ತಿರುವನಂತಪುರಂ: ಫುಟ್‌ಬಾಲ್ ಅಭಿಮಾನದ ಭರದಲ್ಲಿ ಭಾರತದ ರಾಷ್ಟ್ರ ಧ್ವಜಕ್ಕಿಂತ ಎತ್ತರದಲ್ಲಿ ಇತರ ರಾಷ್ಟ್ರಗಳ ಧ್ವಜವನ್ನು ಹಾರಿಸುವುದು ಸರಿಯಲ್ಲ ಎಂದು ಇ.ಕೆ.ವಿಭಾಗ ಸಮಸ್ತದ ಅಧೀನದಲ್ಲಿ ಕಾರ್ಯನಿರ್ವಹಿಸುವ ಖುತ್‌ಬಾ ಸಮಿತಿಯ ಕಾರ್ಯದರ್ಶಿ ನಾಸಿರ್ ಫೈಝಿ ಕೂಡತ್ತಾಯಿ ಹೇಳಿದ್ದಾರೆ.
ಇತ್ತೀಚೆಗೆ ಕತಾರ್ ನಲ್ಲಿ ನಡೆಯುತ್ತಿರುವ ಫಿಫಾ ವಿಶ್ವಕಪ್ ಬಗ್ಗೆ ಪ್ರತಿಕ್ರಿಯಿಸಿರುವ ಅವರು, ಫುಟ್‌ಬಾಲ್ ಅಭಿಮಾನದ ಭರದಲ್ಲಿ ಭಾರತದ ರಾಷ್ಟ್ರಧ್ವಜಕ್ಕಿಂತ ಎತ್ತರದಲ್ಲಿ ಇತರ ರಾಷ್ಟ್ರಗಳ ಧ್ವಜವನ್ನು ಹಾರಿಸಕೂಡದು. ಹಲವು ದೇಶಗಳನ್ನು ವಸಾಹತುಗಳನ್ನಾಗಿ ಮಾಡಿಕೊಂಡ ಪೋರ್ಚುಗಲ್‌ನ ಧ್ವಜವನ್ನು ಹಾರಿಸುವುದು ಸರಿಯಲ್ಲ ಎಂದು ಫೈಝಿ ಹೇಳಿದರು.
ಫುಟ್‌ಬಾಲ್ ತಾರೆಗಳಾದ ಮೆಸ್ಸಿ, ರೊನಾಲ್ಡೊ, ನೇಮರ್ ಮುಂತಾದವರ ಕಟೌಟ್ ನಿಲ್ಲಿಸಲು ಭರಪೂರ ಹಣ ಖರ್ಚು ಮಾಡುವುದರ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಅವರು, ಈ ಸಂಪ್ರದಾಯ ಇಸ್ಲಾಮಿನ ಆಚರಣೆಗೆ ವಿರುದ್ಧವಾಗಿದೆ. ಫುಟ್‌ಬಾಲ್ ತಾರೆಗಳ ಕಟೌಟ್ ನಿಲ್ಲಿಸಲು ಬಡವರು ಸಾವಿರಾರು ರೂಪಾಯಿ ಪೋಲು ಮಾಡುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಫುಟ್‌ಬಾಲ್ ವಿಶ್ವಕಪ್‌ನಿಂದಾಗಿ ವಿದ್ಯಾರ್ಥಿಗಳು ಕಲಿಕೆಯಲ್ಲಿ ಉತ್ಸಾಹವನ್ನು ಕಳೆದುಕೊಳ್ಳುತ್ತಿದ್ದಾರೆ. ಜನ ಫುಟ್‌ಬಾಲ್ ಆಟದ ದಾಸರಾಗುತ್ತಿದ್ದು, ಇದು ಸರಿಯಾದ ಬೆಳವಣಿಗೆ ಅಲ್ಲ. ಫುಟ್‌ಬಾಲ್ ಅನ್ನು ಕ್ರೀಡೆಯಾಗಿಯಷ್ಟೇ ನೋಡಬೇಕು. ಕ್ರೀಡಾಸ್ಫೂರ್ತಿಯಿಂದ ನಡೆದುಕೊಳ್ಳಬೇಕು. ದೈಹಿಕ ಚಟುವಟಿಕೆಯಾಗಿ ಅದನ್ನು ತೆಗೆದುಕೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ.