದ್ಧ ಪಕ್ಷಪಾತಗಳು, ಪೂರ್ವಾಗ್ರಹಗಳು ಮತ್ತು ಸ್ಟೀರಿಯೊಟೈಪ್ಗಳು ಸೇರಿದಂತೆ ವಿವಿಧ ಸಾಮಾಜಿಕ-ಸಾಂಸ್ಕೃತಿಕ ಅಂಶಗಳು ದ್ವೇಷದ ವಾತಾವರಣವನ್ನು ಹೆಚ್ಚಿಸಲು ಅನುವು ಮಾಡಿಕೊಟ್ಟಿವೆ” ಎಂದು ಪಿಯುಸಿಎಲ್ ಅಸಮಾಧಾನ ವ್ಯಕ್ತಪಡಿಸಿದೆ.

“ಮುಸ್ಲಿಂ ವಿದ್ಯಾರ್ಥಿಗಳು ಸಂಬಂಧಪಟ್ಟಂತೆ ತಾರತಮ್ಯ, ಖಾಸಗಿತನ, ಸ್ವಾಯತ್ತತೆ ಮತ್ತು ಘನತೆಯ ಸಾಂವಿಧಾನಿಕ ಮೌಲ್ಯಗಳನ್ನು ಕರ್ನಾಟಕ ಸರ್ಕಾರ ಎತ್ತಿಹಿಡಿಯಬೇಕು. ಕರ್ನಾಟಕ ರಾಜ್ಯ ಸರ್ಕಾರ ತನ್ನ ಅಸಂವಿಧಾನಿಕ ಮತ್ತು ಅನಿಯಂತ್ರಿತ ಕ್ರಮದಿಂದಾಗಿ ಶಿಕ್ಷಣ, ಅಭಿವ್ಯಕ್ತಿ, ಘನತೆ ಮತ್ತು ತಾರತಮ್ಯದ ವಿರುದ್ದದ ಸಾಂವಿಧಾನಿಕ ಹಕ್ಕುಗಳಿಂದ ವಂಚಿತರಾದ ಮುಸ್ಲಿಂ ಹೆಣ್ಣು ವಿದ್ಯಾರ್ಥಿನಿಯರು ಅನುಭವಿಸಿದ ನಷ್ಟವನ್ನು ಭರಿಸಬೇಕು. ಶಿಕ್ಷಣ ಇಲಾಖೆಯು ಕಡ್ಡಾಯವಾಗಿ ‘ರೇಶಮ್ ವರ್ಸಸ್ ಸ್ಟೇಟ್ ಆಫ್ ಕರ್ನಾಟಕ’ ಪ್ರಕರಣದಲ್ಲಿ ಕರ್ನಾಟಕ ಹೈಕೋರ್ಟ್ ಆದೇಶದ ವ್ಯಾಪ್ತಿಯನ್ನು ಸ್ಪಷ್ಟಪಡಿಸುವ ನಿರ್ದೇಶನಗಳನ್ನು ನೀಡಿಬೇಕು. ಕರ್ನಾಟಕ ರಾಜ್ಯ ಸರ್ಕಾರವು ಫೆಬ್ರವರಿ – ಏಪ್ರಿಲ್ 2022 ರ ಅವಧಿಯಲ್ಲಿ ಶಾಂತಿಯುತ ಪ್ರತಿಭಟನೆಗಳನ್ನು ನಡೆಸಿದ ಮುಸ್ಲಿಂ ವಿದ್ಯಾರ್ಥಿಗಳು, ಶಿಕ್ಷಕರು ಅಥವಾ ಅಂತಹ ಯಾವುದೇ ವ್ಯಕ್ತಿಯ ವಿರುದ್ಧ ಕೈಗೊಂಡಿರುವ ಕಾನೂನು ಕ್ರಮವನ್ನು ತಕ್ಷಣವೇ ಹಿಂಪಡೆಯಬೇಕು” ಎಂದು ವರದಿಯಲ್ಲಿ ಪಿಯುಸಿಎಲ್ ಆಗ್ರಹಿಸಿದೆ.

“ಮಾಧ್ಯಮಗಳು ದುರ್ಬಲ ಸಮುದಾಯಗಳು, ಅಪ್ರಾಪ್ತ ವಯಸ್ಕರು ಮತ್ತು ವಿಚಾರಣೆಯಲ್ಲಿರುವ ನ್ಯಾಯಾಲಯದ ಪ್ರಕರಣಗಳಿಗೆ ಸಂಬಂಧಿಸಿದ ವರದಿಯನ್ನು ನೀಡುವಾಗ ಆಂತರಿಕ ಮಾರ್ಗಸೂಚಿಗಳನ್ನು ಸಿದ್ಧಪಡಿಸಬೇಕು ಮತ್ತು ಅವುಗಳ ಪ್ರಸಾರದಿಂದಾಗಿ ಅಂಚಿನಲ್ಲಿರುವ ಸಮುದಾಯಗಳು ಅನುಭವಿಸುವ ಪರಕೀಯತೆ ಮತ್ತು ಕಳಂಕವನ್ನು ಉಲ್ಬಣಗೊಳಿಸುವುದಿಲ್ಲ ಎಂದು ಖಚಿತಪಡಿಸಿಕೊಳ್ಳಬೇಕು” ಎಂದು ತಿಳಿಸಲಾಗಿದೆ.

“ಪೊಲೀಸರು ಕಡ್ಡಾಯವಾಗಿ ಈ ಪ್ರಕರಣದಲ್ಲಿ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ಗೆ ಹಾಜರಾಗಿದ್ದ ಎಲ್ಲಾ ಅರ್ಜಿದಾರರು ಮತ್ತು ಅವರ ಕುಟುಂಬಗಳಿಗೆ ರಕ್ಷಣೆಯನ್ನು ವಿಸ್ತರಿಸಿ ಅವರ ದೈಹಿಕ ಸುರಕ್ಷತೆ ಮತ್ತು ಭದ್ರತೆಯನ್ನು ಖಾತ್ರಿಪಡಿಸಿಕೊಳ್ಳಬೇಕು. ಮುಸ್ಲಿಂ ಮಹಿಳಾ ವಿದ್ಯಾರ್ಥಿಗಳಿಗೆ ಕಿರುಕುಳ ನೀಡುವ, ಈಗಾಗಲೇ ವರದಿಯಾಗಿರುವ ವೀಡಿಯೊಗಳು ಮತ್ತು ಚಿತ್ರಗಳಲ್ಲಿ ಗೋಚರಿಸುವ ಹಿಂದುತ್ವ ಕಿಡಿಗೇಡಿ ಗುಂಪು/ಸದಸ್ಯರ ವಿರುದ್ಧ ಪ್ರಕರಣಗಳನ್ನು ದಾಖಲಿಸುವಲ್ಲಿ ತ್ವರಿತ ಕ್ರಮ ಕೈಗೊಳ್ಳಬೇಕು. ಮುಸ್ಲಿಂ ಮಹಿಳಾ ವಿದ್ಯಾರ್ಥಿಗಳು ಸಲ್ಲಿಸಿದ ದೂರುಗಳ ಮೇಲೆ ನಿಷ್ಪಕ್ಷಪಾತವಾಗಿ ಕ್ರಮ ಕೈಗೊಳ್ಳಬೇಕು. ಅವರು ದೂರು ನೀಡಿರುವ ಕಾಲೇಜು ಅಧಿಕಾರಿಗಳು, ಹಿಂದುತ್ವ ಗುಂಪುಗಳು ಅಥವಾ ವಿದ್ಯಾರ್ಥಿಗಳ ಮೇಲೆ ಮತ್ತು ದೂರು ನೀಡಿರುವ ಕುಟುಂಬದವರ ಘನತೆ, ಖಾಸಗಿತನ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕನ್ನು ಉಲ್ಲಂಘಿಸಿದ ಯಾವುದೇ ವ್ಯಕ್ತಿಯ ವಿರುದ್ಧ ಎಫ್ಐಆರ್ಗಳನ್ನು ದಾಖಲಿಸಬೇಕು. ಮುಸ್ಲಿಂ ವಿದ್ಯಾರ್ಥಿಗಳ ಮೂಲಭೂತ ಹಕ್ಕುಗಳ ಉಲ್ಲಂಘನೆ ಮಾಡಿದವರ ಮೇಲೆ ಇಲಾಖಾ ವಿಚಾರಣೆಯನ್ನು ಕೈಗೊಳ್ಳಬೇಕು. ತಮ್ಮ ನಿಷ್ಕ್ರಿಯತೆ ಮತ್ತು ಅನಧಿಕೃತ ಕ್ರಮದಿಂದಾಗಿ ಮುಸ್ಲಿಂ ವಿದ್ಯಾರ್ಥಿಗಳ ಮೂಲಭೂತ ಹಕ್ಕುಗಳ ಉಲ್ಲಂಘನೆಗೆ ಕಾರಣವಾದ ತನ್ನ ಸಿಬ್ಬಂದಿ ವಿರುದ್ಧ ಶಿಸ್ತು ಕ್ರಮವನ್ನು ಪ್ರಾರಂಭಿಸಬೇಕು. 01.01.2022 ಮತ್ತು 30.04.2022 ರ ನಡುವೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ CrPC ಯ ಸೆಕ್ಷನ್ 144 ಅನ್ನು ವಿಧಿಸುವ ಎಲ್ಲಾ ಆದೇಶಗಳನ್ನು ಸಾರ್ವಜನಿಕರಿಗೆ ಲಭ್ಯವಾಗುವಂತೆ ಮಾಡಬೇಕು. ಮಹಿಳಾ ಮತ್ತು ಮಕ್ಕಳ ಇಲಾಖೆ, ಕರ್ನಾಟಕ ಕಡ್ಡಾಯವಾಗಿ ಹಿಜಾಬ್ ತೀರ್ಪಿನಿಂದ ಪ್ರತಿಕೂಲ ಪರಿಣಾಮ ಬೀರುವ ವಿದ್ಯಾರ್ಥಿಗಳಿಗೆ ಮಾನಸಿಕ ಆರೋಗ್ಯ ಬೆಂಬಲವನ್ನು ಒದಗಿಸುವ ಕಾರ್ಯಕ್ರಮಗಳನ್ನು ಪ್ರಾರಂಭಿಸಬೇಕು. ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗ (KSHRC), ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗ (KMSC), ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ (KSCPCR) ಮತ್ತು ಕರ್ನಾಟಕ ರಾಜ್ಯ ಮಹಿಳಾ ಆಯೋಗ (KSCW) ಹಕ್ಕುಗಳ ಉಲ್ಲಂಘನೆಯ ಬಗ್ಗೆ ಸ್ವಯಂ-ಪ್ರೇರಿತ ದೂರು ದಾಖಲಿಸಿಕೊಳ್ಳಬೇಕು. ಮುಸ್ಲಿಂ ಮಹಿಳೆಯರು ಮತ್ತು ಅಪ್ರಾಪ್ತ ವಯಸ್ಕರು, ಮತ್ತು ಮುಸ್ಲಿಂ ವಿದ್ಯಾರ್ಥಿಗಳ ವಿರುದ್ಧ ಕಿರುಕುಳ, ತಾರತಮ್ಯ ಮತ್ತು ದ್ವೇಷ ಭಾಷಣದ ಪ್ರಕರಣಗಳಲ್ಲಿ ಮಧ್ಯಪ್ರವೇಶಿಸಬೇಕು” ಎಂದು ಪಿಯುಸಿಎಲ್ ವರದಿಯಲ್ಲಿ ಒತ್ತಾಯಿಸಿದೆ.

Join Whatsapp