ಬ್ಲ್ಯಾಕ್ ಮೇಲ್’ಗೆ ಹೆದರಲ್ಲ, ಗುತ್ತಿಗೆದಾರರಿಗೆ ನಿಯಮ ಪ್ರಕಾರ ಬಿಲ್ ಪಾವತಿ ಆಗುತ್ತೆ: ಡಿ ಕೆ ಶಿವಕುಮಾರ್

Prasthutha|

ಬೆಂಗಳೂರು: ಸರಿಯಾಗಿ ಕೆಲಸ ಮಾಡಿದ ಗುತ್ತಿಗೆದಾರರಿಗೆ ಬಿಲ್ ಪಾವತಿ ಆಗಲಿದೆ. ಯಾವ ಗುತ್ತಿಗೆದಾರರ ಹಿಂದೆ ಯಾರಿದ್ದಾರೆ ಎಂದೂ ನನಗೆ ಗೊತ್ತಿದೆ. ನಾವು ಕಾನೂನು ಪ್ರಕಾರ ಕೆಲಸ ಮಾಡುತ್ತಿದ್ದೇವೆ. ಬ್ಲ್ಯಾಕ್ ಮೇಲ್ಗಳಿಗೆಲ್ಲ ಈ ಡಿ.ಕೆ. ಶಿವಕುಮಾರ್ ಹೆದರುವುದಿಲ್ಲ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.

- Advertisement -


ಇಂದು ಕುಮಾರಕೃಪ ಅತಿಥಿಗೃಹದಲ್ಲಿ ಮಾತನಾಡಿದ ಅವರು, ಅಜ್ಜಯ್ಯನ ಮಠಕ್ಕೆ ಬಂದು ಪ್ರಮಾಣ ಮಾಡಲಿ ಎಂಬ ಗುತ್ತಿಗೆದಾರರ ಸವಾಲು ವಿಚಾರವಾಗಿ ಪ್ರತಿಕ್ರಿಯಿಸಿ, ಈ ಆರೋಪದ ಬಗ್ಗೆ ನಮಗೆ ಗೊತ್ತಿಲ್ಲ. ಯಾವ ಬಿಲ್ ವಿಚಾರವೂ ನನಗೆ ಗೊತ್ತಿಲ್ಲ. ಯಾವ ಗುತ್ತಿಗೆದಾರನ ಬಳಿಯೂ ನಾನು ಮಾತನಾಡಿಲ್ಲ. ನನಗೆ ಪ್ರಜ್ಞೆ ಇದೆ. ನನಗೆ ರಾಜಕಾರಣ ಗೊತ್ತಿದೆ. ಯಾರ ಹಿಂದೆ ಯಾರಿದ್ದಾರೆ ಎಂಬುದು ಗೊತ್ತಿದೆ. ಅವರು ಏನು ಬೇಕಾದರು ಮಾಡಲಿ ಎಂದರು.


ನಾವು ಕಾನೂನಿನ ಚೌಕಟ್ಟಿನಲ್ಲಿ ಕೆಲಸ ಮಾಡುತ್ತೇವೆ. ಈ ಬ್ಲ್ಯಾಕ್ಮೇಲ್, ಥ್ರೆಟ್, ಬೆದರಿಕೆ, ರಾಜ್ಯಪಾಲರಿಗೆ ದೂರು ಕೊಡುವುದು, ಪ್ರಧಾನಿಗೆ ದೂರು ಕೊಡುವುದು ಏನು ಬೇಕಾದರು ಮಾಡಲಿ. ಕುಮಾರಸ್ವಾಮಿಯವರು ಗುತ್ತಿಗೆದಾರರನ್ನು ಭೇಟಿ ಮಾಡಿರುವುದು ಸ್ವಾಭಾವಿಕ. ನಾವಿದ್ದಾಗಲೂ ಗುತ್ತಿಗೆದಾರರು ಭೇಟಿಯಾಗಿದ್ದರು. ಪ್ರತಿಪಕ್ಷಗಳು ಬರುವುದೇ ಇಂಥ ವಿಚಾರದ ಬಗ್ಗೆ ದನಿ ಎತ್ತಲು ಎಂದರು.

- Advertisement -


ನಾನು ಯಾರಿಗೂ ಪ್ರಮಾಣ ಮಾಡುವುದು ಬೇಕಾಗಿಲ್ಲ. ಉತ್ತರ ಕೊಡುವುದು ಬೇಕಾಗಿಲ್ಲ. ಕಾನೂನು ಉತ್ತರ ಕೊಡುತ್ತದೆ. ಕೆಲಸ ಮಾಡಿದರೆ ಬಿಲ್ ಕೊಡುತ್ತೇವೆ. ಇಲ್ಲವಾದರೆ ಕೊಡಲ್ಲ. ಒಂದೇ ತಿಂಗಳಲ್ಲಿ ಒಂದು ಸಾವಿರ ಕೋಟಿ ರೂ. ಮೊತ್ತದ ಕೆಲಸ ಆಗುತ್ತಾ? ಅದರ ಬಗ್ಗೆ ಪರಿಶೀಲಿಸಲು ಸೂಚನೆ ನೀಡಿದ್ದೇನೆ. ಕೆಲಸ ಮಾಡಲಾಗಿದೆಯಾ ಎಂಬ ಬಗ್ಗೆ ದೃಢೀಕರಿಸಿದರೆ ಬಿಲ್ ಪಾವತಿ ಆಗುತ್ತೆ. ಸರ್ಕಾರ ಇರುವುದು ನೀತಿ ರೂಪಿಸಲು. ಗುತ್ತಿಗೆದಾರರ ವಿಚಾರದಲ್ಲಿ ನಾನು ಮಧ್ಯಪ್ರವೇಶ ಮಾಡುವುದಿಲ್ಲ. ಯಾವುದೇ ರಾಜಕೀಯ ಒತ್ತಡ ಇದ್ದರೂ ನಾನು ತಡೆಯಲು ಸಿದ್ಧ ಎಂದು ಡಿಕೆಶಿ ತಿಳಿಸಿದರು.


ನಾವು ಹಿಂದಿನ ಸರ್ಕಾರದ ವಿರುದ್ಧ ಕಮಿಷನ್ ಆರೋಪ ಮಾಡಿದ್ದು ಸತ್ಯ. ನಾವು ಅದರ ಬಗ್ಗೆ ತನಿಖೆಯನ್ನೂ ಮಾಡುತ್ತಿದ್ದೇವೆ. ಮಾಜಿ ಡಿಸಿಎಂ ಅಶ್ವತ್ಥ ನಾರಾಯಣ್ ಸೇರಿ ಬಿಜೆಪಿ ನಾಯಕರು ತನಿಖೆ ಮಾಡಿ ಎಂದು ಸದನದಲ್ಲಿ ಆಗ್ರಹಿಸಿದ್ದರು. ಅಂದಿನ ಸಿಎಂ ಬೊಮ್ಮಾಯಿ ಕೂಡ ತನಿಖೆ ಮಾಡುತ್ತೇವೆ ಎಂದು ಹೇಳಿದ್ದರು. ಸಚಿವರು ಮತ್ತು ಶಾಸಕರ ಜೊತೆ ಸಿಎಂ ಸಿದ್ದರಾಮಯ್ಯ ಸಭೆ ನಡೆಸುತ್ತಿದ್ದಾರೆ. ಈ ಹಿನ್ನೆಲೆ ಏನಾದರು ಸಮಸ್ಯೆ ಇದೆಯಾ ಎಂಬ ಬಗ್ಗೆ ನಾನು ಇಲ್ಲಿ ಚರ್ಚೆ ನಡೆಸಿದ್ದೇನೆ. ಈ ಹಿಂದೆ ಆದ ತಾರತಮ್ಯದ ಬಗ್ಗೆ ಚರ್ಚೆ ಮಾಡಿದ್ದೇನೆ. ಒಂದು ತೀರ್ಮಾನಕ್ಕೆ ಬಂದಿದ್ದೇವೆ ಎಂದು ಇದೇ ವೇಳೆ ಹೇಳಿದರು.

Join Whatsapp