ಬೆಂಗಳೂರು: ‘ಕೋವಿಡ್ ಸೋಂಕಿಗೆ ಸಾವಿರಾರು ಜನ ಬಲಿಯಾಗಿದ್ದಾರೆ. ಕೇಂದ್ರ ಮತ್ತು ರಾಜ್ಯಸರ್ಕಾರ ಅವರ ನೆರವಿಗೆ ಧಾವಿಸಲಿಲ್ಲ. ಇದೀಗ ಬಿಜೆಪಿಯು ಜನರನ್ನು ಭಾವನಾತ್ಮಕ ವಿಷಯಗಳನ್ನು ಮುಂದಿಟ್ಟುಕೊಂಡು ವಂಚಿಸುತ್ತಿದೆ’ ಎಂದು ಸಂಸದ ಡಿ.ಕೆ. ಸುರೇಶ್ ಆರೋಪಿಸಿದ್ದಾರೆ.
ಕಾಂಗ್ರೆಸ್ ಪಕ್ಷದ ವತಿಯಿಂದ ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕೆಂಪೇಗೌಡ ನಗರದಲ್ಲಿ ಮೂರುಸಾವಿರ ಕುಟುಂಬಗಳಿಗೆ ನೀಡಿದ ದಿನಸಿ ಕಿಟ್ಗಳನ್ನು ವಿತರಿಸಿ ಮಾತನಾಡಿದ ಅವರು, ‘ಯುಪಿಎ ಸರ್ಕಾರದ ಅವಧಿಯಲ್ಲಿ ಡಾ. ಮನಮೋಹನ್ ಸಿಂಗ್ ಅವರು ರಾಷ್ಟ್ರೀಯ ವಿಪತ್ತು ಯೋಜನೆಯಲ್ಲಿ ತಲಾ ₹4ಲಕ್ಷ ನೀಡಲು ಹಣವಿಟ್ಟಿದ್ದರು. ನರೇಂದ್ರ ಮೋದಿ ಅವರು ಆ ಹಣವನ್ನು ಕೊಡದೆ ಸತಾಯಿಸುತ್ತಿದ್ದಾರೆ. ನ್ಯಾಯಾಲಯ ಮಧ್ಯ ಪ್ರವೇಶಿಸಿ, ಮೃತರ ಕುಟುಂಬಕ್ಕೆ ತಲಾ ₹1ಲಕ್ಷ ಕೊಡುವಂತೆ ಆದೇಶ ನೀಡಿದೆ. ಆದರೆ, ಈವರೆಗೂ ಆ ಹಣವೂ ಬಿಡುಗಡೆಯಾಗಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ವೇಳೆ ಕಾಂಗ್ರೆಸ್ ನಾಯಕರಾದ ಹನುಮಂತರಾಯಪ್ಪ, ಕುಸುಮಾ, ಕೆಪಿಸಿಸಿ ಕಾರ್ಮಿಕ ಘಟಕದ ಅಧ್ಯಕ್ಷ ಪುಟ್ಟಸ್ವಾಮಿಗೌಡ, ಕೆ.ಆರ್.ಪಾರ್ಥಗೌಡ, ಹನುಮೇಗೌಡ, ಎ. ಅಮರನಾಥ್, ಕೃಷ್ಣ, ಭಾಗ್ಯಮ್ಮ ಉಪಸ್ಥಿತರಿದ್ದರು.