ರಾಜ್ಯದಲ್ಲೇ ಮೊದಲ ಬಾರಿಗೆ ಮಾದಕ ದ್ರವ್ಯ ತಯಾರಿಕ ಘಟಕ ಪತ್ತೆ ಹಚ್ಚಿದ ಸಿಸಿಬಿ ಪೊಲೀಸರು !

Prasthutha|

ಬೆಂಗಳೂರು: ಕರ್ನಾಟಕ ಪೊಲೀಸ್ ಇಲಾಖೆ ರಾಜಧಾನಿ ಬೆಂಗಳೂರಿನಲ್ಲಿ ಇಂದು ಬೃಹತ್ ಮಾದಕವಸ್ತು ಕಾರ್ಖಾನೆವೊಂದನ್ನು ಪತ್ತೆಹಚ್ಚಿದೆ. ಮಾತ್ರವಲ್ಲ ಸ್ಥಳದಿಂದ ಸುಮಾರು 2 ಕೋಟಿ ಮೌಲ್ಯದ 4 ಕೆಜಿ ಎಂ.ಡಿ.ಎಂ.ಎ ಸಿಂಥೆಟಿಕ್ ಔಷಧಗಳನ್ನು ವಶಪಡಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ನೈಜಿರಿಯನ್ ಪ್ರಜೆಯೊಬ್ಬನನ್ನು ಬಂಧಿಸಲಾಗಿದ್ದು, ವ್ಯವಸ್ಥಿತ ಜಾಲಗಳ ಮೂಲಕ ನಗರದಲ್ಲಿ ಕಾರ್ಯಾಚರಿಸುತ್ತಿರುವುದು ತನಿಖೆಯಿಂದ ಬಹಿರಂಗವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

- Advertisement -

ನಿಷೇಧಿತ ಎಂ.ಡಿ.ಎಂ.ಎ ಕ್ರಿಸ್ಟಲ್ ಗಳನ್ನು ಶೂಗಳ ಅಡಿಯಲ್ಲಿಟ್ಟು ನಗರ ಮತ್ತು ದೇಶದ ಇತರ ಭಾಗಗಳಿಗೆ ಮಾರಾಟ ಮಾಡುತ್ತಿದ್ದರು. ಅದೇ ರೀತಿ ದುಷ್ಕರ್ಮಿಗಳು ಮಾದಕ ವಸ್ತುಗಳನ್ನು ಕೋರಿಯರ್ ಮೂಲಕ ನ್ಯೂಝಿಲ್ಯಾಂಡ್ ಮತ್ತು ಇತರ ರಾಷ್ಟ್ರಗಳಿಗೆ ಸಾಗಿಸುತ್ತಿದ್ದರು ಎಂಬ ಅಘಾತಕಾರಿ ಅಂಶ ಬಹಿರಂಗವಾಗಿದೆ.

ರಾಜ್ಯದ ಇತಿಹಾಸದಲ್ಲೇ ಮೊದಲ ಬಾರಿಗೆ ಮಾದಕ ದ್ರವ್ಯ ತಯಾರಿಕಾ ಘಟಕವನ್ನು ಪತ್ತೆಹಚ್ಚುವಲ್ಲಿ ನಗರ ಅಪರಾಧ ವಿಭಾಗ (ಸಿಸಿಬಿ) ನಾರ್ಕೋಟಿಕ್ಸ್ ವಿಭಾಗ ಯಶಸ್ವಿಯಾಗಿದೆ ಎಂದು ಪೊಲೀಸ್ ಕ್ರೈಮ್ ಬ್ರಾಂಚ್ ಜಂಟಿ ಆಯುಕ್ತರಾದ ಸಂದೀಪ್ ಪಾಟೀಲ್ ತಿಳಿಸಿದ್ದಾರೆ.

- Advertisement -

ಎಲೆಕ್ಟ್ರಾನಿಕ್ ಸಿಟಿ 1 ನೇ ಹಂತದ ಚಾಮುಂಡಿ ಲೇಔಟ್ ನಲ್ಲಿ ನೈಜಿರಿಯನ್ ಪ್ರಜೆಯೊಬ್ಬ ಬಾಡಿಗೆ ಮನೆಯನ್ನು ಪಡೆದು, ಇತರರೊಂದಿಗೆ ಸೇರಿ ಎಂ.ಡಿ.ಎಂ.ಎ. ಕ್ರಿಸ್ಟಲ್ ಗಳನ್ನು ತಯಾರಿಸುತ್ತಿದ್ದನು. ನಂತರ ಅವುಗಳನ್ನು ತಮ್ಮ ಸಹಚರರ ಮೂಲಕ ಬೆಂಗಳೂರು ಮತ್ತು ದೇಶದ ಇತರ ಕಡೆಗಳಿಗೆ ಕೋರಿಯರ್ ಮೂಲಕ ಮಾರಾಟ ಮಾಡುತ್ತಿದ್ದರು.

ಖಚಿತ ಮಾಹಿತಿ ಮೇರೆಗೆ ಸಿಸಿಬಿ ಅಧಿಕಾರಿಗಳ ವಿಶೇಷ ತಂಡ ಆರೋಪಿಗಳ ನಿವಾಸದ ಮೇಲೆ ದಾಳಿ ನಡೆಸಿ 2 ಕೋಟಿ ಮೌಲ್ಯದ ಎಂ.ಡಿ.ಎಂ.ಎ, ಅಸಿಟೋನ್, ಹೈಪೋ ಫಾಸ್ಪರಸ್ ಆಮ್ಲ, ಆಯೋಡಿನ್, ಸೋಡಿಯಮ್ ಹೈಡ್ರಾಕ್ಸೈಡ್ ಸೇರಿದಂತೆ ಹಲವಾರು ಅಪಾಯಕಾರಿ ರಾಸಾಯನಿಕಗಳನ್ನು ವಶಪಡಿಸಿಕೊಂಡ್ಡಿದ್ದಾರೆ. ತನಿಖೆಯನ್ನು ಮುಂದುವರಿಸಿ ಇಂತಹ ಇನ್ನಷ್ಟು ಜಾಲಗಳನ್ನು ಪತ್ತೆಹಚ್ಚಲು ವಿಶೇಷ ತಂಡಗಳನ್ನು ರಚಿಸಲಾಗಿದೆ ಎಂದು ಜಂಟಿ ಪೊಲೀಸ್ ಆಯುಕ್ತರಾದ ಸಂದೀಪ್ ಪಾಟೀಲ್ ಮಾಧ್ಯಮಕ್ಕೆ ತಿಳಿಸಿದ್ದಾರೆ

Join Whatsapp