ಬೆಂಗಳೂರು ; ಬಿಟ್ ಕಾಯಿನ್ ದಿನದಿಂದ ದಿನಕ್ಕೆ ಹೊಸ ತಿರುವು ಪಡೆದುಕೊಳ್ಳುತ್ತಿದ್ದು ಪ್ರಕರಣದ ಸಂಬಂಧ ಜಾರಿ ನಿರ್ದೇಶನಾಲಯ(ಇಡಿ)ಕ್ಕೆ ರಾಜ್ಯ ಸರ್ಕಾರವು ಬರೆದಿದ್ದ ಪತ್ರದಲ್ಲಿದ್ದ ಮಾಹಿತಿ ಬಹಿರಂಗಗೊಂಡಿದೆ. ಬಿಟ್ ಕಾಯಿನ್ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರವು ಜಾರಿ ನಿರ್ದೇಶನಾಲಯಕ್ಕೆ ಪತ್ರ ಬರೆದು ಮಾಹಿತಿ ನೀಡಿರುವುದು ಬೆಳಕಿಗೆ ಬಂದಿದೆ.
ಕಳೆದ 2020ರ ಡಿಸೆಂಬರ್ ನಲ್ಲಿಯೇ ಕೇಂದ್ರ ಅಪರಾಧ ದಳದ (ಸಿಸಿಬಿ) ತನಿಖೆಯ ವೇಳೆ ಶ್ರೀಕೃಷ್ಣ ಆರೋಪಿಯಾಗಿರುವ ಬಿಟ್ ಕಾಯಿನ್ ಹಗರಣ ಬಯಲಿಗೆ ಬಂದಿತ್ತು. ಮಾರ್ಚ್ ತಿಂಗಳಲ್ಲಿ ಇಡಿಗೆ ಪತ್ರದ ಮೂಲಕ ರಾಜ್ಯ ಸರ್ಕಾರ ಮಾಹಿತಿ ನೀಡಿತ್ತು. ಸಿಸಿಬಿಯಿಂದ ಮಾಹಿತಿ ಪಡೆದು ಇಡಿ ಅಧಿಕಾರಿಗಳು ಪ್ರಸ್ತುತ ತನಿಖೆ ನಡೆಸುತ್ತಿದ್ದಾರೆ. ಆರೋಪಿ ಶ್ರೀಕೃಷ್ಣ ಜೈಲಿನಲ್ಲಿದ್ದಾಗಲೇ ತನಿಖೆ ನಡೆಸಿರುವ ಬೆಂಗಳೂರು ವಲಯದ ಇಡಿ ಅಧಿಕಾರಿಗಳು, 3 ಬಾರಿ ಶ್ರೀಕಿಯನ್ನು ವಶಕ್ಕೆ ಪಡೆದು ಬಿಟ್ ಕಾಯಿನ್ ವ್ಯವಹಾರದ ಬಗ್ಗೆ ವಿಚಾರಣೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
ವಿದೇಶಗಳಲ್ಲಿ ಹಾಗೂ ಅಂತಾರಾಷ್ಟ್ರೀಯ ವೆಬ್ ಸೈಟ್ ಗಳನ್ನು ಹ್ಯಾಕ್ ಮಾಡಿದ್ದ ವಿಚಾರದಲ್ಲಿ ವಿಚಾರಣೆ ನಡೆಸಲಾಗಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿಚಾರಣೆಗೆ ಅಧಿಕಾರವಿಲ್ಲದ ಕಾರಣ ಇಡಿಗೆ ಸಿಸಿಬಿ ಮಾಹಿತಿ ನೀಡಿದ್ದು, ಸಿಸಿಬಿ ಅಧಿಕಾರಿಗಳು ನೀಡಿದ್ದ ಮಾಹಿತಿ ಅಧರಿಸಿ ಇಡಿ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ತನಿಖೆಯಲ್ಲಿ ಬಿಟ್ ಕಾಯಿನ್ ಗಳನ್ನು ಅಮಾನತುಪಡಿಸಿಕೊಳ್ಳಲು ಇಬ್ಬರು ತಜ್ಞ ಅಧಿಕಾರಿಗಳನ್ನು ಪಂಚನಾಮೆಗೆ ಕಳುಹಿಸಿಕೊಡುವಂತೆ ಸಿಸಿಬಿ ಪತ್ರ ಬರೆದಿತ್ತು. ಬಿಟ್ ಕಾಯಿನ್ಗಳನ್ನು ಭಾರತೀಯ ರೂಪಾಯಿಗೆ ವರ್ಗಾವಣೆ ಮಾಡಲು ಬಿಟ್ ಕಾಯಿನ್ ಖಾತೆ ತೆರೆಯಲು ರಾಜ್ಯ ಸರ್ಕಾರ ಅನುಮತಿ ನೀಡಿರುವ ಪತ್ರ ಕೂಡ ಬಹಿರಂಗವಾಗಿದೆ.