ಮಂಗಳೂರಿನ ಸರ್ಕಾರಿ ಲೇಡಿಗೋಶನ್ ಆಸ್ಪತ್ರೆಯಲ್ಲಿ ಇತ್ತೀಚೆಗೆ ಕುಂದಾಪುರ ಮೂಲದ ದಂಪತಿಗಳ ಮಗುವನ್ನು ಬದಲಿಸಿ ಕೊಡಲಾಗಿದೆ ಎಂಬ ಆರೋಪ ಕೇಳಿ ಬಂದಿತ್ತು. ಆಸ್ಪತ್ರೆ ಮೂಲಗಳು ಮೊದಲು ನಮಗೆ ಹೆಣ್ಣು ಮಗು ಎಂದು ಹೇಳಿ ಆ ಬಳಿಕ ಗಂಡು ಮಗುವನ್ನು ಕೊಟ್ಟಿದ್ದಾರೆಂದು ಆರೋಪಿಸಲಾಗಿತ್ತು. ಆ ಬಳಿಕ ಪ್ರಕರಣ ಪೊಲೀಸ್ ಠಾಣೆಯ ಮೆಟ್ಟಿಲೇರಿ ನ್ಯಾಯಾಲಯದ ಬಾಗಿಲಿಗೂ ಬಂದಿತ್ತು. DNA ಪರೀಕ್ಷೆ ನಡೆಸಲು ನ್ಯಾಯಾಲಯ ಅನುಮತಿ ನೀಡಿತ್ತು. ಇಂದು ಪೋಷಕರ ಮತ್ತು ಮಗುವಿನ DNA ಸ್ಯಾಂಪಲ್ ಪಡೆದು ಅದರ ಪರೀಕ್ಷೆಗಾಗಿ ಬೆಂಗಳೂರಿನ ಮಡಿವಾಳದಲ್ಲಿರುವ ವಿಧಿ ವಿಜ್ಞಾನ ಕೇಂದ್ರಕ್ಕೆ ಕಳುಹಿಸಿಕೊಡಲಾಗಿದೆ.
ನ್ಯಾಯಾಧೀಶರು ಈ ಪ್ರಕ್ರಿಯೆಯ ಮೇಲ್ವಿಚಾರಣೆಗಾಗಿ ಡಾ. ವಿಶ್ವ ವಿಜೇತ್ ಅವರನ್ನು ನೇಮಿಸಿದ್ದು, ಅವರ ಕಣ್ಗಾವಲಿನಲ್ಲಿಯೇ ಇಂದು ಸ್ಯಾಂಪಲ್ ಗಳನ್ನು ಪಡೆದುಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿದೆ.