ಚೀನಾ ಲೋನ್ ಕಂಪನಿಗಳ ಮೇಲೆ ಇಡಿ ದಾಳಿ: 78 ಕೋಟಿ ರೂ. ಜಪ್ತಿ

Prasthutha|

ಬೆಂಗಳೂರು: ಚೀನಾ ಮೂಲದ ಲೋನ್ ಕಂಪನಿಗಳ ವಂಚನೆ ಪ್ರಕರಣಕ್ಕೆ ಸಂಬಂಧಿಸಿ ಅಕ್ರಮ ಹಣ ವರ್ಗಾವಣೆ ಆರೋಪದಡಿ ಇಡಿ (ಜಾರಿ ನಿರ್ದೇಶನಾಲಯ) ಅಧಿಕಾರಿಗಳು ನಗರದ 5 ಕಡೆ ದಾಳಿ ನಡೆಸಿ 78 ಕೋಟಿ ರೂ. ಜಪ್ತಿ ಮಾಡಿದ್ದಾರೆ.

- Advertisement -

ಚೀನಾ ಮೂಲದ ಲೋನ್ ಕಂಪನಿಗಳಿಂದ ಅಕ್ರಮ ಹಣ ವರ್ಗಾವಣೆ ಪ್ರಕರಣದ  ಸಂಬಂಧಿಸಿದಂತೆ ತನಿಖೆ ತೀವ್ರಗೊಳಿಸಿರುವ ಇಡಿ ಅಧಿಕಾರಿಗಳು, ಐದು ಸ್ಥಳಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಿದ್ದು, ಅಪಾರ ಪ್ರಮಾಣದ ಹಣವನ್ನು ವಶಕ್ಕೆ ಪಡೆದು, ಪರಿಶೀಲನೆ ಕೈಗೊಂಡಿದ್ದಾರೆ ಎಂದು ತಿಳಿದುಬಂದಿದೆ.

ಮೊಬೈಲ್ ಆಪ್ ಗಳ ಮೂಲಕ ಸಣ್ಣ ಮೊತ್ತದ ಸಾಲ ಪಡೆದ ಸಾರ್ವಜನಿಕರಿಗೆ ಸುಲಿಗೆ ಮತ್ತು ಕಿರುಕುಳದಲ್ಲಿ ತೊಡಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವಾರು ಸಂಸ್ಥೆಗಳು ಮತ್ತು ವ್ಯಕ್ತಿಗಳ ವಿರುದ್ಧ ನಗರದ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ 18 ಎಫ್ ಐಆರ್ ಗಳನ್ನು ಆಧರಿಸಿ, ಇಡಿ ನಗರದ ಪ್ರಮುಖ ಐದು ಸ್ಥಳಗಳ ಮೇಲೆ ದಾಳಿ ನಡೆಸಿ ಸುಮಾರು 78 ಕೋಟಿ ರೂ ವಶಕ್ಕೆ ಪಡೆದಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

- Advertisement -

ಇಡಿ ತನಿಖೆ ವೇಳೆ ಸಾಲ ನೀಡುವ ಐದು ಘಟಕಗಳು ಪತ್ತೆಯಾಗಿದ್ದು, ಇವುಗಳನ್ನು ಚೀನಾದ ಪ್ರಜೆಗಳು ನಿಯಂತ್ರಿಸುತ್ತಾರೆ ಎಂದು ತಿಳಿದುಬಂದಿದೆ. ಭಾರತೀಯರ ನಕಲಿ ದಾಖಲೆಗಳನ್ನು ಬಳಕೆ ಮಾಡಿಕೊಂಡು ಈ ಘಟಕಗಳ ಕಾರ್ಯಾಚರಣೆ ನಡೆಯುತ್ತವೆ ಎಂದು ತನಿಖೆ ವೇಳೆ ಬಯಲಾಗಿದೆ.

ಪಾವತಿ ಗೇಟ್ ವೇಗಳು ಮತ್ತು ಬ್ಯಾಂಕ್ ಗಳಲ್ಲಿ ಹೊಂದಿರುವ ವಿವಿಧ ವ್ಯಾಪಾರಿ ಐಡಿಗಳ ಮೂಲಕ ಈ ಸಂಸ್ಥೆಗಳು ತಮ್ಮ ಅಕ್ರಮ ವ್ಯವಹಾರ ನಡೆಸುತ್ತಿರುವುದು ಇಡಿ ದಾಳಿ ವೇಳೆ ಪತ್ತೆಯಾಗಿದೆ. ನಗರ ಕೇಂದ್ರ ಅಪರಾಧ ವಿಭಾಗದ ಪೊಲೀಸರು ನಡೆಸಿದ ತನಿಖೆ ಮತ್ತು ಮಾಹಿತಿಯ ಆಧಾರದ ಮೇಲೆ ಈ ಪ್ರಕರಣದಲ್ಲಿ ಇಡಿ ಶೋಧ ಕಾರ್ಯಾಚರಣೆ ನಡೆಸಿದೆ.

ರೇಜರ್ ಪೇ ಪ್ರೈವೇಟ್ ಲಿಮಿಟೆಡ್ ನ ಆವರಣ ಮತ್ತು ಈ ಘಟಕಗಳಿಗೆ ಸಂಬಂಧಿಸಿದ ಬ್ಯಾಂಕ್ ಗಳ ಅಧೀನ ಕಚೇರಿಗಳಲ್ಲೂ ಸಹ ಶೋಧ ಕಾರ್ಯಾಚರಣೆ ನಡೆಸಲಾಗಿದೆ. ಈ ದಾಳಿ ವೇಳೆ, ಹಲವು ಮಹತ್ವದ ಸಂಗತಿಗಳು ಹಾಗೂ ಅಪಾರ ಪ್ರಮಾಣದ ದಾಖಲೆಗಳು ಇಡಿ ಅಧಿಕಾರಿಗಳಿಗೆ ಸಿಕ್ಕಿವೆ.

ಚೀನಾದ ವ್ಯಕ್ತಿಗಳ ನಿಯಂತ್ರಣದಲ್ಲಿರುವ ಈ ಘಟಕಗಳಲ್ಲಿ 78 ಕೋಟಿ ರೂಪಾಯಿಗಳನ್ನು ವಶಕ್ಕೆ ಪಡೆಯಲಾಗಿದೆ. ಈ ಪ್ರಕರಣದಲ್ಲಿ ಒಟ್ಟು ಇದುವರೆಗೂ 95 ಕೋಟಿ ರೂಪಾಯಿ ವಶಕ್ಕೆ ಪಡೆಯಲಾಗಿದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.



Join Whatsapp