ಡಿವೈಎಸ್ ಪಿ ಲಕ್ಷ್ಮಿ ಆತ್ಮಹತ್ಯೆ ಪ್ರಕರಣ : ಅನುಮಾನ ಮೂಡಿಸಿತು ಸ್ನೇಹಿತರ ಹೇಳಿಕೆ; ತಂದೆಯಿಂದ ದೂರು; ನಾಲ್ವರು ಪೊಲೀಸ್ ವಶಕ್ಕೆ

Prasthutha|

ಬೆಂಗಳೂರು : ಸಿಐಡಿ ಡಿವೈಎಸ್ ಪಿ ಲಕ್ಷ್ಮಿ ಆತ್ಮಹತ್ಯೆ ಪ್ರಕರಣದ ಸುತ್ತ ಇದೀಗ ಹಲವು ಅನುಮಾನಗಳು ಮೂಡಲಾರಂಭಿಸಿವೆ. ಮಗಳ ಸಾವಿನ ಬಗ್ಗೆ ಲಕ್ಷ್ಮಿ ಅವರ ತಂದೆ ವೆಂಕಟೇಶ್ ಶಂಕೆ ವ್ಯಕ್ತಪಡಿಸಿದ್ದಾರೆ. ಲಕ್ಷ್ಮಿ ಅವರ ಸ್ನೇಹಿತರಾದ ಮನು ಮತ್ತು ಪ್ರಜ್ವಲ್ ಹೇಳಿಕೆಯ ಮೇಲೆ ಸಂಶಯ ಮೂಡಿದೆ ಎಂದು ಅವರು ಹೇಳಿದ್ದಾರೆ.

- Advertisement -

ನನ್ನ ಮಗಳಿಗೆ ಹಣ ಅಧಿಕಾರ, ಮನೆ ಎಲ್ಲವೂ ಇತ್ತು. ಆಕೆ ಯಾವುದೇ ಖಿನ್ನತೆಯಿಂದ ಬಳಲುತ್ತಿರಲಿಲ್ಲ. ಎಲ್ಲವೂ ಇರುವಾಗ ಆಕೆ ಯಾಕೆ ಖಿನ್ನತೆಗೆ ಹೋಗಬೇಕು? ಆತ್ಮಹತ್ಯೆ ಮಾಡಿಕೊಳ್ಳಬೇಕು? ನನ್ನ ಮಗಳ ಸಾವಿನ ಬಗ್ಗೆ ಅನುಮಾನವಿದೆ. ಈ ಬಗ್ಗೆ ನಾನು ಪೊಲೀಸರಿಗೆ ದೂರು ನೀಡಿದ್ದೇನೆ ಎಂದಿದ್ದಾರೆ.

ಆಕೆಯ ಸ್ನೇಹಿತರಾದ ಮನು, ಪ್ರಜ್ವಲ್ ಹೇಳುವ ಪ್ರಕಾರ, ಲಕ್ಷ್ಮಿ ಅವರ ಪತಿ ಹೈದರಾಬಾದ್ ನಲ್ಲಿದ್ದಾರೆ ಎಂದು ಬೇಜಾರಲ್ಲಿದ್ದರು. ಊಟ ಮುಗಿಸಿ ರೂಮಿಗೆ ಹೋಗಿದ್ದಾರೆ. ಎಷ್ಟೊತ್ತಾದರೂ ಹೊರಬಾರದಿದ್ದಾಗ ಬಾಗಿಲು ಒದ್ದು ಒಳಹೋಗಿ ನೋಡಿದರೆ ಕಿಟಕಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಅವರ ಕಾಲು ಕೂಡ ನೆಲಕ್ಕೆ ತಾಗಿಕೊಂಡಿತ್ತು ಎಂದು ಹೇಳಿದ್ದಾರೆ.

- Advertisement -

ಆದರೆ, ಅವರ ಈ ಹೇಳಿಕೆ ಅನುಮಾನಕ್ಕೆ ಕಾರಣವಾಗಿದೆ. ನನ್ನ ಮಗಳಿಗೆ ಬೇಜಾರಿದ್ದರೆ, ಮಾನಸಿಕ ಒತ್ತಡವಿದ್ದರೆ ಆಕೆ ಮನೆಯಲ್ಲೇ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಳು. ಬೇರೆಯವರ ಮನೆಗೆ ಹೋಗಿ ಯಾಕೆ ಹೀಗೆ ಮಾಡಿಕೊಳ್ಳುತ್ತಿದ್ದಳು? ಎಂದು ವೆಂಕಟೇಶ್ ಪ್ರಶ್ನಿಸಿದ್ದಾರೆ.

ನಾಲ್ವರು ವಶಕ್ಕೆ : ಲಕ್ಷ್ಮಿ ಅವರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ನಾಲ್ವರನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ ಎಂದು ವರದಿಯೊಂದು ತಿಳಿಸಿದೆ. ಹೆಚ್ಚಿನ ವಿವರಗಳು ತಿಳಿದುಬಂದಿಲ್ಲ.

ಕೋಲಾರದ ಮಾಲೂರಿನ ಮೂಲದವರಾದ ಲಕ್ಷ್ಮಿ 2014ರ ಬ್ಯಾಚ್ ಕೆಪಿಎಸ್ ಸಿ ಅಧಿಕಾರಿಯಾಗಿದ್ದು, 2017ಕ್ಕೆ ನೇಮಕಾತಿಗೊಂಡಿದ್ದರು. ನಿನ್ನೆ ಸ್ನೇಹಿತರ ಮನೆಗೆ ಊಟಕ್ಕೆಂದು ತೆರಳಿದ್ದ ಅವರು, ಅಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ.  



Join Whatsapp