ಚಿಕ್ಕಮಗಳೂರು: ಚಿಕ್ಕಮಗಳೂರಿನಲ್ಲಿ ಕಾಡಾನೆ ದಾಳಿ ಮುಂದುವರೆದಿದ್ದು, ಸೋಮವಾರ ಟಿಂಬರ್ ಕಾರ್ಮಿಕನೊಬ್ಬರು ದೇಹ ಛಿದ್ರ ಛಿದ್ರಗೊಂಡು ಪ್ರಾಣ ಕಳಕೊಂಡಿದ್ದಾರೆ. ದಾಳಿಯ ತೀವ್ರತೆಗೆ ಆನೆಯು ತನ್ನ ಒಂದು ದಂತವನ್ನೇ ಕಳೆದುಕೊಂಡಿದೆ. ಘಟನೆ ಚಿಕ್ಕಮಗಳೂರು ತರೀಕೆರೆ ತಾಲ್ಲೂಕು ತಣಿಗೆಬೈಲ್ನ ವರ್ತೆಗುಂಡಿ ಗ್ರಾಮದಲ್ಲಿ ನಡೆದಿದೆ.
35 ವರ್ಷದ ಅಕ್ಬರ್ ಎಂಬವರು ಆನೆ ದಾಳಿಗೆ ಬಲಿಯಾದ ವ್ಯಕ್ತಿ. ಅವರು ಟಿಂಬರ್ ಕಾರ್ಮಿಕರಾಗಿ ಜೀವನ ಸಾಗಿಸುತ್ತಿದ್ದು, ಪತ್ನಿ ಹಾಗೂ ಇಬ್ಬರು ಮಕ್ಕಳಿದ್ದಾರೆ.
ಮಧ್ಯಾಹ್ನ ತೋಟಕ್ಕೆ ಕಾಡಾನೆ ಲಗ್ಗೆ ಇಟ್ಟಿದ್ದು, ಜನರು ತೋಟದ ಸುತ್ತಲೂ ನಿಂತು ಅದನ್ನು ಹಿಮ್ಮೆಟ್ಟಿಸುವ ಪ್ರಯತ್ನ ನಡೆಸಿದ್ದರು. ಈ ವೇಳೆ ಜನರತ್ತ ದಾಳಿ ನಡೆಸಿದಾಗ ತಪ್ಪಿಸಿಕೊಳ್ಳಲು ಓಡಿದ ಅಕ್ಬರ್ ನೆಲಕ್ಕೆ ಬಿದ್ದಿದ್ದಾರೆ. ಕೂಡಲೇ ಆತನನ್ನು ಆನೆ ಕಾಲಿನಿಂದ ಒಸಕಿ, ಕೋರೆಯಿಂದ ತಿವಿದಿದೆ.
ಆನೆಯ ತಿವಿತದ ರಭಸಕ್ಕೆ ಅದರ ಕೊಂಬು ತುಂಡಾಗಿ ನೆಲದಲ್ಲಿ ಹೂತುಕೊಂಡಿದ್ದು, ದೇಹದಿಂದ ಬೇರ್ಪಟ್ಟಿದೆ. ಅಕ್ಬರ್ ದೇಹ ಛಿದ್ರ-ಛಿದ್ರವಾಗಿದ್ದು, ಕರುಳು ಹೊರಕ್ಕೆ ಬಂದಿದೆ. ಘಟನೆಯಿಂದ ಆಕ್ರೋಶಗೊಂಡ ಸ್ಥಳೀಯರು ಅರಣ್ಯ ಇಲಾಖೆ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ.