ವೆನ್ ಲಾಕ್ ಆಸ್ಪತ್ರೆಯಲ್ಲಿ 20 ಲಕ್ಷ ರೂ.ವೆಚ್ಚದ ಪ್ರಕೃತಿ ಚಿಕಿತ್ಸಾ ವಿಭಾಗಕ್ಕೆ ನಾಳೆ ಚಾಲನೆ: ಡಾ.ಇಕ್ಬಾಲ್

Prasthutha|

ಮಂಗಳೂರು: ಮಂಗಳೂರು ಕೆಮಿಕಲ್ಸ್ ಫರ್ಟಿಲೈಸರ್ ಲಿಮಿಟೆಡ್ ಪಣಂಬೂರು ಮಂಗಳೂರು ಇವರು ಒದಗಿಸಿಕೊಟ್ಟಿರುವಂತಹ ಸುಮಾರು 20 ಲಕ್ಷ ಮೌಲ್ಯದ ಅತ್ಯಾಧುನಿಕ ನ್ಯಾಚುರೋಪತಿ ಉಪಕರಣಗಳ ಹಸ್ತಾಂತರ ಮತ್ತು ಪ್ರಕೃತಿ ವಿಭಾಗಕ್ಕೆ ಚಾಲನೆ ಕಾರ್ಯಕ್ರಮ ಮಾರ್ಚ್ 25ರಂದು ಬೆಳಗ್ಗೆ 11 ಗಂಟೆಗೆ ನಡೆಯಲಿದೆ ಎಂದು ಜಿಲ್ಲಾ ಆಯುಷ್ ಅಧಿಕಾರಿ ಡಾ. ಇಕ್ಬಾಲ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲಾ ವೆನ್ ಲಾಕ್ ಆಸ್ಪತ್ರೆ ಆವರಣದಲ್ಲಿ ನಾಳೆ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಸುನಿಲ್ ಕುಮಾರ್ ಅವರು ಚಾಲನೆ ನೀಡಲಿದ್ದಾರೆ. ಸ್ಥಳೀಯ ಶಾಸಕ ವೇದವ್ಯಾಸ್ ಕಾಮತ್ ಅಧ್ಯಕ್ಷತೆ ವಹಿಸಲಿದ್ದು, ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ ಸಚಿವ ಎಸ್.ಅಂಗಾರ, ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖಾ ಸಚಿವ ಕೋಟ ಶ್ರೀನಿವಾಸ ಪೂಜಾರಿ, ದಕ್ಷಿಣ ಕನ್ನಡದ ಸಂಸದ ನಳೀನ್ ಕುಮಾರ ಕಟೀಲ್ ಹಾಗೂ ಇತರು ಗಣ್ಯರು ಭಾಗವಹಿಸಲಿದ್ದಾರೆ ಎಂದರು.
ಸರ್ಕಾರಿ ಮಟ್ಟದಲ್ಲಿಯೇ ಮೊದಲ ಬಾರಿಗೆ ಅತ್ಯಾಧುನಿಕ ಉಪಕರಣಗಳನ್ನೊಳಗೊಂಡ ಪ್ರಕೃತಿ ಚಿಕಿತ್ಸಾ ವಿಭಾಗವು ಲೋಕಾರ್ಪಣೆಗೊಳ್ಳಲಿದೆ. ಈ ಕೇಂದ್ರದಲ್ಲಿ ಎಲ್ಲಾ ವಿಧದ ಜಲಚಿಕಿತ್ಸೆಗಳು, ಸೋನಾ ಬಾತ್, ಅಕ್ಯುಪಂಕ್ಚರ್, ಅಕ್ಯಪ್ರೆಶರ್, ಆಯಾನ್ ಡೆಟಾಕ್ಸ್ ಥೆರಪಿ, ಮ್ಯಾಗ್ನೆಟಿಕ್ ಥೆರಪಿ, ಮ್ಯೂಸಿಕ್ ಥೆರಪಿ, ಮಡ್ ಬಾತ್ ಮುಂತಾದ ಎಲ್ಲಾ ಆಪರೂಪದ ಚಿಕಿತ್ಸೆಗಳು ಲಭ್ಯವಾಗಲಿದ್ದು, ಸದ್ಯಕ್ಕೆ ಉಚಿತವಾಗಿ ಚಿಕಿತ್ಸೆಗಳು ಸಾರ್ವಜನಿಕರಿಗೆ ಲಭ್ಯವಾಗಲಿದೆ ಎಂದು ಇಕ್ಬಾಲ್ ತಿಳಿಸಿದರು.
ಸರ್ಕಾರದ ಮಾರ್ಗಸೂಚಿಯಂತೆ ಮುಂದಿನ ದಿನಗಳಲ್ಲಿ ಎಪಿಎಲ್ ಕಾರ್ಡ್ದಾರರಿಗೆ ಕನಿಷ್ಠ ದರಗಳನ್ನು ನಿಗದಿಪಡಿಸಲಿದ್ದು, ಈ ನ್ಯಾಚುರೋಪತಿ ಚಿಕಿತ್ಸೆಗಳಿಂದ ಕೊಲೆಸ್ಟಾಲ್, ಬೊಜ್ಜುರೋಗ, ಥೈರಾಯಿಡ್, ಬಿಪಿ ಶುಗರ್, ನರರೋಗಗಳು, ಜೀವನಶೈಲಿ ಜನ್ಯರೋಗಗಳು ಮುಂತಾದವುಗಳಿಗೆ ನ್ಯಾಚುರೋಪತಿಯಲ್ಲಿ ಉತ್ತಮ ಚಿಕಿತ್ಸೆಯನ್ನು ನೀಡಲಾಗುವುದು. ಇದಲ್ಲದೆ ಯೋಗಕೇಂದ್ರ ಮತ್ತು ಡಯಟ್ ಥೆರಪಿ, ಆಹಾರ ಚಿಕಿತ್ಸೆ, ಉಪವಾಸ ಚಿಕಿತ್ಸೆ ಮುಂತಾದ ಚಿಕಿತ್ಸೆಗಳು ಲಭ್ಯವಾಗಲಿದೆ. ಈಗಾಗಲೇ ಆಸ್ಪತ್ರೆಯಲ್ಲಿ ಹೊರರೋಗಿ ವಿಭಾಗವು ಚಾಲನೆಯಲ್ಲಿದ್ದು, ಪ್ರತಿದಿನ ಸುಮಾರು 150 ರೋಗಿಗಳು ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ. ಪ್ರಕೃತಿ ಚಿಕಿತ್ಸಾ ಹೊರರೋಗಿ ವಿಭಾಗವು ಈಗಾಗಲೇ ಚಾಲನೆಯಲ್ಲಿದ್ದು, ಈ ಎಲ್ಲಾ ಚಿಕಿತ್ಸೆಗಳು ಆಸ್ಪತ್ರೆಯಲ್ಲಿ ಒಳರೋಗಿ ರೂಪದಲ್ಲಿ ಲಭ್ಯವಾಗಲಿದೆ. ಆಸ್ಪತ್ರೆಯಲ್ಲಿ ದಾಖಲಾಗುವ ರೋಗಿಗಳಿಗೆ ಲಭ್ಯವಿದ್ದು ಸಾರ್ವಜನಿಕರು ಚಿಕಿತ್ಸೆಯ ಉಪಯೋಗವನ್ನು ಪಡೆದುಕೊಳ್ಳಬೇಕು ಎಂದು ಅವರು ಮನವಿ ಮಾಡಿದರು.

- Advertisement -