ಬೆಂಗಳೂರು: ವಿಮಾನ ಪ್ರಯಾಣಿಸುವಾಗ ಹೃದಯಾಘಾತಕ್ಕೆ ಒಳಗಾದ ವ್ಯಕ್ತಿಗೆ ಚಿಕಿತ್ಸೆ ನೀಡಿ ಜೀವ ಉಳಿಸುವ ಮೂಲಕ ವೈದ್ಯರೊಬ್ಬರು ಮಾನವೀಯತೆ ಮೆರೆದಿದ್ದಾರೆ.
ರೋಗಿಯ ಜೀವ ಉಳಿಸಿದ ತಜ್ಞ ವೈದ್ಯ ಡಾ. ವಿಶ್ವರಾಜ್ ವೇಮಲ ಅವರ ಸಮಯ ಪ್ರಜ್ಞೆ ಭಾರೀ ಪ್ರಶಂಸೆಗೆ ಪಾತ್ರವಾಗಿದೆ.
ಲಂಡನ್‌ನಿಂದ ಭಾರತಕ್ಕೆ ತಮ್ಮ ತಾಯಿ ಜತೆ ತೆರಳುತ್ತಿದ್ದ ವೈದ್ಯರು ಹೃದಯಾಘಾತಕ್ಕೆ ಒಳಗಾದ ವ್ಯಕ್ತಿಗೆ ಸತತ 5 ಗಂಟೆಗಳ ಕಾಲ ಚಿಕಿತ್ಸೆ ನೀಡಿದ್ದಾರೆ ಎಂದು ವರದಿಯಾಗಿದೆ.
‘ಆರಂಭದಲ್ಲಿ ಕರಾಚಿಯಲ್ಲಿ ವಿಮಾನ ಇಳಿಸುವ ಬಗ್ಗೆ ಯೋಚಿಸಲಾಗಿತ್ತು. ಈ ಸ್ಥಳ ವಿಮಾನ ಹಾರಾಟದ ಜಾಗಕ್ಕೆ ಹತ್ತಿರವಾಗಿತ್ತು. ಆದರೆ, ಇದು ಕಾರ್ಯರೂಪಕ್ಕೆ ಬರಲಿಲ್ಲ. ಇದೇ ವೇಳೆ, ರೋಗಿಯ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿತು. ಎರಡನೇ ಬಾರಿಗೆ ಹೃದಯಾಘಾತವಾಯಿತು. ಈ ವ್ಯಕ್ತಿಯನ್ನು ಕಳೆದುಕೊಂಡೆ ಎಂದೇ ನಾನು ಕ್ಷಣ ಕಾಲ ಭಾವಿಸಿದ್ದೆ. ಅದೃಷ್ಟವಶಾತ್ ನನ್ನ ಬಳಿ ಹೃದಯಾಘಾತದ ಸಂದರ್ಭದಲ್ಲಿ ತಕ್ಷಣಕ್ಕೆ ಚಿಕಿತ್ಸೆ ನೀಡುವ ಅಟೊಮೆಟೆಡ್ ಎಕ್ಸ್‌ಟರ್ನಲ್ ಡಿಫಿಬ್ರಿಲೇಟರ್ (ಎಇಡಿ) ಇತ್ತು. ಜತೆಗೆ, ವಿಮಾನದಲ್ಲಿ ತುರ್ತು ಪರಿಸ್ಥಿತಿಗಾಗಿ ಇರಿಸಿದ್ದ ವೈದ್ಯಕೀಯ ಔಷಧಗಳನ್ನು ಬಳಸಿದೆ. ಗಗನಸಖಿಯರು ನನ್ನ ಕಾರ್ಯದಲ್ಲಿ ನೆರವಾದರು. ಅದರಲ್ಲೂ ಮಲ್ಲಿಸಾ ಅವರ ಸೇವೆ ಶ್ಲಾಘನೀಯ. ನಾನು ಸೂಚಿಸಿದ ಪ್ರತಿಯೊಂದು ಕಾರ್ಯ ಕೈಗೊಂಡರು. ನರ್ಸ್ ರೀತಿಯಲ್ಲಿ ಅವರು ಕಾರ್ಯನಿರ್ವಹಿಸಿದರು’ ಎಂದು ವೈದ್ಯ ವಿಶ್ವರಾಜ್ ಫೇಸ್ಬುಕ್ ನಲ್ಲಿ ವಿವರಿಸಿದ್ದಾರೆ.