ಸುಸೂತ್ರವಾಗಿ ಮುಗಿದ ದಸರಾ ಮಹೋತ್ಸವ । ಜಿಲ್ಲಾಡಳಿತದಿಂದ ಪತ್ರಿಕಾಗೋಷ್ಠಿ

Prasthutha|

ಮೈಸೂರು : ದಸರಾ ಮಹೋತ್ಸವ-2021 ಸುಸೂತ್ರವಾಗಿ, ಯಶಸ್ವಿಯಾಗಿ ನೆರವೇರಿದೆ. ದಸರಾ ಉನ್ನತಾಧಿಕಾರ ಸಮಿತಿಯ ಅಧ್ಯಕ್ಷರೂ ಆಗಿರುವ ಮುಖ್ಯಮಂತ್ರಿ ಶ್ರೀ ಬಸವರಾಜ ಬೊಮ್ಮಾಯಿ ಅವರು ನೀಡಿದ ಬೆಂಬಲ ಹಾಗೂ ಪ್ರೋತ್ಸಾಹಕ್ಕಾಗಿ ಅವರಿಗೆ ಧನ್ಯವಾದಗಳನ್ನು ಸಲ್ಲಿಸುತ್ತೇನೆ. ಈ ಬಾರಿಯ ದಸರಾ ಮಹೋತ್ಸವವನ್ನು ಅಚ್ಚುಕಟ್ಟಾಗಿ ಆಯೋಜಿಸಲು ನಮ್ಮೊಂದಿಗೆ ಕೈಜೋಡಿಸಿದ ಜಿಲ್ಲೆಯ ಸಂಸದರು, ಎಲ್ಲಾ ಶಾಸಕರು, ನಿಗಮ ಮಂಡಳಿಗಳ ಅಧ್ಯಕ್ಷರು, ಮೈಸೂರಿನ ಎಲ್ಲಾ ಜನಪ್ರತಿನಿಧಿಗಳು, ಮುಖಂಡರು, ಜಿಲ್ಲಾಧಿಕಾರಿಗಳು, ಪೊಲೀಸ್ ಆಯುಕ್ತರು ಸೇರಿದಂತೆ ಜಿಲ್ಲೆಯ ಸಮಗ್ರ ಆಡಳಿತಕ್ಕೆ ಹಾಗೂ ಮೈಸೂರಿನ ಮಹಾಜನತೆಗೆ ಧನ್ಯವಾದಗಳು.

- Advertisement -

ದಸರಾ ಕಾರ್ಯಕ್ರಮಗಳನ್ನು ಸರಳವಾಗಿ ಆಯೋಜಿಸಿದ್ದರಿಂದ ಹೆಚ್ಚು ಜನರು ಬಂದು ಕಾರ್ಯಕ್ರಮಗಳನ್ನು ಕಣ್ತುಂಬಿಕೊಳ್ಳಲು ಅವಕಾಶ ಇರಲಿಲ್ಲ. ಆದರೆ ನಮ್ಮ ಎಲ್ಲಾ ಮುದ್ರಣ ಹಾಗೂ ಎಲೆಕ್ಟ್ರಾನಿಕ್ ಮಾಧ್ಯಮಗಳು ನೀಡಿದ ಉತ್ತಮ ಪ್ರಚಾರದಿಂದಾಗಿ ಈ ಕಾರ್ಯಕ್ರಮಗಳು ಜನರನ್ನು ತಲುಪುವಂತಾಯಿತು. ದಸರಾ ಆರಂಭದಿಂದಲೂ ಮಾಧ್ಯಮಗಳು ನಮಗೆ ನೀಡಿದ ಬೆಂಬಲ, ಪ್ರೋತ್ಸಾಹ ತುಂಬಾ ದೊಡ್ಡದು. ಅದಕ್ಕಾಗಿ ಮಾಧ್ಯಮಗಳಿಗೆ ವಿಶೇಷವಾಗಿ ಧನ್ಯವಾದಗಳನ್ನು ಸಲ್ಲಿಸುತ್ತೇನೆ.

ದಸರಾ ಕಾರ್ಯಕ್ರಮಗಳನ್ನು ಹೆಚ್ಚು ಜನರು ವೀಕ್ಷಿಸಲು ಅವಕಾಶ ಸಿಗಿದ್ದಿದ್ದರೂ ವರ್ಚುವಲ್ ಆಗಿ ಲಕ್ಷಾಂತರ ಜನರು ನೋಡಿದ್ದಾರೆ. ಜಂಬೂಸವಾರಿ ಕಾರ್ಯಕ್ರಮವನ್ನು ನಮ್ಮ ಅಧಿಕೃತ ಫೇಸ್‌ಬುಕ್‌ ‌ನಲ್ಲಿ 1 ಲಕ್ಷದ 85 ಸಾವಿರ, ಯೂಟ್ಯೂಬ್ ‌ನಲ್ಲಿ 32500 ಹಾಗೂ ವೆಬ್‌ಸೈಟ್‌ನಲ್ಲಿ 5300 ವೀಕ್ಷಣೆ ಆಗಿದೆ. ದಸರಾ ಉದ್ಘಾಟನೆಯಿಂದ ಜಂಬೂಸವಾರಿ ವರೆಗೆ ಫೇಸ್‌ಬುಕ್‌ನಲ್ಲಿ 5.12 ಲಕ್ಷ, ಯೂಟ್ಯೂಬ್ ‌ನಲ್ಲಿ 49500 ಹಾಗೂ ವೆಬ್‌ಸೈಟ್‌ನಲ್ಲಿ 23150 ವೀಕ್ಷಣೆ ಆಗಿದೆ.

- Advertisement -

ಈ ಬಾರಿಯ ದಸರಾ ಮಹೋತ್ಸವದಲ್ಲಿ ಹಲವು ವಿಶೇಷಗಳನ್ನು ನಾವು ಕಾಣಬಹುದು. ಮುಖ್ಯವಾಗಿ ಚಿನ್ನದ ಅಂಬಾರಿ ಮೇಲೆ‌ ಸಾಗುವ ಶ್ರೀ ಚಾಮುಂಡೇಶ್ವರಿ ಉತ್ಸವಮೂರ್ತಿಯನ್ನು ವಿಶೇಷವಾಗಿ ಅಲಂಕೃತಗೊಂಡ ವಾಹನದಲ್ಲಿ ನಾದಸ್ವರ, ವೇದಘೋಷಗಳ ಮುಂತಾದ ಕಲಾತಂಡಗಳೊಂದಿಗೆ ಚಾಮುಂಡಿಬೆಟ್ಟದಿಂದ ಅರಮನೆಗೆ ತರಲಾಯಿತು. ಜನರು ಮಾರ್ಗ ಮಧ್ಯೆ ತಾಯಿ ಶ್ರೀ ಚಾಮುಂಡೇಶ್ವರಿ ದೇವಿಯನ್ನು ನೋಡಿ ಭಕ್ತಿಪರವಶರಾಗಿ ಸಂತೋಷಪಟ್ಟರು.

ಕಳೆದ ವರ್ಷ ಸಾಂಸ್ಕೃತಿಕ ಕಾರ್ಯಕ್ರಮಗಳು ಕೇವಲ ಅರಮನೆ ವೇದಿಕೆಗೆ ಸೀಮಿತವಾಗಿತ್ತು.
ಸರಳವಾಗಿ ದಸರಾ ಆಯೋಜಿಸುತ್ತಿದ್ದರೂ ಸಹ ಕಲಾವಿದರಿಗೆ ಹೆಚ್ಚು ಪ್ರೋತ್ಸಾಹ ನೀಡುವ ದೃಷ್ಟಿಯಿಂದ ಈ ವರ್ಷ ಹೆಚ್ಚು ಕಾರ್ಯಕ್ರಮಗಳನ್ನು ರೂಪಿಸಲಾಯಿತು. ಅರಮನೆ ವೇದಿಕೆಯಲ್ಲಿ ಪ್ರತಿ ಸಂಜೆ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳ ಜೊತೆಗೆ ಸೂರ್ಯೋದಯದಿಂದ ಸೂರ್ಯಾಸ್ತದ ವರೆಗೆ ಎನ್ನುವ ಮತ್ತೊಂದು ವಿಶೇಷ ಕಾರ್ಯಕ್ರಮ ಆಯೋಜಿಸಲಾಯಿತು. ಕಲಾಮಂದಿರದಲ್ಲಿ ಎರಡು ದಿನ ದಿನಪೂರ್ತಿ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಮೈಸೂರಿನಿಂದ ಹೊರಗೆ ನಂಜನಗೂಡಿನಲ್ಲೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಯಿತು. ಈ ಎಲ್ಲಾ ವೇದಿಕೆಗಳಲ್ಲಿ ಸುಮಾರು 100 ಕಲಾತಂಡದವರಿಗೆ ಅವಕಾಶ ಮಾಡಿಕೊಡಲಾಗಿದೆ.

ಸತತ ಎರಡನೇ ಬಾರಿಗೆ ಅಭಿಮನ್ಯು ಆನೆ ಅಂಬಾರಿಯನ್ನು ಯಶಸ್ವಿಯಾಗಿ ಹೊತ್ತು ಸಾಗಿತು. ಗಜಪಡೆಗಳ ಪೋಷಣೆ ಮಾಡಿ ಅವುಗಳಿಗೆ ತರಬೇತಿ ನೀಡಿದ ಮಾವುತರು, ಕಾವಾಡಿಗರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಬಹಳ ಅಚ್ಚುಕಟ್ಟಾಗಿ ಕಾರ್ಯನಿರ್ವಹಿಸಿದರು.

ಲಾಕ್‌ಡೌನ್ ಪರಿಣಾಮವಾಗಿ ನಲುಗಿಹೋಗಿದ್ದ ಪ್ರವಾಸೋದ್ಯಮ ಕ್ಷೇತ್ರಕ್ಕೆ ಉತ್ತೇಜನ ನೀಡಲು ದೀಪಾಲಂಕಾರಕ್ಕೆ ವಿಶೇಷ ಒತ್ತು ನೀಡಲಾಗಿದೆ. 2020 ಮತ್ತು 2019ರ ದಸರಗಿಂತ ಹೆಚ್ಚಿನ ಆಕರ್ಷಣೆ ಈ ಬಾರಿ ಇದೆ. 105 ಕಿ.ಮೀ ಉದ್ದದಲ್ಲಿ 119ರಸ್ತೆಗಳು, 96 ವೃತ್ತಗಳು, 49 ಪ್ರತಿಕೃತಿಗಳು ವಿಶೇಷವಾಗಿತ್ತು. 60 ಜನ ಇಂಜಿನಿಯರ್‌ಗಳು ಕೆಲಸ ಮಾಡಿದ್ದಾರೆ. ಗುತ್ತಿಗೆದಾರರು, ಸಿಬ್ಬಂದಿಗಳು, ವಿದ್ಯುತ್ ಕೆಲಸಗಾರರು ಸೇರಿ ಸುಮಾರು 400 ಜನ ಈ ವಿಶೇಷ ದೀಪಾಲಂಕಾರಕ್ಕಾಗಿ ಕೆಲಸ ಮಾಡಿದ್ದಾರೆ. ಕಣ್ಣಿಗೆ ಹಬ್ಬ, ಮನಸ್ಸಿಗೆ ಉಲ್ಲಾಸ ನೀಡುವ ದೀಪಾಲಂಕಾರವನ್ನು ಕಣ್ತುಂಬಿಕೊಂಡ ಪ್ರವಾಸಿಗರು ಹಾಗೂ ಮೈಸೂರಿನ ಮಹಾಜನತೆ ಅತೀವ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಈ ಬಾರಿಯ ದಸರಾ ಉದ್ಘಾಟಕರಾದ ಮಾಜಿ ಮುಖ್ಯಮಂತ್ರಿ, ರಾಜಕೀಯ ಮುತ್ಸದ್ಧಿ ಎಸ್.ಎಂ.ಕೃಷ್ಣ ಅವರು ದಸರಾ ಉದ್ಘಾಟನಾ ಸಮಾರಂಭದಲ್ಲಿ ಮೈಸೂರು ಅಭಿವೃದ್ಧಿಗೆ ಪ್ರವಾಸೋದ್ಯಮ ಹಬ್ ಮಾಡುವಂತೆ ಸಲಹೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಪ್ರವಾಸೋದ್ಯಮದ ಉತ್ತೇಜನಕ್ಕಾಗಿ ಮಾನ್ಯ ಮುಖ್ಯಮಂತ್ರಿಯವರು ದೀಪಾಲಂಕಾರವನ್ನು ಇನ್ನೂ 9 ದಿನಗಳ ವರೆಗೆ ವಿಸ್ತರಿಸಲು ಆದೇಶಿಸಿದ್ದಾರೆ.

ಎಸ್.ಎಂ. ಕೃಷ್ಣ ಅವರು ಮೈಸೂರಿನಲ್ಲಿ ಫಿಲಂ ಸಿಟಿ, ವಿಮಾನ ನಿಲ್ದಾಣದಲ್ಲಿ ರನ್ ವೇ ಅಭಿವೃದ್ಧಿ ಮುಂತಾದ ಸಲಹೆಗಳನ್ನು ನೀಡಿದ್ದರು. ಈ ಬಗ್ಗೆ ಈಗಾಗಲೇ ಮುಖ್ಯಮಂತ್ರಿಯವರೊಂದಿಗೆ ಚರ್ಚಿಸಿದ್ದೇನೆ. ಸದ್ಯದಲ್ಲೇ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಸಭೆ ನಡೆಸಲಾಗುವುದು.

ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಸ್ಮರಣಾರ್ಥ ಅರಮನೆ ವೇದಿಕೆಯಲ್ಲಿ ಮೊನ್ನೆ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ 12 ಜನ ಪ್ರತಿಷ್ಠಿತರಿಗೆ ಆದಿಚುಂಚನಗಿರಿ ಸಂಸ್ಥಾನದ ಪೀಠಾಧ್ಯಕ್ಷರಾದ ಶ್ರೀ ಶ್ರೀ ಶ್ರೀ ನಿರ್ಮಾಲಾನಂದ ಸ್ವಾಮೀಜಿಗಳು ಪ್ರಶಸ್ತಿ ಪ್ರದಾನ ಮಾಡಿದರು. ಮುಂದಿನ ಸಾಲಿನಿಂದ ರಾಜ್ಯ ಸರ್ಕಾರದ ವತಿಯಿಂದ ಪ್ರಶಸ್ತಿ ನೀಡುವ ಬಗ್ಗೆ ಮುಖ್ಯಮಂತ್ರಿಗಳಿಗೆ ಪತ್ರ ಬರೆಯಲಾಗಿದೆ.

ದಸರಾ ಮಹೋತ್ಸವಕ್ಕೆ ಈ ವರ್ಷ ಮುಖ್ಯ ಮಂತ್ರಿಗಳು 6 ಕೋಟಿ ಮಂಜೂರು ಮಾಡಿದ್ದರು. ಈ ಅನುದಾನದಲ್ಲಿ ಈಗಾಗಲೇ ಚಾಮರಾಜನಗರ ದಸರಾ ಮತ್ತು ಶ್ರೀರಂಗಪಟ್ಟಣ ದಸರಾಕ್ಕೆ ತಲಾ 50 ಲಕ್ಷ ಹಾಗೂ ಅರಕಲಗೂಡು ದಸರಾಗೆ 20 ಲಕ್ಷ ರೂ. ಅನುದಾನ ಬಿಡುಗಡೆ ಮಾಡಲಾಗಿದೆ. ಕಳೆದ ವರ್ಷ ದಸರಾ ಮುಗಿದ ಕೂಡಲೇ ಖರ್ಚುವೆಚ್ಚದ ಮಾಹಿತಿಯನ್ನು ಕೊಟ್ಟಿದ್ದೆ. ಅದರಂತೆ ಈ ವರ್ಷವೂ ಸದ್ಯದಲ್ಲೇ ಅದರ ಖರ್ಚುವೆಚ್ಚದ ಮಾಹಿತಿ ನೀಡಲಾಗುವುದು.

2021-22ನೇ ಸಾಲಿನಲ್ಲಿ ಸಹಕಾರಿ ಸಂಸ್ಥೆಗಳಿಂದ 30 ಲಕ್ಷ ರೈತರಿಗೆ 20,810 ಕೋಟಿ ರೂ. ಸಾಲ ನೀಡುವ ಗುರಿ ಹೊಂದಲಾಗಿದೆ. ಏಪ್ರಿಲ್ 1 ರಿಂದ ಇಲ್ಲಿಯವರೆಗೆ 12 ಲಕ್ಷ 90 ಸಾವಿರ ರೈತರಿಗೆ 9200 ಕೋಟಿ ರೂ.ಗಳನ್ನು ನೀಡಲಾಗಿದೆ.

ಪತ್ರಿಕಾಗೋಷ್ಠಿಯಲ್ಲಿ ಸಂಸದರಾದ ಪ್ರತಾಪ್ ಸಿಂಹ, ಶಾಸಕ ಜಿ.ಟಿ.ದೇವೇಗೌಡ, ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್, ಪೊಲೀಸ್ ಆಯುಕ್ತ ಚಂದ್ರಗುಪ್ತ, ಎಸ್ ಪಿ ಆರ್.ಚೇತನ್, ಡಿಸಿಪಿ ಪ್ರದೀಪ್ ಗುಂಟಿ, ಜಿಪಂ ಸಿಇಓ ಯೋಗೇಶ್, ಸಚಿವರ ವಿಶೇಷ ಕರ್ತವ್ಯಾಧಿಕಾರಿ ದಿನೇಶ್ ಗೂಳಿಗೌಡ, ಜಿಲ್ಲಾ ಬಿಜೆಪಿ ಅಧ್ಯಕ್ಷ ಶ್ರೀವತ್ಸ, ಮೂಡಾ ಅಧ್ಯಕ್ಷ ಹೆಚ್.ವಿ.ರಾಜೀವ್, ಅರಣ್ಯ ವಸತಿ ಮತ್ತು ವಿಹಾರಧಾಮಗಳ ಸಂಸ್ಥೆಗಳ ಅಧ್ಯಕ್ಷ ಅಪ್ಪಣ್ಣ, ಮೇಯರ್ ಸುನಂದಾ ಪಾಲನೇತ್ರ, ಮೈ.ವಿ.ರವಿಶಂಕರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.



Join Whatsapp