ಸುಳ್ಯ: ಸಿದ್ದರಾಮಯ್ಯ ಸರ್ಕಾರದಲ್ಲಿ ಇಂಧನ ಸಚಿವರಾಗಿದ್ದ ಡಿ.ಕೆ. ಶಿವಕುಮಾರ್ ಅವರಿಗೆ ದೂರವಾಣಿ ಮೂಲಕ ನಿಂದಿಸಿದ ಪ್ರಕರಣದಲ್ಲಿ ಸುಳ್ಯ ನ್ಯಾಯಾಲಯವು, ಬೆಳ್ಳಾರೆಯ ಸಾಯಿ ಗಿರಿಧರ್ ರೈಯವರನ್ನು ದೋಷಿ ಎಂದು ತೀರ್ಪು ನೀಡಿದ್ದು, ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.
2016 ಫೆಬ್ರವರಿ 28ರಂದು ಆಗಿನ ವಿದ್ಯುತ್ ಸಚಿವ ಡಿ.ಕೆ. ಶಿವಕುಮಾರ್ ಅವರಿಗೆ ದೂರವಾಣಿ ಕರೆ ಮಾಡಿದ್ದ ಬೆಳ್ಳಾರೆಯ ಸಾಯಿ ಗಿರಿಧರ ರೈಯವರು, ಸುಳ್ಯದ ವಿದ್ಯುತ್ ಸಮಸ್ಯೆ ಕುರಿತು ಸಚಿವರ ಗಮನಕ್ಕೆ ತಂದಿದ್ದರು. ಈ ವೇಳೆ ಕೆಟ್ಟ ಪದಗಳನ್ನು ಬಳಸಿ ಸಚಿವರನ್ನು ನಿಂದಿಸಿದ್ದಾರೆ ಎಂದು ಮೆಸ್ಕಾಂ ಹಿರಿಯ ಅಧಿಕಾರಿಗಳು ಗಿರಿಧರ ರೈಯವರ ಮೇಲೆ ದೂರು ನೀಡಿದ್ದರು.
ಪ್ರಕರಣ ದಾಖಲಿಸಿಕೊಂಡ ಅಂದಿನ ಸುಳ್ಯ ಪೊಲೀಸ್ ಠಾಣೆಯ ಉಪನಿರೀಕ್ಷಕ ಚಂದ್ರಶೇಖರ್ ರವರು ರಾತ್ರೋರಾತ್ರಿ ಗಿರಿಧರ್ ರೈಯವರ ಮನೆಗೆ ತೆರಳಿದ್ದರು. ಮನೆ ಬಾಗಿಲು ತೆರೆಯದಿದ್ದಾಗ ಹಂಚು ಸರಿಸಿ ಒಳ ಪ್ರವೇಶಿಸಿ ಗಿರಿಧರ್ ರೈಯವರನ್ನು ಬಂಧಿಸಲಾಗಿತ್ತು
ʻಅವಾಚ್ಯ ಶಬ್ದಗಳಿಂದ ನಿಂದನೆ, ಜೀವ ಬೆದರಿಕೆ, ಮಾನ ಹಾನಿ, ಕರ್ತವ್ಯಕ್ಕೆ ಅಡ್ಡಿ ಸೇರಿದಂತೆ ನಾಲ್ಕು ಅಪರಾಧಗಳಡಿ ಪ್ರಕರಣ ದಾಖಲಿಸಲಾಗಿತ್ತು. ಸುಳ್ಯ ನ್ಯಾಯಾಲಯದಲ್ಲಿ ಈ ಕುರಿತಂತೆ ವಿಚಾರಣೆ ನಡೆಯುತ್ತಿತ್ತು. ಸಾಕ್ಷಿಗಳ ವಿಚಾರಣೆ ನಡೆದಿತ್ತು. ಪ್ರಕರಣದಲ್ಲಿ ಡಿ.ಕೆ.ಶಿವಕುಮಾರ್ ಅವರನ್ನೂ ಸಾಕ್ಷಿಯನ್ನಾಗಿಸಲಾಗಿತ್ತು. ಆದರೆ ಅವರು ವಿಚಾರಣೆಗೆ ಹಾಜರಾಗದ ಹಿನ್ನಲೆಯಲ್ಲಿ ವಾರೆಂಟ್ ಹೊರಡಿಸಲಾಗಿತ್ತು. ಕಳೆದ ವರ್ಷ ಅಕ್ಟೋಬರ್ 5ರಂದು ಡಿ ಕೆ ಶಿವಕುಮಾರ್ ಸುಳ್ಯಕ್ಕೆ ಬಂದು ನ್ಯಾಯಾಲಯಕ್ಕೆ ಹಾಜರಾಗಿ ಸಾಕ್ಷ್ಯ ನುಡಿದಿದ್ದರು. ಈ ಪ್ರಕರಣದ ವಿಚಾರಣೆ ಪೂರ್ಣಗೊಂಡಿದ್ದು, ಸೋಮವಾರ ಸುಳ್ಯ ಹಿರಿಯ ಸಿವಿಲ್ ನ್ಯಾಯಾಧೀಶರಾದ ಸೋಮಶೇಖರ್ ಎ. ರವರು ತೀರ್ಪು ಪ್ರಕಟಿಸಿದರು.
ನಾಲ್ಕು ಅಪರಾಧಗಳಲ್ಲಿಯೂ 2 ವರ್ಷ ಜೈಲು ಶಿಕ್ಷೆ ಮತ್ತು ಒಂದು ಪ್ರಕರಣದಲ್ಲಿ 5 ಸಾವಿರ ದಂಡ, ದಂಡ ತೆರಲು ತಪ್ಪಿದ್ದಲ್ಲಿ 1 ತಿಂಗಳು ಹೆಚ್ಚುವರಿ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಲಾಗಿದ್ದು, 4 ಅಪರಾಧಗಳ ಶಿಕ್ಷೆಗಳನ್ನು ಏಕಕಾಲದಲ್ಲಿ ಅನುಭವಿಸುವಂತೆ ತೀರ್ಪಿನಲ್ಲಿ ಉಲ್ಲೇಖಿಸಲಾಗಿದೆ. ಆರೋಪಿಗೆ ಮೇಲ್ಮನವಿ ಸಲ್ಲಿಸಲು ಒಂದು ತಿಂಗಳು ಕಾಲಾವಕಾಶ ನೀಡಲಾಗಿದೆ. ಸರಕಾರದ ಪರವಾಗಿ ಎಪಿಪಿ – ಜನಾರ್ಧನ ಬಿ. ವಾದಿಸಿದ್ದರು.