ಕೊಲ್ಕತಾ : ಡ್ರಗ್ಸ್ ವಶಪಡಿಸಿಕೊಂಡ ಪ್ರಕರಣಕ್ಕೆ ಸಂಬಂಧಿಸಿ ಬಿಜೆಪಿ ಯುವ ನಾಯಕ ರಾಕೇಶ್ ಸಿಂಗ್ ಅವರಿಗೆ ಕೊಲ್ಕತಾ ಪೊಲೀಸರು ಸಮನ್ಸ್ ನೀಡಿದ್ದಾರೆ. ಬಿಜೆಪಿ ಯುವ ಮೋರ್ಚಾ ಕಾರ್ಯದರ್ಶಿ (ಪಶ್ಚಿಮ ಬಂಗಾಳ ಘಟಕ) ಪಮೇಲಾ ಗೋಸ್ವಾಮಿ ಅವರಿಂದ ಕೊಕೇನ್ ವಶಪಡಿಸಿಕೊಂಡಿರುವ ಪ್ರಕರಣಕ್ಕೆ ಸಂಬಂಧಿಸಿ ಈ ನೋಟಿಸ್ ಜಾರಿಯಾಗಿದೆ.
ಗೋಸ್ವಾಮಿ ಹಾಗೂ ಆಕೆಯ ಸ್ನೇಹಿತರನ್ನು ಕಳೆದ ವಾರ ಕೊಕೇನ್ ಸಹಿತ ಬಂಧಿಸಲಾಗಿತ್ತು. ಈ ವೇಳೆ ತಮ್ಮ ವಿರುದ್ಧ ರಾಕೇಶ್ ಸಿಂಗ್ ಸಂಚು ರೂಪಿಸಿದ್ದಾರೆ ಎಂದು ಗೋಸ್ವಾಮಿ ಆರೋಪಿಸಿದ್ದರು.
ಫೆ.23ರಂದು ತನಿಖಾಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ತಮ್ಮ ವಿರುದ್ಧ ಗೋಸ್ವಾಮಿ ಅವರು ಆರೋಪ ಮಾಡಿದ ಬೆನ್ನಲ್ಲೇ ನಗರ ಪೊಲೀಸ್ ಆಯುಕ್ತರಿಗೆ ಪತ್ರ ಬರೆದಿದ್ದ ಸಿಂಗ್ ತನಿಖೆಗೆ ಸಂಪೂರ್ಣ ಸಹಕಾರ ನೀಡಲು ಸಿದ್ಧ ಎಂದಿದ್ದರು.
90 ಗ್ರಾಂ ಕೊಕೇನ್ ಹೊಂದಿದ್ದ ಕಾರಣಕ್ಕೆ ಪಮೇಲಾ ಸ್ವಾಮಿ ಮತ್ತು ಅವರ ಸ್ನೇಹಿತ ಪ್ರದೀಪ್ ಕುಮಾರ್ ಅವರನ್ನು ಫೆ.19ರಂದು ಬಂಧಿಸಲಾಗಿತ್ತು. ಈ ಬಂಧನದಲ್ಲಿ ತಮ್ಮದೇ ಪಕ್ಷದ ಸಹೋದ್ಯೋಗಿಗಳಾದ ಕೈಲಾಶ್ ವಿಜಯವರ್ಗೀಯ ಮತ್ತು ಅವರ ಸಹಾಯಕರಾದ ರಾಕೇಶ್ ಸಿಂಗ್ ಪಿತೂರಿ ಇದೆ ಎಂದು ಗೋಸ್ವಾಮಿ ಕೋರ್ಟ್ ಹಾಜರಾಗಿದ್ದ ವೇಳೆ ಮಾಧ್ಯಮಗಳ ಮುಂದೆ ಹೇಳಿದ್ದರು.