ಕಾಂಗ್ರೆಸ್ ನ ಮೇಕೆದಾಟು ಪಾದಯಾತ್ರೆ ಸಮಾರೋಪ: ಡಬಲ್ ಇಂಜಿನ್ ಸರ್ಕಾರ ಅಲ್ಲ, ಡಬ್ಬಾ ಇಂಜಿನ್ ಸರ್ಕಾರ ಎಂದ ರಾಮಲಿಂಗಾ ರೆಡ್ಡಿ

Prasthutha|

ಬೆಂಗಳೂರು: ಮೇಕೆದಾಟು ಯೋಜನೆ ಜಾರಿಗೆ ಒತ್ತಾಯಿಸಿ ಕಾಂಗ್ರೆಸ್ ಹಮ್ಮಿಕೊಂಡಿದ್ದ ಮೇಕೆದಾಟು ಪಾದಯಾತ್ರೆ ಬೆಂಗಳೂರಿನಲ್ಲಿಂದು ಸಮಾಪ್ತಿಗೊಂಡಿತು.

- Advertisement -

ಬೆಳಗ್ಗೆ ಪಾದಯಾತ್ರೆ ನಗರ ಪ್ರವೇಶಿಸಿದಾಗ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸರ್ಜೇವಾಲ ಅವರು ಮೆಜೆಸ್ಟಿಕ್ ಬಳಿ ಪಾದಯಾತ್ರೆ ಸೇರಿಕೊಂಡರು. ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ, ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷರಾದ ಎಂ.ಬಿ. ಪಾಟೀಲ್, ತಮಿಳುನಾಡು, ಗೋವಾ, ಪುದುಚೇರಿ ರಾಜ್ಯಗಳ ಕಾಂಗ್ರೆಸ್ ಉಸ್ತುವಾರಿ ದಿನೇಶ್ ಗುಂಡೂರಾವ್ ಮತ್ತಿತರರು ಇದ್ದರು. ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾ ರೆಡ್ಡಿ ಮಾತನಾಡಿ, ರಾಜ್ಯದ ಎಲ್ಲ ವರ್ಗದ ಜನರ ಬೆಂಬಲದಿಂದ ಮೇಕೆದಾಟ ಪಾದಯಾತ್ರೆ ಯಶಸ್ವಿಯಾಗಿ ನಡೆದಿದೆ.

ಮೇಕೆದಾಟು ಯೋಜನೆ ಆಗ್ರಹಿಸಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಗೂ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಪಾದಯಾತ್ರೆ ಹೋರಾಟ ಆರಂಭಿಸಿದೆವು. ಈ ಹೋರಾಟ ಆರಂಭವಾದಾಗನಿಂದಲೂ ಇದನ್ನು ಹತ್ತಿಕ್ಕಲು ಸರ್ಕಾರ ಸತತ ಪ್ರಯತ್ನ ಮಾಡಿದೆ. ಕೋವಿಡ್ ಪ್ರಕರಣ ದಾಖಲಿಸಿದರು. ನ್ಯಾಯಾಲಯದ ಮೆಟ್ಟಿಲೇರಿದರು. ನ್ಯಾಯಾಲಯಕ್ಕೆ ಗೌರವ ಕೊಟ್ಟು ನಮ್ಮ ನಾಯಕರು ಇದಕ್ಕೆ ಅಲ್ಪ ವಿರಾಮ ಹಾಕಿ, ಈಗ ಇದನ್ನು ಮತ್ತೆ ಆರಂಭಿಸಿ ಯಶಸ್ವಿಯಾಗಿ ಪಾದಯಾತ್ರೆ ಪೂರ್ಣಗೊಳಿಸಿದ್ದಾರೆ ಎಂದು ಹೇಳಿದರು. ಕಾಂಗ್ರೆಸ್ ಪಕ್ಷ ಬೆಂಗಳೂರಿಗೆ ಕುಡಿಯುವ ನೀರು ತಂದಿಲ್ಲ ಎಂದು ಬಿಜೆಪಿಗರು ಅಪಪ್ರಚಾರ ಮಾಡುತ್ತಿದ್ದಾರೆ. ಮಹಾರಾಜರ ಕಾಲದಲ್ಲಿ ಬೆಂಗಳೂರಿಗೆ ತಿಪ್ಪಗೊಂಡನಹಳ್ಳಿಯಲ್ಲಿ ನೀರು ತರಲಾಗಿತ್ತು. ನಂತರ ದೇವರಾಜ ಅರಸು, ಗುಂಡೂರಾವ್, ವೀರಪ್ಪ ಮೊಯ್ಲಿ, ಎಸ್.ಎಂ ಕೃಷ್ಣ, ಧರ್ಮಸಿಂಗ್, ಸಿದ್ದರಾಮಯ್ಯ ಹೀಗೆ ಕಾಂಗ್ರೆಸ್ ಪಕ್ಷದ ಸರ್ಕಾರದ ಅವಧಿಯಲ್ಲಿ ಒಂದೊಂದು ಹಂತದಲ್ಲಿ ಒಟ್ಟು ಐದು ಹಂತಗಳಲ್ಲಿ ಬೆಂಗಳೂರಿಗೆ ನೀರು ತರಲಾಗಿದೆ. ಬಿಜೆಪಿ ಪಾತ್ರ ಇದರಲ್ಲಿ ಶೂನ್ಯ. ಬೆಂಗಳೂರು ನಗರಕ್ಕೆ ಬಿಜೆಪಿ ಕೊಡುಗೆ ಶೂನ್ಯ. ಕಳೆದ ಬಾರಿ 5 ವರ್ಷ ಅಧಿಕಾರ ಇದ್ದಾಗ ಏನು ಮಾಡಲಿಲ್ಲ, ಈಗ ಮೂರು ವರ್ಷದಿಂದ ಅಧಿಕಾರದಲ್ಲಿದ್ದರೂ ಕೇಂದ್ರದ ಪರಿಸರ ಇಲಾಖೆ ಅನುಮತಿ ತರಲು ಆಗಿಲ್ಲ. ಆದರೂ ಬಿಜೆಪಿ ಮಾತನಾಡುತ್ತಿದ್ದಾರೆ ಎಂದು ಅವರು ವ್ಯಂಗ್ಯವಾಡಿದರು. ಈ ಯೋಜನೆ ಜಾರಿಯಾದರೆ ಬೆಂಗಳೂರು ಹಾಗೂ ಸುತ್ತಲ ಪ್ರದೇಶದ 2.5 ಕೋಟಿ ಜನರಿಗೆ ಕುಡಿಯುವ ನೀರು ಸಿಗುತ್ತದೆ.

- Advertisement -

 ಬೆಂಗಳೂರಿನಲ್ಲಿ ಸಿಎಂಸಿ ಭಾಗದ ಕೆಲವು ಪ್ರದೇಶ ಹೊರತಾಗಿ ಯಾವುದೇ ಪ್ರದೇಶಕ್ಕೆ ಕಾವೇರಿ ನೀರು ಕುಡಿಯಲು ಸಿಗುತ್ತಿಲ್ಲ. ಹೀಗಾಗಿ ಎಲ್ಲರಿಗೂ ಕುಡಿಯುವ ನೀರು ನೀಡಲು ಈ ಯೋಜನೆ ಅಗತ್ಯ. ಬಿಜೆಪಿ ತಾನೂ ಕೆಲಸ ಮಾಡುವುದಿಲ್ಲ, ಮಾಡುವವರನ್ನು ನೋಡಿದರೆ ಹೊಟ್ಟೆಕಿಚ್ಚುಪಟ್ಟುಕೊಳ್ಳುತ್ತಾರೆ. ಸುಳ್ಳು ಪ್ರಚಾರ ಮಾಡುತ್ತಾರೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಒತ್ತಡ ಹಾಕಲು ಈ ಪಾದಯಾತ್ರೆ. ಇದರಲ್ಲಿ ಯಾವುದೇ ರಾಜಕೀಯ ಇಲ್ಲ ಎಂದು ಅವರು ಸ್ಪಷ್ಟಪಡಿಸಿದರು. ಕೇಂದ್ರ ಹಾಗೂ ರಾಜ್ಯದಲ್ಲಿ ಇರುವುದು ಡಬಲ್ ಇಂಜಿನ್ ಸರ್ಕಾರ ಅಲ್ಲ. ಡಬ್ಬಾ ಇಂಜಿನ್ ಸರ್ಕಾರ. ಈ ಯೋಜನೆ ಕಾರ್ಯರೂಪಕ್ಕೆ ತರಬೇಕಾದರೆ ಕಾಂಗ್ರೆಸ್ ನಿಂದ ಮಾತ್ರ ಸಾಧ್ಯ ಎಂದು ರಾಮಲಿಂಗಾ ರೆಡ್ಡಿ ಹೇಳಿದರು.



Join Whatsapp