ಮಂಗಳೂರು: ತುಳುನಾಡಿನ ಜನರು ಉದ್ಯೋಗವಿಲ್ಲದೇ ಸಂಕಷ್ಟದಲ್ಲಿದ್ದಾರೆ. ಆದರೆ ಜಿಲ್ಲೆಯ ಜನಪ್ರತಿನಿಧಿಗಳು ಯುವ ಜನರ ಕೈಗೆ ತಲವಾರು ಕೊಟ್ಟು ಕ್ರಿಮಿನಲ್ ಗಳಾಗಿ ಮಾಡುತ್ತಿದ್ದಾರೆ. ಮುಸ್ಲಿಂ, ಕ್ರಿಶ್ಚಿಯನ್ನರನ್ನು ಬೈಯ್ಯುವಂತೆ ಪ್ರೇರೇಪಣೆ ನೀಡುವುದು ಯೋಗ್ಯತೆಯಲ್ಲ. ಆ ರೀತಿ ಮಾಡುತ್ತಿರುವ ಸಂಸದ ನಳಿನ್ ಕುಮಾರ್ ಹಾಗೂ ಶಾಸಕರಾದ ವೇದವ್ಯಾಸ ಕಾಮತ್, ಭರತ್ ಶೆಟ್ಟಿ ನಿಜವಾದ ನಾಯಕರಲ್ಲ, ನಾಲಾಯಕ್ ಗಳು ಎಂದು ಡಿವೈಎಫ್ಐ ರಾಜ್ಯಾಧ್ಯಕ್ಷ ವಾಗ್ದಾಳಿ ನಡೆಸಿದರು.
ನಗರದ ಹಂಪನಕಟ್ಟೆಯ ಕ್ಲಾಕ್ ಟವರ್ ಬಳಿ ಡಿವೈಎಫ್ಐ ಮಂಗಳೂರು ನಗರ ಸಮಿತಿ ಆಯೋಜಿಸಿದ ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ಸಂಘಪರಿವಾರ ಅಮಾಯಕ ವಿದ್ಯಾರ್ಥಿ ಯುವಜನರ ಮೇಲೆ ಹಲ್ಲೆ ನಡೆಸುವ ಮೂಲಕ ಗೂಂಡಾಗಿರಿ ನಡೆಸಿ ಜಿಲ್ಲೆಯ ಕೋಮು ಸಾಮರಸ್ಯವನ್ನು ಹಾಳುಗೆಡಿಸಲು ಪ್ರಯತ್ನಿಸುತ್ತಿದೆ. ಜಿಲ್ಲೆಯ ಪೊಲೀಸ್ ಇಲಾಖೆ ಈ ರೀತಿ ಗೂಂಡಾಗಿರಿ ನಡೆಸುವವರ ಮೇಲೆ ಯಾವುದೇ ಕ್ರಮವನ್ನು ಕೈಗೊಳ್ಳದೆ ಸಂಘಪರಿವಾರಕ್ಕೆ ಸಂಪೂರ್ಣ ಶರಣಾಗತಿಯಾದಂತೆ ವರ್ತಿಸುತ್ತಿದೆ. ಶಿಕ್ಷಣ, ಆರೋಗ್ಯ, ಉದ್ಯೋಗದ ಪ್ರಶ್ನೆಗಳು ಕೇಳದಂತೆ ಯುವ ಜನರ ಮನಸ್ಸನ್ನು ಭಾವನಾತ್ಮಕವಾಗಿ ಬೇರೆಡೆಗೆ ಸೆಳೆಯುವ ಪ್ರಯತ್ನ ನಡೆಯುತ್ತಿದೆ ಎಂದು ಟೀಕಿಸಿದರು.
ಡಿವೈಎಫ್ಐ ಮಾಜಿ ರಾಜ್ಯದ್ಯಕ್ಷ ಸುನೀಲ್ ಕುಮಾರ್ ಬಜಾಲ್, ಡಿವೈಎಫ್ಐ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ , ಜೆಡಿಎಸ್ ನಾಯಕಿ ಸುಮತಿ ಎಸ್ ಹೆಗ್ಡೆ, ಮನೋಜ್ ವಾಮಂಜೂರು ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದರು.
ಈ ಸಂದರ್ಭ ಡಿವೈಎಫ್ಐ ಉಳ್ಳಾಲ ವಲಯ ಸಮಿತಿ ಅಧ್ಯಕ್ಷ ರಫೀಕ್ ಹರೇಕಳ, ಕಾರ್ಯದರ್ಶಿ ಸುನಿಲ್ ತೇವುಲ, ಕೃಷ್ಣಪ್ಪ ಕೊಂಚಾಡಿ, ಜೇರಾಲ್ಡ್ ಟವರ್, ಯಾದವ ಶೆಟ್ಟಿ, ಯೋಗಿಶ್ ಜಪ್ಪಿನಮೊಗರು, ಅಲ್ತಾಫ್ ತುಂಬೆ, ಕೃಷ್ಣ ತಣ್ಣೀರುಬಾವಿ ಮುಂತಾದವರು ಉಪಸ್ಥಿತರಿದ್ದರು.