ಮಂಗಳೂರು : ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಗುತ್ತಿಗೆ ಆಧಾರದಲ್ಲಿ ದುಡಿಯುತ್ತಿರುವ ಒಳಚರಂಡಿ ವಿಭಾಗದ ಕಾರ್ಮಿಕರನ್ನು ಖಾಯಂಗೊಳಿಸಲು ಆಗ್ರಹಿಸಿ ಡಿ.14ರಂದು ರಾಜ್ಯದ ಎಲ್ಲಾ ಮಹಾನಗರ ಪಾಲಿಕೆ ಮುಂಭಾಗದಲ್ಲಿ ಪ್ರತಿಭಟನೆ ನಡೆಸಲಾಗುತ್ತದೆ ಎಂದು ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಜಿಲ್ಲಾ ಪ್ರಧಾನ ಸಂಚಾಲಕ ಜಗದೀಶ್ ಪಾಂಡೇಶ್ವರ ಹೇಳಿದ್ದಾರೆ. ನಗರದ ಖಾಸಗಿ ಹೋಟೆಲ್ ನಲ್ಲಿ ಪತ್ರಿಕಾಗೋಷ್ಟಿಯನ್ನುದ್ದೇಶಿಸಿ ಮಾತನಾಡಿದ ಅವರು ಈ ಮಾಹಿತಿ ನೀಡಿದ್ದಾರೆ.
ಮಂಗಳೂರು ಮಹಾನಗರ ಪಾಲಿಕೆ ಮುಂಭಾಗದಲ್ಲಿ ಅಂದು ಬೆಳಗ್ಗೆ 10:30ರಿಂದ ಸಂಜೆ 5 ಗಂಟೆ ವರೆಗೆ ಪಂಪ್ ಹೌಸ್ ಸ್ಥಗಿತಗೊಳಿಸಿ ಧರಣಿ ನಡೆಸಲಾಗುವುದು ಎಂದು ಅವರು ತಿಳಿಸಿದ್ದಾರೆ.
ಬೆಂಗಳೂರಿನ ಪೌರಾಡಳಿತ ನಿರ್ದೇಶನಾಲಯದ ಜಂಟಿ ನಿರ್ದೇಶಕರು ಜ.6 ಮತ್ತು ಸೆ.9ರಂದು ರಾಜ್ಯದ ಎಲ್ಲಾ ಮಹಾನಗರ ಪಾಲಿಕೆಯಲ್ಲಿ ಖಾಲಿ ಇರುವ ಲೋಡರ್ಸ್, ಕ್ಲೀನರ್ಸ್ ಮತ್ತು ಯುಜಿಡಿ ಹೆಲ್ಪರ್ಸ್ ಸ್ಥಾನಗಳನ್ನು ಭರ್ತಿ ಮಾಡಲು ವಿಶೇಷ ನೇಮಕಾತಿ ನಿಯಮಾವಳಿ ಪ್ರಕಟಿಸಿ ಒಂದು ವಾರದೊಳಗೆ ಪಟ್ಟಿಯನ್ನು ನಿರ್ದೇಶನಾಲಯಕ್ಕೆ ಸಲ್ಲಿಸಲು ಸುತ್ತೋಲೆ ಹೊರಡಿಸಿತ್ತು. ಆದರೆ, ಮಂಗಳೂರು ಮಹಾನಗರ ಪಾಲಿಕೆ ಆ ಪಟ್ಟಿ ಕಳುಹಿಸಲು ಹಿಂದೇಟು ಹಾಕಿತ್ತು ಎಂದು ಅವರು ತಿಳಿಸಿದ್ದಾರೆ.
ಸಂಘಟನೆಯ ಪ್ರತಿಭಟನೆ, ಒತ್ತಡದ ಹಿನ್ನೆಲೆಯಲ್ಲಿ ಕೇವಲ 106 ಕಾರ್ಮಿಕರ ಹೆಸರನ್ನು ಮಾತ್ರ ಕಳಿಹಿಸಲಾಗಿದೆ. ಒಳಚರಂಡಿ ವಿಭಾಗದಲ್ಲಿ 214 ಕಾರ್ಮಿಕರು ದುಡಿಯುತ್ತಿದ್ದು, ಕಳುಹಿಸಿದ ಪಟ್ಟಿಯಲ್ಲಿ 49 ಮಂದಿಯ ಹೆಸರು ಮಾತ್ರ ಇದೆ ಎಂದು ಅವರು ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ದಸಂಸ ಮಂಗಳೂರು ತಾಲೂಕು ಸಂಚಾಲಯಕ ಕೆ.ಚಂದ್ರ ಕಡಂದರೆ, ಕಾರ್ಮಿಕ ವಿಭಾಗದ ಪ್ರಮುಖರಾದ ಪದ್ಮನಾಭ ವಾಮಂಜೂರು, ರಾಜೇಶ್ ಪೆರ್ನಾಜೆ, ರವೀಂದ್ರ ಕಟೀಲ್, ಗಜೇಂದ್ರ, ಹನೀಫ್ ಮುಂತಾದವರು ಉಪಸ್ಥಿತರಿದ್ದರು.