ಬೆಳಗಾವಿ: 2019 ರಲ್ಲಿ ಬಂದ ಭಾರಿ ಪ್ರವಾಹದಿಂದಾಗಿ ಸುಮಾರು 2 ಲಕ್ಷ 47 ಸಾವಿರ ಮನೆಗಳು ಬಿದ್ದುಹೋಗಿವೆ ಎಂದು ರಾಜ್ಯ ಸರ್ಕಾರ ಕೇಂದ್ರಕ್ಕೆ ಪರಿಹಾರಕ್ಕಾಗಿ ಮನವಿ ನೀಡಿತ್ತು. ಅದರಲ್ಲಿ 1 ಲಕ್ಷದ 33 ಸಾವಿರ ಮನೆಗಳಿಗೆ ಈ ವರೆಗೆ ಪರಿಹಾರ ನೀಡಲಾಗಿದೆ, ಇನ್ನುಳಿದ 1 ಲಕ್ಷದ 14 ಸಾವಿರ ಮನೆಗಳಿಗೆ ಪರಿಹಾರ ತಲುಪಿಲ್ಲ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ.
ವಿಧಾನಸಭಾ ಅಧಿವೇಶನದಲ್ಲಿ ಅತಿವೃಷ್ಟಿ, ಪ್ರವಾಹ ಹಾಗೂ ಸಂತ್ರಸ್ತರಿಗೆ ನೀಡಬೇಕಾದ ಪರಿಹಾರ ಧನದ ಕುರಿತು ಮಾತನಾಡಿದ ಅವರು, ಕಳೆದ ಕೆಲವು ದಿನಗಳ ಹಿಂದೆ ಪರಿಷತ್ ಚುನಾವಣೆ ಸಂಬಂಧ ನಾನು ಗೋಕಾಕ್, ರಾಯಭಾಗ, ರಾಮದುರ್ಗಾಕ್ಕೆ ಭೇಟಿನೀಡಿದಾಗ ನೂರಾರು ಮಹಿಳೆಯರು ಮನವಿ ಪತ್ರದ ಜೊತೆಗೆ ಬಂದು, 2019 ರ ಪ್ರವಾಹದಲ್ಲಿ ನಾವು ಮನೆ ಕಳೆದುಕೊಂಡಿದ್ದೇವೆ, ನಮಗಿನ್ನು ಪರಿಹಾರ ಸಿಕ್ಕಿಲ್ಲ ಅಂತ ಕಣ್ಣೀರು ಹಾಕಿದರು ಎಂದು ಹೇಳಿದರು.
ಹಿಂದಿನ ಯು.ಪಿ.ಎ ಸರ್ಕಾರದ ಅವಧಿಯ ಬಜೆಟ್ ಗಾತ್ರ 16 ಲಕ್ಷದ 65 ಸಾವಿರ ಕೋಟಿ ಇತ್ತು, ಕೇಂದ್ರದ ಈಗಿನ ಬಜೆಟ್ ಗಾತ್ರ ರೂ. 34 ಲಕ್ಷದ 83 ಸಾವಿರ ಕೋಟಿ ಆಗಿದೆ. ಬಜೆಟ್ ಗಾತ್ರ ಹೆಚ್ಚಾದಂತೆ ಎನ್.ಡಿ.ಆರ್.ಎಫ್ ಹಣ, ರಾಜ್ಯಗಳಿಗೆ ನೀಡುವ ಪರಿಹಾರದ ಹಣ ಹೆಚ್ಚಾಗಬೇಕಲ್ಲವೇ? 2019 ರಲ್ಲಿ ರಾಜ್ಯ ಸರ್ಕಾರ ನೀಡಿದ್ದು ರೂ. 1652 ಕೋಟಿ. ರಾಜ್ಯ ವಿಪತ್ತು ಪರಿಹಾರ ನಿಧಿ ನಿಯಮಗಳ ಅನ್ವಯ ನೀಡಬೇಕಾದುದ್ದು ರೂ. 3,891 ಕೋಟಿ. 2020 ರಲ್ಲಿ ರೂ. 1,318 ಕೋಟಿ ಪರಿಹಾರ ನೀಡಲಾಗಿದೆ. ಕಳೆದ ಎರಡು ವರ್ಷದಲ್ಲಿ ಒಟ್ಟು ರೂ. 2,971 ಕೋಟಿ ಪರಿಹಾರ ನೀಡಲಾಗಿದೆ. ಇನ್ನುಳಿದ ಪರಿಹಾರದ ಹಣ ಸಂತ್ರಸ್ತ ಬಡಜನರನ್ನು ತಲುಪೋದು ಯಾವಾಗ? ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.
ನರೇಂದ್ರ ಮೋದಿ ಅವರು ಪ್ರಧಾನಿಯಾದ ಮೇಲೆ ರಾಜ್ಯಕ್ಕೆ ಅತಿ ಹೆಚ್ಚು ಪರಿಹಾರದ ರೂಪದಲ್ಲಿ ಹಣ ನೀಡಿದ್ದಾರೆ ಎಂಬ ಬಿಜೆಪಿಯವರ ಹೇಳಿಕೆ ಶುದ್ಧ ಸುಳ್ಳು. ಕಾಂಗ್ರೆಸ್ ಹಾಗೂ ಬಿಜೆಪಿ ಸರ್ಕಾರಗಳ ನಡುವಿನ ಬಜೆಟ್ ಗಾತ್ರದ ವ್ಯತ್ಯಾಸಕ್ಕೆ ಹೋಲಿಸಿದರೆ ಅವರು ನೀಡಿರುವ ಹಣ ಯಾವ ಲೆಕ್ಕವೂ ಅಲ್ಲ.
ನರೇಂದ್ರ ಮೋದಿ ಅವರು ಜಾಸ್ತಿ ಪರಿಹಾರ ಕೊಟ್ಟಿದ್ದಾರೆ ಎಂದು ಸುಳ್ಳು ಹೇಳುವ ಬದಲು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿರುವ ಪರಿಹಾರವನ್ನಾದರೂ ತರಲು ರಾಜ್ಯ ಸರ್ಕಾರ ಪ್ರಯತ್ನ ಮಾಡಬೇಕಿತ್ತು.
15 ನೇ ಹಣಕಾಸು ಆಯೋಗ ಶಿಫಾರಸು ಮಾಡಿದ್ದ ರೂ. 5,495 ಕೋಟಿ ಹಣವನ್ನು ತರಲು ಈ ಸರ್ಕಾರಕ್ಕೆ ಸಾಧ್ಯವಾಗಿಲ್ಲ. ರಾಜ್ಯದಿಂದ ಆಯ್ಕೆಯಾದ 25 ಬಿಜೆಪಿ ಸಂಸದರು, ರಾಜ್ಯ ಸರ್ಕಾರ ಒಂದು ದಿನವಾದರೂ ಪ್ರಧಾನಿಯವರ ಮುಂದೆ ಇದನ್ನು ಕೇಳಿದ್ದಾರ? ಪ್ರತಿಭಟಿಸಿದ್ದಾರ? ಇದು ರಾಜ್ಯಕ್ಕಾದ ಅನ್ಯಾಯವಲ್ಲವ?
ನಮ್ಮ ರಾಜ್ಯದಿಂದ ವಿವಿಧ ರೂಪದ ತೆರಿಗೆಗಳ ಮೂಲಕ ಪ್ರತೀ ವರ್ಷ ಸುಮಾರು ರೂ. 3 ಲಕ್ಷ ಕೋಟಿ ಹಣ ಕೇಂದ್ರ ಸರ್ಕಾರಕ್ಕೆ ಸಂದಾಯವಾಗುತ್ತಿದೆ. ಇದರಲ್ಲಿ ಸುಮಾರು 50 – 60 ಸಾವಿರ ಕೋಟಿ ರೂಪಾಯಿ ಮಾತ್ರ ನಮ್ಮ ಪಾಲಿನ ಅನುದಾನದ ರೂಪದಲ್ಲಿ ಮರಳಿ ಸಿಗುತ್ತಿದೆ.
ಇತರೆ ರಾಜ್ಯಗಳಿಗೆ ಹೋಲಿಕೆ ಮಾಡಿದರೆ ಕರ್ನಾಟಕ್ಕೆ ಸಿಗುತ್ತಿರುವ ಎನ್.ಡಿ.ಆರ್.ಎಫ್ ಹಣ, ತೆರಿಗೆ ಪಾಲು, ಅನುದಾನದ ಪ್ರಮಾಣ ಅತ್ಯಂತ ಕಡಿಮೆಯಿದೆ. ನಮಗೆ ಈ ಅನ್ಯಾಯ ಏಕೆ?
ಯು.ಪಿ.ಎ ಸರ್ಕಾರದ ಅವಧಿಯಲ್ಲಿ ರಾಜ್ಯದಿಂದ ಪೆಟ್ರೋಲ್ ಹಾಗೂ ಡೀಸೆಲ್ ಮೇಲಿನ ಹೆಚ್ಚುವರಿ ಅಬಕಾರಿ ಸುಂಕ 3 ರಿಂದ 4 ಸಾವಿರ ಕೋಟಿ ರೂಪಾಯಿ ಸಂಗ್ರಹವಾಗುತ್ತಿತ್ತು. ಇಂದು ಅದು ರೂ. 35,000 ಗೆ ಏರಿಕೆಯಾಗಿದೆ.
ಕೇಂದ್ರ ಸರ್ಕಾರದ ಸಹಭಾಗಿತ್ವ ಯೋಜನೆಗಳಲ್ಲಿ 2013-14 ರಲ್ಲಿ ರಾಜ್ಯದ ಪಾಲು 25%, ಕೇಂದ್ರದ ಪಾಲು 75% ಇತ್ತು. ನರೇಂದ್ರ ಮೋದಿ ಅವರು ಪ್ರಧಾನಿಯಾದ ಮೇಲೆ 2014-15 ರಲ್ಲಿ ರಾಜ್ಯದ ಪಾಲು 40% ಗೆ ಏರಿಕೆಯಾಗಿ, ಕೇಂದ್ರದ ಪಾಲು 60% ಗೆ ಇಳಿಯಿತು. 2020-21 ರಲ್ಲಿ ಈಗ ಕೇಂದ್ರ ಪಾಲು 45%, ರಾಜ್ಯದ ಪಾಲು 55% ಆಗಿದೆ.
2012-13 ರಲ್ಲಿ ನಮ್ಮ ತೆರಿಗೆ ಪಾಲು ರೂ. 12,647 ಕೋಟಿ ಇತ್ತು. 2013-14 ರೂ. 13,809 ಕೋಟಿಗೆ ಏರಿಕೆಯಾಗಿತ್ತು. 2019-20 ರಲ್ಲಿ ರಾಜ್ಯಕ್ಕೆ ರೂ. 39,000 ಕೋಟಿ ಬರಬೇಕಿತ್ತು, ಆದರೆ ಬಂದಿದ್ದು ಮಾತ್ರ ರೂ. 30,990 ಕೋಟಿ. ಕಳೆದ ಸಾಲಿನಲ್ಲಿ ರೂ. 21,495 ಕೋಟಿ ಮಾತ್ರ ಬಂದಿದೆ.
ರಾಜ್ಯದಲ್ಲಿ ಮತ್ತು ಕೇಂದ್ರದಲ್ಲಿ ಒಂದೇ ಪಕ್ಷ ಅಧಿಕಾರಕ್ಕೆ ಬರಬೇಕು, ಆಗ ಡಬ್ಬಲ್ ಇಂಜಿನ್ ಸರ್ಕಾರ ವೇಗವಾಗಿ ಕೆಲಸ ಮಾಡುತ್ತೆ ಎಂದು ನರೇಂದ್ರ ಮೋದಿ ಅವರು ಹೇಳಿದ್ದರು. ಈಗ ಎರಡೂ ಬಿಜೆಪಿ ಸರ್ಕಾರಗಳು ಸೇರಿ ಡಬ್ಬಲ್ ದೋಖಾ ಸರ್ಕಾರ ನಡೆಸುತ್ತಿವೆ ಎಂದು ಹೇಳಿದರು.
ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಕೇವಲ ಎರಡು ವರ್ಷಗಳಲ್ಲಿ ರಾಜ್ಯದ ತೆರಿಗೆ ಪಾಲಿನಲ್ಲಿ ರೂ. 18,000 ಕೋಟಿ ಖೋತಾ ಆಗಿದೆ. ಬಿಜೆಪಿಯ ಯಾವೊಬ್ಬ ನಾಯಕರು ಈ ಅನ್ಯಾಯದ ವಿರುದ್ಧ ಮಾತನಾಡುವುದಿಲ್ಲ ಎಂದು ನರೇಂದ್ರ ಮೋದಿ ಸರ್ಕಾರ ಹೀಗೆ ಮಾಡುತ್ತಿದೆ.
ಪ್ರವಾಹ, ಅತಿವೃಷ್ಟಿಯಿಂದಾದ ನಷ್ಟದ ಕುರಿತು ರಾಜ್ಯ ಸರ್ಕಾರ ಕೇಂದ್ರದ ಪರಿಹಾರಕ್ಕಾಗಿ 4 ಮನವಿಗಳನ್ನು ನೀಡಿದೆ. ಆದರೆ ಇವತ್ತನ ವರೆಗೆ ಕೇಂದ್ರದಿಂದ ನಯಾಪೈಸೆ ಪರಿಹಾರದ ಹಣ ರಾಜ್ಯಕ್ಕೆ ಬಂದಿಲ್ಲ.
ಹವಾಮಾನ ಬದಲಾವಣೆಯು ಮುಂದಿನ ದಿನಗಳಲ್ಲಿ ನಮ್ಮ ಕೃಷಿ ಪದ್ಧತಿಯನ್ನು ತೀವ್ರವಾಗಿ ಬಾಧಿಸಲಿದೆ ಎಂದು ಕೇಂದ್ರದ ಅರಣ್ಯ ಮತ್ತು ಪರಿಸರ ಇಲಾಖೆಯ ಸ್ವಾಯತ್ತ ಸಂಸ್ಥೆಯಾದ ಎನ್ವಿರಾನ್ಮೆಂಟಲ್ ಮ್ಯಾನೇಜ್ಮೆಂಟ್ ಎಂಡ್ ಪಾಲಿಸಿ ರೀಸರ್ಚ್ ಇನ್ಸ್ಟಿಟ್ಯೂಟ್ ನ ವಿಜ್ಞಾನಿಗಳು ಅಭಿಪ್ರಾಯ ಪಟ್ಟಿದ್ದಾರೆ. ಸರ್ಕಾರ ಅವರ ವರದಿಯನ್ನು ಗಂಭೀರವಾಗಿ ಪರಿಗಣಿಸಿ, ಈಗಿನಿಂದಲೇ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಒತ್ತಾಯಿಸುತ್ತೇನೆ.
ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ವಸತಿ ಸಚಿವರಾಗಿದ್ದ ಎಂ.ಟಿ.ಬಿ ನಾಗರಾಜ್ ಅವರು ಬಾದಾಮಿ ಕ್ಷೇತ್ರಕ್ಕೆ 7,500 ಮನೆಗಳನ್ನು ಮಂಜೂರು ಮಾಡಿದ್ದರು, ನಂತರ ಬಿಜೆಪಿ ಸರ್ಕಾರ ಬಂದಮೇಲೆ ಆ ಮನೆಗಳ ಮಂಜೂರಾತಿ ಆದೇಶವನ್ನು ರದ್ದು ಮಾಡಿದೆ.
ನಮ್ಮ ಸರ್ಕಾರ ಐದು ವರ್ಷಗಳ ಅವಧಿಯಲ್ಲಿ 15 ಲಕ್ಷ ಮನೆಗಳನ್ನು ನಿರ್ಮಾಣ ಮಾಡಿತ್ತು. ನನ್ನ ಕೊನೆಯ ಬಜೆಟ್ ನಲ್ಲಿ ನಾವು ಮತ್ತೆ ಅಧಿಕಾರಕ್ಕೆ ಬಂದರೆ ಮುಂದಿನ ಐದು ವರ್ಷಗಳಲ್ಲಿ 20 ಲಕ್ಷ ಮನೆಗಳನ್ನು ನಿರ್ಮಾಣ ಮಾಡುವುದಾಗಿ ಘೋಷಿಸಿದ್ದೆ.
ನಾವು 2018 ರಲ್ಲಿ ಮತ್ತೆ ಅಧಿಕಾರಕ್ಕೆ ಬಂದಿದ್ದರೆ ಮುಂದಿನ ಐದು ವರ್ಷಗಳಲ್ಲಿ 20 ಲಕ್ಷ ಮನೆಗಳನ್ನು ನಿರ್ಮಿಸಿಯೇ ತೀರುತ್ತಿದ್ದೆವು. ಆದರೆ ಈ ಸರ್ಕಾರ ಬಂದು ಎರಡೂವರೆ ವರ್ಷಗಳಲ್ಲಿ ಒಂದೇ ಒಂದು ಮನೆಯಾಗಲೀ, ನಿವೇಶನವನ್ನಾಗಲೀ ಮಂಜೂರು ಮಾಡಿಲ್ಲ.
ರಾಜ್ಯ ಸರ್ಕಾರ ಈ ಕೂಡಲೇ ಪ್ರವಾಹ, ಅತಿವೃಷ್ಟಿಯಿಂದ ಹಾನಿಗೀಡಾದ ಬೆಳೆ ಹಾಗೂ ಮನೆಗಳಿಗೆ ಪರಿಹಾರ ನೀಡಬೇಕು. 2019 ರಲ್ಲಿ ಪ್ರವಾಹ ಬಂದ ಸಂದರ್ಭದಲ್ಲಿ ಕೆಲವು ಗ್ರಾಮಗಳ ಸ್ಥಳಾಂತರಕ್ಕೆ ನಿರ್ಧರಿಸಲಾಗಿತ್ತು, ಅವುಗಳ ಸ್ಥಳಾಂತರ ಕಾರ್ಯವನ್ನು ತಕ್ಷಣ ಆರಂಭಿಸಬೇಕು ಎಂದು ಒತ್ತಾಯಿಸುತ್ತೇನೆ ಎಂದು ಸಿದ್ದರಾಮಯ್ಯ ಹೇಳಿದರು.
ಡಬ್ಬಲ್ ಇಂಜಿನ್ ಸರ್ಕಾರಗಳಿಂದ ಡಬ್ಬಲ್ ದೋಖಾ: ವಿಧಾನಸಭೆಯಲ್ಲಿ ಸಿದ್ದರಾಮಯ್ಯ ವಾಗ್ದಾಳಿ
Prasthutha|