ಅಮೃತ ಯೋಜನೆ ಅನುಷ್ಠಾನ ವಿಳಂಬಕ್ಕೆ ಅಧಿಕಾರಿಗಳ ವಿರುದ್ಧ ಸಚಿವ ಡಾ.ನಾರಾಯಣಗೌಡ ಗರಂ

Prasthutha|

ಮಂಡ್ಯ: ಅಮೃತ ಯೋಜನೆಗಳ ಅನುಷ್ಠಾನಕ್ಕೆ ವಿಳಂಬ ನೀತಿ ಅನುಸರಿಸುತ್ತಿರುವ ಅಧಿಕಾರಿಗಳ ವಿರುದ್ಧ ರೇಷ್ಮೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಮಂಡ್ಯ ಉಸ್ತುವಾರಿ ಸಚಿವ ಡಾ.ನಾರಾಯಣಗೌಡ ಗುಡುಗಿದರು.

- Advertisement -

ಸಚಿವ ಡಾ. ನಾರಾಯಣಗೌಡ ಅವರು ಇಂದು ಮಂಡ್ಯದ ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಅಮೃತ ಯೋಜನೆಗಳು, ಪಿಎಂಜಿಎಸ್‌ವೈ ಯೋಜನೆ ಮತ್ತು ವಸತಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆ ಹಾಗೂ ಕೋವಿಡ್ ಸಂಬಂಧ ಕೈಗೊಂಡಿರುವ ಅಗತ್ಯ ಕ್ರಮಗಳ ಕುರಿತು ಸಭೆ ನಡೆಸಿದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸ್ವಾತಂತ್ರ್ಯೋತ್ಸವದ ಭಾಷಣದಲ್ಲಿ ಘೋಷಿಸಿದ್ದ ಸರ್ಕಾರದ ಮಹಾತ್ವಕಾಂಕ್ಷಿ ಅಮೃತ ಯೋಜನೆಗಳನ್ನು ಮಂಡ್ಯ ಜಿಲ್ಲೆಯಲ್ಲಿ ಯಶಸ್ವಿಯಾಗಿ ಅನುಷ್ಠಾನಗೊಳಿಸಬೇಕು ಎಂದು ಸಚಿವ ಡಾ.ನಾರಾಯಣಗೌಡ ಅಧಿಕಾರಿಗಳಿಗೆ ಸೂಚಿಸಿದರು.

- Advertisement -

ವಿಳಂಬ ನೀತಿ ಅನುಸರಿಸುತ್ತಿರುವ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಸಚಿವ ಡಾ.ನಾರಾಯಣಗೌಡ ಅವರು, ಅಮೃತ ಗ್ರಾಮ ಪಂಚಾಯತ್ , ಅಮೃತ ಗ್ರಾಮೀಣ ವಸತಿ ಯೋಜನೆ ಸೇರಿದಂತೆ ಅಮೃತ ಯೋಜನೆಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಬೇಕು, ಕಾಲಮಿತಿಯೊಳಗೆ ಮುಕ್ತಾಯಗೊಳಿಸಬೇಕು ಎಂದು ಸೂಚಿಸಿದರು.

ಅಮೃತ ಗ್ರಾಮೀಣ ವಸತಿ ಯೋಜನೆಯಡಿ ಮಂಡ್ಯ ಜಿಲ್ಲೆಯಲ್ಲಿ 27 ಗ್ರಾಮ ಪಂಚಾಯಿತಿ ಆಯ್ಕೆ ಮಾಡಲಾಗಿದ್ದು, ವಸತಿ ರಹಿತ 6918 ಹಾಗೂ ನಿವೇಶನ ರಹಿತ 3819 ಕುಟುಂಬಗಳನ್ನು ಗುರುತಿಸಿದ್ದು, ಅಮೃತ ಯೋಜನೆಯಡಿ 2022 ಮಾರ್ಚ್ ಅಂತ್ಯದೊಳಗೆ ಸೌಲಭ್ಯ ಕಲ್ಪಿಸಿಕೊಡುವಂತೆ ಸಚಿವರು ಗಡುವು ನೀಡಿದರು.

27 ಗ್ರಾಮ ಪಂಚಾಯತ್‌ಗಳಲ್ಲಿ ಶಾಲೆಗಳಲ್ಲಿ ಕಾಂಪೌಂಡ್ , ಶೌಚಾಲಯ, ಘನತ್ಯಾಜ್ಯ ನಿರ್ವಹಣಾ ಘಟಕ, ಬೀದಿ ದೀಪ ಅಳವಡಿಕೆ ಹಾಗೂ ಆಟದ ಮೈದಾ, ಕುಡಿಯವ ನೀರಿನ ಯೋಜನೆಯನ್ನು ಮಾರ್ಚ್ ಅಂತ್ಯದೊಳಗೆ ಪೂರ್ಣಗೊಳಿಸುವಂತೆ ಸಚಿವರು ಸೂಚಿಸಿದರು.

ವಸತಿ ಯೋಜನೆಯಡಿ ಪ್ರಸಕ್ತ ಸಾಲಿನಲ್ಲಿ ಮಂಡ್ಯ ಜಿಲ್ಲೆಯಲ್ಲಿ 8700 ಮನೆಗಳನ್ನು ಮಂಜೂರು ಮಾಡಿದ್ದು, ಜನವರಿ 25 ರೊಳಗೆ
ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡಿ, ಮನೆ ನಿರ್ಮಾಣಕ್ಕೆ ಅಗತ್ಯ ಕ್ರಮಕೈಗೊಳ್ಳುವಂತೆ ಸಚಿವ ಡಾ.ನಾರಾಯಣ ಗೌಡ ಅವರು ಗಡುವು ನೀಡಿದರು.

ವಸತಿ ಯೋಜನೆಗಳ ಫಲಾನುಭವಿಗಳಿಗೆ ಮನೆ ಹಂಚಿಕೆ ವಿಚಾರದಲ್ಲಿ ನಿರ್ಲಕ್ಷ್ಯತನ ತೋರುತ್ತಿರುವ ಅಧಿಕಾರಿಗಳನ್ನು ಸಚಿವ ಡಾ.ನಾರಾಯಣಗೌಡ ಅವರು ಕ್ಲಾಸ್ ತೆಗೆದುಕೊಂಡರು. ಫಲಾನುಭವಿಗಳು ಹಣ ಕೊಡದಿದ್ದರೇ ಅವರಿಗೆ ಹಣ ಬಿಡುಗಡೆ ಮಾಡುವುದಿಲ್ಲ. ಕೆಲವು ಪಿಡಿಒಗಳು, ಇಒಗಳು ಹಣ ನೀಡದಿದ್ರೇ ಅವರಿಗೆ ಮನೆ ಮಂಜೂರು ಮಾಡುವುದಿಲ್ಲ. ಕೆಲವರು ಊಟಕ್ಕೂ ಪರದಾಡುವಂತ ಪರಿಸ್ಥಿತಿಯಿದ್ದು, ಗುಡಿಸಿಲಿನಲ್ಲಿ ವಾಸ ಮಾಡುತ್ತಿರುತ್ತಾರೆ. ಅಂತವರಿಂದಲೂ ಹಣ ಪಡೆಯುತ್ತಾರೆ ಅನ್ನೋ ಆರೋಪವಿದೆ. ಮಂಡ್ಯ ಜಿಲ್ಲೆಯಲ್ಲಿ ಇದಕ್ಕೆ ಅವಕಾಶ ಇಲ್ಲ, ಇದಕ್ಕೆ ಕಡಿವಾಣ ಹಾಕಬೇಕು. ಹಣ ಪಡೆದಿರುವ ಬಗ್ಗೆ ಮಾಹಿತಿ ಬಂದರೇ ಅಂತವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಸಚಿವ ಡಾ.ನಾರಾಯಣಗೌಡ ಅವರು ಎಚ್ಚರಿಕೆ ನೀಡಿದರು.
ಬೀದಿ ದೀಪಗಳ ಅಳವಡಿಕೆ ವಿಚಾರದಲ್ಲಿ ಸಚಿವರು ಕೇಳಿದ ಪ್ರಶ್ನೆಗೆ ಸರಿಯಾದ ಮಾಹಿತಿ ನೀಡದಿದ್ದಕ್ಕೆ ಗರಂ ಆದರು. ಅಧಿಕಾರಿಗಳು ಸುಳ್ಳು ಹೇಳುವುದನ್ನ ಬಿಡಬೇಕು. ಸರಿಯಾಗಿ ಮಾಹಿತಿ ನೀಡಿ, ಕಥೆ ಕೇಳಲು ನಾನು ಬಂದಿಲ್ಲ ಎಂದು ಸಚಿವ ಡಾ.ನಾರಾಯಣಗೌಡ ಅವರು ತರಾಟೆಗೆ ತೆಗೆದುಕೊಂಡರು.

ಪಿಎಂಜಿಎಸ್‌ವೈ ಯೋಜನೆಯಲ್ಲಿ ಟೆಂಡರ್ ಪಡೆದು ರಸ್ತೆ ಕಾಮಗಾರಿ ಪೂರ್ಣಗೊಳಿಸದಿರುವುದಕ್ಕೆ ಸಚಿವರು ಕಿಡಿಕಾರಿದರು. ಕೆಲವು ಗುತ್ತಿಗೆದಾರರು ಟೆಂಡರ್ ಪಡೆದು ಕಾಮಗಾರಿ ಪೂರ್ಣಗೊಳಿಸಿಲ್ಲ. ಅಂತವರ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಸಚಿವರು ಜಿಲ್ಲಾ ಪಂಚಾಯತ್ ಸಿಇಒ ಅವರಿಗೆ ಸೂಚಿಸಿದರು.

ಅಮೃತ ಯೋಜನೆಯಡಿ ಜಿಲ್ಲೆಯ 23 ಶಾಲೆಗಳಿಗೆ ತಲಾ 10 ಲಕ್ಷಗಳಲ್ಲಿ ಸ್ಮಾರ್ಟ್ ಕ್ಲಾಸ್ ನಿರ್ಮಾಣ ಮಾಡುಲಾಗುತ್ತದೆ. ಅಮೃತ ಯೋಜನೆಯಡಿ ಜಿಲ್ಲೆಯಲ್ಲಿ 325 ಸ್ವ ಸಹಾಯ ಗುಂಪುಗಳನ್ನು ಆಯ್ಕೆ ಮಾಡಲಾಗಿದ್ದು, ಪ್ರತಿ ಸಂಘಕ್ಕೆ ತಲಾ ಒಂದು ಲಕ್ಷ ರೂಪಾಯಿ ಸಹಾಯಧನ ನೀಡಲಾಗುತ್ತದೆ. 25 ಅಂಗನವಾಡಿ ಕೇಂದ್ರಗಳನ್ನು ತಲಾ ಒಂದು ಲಕ್ಷ ವೆಚ್ಚದಲ್ಲಿ ಮೇಲ್ದರ್ಜೆಗೆ ಏರಿಸಲಾಗುತ್ತದೆ. ಜಿಲ್ಲೆಯಲ್ಲಿ 12 ಅಮೃತ ರೈತ ಉತ್ಪಾದಕ ಸಂಸ್ಥೆ ಗುರಿ ನಿಗದಿಪಡಿಸಿದ್ದು, ಆಯ್ಕೆ ಪ್ರಕ್ರಿಯೆ ಮುಕ್ತಾಯಗೊಂಡಿದೆ.

ಅಲ್ಲದೇ, 27 ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ತಲಾ 20 ಲಕ್ಷ ವೆಚ್ಚದಲ್ಲಿ ಅಭಿವೃದ್ಧಿಗೊಳಿಸಲು ಗುರಿ ಹೊಂದಲಾಗಿದ್ದು, ಇದಕ್ಕಾಗಿ 5.40 ಕೋಟಿ ನಿಗದಿಪಡಿಸಲಾಗಿದೆ. ಅಮೃತ ಯೋಜನೆಗಳನ್ನು ಮಾರ್ಚ್ ಅಂತ್ಯದೊಳಗೆ ಪೂರ್ಣಗೊಳಿಸುವಂತೆ ಸಚಿವ ಡಾ.ನಾರಾಯಣಗೌಡ ಅವರು ಅಧಿಕಾರಿಗಳಿಗೆ ಗಡುವು ನೀಡಿದರು.

ಸಭೆಯಲ್ಲಿ ಜಿಲ್ಲಾಧಿಕಾರಿ ಅಶ್ವತಿ, ಜಿ.ಪಂ ಸಿಇಒ ದಿವ್ಯ ಪ್ರಭು ಸೇರಿದಂತೆ ಹಲವು ಅಧಿಕಾರಿಗಳು ಪಾಲ್ಗೊಂಡಿದ್ದರು.



Join Whatsapp