ಬೆಂಗಳೂರು: ಸರಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ನಿರ್ವಹಣೆಗಳಿಗಾಗಿ ವಿದ್ಯಾರ್ಥಿಗಳ ಪೋಷಕರಿಂದ ಮಾಸಿಕ ಕೊಡುಗೆಯನ್ನು ಪಡೆಯುವ ಮತ್ತು ಆ ಮೂಲಕ ಬಡವರ ಹಾಗೂ ಮಹಿಳಾ ಶಿಕ್ಷಣಕ್ಕೆ ಕುತ್ತು ತರಲಿರುವ, ಸರಕಾರಿ ಸುತ್ತೋಲೆಯನ್ನು ಈ ಕೂಡಲೇ ಹಿಂಪಡೆಯಬೇಕು ಎಂದು ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್ ವಾದಿ)- ಸಿಪಿಐ(ಎಂ) ಒತ್ತಾಯಿಸಿದೆ.
ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಯು. ಬಸವರಾಜ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದು, ದೇಣಿಗೆ ಸಂಗ್ರಹಿಸುವ ಸುತ್ತೋಲೆ ಸಾರ್ವಜನಿಕ ಶಿಕ್ಷಣವನ್ನು ದುರ್ಬಲಗೊಳಿಸುವ ಹಾಗೂ ಆ ಮೂಲಕ ಬಡವರು, ದಲಿತರು ಹಾಗೂ ಮಹಿಳಾ ಶಿಕ್ಷಣವನ್ನು ನಿರಾಕರಿಸುವ ಮತ್ತು ಸಾರ್ವಜನಿಕ ಶಿಕ್ಷಣವನ್ನು ಕಳಚಿಹಾಕಿ ಖಾಸಗಿ ಶಿಕ್ಷಣವನ್ನು ಬಲಗೊಳಿಸುವ, ದುರುದ್ದೇಶದಿಂದ ಹೊರಡಿಸಿದ ಸುತ್ತೋಲೆಯಾಗಿದೆ. ತಕ್ಷಣವೇ ಸದರಿ ಸುತ್ತೋಲೆಯನ್ನು ವಾಪಸು ಪಡೆಯಬೇಕು ಎಂದು ಆಗ್ರಹಿಸಿದ್ದಾರೆ.
ಈ ಸುತ್ತೋಲೆಯು, ಸರಕಾರಿ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳ ಶೈಕ್ಷಣಿಕ ಸ್ಥಿತಿಗತಿಯನ್ನು ಉತ್ತಮಪಡಿಸಲು ಹಾಗೂ ಸೌಲಭ್ಯಗಳಿಂದ ಬಲಪಡಿಸಲು, ವಿದ್ಯಾರ್ಥಿಗಳ ಪೋಷಕರುಗಳಿಂದ ಮಾಸಿಕ ತಲಾ 100 ರೂ.ಗಳ ಕೊಡುಗೆ ಅಥವಾ ದಾನಗಳನ್ನು ಸಂಗ್ರಹಿಸುವಂತೆ ಶಾಲಾ ಮೇಲುಸ್ತುವಾರಿಗಳಿಗೆ ಮತ್ತು ಆ ಮೂಲಕ ಅಪ್ರತ್ಯಕ್ಷವಾಗಿ ಶಾಲಾ ಶಿಕ್ಷಕ ಸಿಬ್ಬಂದಿ ವರ್ಗದವರಿಗೆ ಆದೇಶಿಸುತ್ತದೆ. ಈ ಕೊಡುಗೆಯನ್ನು ಮನವೊಲಿಸಿ ಪಡೆಯಬೇಕೇ ಹೊರತು ಬಲವಂತವಾಗಿಯಲ್ಲವೆಂದು ಸುತ್ತೋಲೆಯು ದಪ್ಪಕ್ಷರಗಳಲ್ಲಿ ಹೇಳಿದರೂ, ಪರಿಣಾಮ ಒಂದೇ ಆಗಿದೆ. ವಿದ್ಯಾರ್ಥಿಗಳ ಪೋಷಕರು ವಾರ್ಷಿಕ ಪ್ರತಿ ವರ್ಷ 1000 ರೂ. ಗಳ ಕೊಡುಗೆ ನೀಡುವಂತೆ ಇದು ಒತ್ತಾಯಿಸುತ್ತದೆ ಎಂದು ಅವರು ಹೇಳಿದ್ದಾರೆ.
ಈ ಕೊಡುಗೆಗಳ ಮೂಲಕ ಶಾಲೆ ಹಾಗೂ ಶೌಚಾಲಯಗಳ ಸ್ವಚ್ಛತೆ, ಕುಡಿಯುವ ನೀರು ಹಾಗೂ ವಿದ್ಯುತ್ ಬಿಲ್ ಪಾವತಿಸಲು ಮತ್ತು ಆಟದ ಮೈದಾನದ ಸುಧಾರಣೆ, ಗಣಕ ಯಂತ್ರಗಳ ರಿಪೇರಿ, ಬೋಧನೋಪಕರಣಗಳು, ಅಗತ್ಯವಾದ ಅತಿಥಿ ಶಿಕ್ಷಕರ ವೇತನಗಳು ಸೇರಿದಂತೆ, ಮೊದಲ ಹಾಗೂ ಎರಡನೇ ಆಧ್ಯತೆಯಲ್ಲಿ ಪಟ್ಟಿ ಮಾಡಿದ ಸುಮಾರು 17 ಅಗತ್ಯಗಳಿಗಾಗಿ ಖರ್ಚು ಮಾಡಲು ಮೇಲುಸ್ತುವಾರಿ ಸಮಿತಿಗಳಿಗೆ ಸೂಚಿಸುತ್ತದೆ ಮತ್ತು ಸರಕಾರ ತನ್ನ ಜವಾಬ್ದಾರಿಗಳಿಂದ ನುಣುಚಿಕೊಳ್ಳುತ್ತದೆ.
ಒಂದೆಡೆ, ಈ ಸುತ್ತೋಲೆಯು ಸರಕಾರಿ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಲ್ಲಿ ಶೈಕ್ಷಣಿಕ ಕೆಲಸಗಳಿಗೆ ಪೂರಕವಾದ ಸೌಲಭ್ಯಗಳಿಲ್ಲವೆಂದು ಮತ್ತು ಅವುಗಳಿಗಾಗಿ ಸರಕಾರ ನೆರವು ನೀಡದೆಂಬ ಸಂದೇಶವನ್ನು ಸಾರ್ವಜನಿಕರಿಗೆ ರವಾನಿಸುತ್ತದೆ. ಸೌಲಭ್ಯಗಳಿಲ್ಲದ ಶಾಲೆಗಳಿಗೆ ನಿಮ್ಮ ಮಕ್ಕಳನ್ನು ಯಾಕೆ ಸೇರಿಸುತ್ತೀರೆಂಬ ಪ್ರಶ್ನೆಯನ್ನು ಎಸೆಯುವ ಮೂಲಕ ಸಾರ್ವಜನಿಕ ಶಿಕ್ಷಣವನ್ನು ದುರ್ಬಲಗೊಳಿಸುವ ಹಾಗೂ ಶಿಕ್ಷಣ ಪಡೆಯಲೇ ಬೇಕೆಂಬುವವರನ್ನು ಖಾಸಗೀ ಶಿಕ್ಷಣ ಸಂಸ್ಥೆಗಳ ಕಡೆ ದೂಡುವ, ಜನ ಹಾಗೂ ಬಡವರ ವಿರೋಧಿ ಕೆಲಸವನ್ನು ಮಾಡುತ್ತದೆ ಎಂದು ಬಸವರಾಜ್ ದೂರಿದ್ದಾರೆ.
ಕೂಡಲೇ, ಈ ಸಂವಿಧಾನ ವಿರೋಧಿ ಹಾಗೂ ಬಡವರ, ದಲಿತರ ಮತ್ತು ಮಹಿಳಾ ವಿರೋಧಿಯಾದ ಸುತ್ತೋಲೆಯನ್ನು ವಾಪಸು ಪಡೆಯಬೇಕು. ಅದೇ ರೀತಿ, ಸರಕಾರದ ಯಾವೊಂದು ಶಾಲೆಯು ಮುಚ್ಚದಂತೆ ಮತ್ತು ಪ್ರತಿಯೊಂದು ಶಾಲೆಯು ಉತ್ತಮ ಗುಣಮಟ್ಟದ ಶಿಕ್ಷಣ ಹಾಗೂ ಸೌಲಭ್ಯಗಳನ್ನು ಒದಗಿಸಲು, ಅಗತ್ಯ ಸಾರ್ವಜನಿಕ ಬಂಡವಾಳವನ್ನು ತೊಡಗಿಸುವಂತೆ ಅವರು ಪತ್ರಿಕಾ ಹೇಳಿಕೆಯಲ್ಲಿ ಆಗ್ರಹಿಸಿದ್ದಾರೆ.