ಬೆಂಗಳೂರು: ಆಯುರ್ವೇದ ಔಷಧಿಗಳ ಹೆಸರಿನಲ್ಲಿ ವಿದೇಶಗಳಿಗೆ ಕೊರಿಯರ್ ಮೂಲಕ ಡ್ರಗ್ಸ್ ಸರಬರಾಜು ಮಾಡುತ್ತಿದ್ದ ಕೇರಳ ಮೂಲದ ಮಾಜಿ ಪೊಲೀಸ್ ಅಧಿಕಾರಿ ಸೇರಿ ಇಬ್ಬರನ್ನು ಬೆಂಗಳೂರು ಮತ್ತು ಕೊಚ್ಚಿ ವಲಯದ ಮಾದಕ ವಸ್ತು ನಿಯಂತ್ರಣ ಘಟಕ(ಎನ್ಸಿಬಿ)ದ ಅಧಿಕಾರಿಗಳು ಬಂಧಿಸಿದ್ದಾರೆ. ಆರೋಪಿಗಳಿಂದ 1 ಕೋಟಿ ರೂ. ಮೌಲ್ಯದ ಮಾದಕ ವಸ್ತು ಹ್ಯಾಶಿಷ್ ಆಯಿಲ್ ಜಪ್ತಿ ಮಾಡಲಾಗಿದೆ.
ಡ್ರಗ್ಸ್ ಸರಬರಾಜು ಬಗ್ಗೆ ಸಂಪೂರ್ಣ ಮಾಹಿತಿ ತಿಳಿದುಕೊಂಡಿದ್ದ ಆರೋಪಿಗಳು, ತನಿಖಾ ಸಂಸ್ಥೆಗಳ ಹಾದಿ ತಪ್ಪಿಸಲು ಬ್ರಹ್ಮರಸಾಯನ, ನರಸಿಂಹ ರಸಾಯನ, ಅಶ್ವಗಂಧಿ ಲೇಹಂ, ಛಾಯಾ ವಧನ ಲೇಹ, ಚವನ ಪ್ರಾಶ್ ಎಂಬ ಆಯುರ್ವೇದಿಕ್ ಚೂರ್ಣದ ಡಬ್ಬಿಗಳಿಗೆ ಡ್ರಗ್ಸ್ ತುಂಬಿಸಿ ಕಳುಹಿಸಿದ್ದರು ಎಂದು ವರದಿಯಾಗಿದೆ.
ಈ ಬಗ್ಗೆ ಮಾಹಿತಿ ಪಡೆದ ಚೆನ್ನೈ ಎನ್ಸಿಬಿ ಅಧಿಕಾರಿಗಳು ಸೆ.12 ರಂದು ಎರ್ನಾಕುಲಂನಲ್ಲಿ 3.5 ಕೆ.ಜಿ. ಹ್ಯಾಶಿಷ್ ಆಯಿಲ್ ಜಪ್ತಿ ಮಾಡಿದ್ದರು. ಬಳಿಕ ಆರೋಪಿ ಮಾಜಿ ಪೊಲೀಸ್ ಅಧಿಕಾರಿಯನ್ನು ಬೆಂಗಳೂರು ಎನ್ಸಿಬಿ ಅಧಿಕಾರಿಗಳು ಬೆಂಗಳೂರಿನಲ್ಲಿ ಸೆ.29ರಂದು ಬಂಧಿಸಿದ್ದಾರೆ. ಈತನ ಮಾಹಿತಿ ಮೇರೆಗೆ ಕೇರಳದ ಕಾಸರಗೊಡಿನಲ್ಲಿ ಅ.4ರಂದು ಆತನ ಸಹಚರನನ್ನು ಬಂಧಿಸಲಾಗಿದೆ.
ಇದೇ ವೇಳೆ ಆರೋಪಿಯ ಮಾಹಿತಿ ಮೇರೆಗೆ ಎರ್ನಾಕುಲಂನಿಂದ ಆಸ್ಟ್ರೇಲಿಯಾಗೆ ಕೊರಿಯರ್ ಮೂಲಕ ಹೋಗುತ್ತಿದ್ದ 11.6 ಕೆ.ಜಿ. ಸ್ಯೂಡೋಫೆಡ್ರೈನ್ ಎಂಬ ಮಾದಕ ವಸ್ತು ಜಪ್ತಿ ಮಾಡಲಾಗಿದೆ ಎಂದು ಎನ್ಸಿಬಿ ತಿಳಿಸಿದೆ.
ಕೇರಳ ಮೂಲದ 52 ವರ್ಷದ ವ್ಯಕ್ತಿ ಸುಮಾರು 20 ವರ್ಷಗಳ ಹಿಂದೆ ಬಹ್ರೈನ್ ದೇಶಕ್ಕೆ ಹೋಗಿದ್ದು, ಅಲ್ಲಿ ಪೊಲೀಸ್ ಅಧಿಕಾರಿ ಕೆಲಸ ಮಾಡುತ್ತಿದ್ದ. ವರ್ಷದ ಹಿಂದೆ ನಿವೃತ್ತಿ ಪಡೆದು ಕೇರಳದಲ್ಲಿ ನೆಲೆಸಿದ್ದಾನೆ.
ಬಹ್ರೈನ್ ದೇಶದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಅಲ್ಲಿನ ಡ್ರಗ್ಸ್ ಪೆಡ್ಲರ್ಗಳು ಮತ್ತು ಕೇರಳ ಮೂಲದ ಪೊಲೀಸ್ ಅಧಿಕಾರಿಗಳ ಜತೆ ಸಂಪರ್ಕ ಹೊಂದಿದ್ದ ಎಂದು ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ಕೇರಳದ ಎರ್ನಾಕುಲಂನಿಂದ ಬಹ್ರೈನ್ ದೇಶಕ್ಕೆ ಕೊರಿಯರ್ ಮೂಲಕ ಮಾದಕ ವಸ್ತು ಹ್ಯಾಶಿಷ್ ಆಯಿಲ್ ಕಳುಹಿಸುತ್ತಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.