ಕಲಬುರಗಿ: ಬಿಜೆಪಿ ಪಕ್ಷಕ್ಕೆ ಮತ ಹಾಕದಂತೆ ಸ್ವತಹ ಪಕ್ಷದ ಮೋರ್ಚಾ ಉಪಾದ್ಯಕ್ಷನೇ ಕೇಳಿಕೊಳ್ಳುವ ವಿಡೀಯೊ ಸಖತ್ ವೈರಲಾಗಿದೆ. ಕಲಬುರಗಿ ಜಿಲ್ಲೆಗೆ ರಾಜ್ಯ ಬಿಜೆಪಿ ಸರಕಾರದಿಂದ ಆಗುತ್ತಿರುವ ಅನ್ಯಾಯ, ಧೋರಣೆ ವಿರುಧ್ದ ಕೆಂಡಾಮಂಡಲರಾಗಿರುವ ಯುವ ಮೋರ್ಚಾ ಜಿಲ್ಲಾ ಉಪಾದ್ಯಕ್ಷ ಡಾ. ರಾಘವೇಂದ್ರ ಚಿಂಚನಸೂರ ಮುಂಬರುವ ನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಪಕ್ಷಕ್ಕೆ ಮತ ಹಾಕದಂತೆ ಕೋರಿಕೊಂಡಿದ್ದಾರೆ.
ಪಕ್ಷದ ವರಿಷ್ಠರಿಗೆ ಅಧಿಕಾರದ ಮದ ನೆತ್ತಿಗೆ ಏರಿದ್ದು, ಕಲಬುರಗಿಯ ಜನರನ್ನು ಹುಚ್ಚರೆಂದು ಭಾವಿಸಿರುವುದರಿಂದ ತಕ್ಕ ಪಾಠ ಕಲಿಸಿ ಎಲ್ಲರೂ ನೋಟಾ ಚಲಾಯಿಸಿ ಬಿಜೆಪಿಯನ್ನು ಬಹಿಷ್ಕರಿಸೋಣ ಎಂದು ಮನವಿ ಮಾಡಿದ ವಿಡೀಯೊ ಸಾಮಾಜಿಕ ತಾಲಣದಲ್ಲಿ ಇದೀಗ ವೈರಲ್ ಆಗಿದೆ.
ಅಲ್ಲದೇ ಪಕ್ಷದ ಪ್ರಮುಖರಿಗೆ ಪ್ರಶ್ನೆಗಳ ಸುರಿಮಳೆಗೈದಿರುವ ರಾಘವೇಂದ್ರ ಕಲಬುರಗಿ ಜಿಲ್ಲೆಗೆ ಸಚಿವ ಸ್ಥಾನ ಯಾಕಾಗಿ ನೀಡಿಲ್ಲ, ಶೇ 20ರ ಜನವಸತಿ ಪ್ರದೇಶಕ್ಕೆ ನೀವು ಕೊಡುತ್ತಿರುವ ಅನುದಾನವೆಷ್ಟು ಎಂದು ಪ್ರಶ್ನಿಸಿದ್ದಾರೆ. ಪಕ್ಷದ ಧ್ವಜ ಕಟ್ಟಲು, ಪ್ರಚಾರ ಪಡಿಸಲು ನಾವು ಬೇಕು , ಅಧಿಕಾರದ ವಿಷಯಕ್ಕೆ ಮೂಲೆಗುಂಪೇಕೆ ಎಂದು ಕೇಳಿದ್ದಾರೆ. ಕಲಬುರಗಿ ಕಾರ್ಯಕರ್ತರನ್ನು ಬೆಂಗಳೂರಿನಲ್ಲಿ ಕೋವಿಡ್ ನೆಪದಲ್ಲಿ ಕಛೇರಿ ಭೇಟಿಗೂ ಅವಕಾಶ ನೀಡುವುದಿಲ್ಲ ಎಂದು ಕಿಡಿಕಾರಿದ ಅವರು, ಬಜೆಟ್ ಗಾತ್ರದಲ್ಲೂ ನಮಗೆ ಅನ್ಯಾಯವಾಗುತ್ತಿದೆ ಎಂದು ಆರೋಪಿಸಿದ್ದಾರೆ.