ನವದೆಹಲಿ: ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಅವರು ಬುಧವಾರ ಭಾರತದ ಸುಪ್ರೀಂಕೋರ್ಟ್ ನ 50ನೇ ಮುಖ್ಯ ನ್ಯಾಯಮೂರ್ತಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು.
ರಾಷ್ಟ್ರಪತಿ ಭವನದಲ್ಲಿ ನಡೆದ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಅವರಿಗೆ ಪ್ರಮಾಣ ವಚನ ಬೋಧಿಸಿದರು.
ಈ ಸಂದರ್ಭದಲ್ಲಿ ಉಪರಾಷ್ಟ್ರಪತಿ ಜಗದೀಪ್ ಧಂಕರ್, ಲೋಕಸಭಾ ಸ್ಪೀಕರ್ ಓಂ ಬಿರ್ಲಾ, ಕೇಂದ್ರ ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮತ್ತಿತರರು ಉಪಸ್ಥಿತರಿದ್ದರು.
ನವೆಂಬರ್ 9 ರಂದು ನಿವೃತ್ತರಾದ ಮುಖ್ಯ ನ್ಯಾಯಮೂರ್ತಿ ಯು.ಯು.ಲಲಿತ್ ಅವರ ಉತ್ತರಾಧಿಕಾರಿಯಾಗಿ ಮಾಜಿ ಸಿಜೆಐ ವೈ.ವಿ.ಚಂದ್ರಚೂಡ್ ಅವರ ಪುತ್ರರಾಗಿರುವ ನ್ಯಾಯಮೂರ್ತಿ ಚಂದ್ರಚೂಡ್ ಅವರು ಎರಡು ವರ್ಷಗಳ ಕಾಲ ದೇಶದ ಸರ್ವೋಚ್ಚ ನ್ಯಾಯಾಲಯದ ಚುಕ್ಕಾಣಿ ಹಿಡಿಯಲಿದ್ದಾರೆ.
ಡಿ. ವೈ. ಚಂದ್ರಚೂಡ್ ಅವರ ತಂದೆ ವೈ. ವಿ. ಚಂದ್ರಚೂಡ ಅವರು 1978ರ ಫೆಬ್ರವರಿ 22ರಿಂದ 1985ರ ಜುಲೈ 11ರವರೆಗೆ ಭಾರತದ ಸಿಜೆಐ ಆಗಿ ಅತಿ ದೀರ್ಘ ಕಾಲ ಸೇವೆ ಸಲ್ಲಿಸಿದ ದಾಖಲೆ ಹೊಂದಿದ್ದಾರೆ.
ಡಿ. ವೈ. ಚಂದ್ರಚೂಡ್ ಅವರ ಅಧಿಕಾರಾವಧಿ ಎರಡು ವರ್ಷಗಳ ಕಾಲ ಇರುತ್ತದೆ. 2024ರ ನವೆಂಬರ್ 10ಕ್ಕೆ ಅವರು ನಿವೃತ್ತರಾಗುವರು. ಸುಪ್ರೀಂ ಕೋರ್ಟ್ ಸಿಜೆಐ ನಿವೃತ್ತಿ ಪ್ರಾಯ 65. ನಿನ್ನೆ ಸಿಜೆಐ ಉದಯ್ ಉಮೇಶ್ ಲಲಿತ್ ನಿವೃತ್ತರಾಗಿದ್ದರು. ಅಕ್ಟೋಬರ್ 11ರಂದು ಲಲಿತ್ ಅವರು ಚಂದ್ರಚೂಡ್ ಅವರ ಹೆಸರನ್ನು ಹಿರಿತನದ ಆಧಾರದಲ್ಲಿ ಸಿಜೆಐ ಹುದ್ದೆಗೆ ಶಿಫಾರಸು ಮಾಡಿದ್ದರು. ಅಕ್ಟೋಬರ್ 17ರಂದು ರಾಷ್ಟ್ರಪತಿ ಮುರ್ಮು ಚಂದ್ರಚೂಡರನ್ನು ಮುಂದಿನ ರಾಷ್ಟ್ರಪತಿಯಾಗಿ ನೇಮಕ ಮಾಡಿದ್ದರು.
ಚಂದ್ರಚೂಡ್ 1959ರ ನವೆಂಬರ್ 11ರಂದು ಜನಿಸಿದವರು. 2016ರ ಮೇ 13ರಂದು ಅವರು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಆಗಿದ್ದರು. ಅಯೋಧ್ಯೆ, ಖಾಸಗಿತನ ಮತ್ತು ಬಹು ಸಂಗಾತಿ ಮೊದಲಾದ ವಿಷಯಗಳಲ್ಲಿ ಅವರು ಮಹತ್ವದ ತೀರ್ಪುಗಳನ್ನು ನೀಡಿದ್ದರು.
ಆಧಾರ್, ಶಬರಿಮಲೆ ವಿಷಯ, ಏಕಲಿಂಗಿ ಮದುವೆ ಮೊದಲಾದವುಗಳಲ್ಲಿ ಸಹ ಅವರ ತೀರ್ಪು ಗಮನಾರ್ಹವಾದುದಾಗಿತ್ತು.
ಇತ್ತೀಚೆಗೆ ಬಸಿರಾದ ಹೆಣ್ಣೇ ತೀರ್ಮಾನ ತೆಗೆದುಕೊಂಡು ಗರ್ಭಪಾತ ಮಾಡಿಸಿಕೊಳ್ಳುವ ಹಕ್ಕು ಹೊಂದಿದ್ದಾಳೆ ಎಂಬ ತೀರ್ಪನ್ನೂ ಅವರು ನೀಡಿದ್ದರು.