ಚಿಕ್ಕಮಗಳೂರು: ತಾಲೂಕಿನ ಇತಿಹಾಸ ಪ್ರಸಿದ್ಧ ದೇವೀರಮ್ಮ ದೇಗುಲದಲ್ಲಿ ಡ್ರೆಸ್ ಕೋಡ್ ಆದೇಶ ಜಾರಿಗೊಳಿಸಲಾಗಿದೆ.
ದೇವೀರಮ್ಮನ ದೇಗುಲಕ್ಕೆ ಆಗಮಿಸುವ ಭಕ್ತರು ಸಾಂಪ್ರಾದಾಯಿಕ ಉಡುಗೆಯಲ್ಲಿ ಆಗಮಿಸಲು ಧಾರ್ಮಿಕದತ್ತಿ ಇಲಾಖೆ ಹಾಗೂ ದೇವಸ್ಥಾನ ಆಡಳಿತ ಮಂಡಳಿ ಸೂಚನೆ ನೀಡಿದೆ.
ಚಿಕ್ಕಮಗಳೂರು ತಾಲೂಕಿನ ಬಿಂಡಿಗ ದೇವೀರಮ್ಮನ ದೇವಾಲಯಕ್ಕೆ ಬರುವ ಭಕ್ತರು ಸ್ಕರ್ಟ್, ಮಿಡಿ, ಸ್ಲೀವ್ ಲೆಸ್ ಡ್ರೆಸ್, ಪ್ಯಾಂಟ್, ಸಾಕ್ಸ್ ಹಾಕಿ ದೇವಾಲಯಕ್ಕೆ ಬರುವಂತಿಲ್ಲ ಎಂಬ ಬಗ್ಗೆ ಸೂಚನಾ ಫಲಕ ಅಳವಡಿಸಲಾಗಿದೆ.
ಉಡುಗೆ ಮಾತ್ರವಲ್ಲದೇ ದೇವಾಲಯದ ಆವರಣದೊಳಗೆ ಮೊಬೈಲ್ ಫೋನ್ ಗೂ ನಿಷೇಧ ಹೇರಲಾಗಿದ್ದು, ದೇವಾಯದ ಆವರಣದಲ್ಲಿ ಪ್ರೀ ವೆಡ್ಡಿಂಗ್ ಫೋಟೋ ಶೂಟ್, ರೀಲ್ಸ್ ಗೆ ಅವಕಾಶವಿಲ್ಲ ಎಂದು ಸಂದೇಶ ಹಾಕಲಾಗಿದೆ.
ದೀಪಾವಳಿ ವೇಳೆ ಲಕ್ಷಾಂತರ ಭಕ್ತರು ಈ ದೇವಾಲಯಕ್ಕೆ ಭೇಟಿ ನೀಡುತ್ತಾರೆ. ಪ್ರತಿವರ್ಷ ಲಕ್ಷಾಂತರ ಭಕ್ತರು ದೇವೀರಮ್ಮನ ಬೆಟ್ಟ ಹತ್ತುತ್ತಾರೆ. ಮಕ್ಕಳಿಂದ-ವೃದ್ಧರವರೆಗೂ ಬೆಟ್ಟ ಹತ್ತಿ ಬೆಟ್ಟದ ತಾಯಿಗೆ ಕೈಮುಗಿಯುವ ಭಕ್ತರು ಮದ್ಯರಾತ್ರಿಯೇ ಪಿರಮಿಡ್ ಆಕಾರದ ಬೆಟ್ಟ ಹತ್ತಿ ಭಕ್ತಿ ಸಮರ್ಪಿಸುತ್ತಾರೆ.
ಯುವಕ-ಯುವತಿಯರು ಬರ್ತಾರೆ, ಅವರಲ್ಲಿ ಪ್ರೇಮಿಗಳು ಇರ್ತಾರೆ, ಆದರೆ ಯಾರೇ ಬಂದರೂ ಸಾಂಪ್ರಾದಾಯಿಕ ಉಡುಗೆಯಲ್ಲೇ ಬರಬೇಕೆಂದು ದೇವಾಲಯ ಆಡಳಿತ ಮಂಡಳಿ ಸೂಚಿಸಿದೆ.