ಆಹಾರ ನೀಡಲು ಸಾಧ್ಯವಾಗದೆ 8 ವರ್ಷದ ಮಗಳಿಗೆ ವಿಷವುಣಿಸಿದ ವೈದ್ಯೆ!

Prasthutha|

ಚೆನ್ನೈ : ಬೆಂಗಳೂರು ಮೂಲದ ನಿರುದ್ಯೋಗಿ ವೈದ್ಯೆಯೊಬ್ಬರು ತನ್ನ 8 ವರ್ಷದ ಮಗಳಿಗೆ ಆಹಾರ ನೀಡಲು ಸಾಧ್ಯವಾಗದೆ, ವಿಷವುಣಿಸಿದ ಆಘಾತಕಾರಿ ಘಟನೆ ತಮಿಳುನಾಡಿನ ಅವಿನಾಶಿಯಲ್ಲಿ ನಡೆದಿದೆ.

ಡಾ. ಶೈಲಜಾ (39) ಕ್ಲಿನಿಕ್ ನಡೆಸುತ್ತಿದ್ದರು. ಕೆಲವು ಕಾರಣಗಳಿಂದ ಆಕೆಯ ಕ್ಲಿನಿಕ್ ತಿಂಗಳ ಹಿಂದೆ ಮುಚ್ಚಲ್ಪಟ್ಟಿತ್ತು. ಹೀಗಾಗಿ ತಂದೆಯ ಮೇಲೆ ಅವಲಂಬಿತವಾಗಿ, ತಂದೆಯ ಪಿಂಚಣಿ ಹಣದಿಂದ ಬದುಕುತ್ತಿದ್ದರು. ನಿರುದ್ಯೋಗದಿಂದ ತೀವ್ರ ಖಿನ್ನತೆಗೊಳಗಾಗಿದ್ದರು. ಹೀಗಾಗಿ ಆಕೆ ತನ್ನ ಮಗಳಿಗೆ ವಿಷವುಣಿಸಿ ಸಾಯಿಸಲು ನಿರ್ಧರಿಸಿದರು ಎಂದು ವರದಿಯೊಂದು ತಿಳಿಸಿದೆ.

- Advertisement -

ಶೈಲಜಾ ಶುಕ್ರವಾರ ತಿರುಪ್ಪೂರ್ ಗೆ ಪ್ರಯಾಣಿಸುತ್ತಿದ್ದರು. ಆದರೆ ಸೆವೂರು ಬಳಿ ಇಳಿದು ಮಗಳಿಗೆ ಇಲಿ ಪಾಷಾಣವನ್ನು ಕೊಟ್ಟಿದ್ದರು ಎನ್ನಲಾಗಿದೆ. ಇಲಿ ಪಾಷಾಣ ತಿಂದ ಬಾಲಕಿ ಪ್ರಜ್ಞೆ ತಪ್ಪಿದ ಮಗಳನ್ನು ಹೊತ್ತೊಯ್ಯುವಾಗ ಸ್ಥಳೀಯರು ನೋಡಿದುದನ್ನು ಗಮನಿಸಿ, ಮಗುವನ್ನು ಅಲ್ಲೇ ಎಸೆದು ಆಕೆ ಓಡಿ ಹೋಗಿದ್ದರು. ಸ್ಥಳೀಯರು ತಕ್ಷಣವೇ ಮಗುವನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ.

ಮಗುವಿನ ಸ್ಥಿತಿ ಗಂಭೀರವಾದುದರಿಂದ ಮಗುವನ್ನು ಕೊಯಮತ್ತೂರು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಈ ನಡುವೆ, ಶೈಲಜಾ ಸೆವೂರು ಬಸ್ ನಿಲ್ದಾಣದ ಬಳಿ ಅಲೆದಾಡುತ್ತಿರುವುದನ್ನು ಗಮನಿಸಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದರು.

ವಿಚಾರಣೆ ನಡೆಸಿದಾಗ, ತಾನು ತಂಜಾವೂರು ಮೂಲದ ಮುತ್ತುಸ್ವಾಮಿ ಎಂಬಾತನನ್ನು ಮದುವೆಯಾಗಿದ್ದು, ತನ್ನ ಗಂಡ ಪ್ರಸ್ತುತ ಬೆಂಗಳೂರಿನಲ್ಲಿ ವಾಸಿಸುತ್ತಿದ್ದಾನೆ. 5 ವರ್ಷಗಳ ಹಿಂದೆ ತಮಗೆ ವಿಚ್ಛೇಧನೆಯಾಗಿತ್ತು ಎಂದು ಶೈಲಜಾ ಹೇಳಿದ್ದಾರೆ.

ಬಾಲಕಿಗೆ ಆಹಾರ ನೀಡಲು ಸಾಧ್ಯವಾಗದ ಕಾರಣ ಮಗುವನ್ನು ಕೊಲ್ಲಲು ಶೈಲಜಾ ನಿರ್ಧರಿಸಿದ್ದಳು. ಆಕೆಯ ಮಾನಸಿಕ ಸ್ಥಿತಿ ಅಸ್ಥಿರವಾಗಿದೆ. ಹೀಗಾಗಿ ಆಕೆಯನ್ನು ಅವಿನಾಶಿಯ ಜನರಲ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.  

- Advertisement -